ಕಳೆದ ನವೆಂಬರ್ನಲ್ಲಿ ಹಲವು ಹಕ್ಕೊತ್ತಾಯಗಳನ್ನು ಮುಂದಿಟ್ಟು ದೇಶದ ಮೂಲೆಮೂಲೆಗಳಿಂದ ದೆಹಲಿಯತ್ತ ಮುಖ ಮಾಡಿದ್ದ ರೈತರ ಸರದಿಯ ನಂತರ ಇದೀಗ ದೇಶದ ವಿದ್ಯಾರ್ಥಿ-ಯುವಜನರು ಉದ್ಯೋಗಕ್ಕಾಗಿ ಆಗ್ರಹಿಸಿ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ಡಿಸೆಂಬರ್ನಲ್ಲಿ ಸುಮಾರು 70 ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ರಾಷ್ಟ್ರಮಟ್ಟದ ಸಮನ್ವಯ ಸಮಿತಿಯೊಂದನ್ನು ರಚಿಸಿಕೊಂಡು ಉತ್ತಮ ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳಿಗೆ ಒತ್ತಾಯಿಸಲು “ಯಂಗ್ ಇಂಡಿಯಾ ಅಧಿಕಾರ್ ಮಾರ್ಚ್” ನಡೆಸಲು ತೀರ್ಮಾನಿಸಿದ್ದವು.
ವಿವಿಧ ವಿವಿಗಳ ಸಾವಿರಾರು ವಿದ್ಯಾರ್ಥಿಗಳು 2019ರ ಫೆಬ್ರವರಿ 7 ರಂದು ದೆಹಲಿಯ ಕೆಂಪು ಕೋಟೆಯಿಂದ
ಪಾರ್ಲಿಮೆಂಟ್ ಸ್ಟ್ರೀಟಿನ ವರೆಗೆ ಮೆರವಣಿಗೆಯಲ್ಲಿ ತೆರಳಿ ಉದ್ಯೋಗಕ್ಕಾಗಿ ಆಗ್ರಹಿಸಿದರು. ‘ರೋಹಿತ್ ಕಾಯಿದೆ
ಜಾರಿಗೊಳಿಸಿ’, ’13 ಅಂಶದ ರೋಸ್ಟರ್ ಅಂತ್ಯಗೊಳಿಸಿ’, ಎಂಬ ಘೋಷಣೆಗಳನ್ನು ಹೊತ್ತ ಭಿತ್ತಿಪತ್ರಗಳನ್ನು ಹಿಡಿದು ಜನನಿಬಿಡ ರಸ್ತೆಗಳಲ್ಲಿ ಸಂಚರಿಸಿದ ಯುವಜನರು ‘ನಜೀಬ್ ಎಲ್ಲಿ’ ಎಂಬ ಪ್ರಶ್ನೆಯನ್ನು ಗಟ್ಟಿದನಿಯಲ್ಲಿ
ಮೊಳಗಿಸಿದರು. 15ನೇ ಅಕ್ಟೋಬರ್ 2016ರಲ್ಲಿ ಜೆಎನ್ಯು ನಿಂದ ಕಾಣೆಯಾದ ವಿದ್ಯಾರ್ಥಿ ನಜೀಬ್ ಈ ವರೆಗೂ ಪತ್ತೆಯಾಗಿಲ್ಲ. ನಜೀಬ್ ವಿವಿ ಹಾಸ್ಟೆಲ್ನಿಂದ ಕಾಣೆಯಾದ ಹಿಂದಿನ ರಾತ್ರಿ ಎಬಿವಿಪಿ ಕಾರ್ಯಕರ್ತರು ಆತನ ಮೇಲೆ ಹಲ್ಲೆಗೈದಿದ್ದರು. ಕೆಂಬಾವುಟಗಳನ್ನು ಹಿಡಿದ ವಿದ್ಯಾರ್ಥಿಗಳು ‘ಇಂಕ್ವಿಲಾಬ್ ಜಿಂದಾಬಾದ್’, ‘ಅಬ್ ಜುಮ್ಲೇಬಾಜಿ ನಹೀ ಚಲೇಗಿ’ (ಇನ್ನು ನಿಮ್ಮ ಸುಳ್ಳುಗಳು ನಡೆಯೋದಿಲ್ಲ) ಎಂಬೆಲ್ಲಾ ಘೋಷಣೆಗಳನ್ನು ಮೊಳಗಿಸಿದರು. ವಿದ್ಯಾರ್ಥಿ- ಯುವಜನರ ರೈತ-ಕಾರ್ಮಿಕರ ಸಮಸ್ಯೆಗಳನ್ನು ಮರೆತು ಸಂಸತ್ತಿನಲ್ಲಿ ಬೆಚ್ಚಗೆ ಕುಳಿತು ಚಳಿಗಾಲದ ಅಧಿವೇಶನದಲ್ಲಿ ಕೆಸರೆರಚಾಟ ಆಡುತ್ತಿದ್ದ ಪ್ರಧಾನಿಗೆ ಬಿಸಿ ಮುಟ್ಟಿಸುವ ಯತ್ನ ಮಾಡಿದರು.
ಮೋದಿ ಸರ್ಕಾರ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುತ್ತಲೇ ಅವರ ಹಕ್ಕುಗಳನ್ನು ಕಸಿಯುತ್ತಿರುವುದನ್ನು
ವಿದ್ಯಾರ್ಥಿಗಳು ಪ್ರತಿಭಟಿಸಿದರು. ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್ ಸಾಯಿಬಾಲಾಜಿ, ತಮ್ಮ
ಹಕ್ಕೊತ್ತಾಯಗಳ ಬಗ್ಗೆ ವಿವರಿಸುತ್ತಾ, ಉತ್ತಮ ಶಿಕ್ಷಣ, ಘನತೆಯ ಉದ್ಯೋಗ, ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಗಾಗಿ ವಿದ್ಯಾರ್ಥಿ-ಯುವಜನರು ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು. ಭಾರತದ ಯುವಜನರು ತಮ್ಮನ್ನು ನಾಲ್ಕೂ ವರೆ ವರ್ಷಗಳಲ್ಲಿ ವಂಚಿಸಿದ ಮೋದಿ ಸರ್ಕಾರದ ವಿರುದ್ಧ ಆಂದೋಲನ ಕೈಗೊಂಡಿದ್ದಾರೆ. ದೇಶದಲ್ಲಿ ನಡೆಸಲಾಗುತ್ತಿರುವ ವ್ಯವಸ್ಥಿತವಾದ ಲೂಟಿ, ಹಗಲುದರೋಡೆ ಮತ್ತು ಅಪರಿಮಿತವಾದ ದ್ವೇಷ ರಾಜಕಾರಣವು ಭಾರತದ ಯುವಜನರನ್ನು ವಿಭಜಿಸಿ, ಕೊಲೆಗೈಯುತ್ತಾ ದೇಶದ ಭವಿಷ್ಯವನ್ನು ನಾಶಗೊಳಿಸುತ್ತಿದೆ.

ಇದರ ವಿರುದ್ಧ ಎಚ್ಚೆತ್ತ ವಿದ್ಯಾರ್ಥಿ-ಯುವಜನರು ಧ್ವನಿ ಮೊಳಗಿಸುತ್ತಾ ಭವ್ಯ ಭಾರತದ ನಿರ್ಮಾಣಕ್ಕಾಗಿ ಪಣ
ತೊಟ್ಟು ಮುಂದೆ ಸಾಗುತ್ತಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಕನ್ಹಯ್ಯ ಕುಮಾರ್ ಅವರನ್ನು ಜೋರಾದ ಘೋಷಣೆಗಳೊಂದಿಗೆ ಬರಮಾಡಿಕೊಳ್ಳಲಾಯಿತು.
“ಮೋದೀಜಿ ಚುನಾಯಿತರಾದ ಕ್ಷಣದಿಂದಲೂ ‘ಎಲೆಕ್ಷನ್ ಮೋಡ್’ನಲ್ಲೇ ಇದ್ದಾರೆ. ಅವರು ಕೇವಲ ಮಾತನಾಡುತ್ತಲೇ ಇರುತ್ತಾರೆ, ಕೆಲಸ ಮಾಡುವುದಿಲ್ಲ. ಮೋದಿ ಸರ್ಕಾರದ ಜನವಿರೋಧಿ ನೀತಿಗಳು ಇನ್ನು ಮುಂದೆ ನಡೆಯದು”
–
ಕನ್ಹಯ್ಯ ಕುಮಾರ್
ದಲಿತ ಹೋರಾಟಗಾರ ಮತ್ತು ಶಾಸಕ ಜಿಗ್ನೇಶ್ ಮೆವಾನಿ ಯುವಜನರ ಪ್ರತಿಭಟನೆಗೆ ಸೌಹಾರ್ದತೆ ವ್ಯಕ್ತಪಡಿಸುತ್ತಾ, “ಈ ಬಾರಿಯ ಚುನಾವಣೆಗಳು ಪ್ರಧಾನಿಯವರಿಗೆ ಘರ್ ವಾಪ್ಸಿಯಾಗಲಿದೆ, ಆದರೆ ನಮಗೆ ಅವರನ್ನು ಗುಜರಾತಿನಲ್ಲಿ ಇರಿಸಿಕೊಳ್ಳಲು ಇಷ್ಟವಿಲ್ಲ. ಮುಂಬರಲಿರುವ ಸರ್ಕಾರ 24 ಲಕ್ಷ ಸರ್ಕಾರಿ ನೌಕರಿಗಳನ್ನು 100 ದಿನಗಳೊಳಗೆ ತುಂಬಬೇಕು, ಇಲ್ಲದಿದ್ದರೆ ಯುವಜನರು ಪುನಃ ಪಾರ್ಲಿಮೆಂಟ್ ಸ್ಟ್ರೀಟಿನಲ್ಲಿ ಪ್ರತಿಭಟನೆಗೆ ಹಾಜರಾಗುವೆವು” ಎಂದು ಎಚ್ಚರಿಸಿದರು.
ಯಂಗ್ ಇಂಡಿಯಾ ಅಧಿಕಾರ್ ಮಾರ್ಚ್ ನಲ್ಲಿ ಎತ್ತಲಾದ ಪ್ರಶ್ನೆಗಳು:
ಜೆಎನ್ಯು ವಿದ್ಯಾರ್ಥಿ ನಜೀಬ್ನ ಕಣ್ಮರೆ; ಉಪನ್ಯಾಸಕರ ನೇಮಕಾತಿಗೆ 200 ಅಂಶಗಳ ರೋಸ್ಟರ್ ಪದ್ಧತಿ ವಾಪಸ್ ತರುವುದು; ದೆಹಲಿ ಪತ್ರಿಕೋದ್ಯಮ ಶಾಲೆಯಲ್ಲಿ ವಿಪರೀತ ಶುಲ್ಕ ಪಡೆದರೂ ಸೂಕ್ತ ಸೌಲಭ್ಯಗಳನ್ನು ನೀಡದಿರುವುದು; ಮಹಿಳೆಯರಿಗೆ ಹಾಸ್ಟೆಲ್ಗಳಲ್ಲಿರುವ ನಿರ್ಬಂಧಗಳನ್ನು ತೆಗೆಯುವುದು; ಖಾಲಿಯಾಗಿರುವ ಎಲ್ಲಾ ಸರ್ಕಾರಿ ಉದ್ಯೋಗಗಳನ್ನು ಭರ್ತಿಗೊಳಿಸುವುದು; ಪೇಪರ್ ಲೀಕ್ ಮತ್ತು ನೇಮಕಾತಿಯಲ್ಲಿ ಭ್ರಷ್ಟಾಚಾರವನ್ನು ತಡೆಯುವುದು; ಶಿಕ್ಷಣದ ಮೇಲಿನ ಬಜೆಟ್ಟಿನ ಕನಿಷ್ಟ ಶೇ. 10ರಷ್ಟು ವೆಚ್ಚ ಮಾಡುವುದು; ಶಾಲೆ ಮುಚ್ಚುವ, ಸೀಟ್ ಕಡಿತಗೊಳಿಸುವ, ಧನಸಹಾಯ ಕಡಿತಗೊಳಿಸುವ ಮತ್ತು ಮೀಸಲಾತಿ ಕಡಿತಗೊಳಿಸುವ ನೀತಿಗಳನ್ನು ನಿಲ್ಲಿಸಬೇಕು.
ಲಿಂಗ ತಾರತಮ್ಯದ ನಿಯಮಗಳನ್ನು ಅಂತ್ಯಗೊಳಿಸಿ; ವಿದ್ಯಾರ್ಥಿನಿಯರ ವಸತಿನಿಲಯಗಳನ್ನು ಪ್ರಾರಂಭಿಸುವುದು ಮತ್ತು ಲೈಂಗಿಕ ದೌರ್ಜನ್ಯ ನಿವಾರಣಾ ಘಟಕಗಳನ್ನು ಪರಿಣಾಮಕಾರಿಯಾಗಿ ನಡೆಸುವುದು; ಶಿಕ್ಷಣದ ಕೇಸರೀಕರಣ ನಿಲ್ಲಿಸಿ; ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಗೊಳಿಸುವುದು; ಸಂವಿಧಾನಬದ್ಧವಾದ ಮೀಸಲಾತಿಯನ್ನು ಪೂರೈಸುವುದು; ಎಲ್ಲಾ ಕ್ಯಾಂಪಸ್ಗಳಲ್ಲೂ ತಾರತಮ್ಯವಿರೋಧಿ ಘಟಕಗಳನ್ನು ಸ್ಥಾಪಿಸುವುದು. ಫೆಬ್ರವರಿ ಅಂತ್ಯದೊಳಗೆ ತಮ್ಮ ಹಕ್ಕೊತ್ತಾಯಗಳನ್ನು ಕೇಂದ್ರ ಸರ್ಕಾರ ಪರಿಗಣಿಸಿ ಅವುಗಳಿಗೆ ಒಪ್ಪಿಗೆ ನೀಡದಿದ್ದಲ್ಲಿ, 2019ರ ಲೋಕಸಭಾ ಚುನಾವಣೆಗಳಲ್ಲಿ ಯಂಗ್ ಇಂಡಿಯಾ ರಾಷ್ಟ್ರೀಯ ಸಮನ್ವಯ ಸಮಿತಿಗೆ ಸೇರಿದ ಸಂಘಟನೆಗಳು ಬಿಜೆಪಿಯ ವಿರುದ್ಧ ಪ್ರಚಾರ ಮಾಡುವುದಾಗಿ ನಿರ್ಣಯ ಮಾಡಲಾಗಿದೆ.