ದಿಲ್ಲಿಯ ವಿಮಾನದಿಂದ ಇಳಿದು ಬರುತ್ತಿದ್ದ ನಾಡಿನ ಕ್ಯಾತ ಸಾಯಿತಿ ಸಂಗ್ಯಾನನ್ನು ಕಂಡು ಆತನ ಗೆಳೆಯ ಬಾಳ್ಯಾ ಹೌಹಾರಿದ. “ಅರೇ ಇವ್ನಾ, ಏನಾತ್ಲಾ! ಹಿಂಗೆ ಕಾಲು ಎಳಕೊಂಡು ಬರ್ತಿಯಲ್ಲೊ.. “ ಎಂದು ದೌಡಾಯಿಸಿ ಗೆಳೆಯನ ಗಂಟುಮೂಟೆ ಎತ್ತಿಕೊಂಡ ಬಾಳ್ಯಾ. “ಏನಾತ್ಲಾ.. ಯಾಕೋ.. ಕಾಲು ಏನಾಗೈತಿ..” ಎಂದು ಮತ್ತೆ ಕೇಳಿದ
ಕಕ್ಕುಲಾತಿಯಿಂದ. ಗೆಳೆಯನ ಕಾಳಜಿಯನ್ನೂ ಕಿವಿಗೆ ಹಾಕಿಕೊಳ್ಳದೆ ಸಂಗ್ಯಾ ಕುಂಟು ಕಾಲು ಎಳೆಯುತ್ತಾ ‘ಹವಾಯಿ ಅಡ್ಡಾ’ದ ಹೊರ ನಡೆಯುತ್ತಲೇ ಇದ್ದ. ‘ಮುಸಿಮುಸಿ ಮುನಿಸು, ಅವಡುಗಚ್ಚಿದ ಮುಖ ನೋಡಿ, ಏನೋ ಹಕೀಕತ್ತು ಇದೆ. ಈ
ಬಡ್ಡೀಮಗ ನನ್ನತ್ರನೇ ಮುಚ್ಚಿಡ್ತಿದಾನೆ.. ಬಿಡಬಾರ್ದು, ಇವನ್ನು, ಬಾಯಿ ಬಿಡಿಸಲೇಬೇಕು’ ಎಂದು ಬಾಳ್ಯಾ ಹಠಕ್ಕೆ
ಬಿದ್ದ. “ಅಲ್ಲೋ… ಸಂಗ್ಯಾ ಏನಾತು ಹೇಳೋ.. ಆಕ್ಸಿಡೆಂಟಾತ? ಇಲ್ಲಾ ಎಲ್ಲಾರಾ ಜಾರಿ ಬಿದ್ಯಾ..” ಎಂದ.
ಜಾರಿ ಬಿದ್ಯಾ ಎಂಬ ಶಬುದ ಕೇಳುತ್ತಲೇ ಸಂಗ್ಯಾನ ಸಿಟ್ಟು ನೆತ್ತಿಗೇರಿತು. ಟಿವಿ, ಮೀಡಿಯಾದವರೆಲ್ಲಾ ‘ಜಾರಿಬಿದ್ದ’
ಕಥೆಯನ್ನು ಪುಂಖಾನುಪುಂಖವಾಗಿ ಪೋಣಿಸಿ ಪೋಣಿಸಿ ಪ್ರಸಾರ ಮಾಡಿದ್ದನ್ನು ನೆನಸಿಕೊಂಡು ಉಗ್ರನಾದ. “ಹೂಂ
ಕಣ್ಲಾ… ದಿಲ್ಲೀಲಿ ಜಾರಿ ಬಿದ್ವೋ.. ಕಾಲು ಮುರದೈತಿ.. ನೀನೊಬ್ಬಿದ್ದೆ ಕೋತ್ಯಪ್ಪ.. ಜಾರಿ ಬಿದ್ರು ಅಂತ ಡಂಗುರ
ಸಾರೋಕೆ.. ರಂಗ್ಯ, ಮಂಗ್ಯ ಎಲ್ಲಾ ಟಾಂಟಾಂ ಮಾಡಾತು… ಈಗ ನೀನು ಶುರುಹಚ್ಕಾ.. ಹೋಗಲೇ,, ಹೋಗ..
ಕ್ಯಾಮೆ ನೋಡ್ಕಾ…” ಎಂದು ಹೂಂಕರಿಸಿದ.
ಈಗ ಬಾಳ್ಯಾನಿಗೆ ಖಾತ್ರಿಯಾತು. ‘ಏನೋ ಆಗಬಾರ್ದೆ ಆಗೋಗೈತಿ. ಈ ಮಗಾ.. ಅದಕ್ಕೆ ಹಿಂಗೆ ಎಗರಾಡ್ತಾನೆ..
ನೋಡಿ ಬಿಡೋಣ ಒಂದು ಕೈ’ ಎಂದು ಮನಸ್ಸಿನಲ್ಲೇ ಹೇಳಿಕೊಂಡು, “ಅಲ್ಲೋ ಮಾರಾಯ, ಜಾರಿಬಿದ್ಯನಾ ಅಂದದ್ಕ
ಯಾಕೆ ಇಷ್ಟು ಉರಿತಿಯೋ.. ಸಹಜವಾಗೇ ಕೇಳಿದ್ನಪಾ.. ನಂಗೇನು ಗೊತ್ತಾಗಬೇಕು ಹೇಳು, ನೀನು ದಿಲ್ಲಿಯಾಗಿ
ನಡೆಸಿದ ದರ್ಬಾರು.. ಅದೂ ಕನ್ನಡ ಉದ್ಧಾರ ಮಾಡಾಕೆ ಅಂತ ಯಾರ್ಯಾರೋ ಮಂತ್ರಿ, ಮಹಾನುಭಾವರನ್ನೆಲ್ಲಾ
ನೋಡಾಕೆ ದಂಡು ಹೋಗಿದ್ರಿ.. ಅಲ್ಲೇನಾರೂ ತಳ್ಳಾಟ-ನೂಕಾಟ ನಡದು ಬಿದ್ದಿರಬೇಕು ಅನಕೊಂಡಿದ್ದೆ ಬಿಡು.. ಈಗ
ನೀ ಹಿಂಗ್ ಬುಸ್ಗುಡೋದು ನೋಡಿದ್ರೆ ಏನೋ ಹರಾಮಿತನ ಮಾಡಿ ಏಟು ತಿಂದೀರಿ ಅನಿಸ್ತೈತಿ” ಎಂದ.
ಟಿವಿ, ಪೇಪರಿನಾಗೆ ಕನ್ನಡ ಉದ್ಧಾರ ಮಾಡೋಕೆ ಹೋದ ಕನ್ನಡಕುವರರ ಸಾಹಸಗಳನ್ನು ಹಾಡಿಹೊಗಳಿದ್ದರೂ,
ಮುಂಜಾನೆದ್ದು ಸೀದಾ ಹವಾಯಿ ಅಡ್ಡಾಕೆ ಹೋಗಿದ್ದ ಬಾಳ್ಯಾಗೆ ಅದೊಂದೂ ಗೊತ್ತೇ ಇರಲಿಲ್ಲ ಪಾಪ! ಹಂಗಾ
ಎದುರಿಗೆ ಬಂದ ಪೇಪರ್ ಹುಡುಗ ‘ರಾಜ್ಯ ಸರ್ಕಾರ ಪತನಕ್ಕೆ ಕ್ಷಣಗಣನೆ’ ‘ಬಿಸಿ ಬಿಸಿ ಸುದ್ದಿ’ ಎಂದು ಪೇಪರ್ ಹಿಡಿದ.
ಅರೇ ಕುಮಾರಣ್ಣನ ಬುಡಕ್ಕೆ ನೀರು ಬಿಟ್ಟುಬಿಟ್ರಾ ಅಂತ ಮತ್ತೆ ಹೌಹಾರಿ, ಪೇಪರ್ ತಗೊಂಡು ಹೆಡ್ಲೈನ್ ಮೇಲೆ ಕಣ್
ಹಾಕ್ತಿದ್ದಂಗೆ ಅದರ ಕೆಳಗೇ ಸಾಹಿತಿಗಳ ದಿಲ್ಲಿ ದರ್ಬಾರಿನ ಸುದ್ದಿ ಸೆಳೀತು…
ಮಂತ್ರಿಮಹೋದರ ಭೇಟಿ ಮಾಡಿ ಕನ್ನಡ ಉದ್ಧಾರ ಮಾಡಿದ ಸಂಭ್ರಮದಲ್ಲಿ ‘ಕರ್ನಾಟಕ ಭವನ’ವನ್ನೇ ‘ಅಡ್ಡಾ’
ಮಾಡಿಕೊಂಡು ಪಾನಗೋಷ್ಠಿ ಮಾಡಿದ ಕನ್ನಡದ ಕಟ್ಟಾಳುಗಳಾದ ನಾಡೋಜರು, ಕವಿವರ್ಯರು,
ಹುಟ್ಟುಹೋರಾಟಗಾರರು, ಜನಪರ ಸಂವೇದನಾಶೀಲರು, ಪ್ರಗತಿಪರ ಮಹಾನ್ ಸಾಹಿತಿಗಳೆಲ್ಲಾ, ತಮ್ಮ ಕನ್ನಡದ
ಕಾಳಜಿಯನ್ನು ಘನ ಸ್ವರೂಪದಲ್ಲಿ ವ್ಯಕ್ತಪಡಿಸುತ್ತಿರುವಾಗ, ಕನ್ನಡಿಗರ ಈ ಒಕ್ಕಟ್ಟನ್ನು ಸಹಿಸದ
ನ್ಯಾಯಾಧೀಶರೊಬ್ಬರು ಮುನಿದು ಪೊಲೀಸರಿಗೆ ದೂರು ನೀಡಿದರು. ನ್ಯಾಯ ಸ್ಥಾನದಲ್ಲಿರುವವರ ದೂರಿನ ಮೇಲೆ
ಸ್ಥಳಕ್ಕೆ ಬಂದ ದಿಲ್ಲಿ ಪೊಲೀಸರು, ‘ಕನ್ನಡದ ಕಂದಮ್ಮಗಳ ಕನ್ನಡ ಕಾಳಜಿಯ ಕೆನೆತದ ಗಂಭೀರ ಸಾಂದರ್ಭಿಕ
ಹಿನ್ನೆಲೆಯನ್ನು’ ಒಂದಿಷ್ಟೂ ಅರ್ಥಮಾಡಿಕೊಳ್ಳದೆ, ‘ಸೋಮರಸ ಮತ್ತು ಸಾಹಿತ್ಯದ ಆತ್ಯಂತಿಕ ಸ್ವರೂಪದ
ಕೊಡುಕೊಳ್ಳುವಿಕೆಯನ್ನೂ ಅರಿಯದೆ’, ಏಕಾಏಕಿ ಕೇಸು ಹಾಕುವ ಧಮಕಿ ಹಾಕಿದರು!
ಖಾಕಿ ಕಂಡು ಬೆದರಿದ ಕೆಲವು ಖಾದಿಧಾರಿ ಸಾಯಿತಿಗಳು ಬೀಸೋ ದೊಣ್ಣೆಯಿಂದ ಪಾರಾಗಲು ಹೋಗಿ, ಪೊಲೀಸರು
ಬೀಗ ಜಡಿದಿದ್ದ ಗೇಟಿನ ಮೇಲೆ ಹಾರಿ ‘ಊರುಭಂಗ’ಕ್ಕೊಳಗಾದರು! ಎಂಬಲ್ಲಿಗೆ ಕನ್ನಡದ ಕಟ್ಟಾಳುಗಳ ದಿಲ್ಲಿ
ದರ್ಬಾರಿನ ವರದಿ ಎಂಬ ಕಥೆ ಮುಗಿಯಿತು!
ಗೆಳೆಯನ ಊರುಭಂಗದ ‘ಐತಿಹಾಸಿಕ ಹಿನ್ನೆಲೆ’ ತಿಳಿಯುತ್ತಲೇ ಬಾಳ್ಯಾ, ಶಾಣ್ಯನಾದ. ಸಂಗ್ಯಾನ ಹೆಗಲ ಮೇಲೆ
ಕೈಹಾಕಿ, “ನೋಡು ಮಿತ್ರಾ ನಾಡು, ನುಡಿ, ನೆಲ-ಜಲದ ಕೆಲಸಕ್ಕೆ ಕೈಹಾಕುವಾಗ ಇಂತಹ ಸವಾಲುಗಳನ್ನೆಲ್ಲಾ
ಎದುರಿಸಲೇಬೇಕು. ಹಾಗೆ ಸವಾಲುಗಳನ್ನು ಎದುರಿಸುವ ಮೂಲಕವೇ ನಾವು ಹೊಸ ನಾಡು ಕಟ್ಟುವುದು ಸಾಧ್ಯ.
ನಡೀ.. ಆದರೆ, ಈ ಮೂದೇವಿ ಮೀಡಿಯಾದವ್ರಿಗೆ ಇಂತಹ ಚಾರಿತ್ರಿಕ ಸವಾಲುಗಳೆಲ್ಲಾ ಅರ್ಥವಾಗಲ್ಲ. ಬಡ್ಡೆತ್ತವು.
ನಡೀಲಾ.. ಆ ನೋವು ನೀಗೋಣ.. ಎಂದು ‘ಸಾಹಿತ್ಯ’ ಬಾರ್ ಅಂಡ್ ರೆಸ್ಟೋರೆಂಟಿನ ಕಟ್ಟೆ ಏರಿದ!
ಅದೇ ಹೊತ್ತಿಗೆ, ಬಾರಿನ ಟಿವಿನಾಗೆ,.. “ಕನ್ನಡದ ಕಟ್ಟಾಳು, ಕನ್ನಡದ ಹುಟ್ಟುಹೋರಾಟಗಾರ, ನಾಡೋಜ.. ಅವರಿಗೆ
ಅಭಿನಂದನೆಗಳು” ಎಂಬ ಕನ್ನಡ ಸಂಘಟನೆಯೊಂದರ ಜಾಹೀರಾತು ಮಿಂಚಿ ಮರೆಯಾಯಿತು!!