ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಳೆದ ಶುಕ್ರವಾರ ಗೃಹಕಚೇರಿ ಕೃಷ್ಣಾದಲ್ಲಿ ಬಹಿರಂಗಪಡಿಸಿದ್ದ ‘ಅಪರೇಶನ್ ಕಮಲ’ದ ಆಡಿಯೋ ಕುರಿತ ವಿವಾದವು ಸೋಮವಾರದಂದು ರಾಜ್ಯದ ವಿಧಾನಸಭಾ ಕಲಾಪದಲ್ಲಿ ತಲ್ಲಣವನ್ನೇ ಉಂಟು ಮಾಡಿತು. ಕಳೆದ ಶುಕ್ರವಾರ ಬೆಳಿಗ್ಗೆಯೇ ಮುಖ್ಯಮಂತ್ರಿಗಳು ಈ ಆಡಿಯೋ ಬಿಡುಗಡೆಗೊಳಿದ್ದರೂ ಸಹ ಅಂದು ಮದ್ಯಾಹ್ನ ಸದನದಲ್ಲಿ ಮುಂಗಡ ಪತ್ರವನ್ನು ಮಂಡಿಸಿದ್ದರಿಂದ ಆಡಿಯೋ ಕುರಿತು ಚರ್ಚೆಗೆ ಆಸ್ಪದವಿರಲಿಲ್ಲ. ಸೋಮವಾರ ಬೆಳಿಗ್ಗೆ ಸದನದ ಕಲಾಪ ಶುರುವಾಗುತ್ತಿದ್ದಂತೆಯೇ ಸ್ವತಃ ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರೇ ‘ಆಡಿಯೋ’ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಂಡರು. ಇದಕ್ಕೆ ಮುಖ್ಯ ಕಾರಣ ಈಗಾಗಲೇ ರಾಷ್ಟ್ರದಾದ್ಯಂತ ಸುದ್ದಿ ಮಾಡಿರುವ ಈ ಆಡಿಯೋ ಸಂಭಾಷಣೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರರನ್ನೇ 50 ಕೋಟಿ ಹಣ ಕೊಟ್ಟು ಖರೀದಿಸಲಾಗಿದೆ ಎಂದು ಆಡಿರುವ ಮಾತುಗಳೇ ಆಗಿದ್ದವು.
ಸಂಭಾಷಣೆಯಲ್ಲಿ ಮಾತುಕತೆ ನಡೆಸಿರುವುದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಾಸಕ ಶಿವನಗೌಡ ನಾಯಕ್ ಮತ್ತು ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಎಂಬುದು ಮುಖ್ಯಮಂತ್ರಿ ಅವರ ಕುಮಾರಸ್ವಾಮಿ ಅವರ ಪ್ರತಿಪಾದನೆಯಾಗಿದೆ. ಈ ಆರೋಪವನ್ನು ಯಡಿಯೂರಪ್ಪ ಅವರು ಆರಂಭದಲ್ಲಿ ಬಲವಾಗಿ ಅಲ್ಲಗಳೆದಿದ್ದರಾದರೂ ಶನಿವಾರದ ಹೊತ್ತಿಗೆ ತಾವು ಶರಣಗೌಡನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ನಿಜ ಎಂಬುದನ್ನು ಮಾಧ್ಯಮಗಳೆದುರು ಒಪ್ಪಿಕೊಂಡಿದ್ದರು. ರಮೇಶ್ ಕುಮಾರ್ ಅವರು ಈ ಕುರಿತು ಯಾವುದೇ ಆರೋಪವನ್ನು ಮಾಡದಿದ್ದರೂ ತಾವು ಕೇಳಿಸಿಕೊಂಡ ಆ ಆಡಿಯೋದಲ್ಲಿ ಮಾತಾಡಿರುವುದು ಸದನದ ಸದಸ್ಯರೇ ಆಗಿದ್ದು ಅವರು ಈ ಹಿಂದೆ ಅಪರೇಷನ್ ಕಮಲ ನಡೆಸಿ ಸರಕಾರವನ್ನು ಬುಡಮೇಲು ಮಾಡುವ ಕೃತ್ಯದಲ್ಲಿ ತೊಡಗಿದ್ದವರೇ ಖಚಿತವಾಗುತ್ತದೆ ಎಂಬ ಅಂಶವನ್ನು ಮಾತ್ರ ಹೇಳಿದರು.
ತಮ್ಮ ಮೇಲೆ 50 ಕೋಟಿ ಹಣ ಪಡೆದು ‘ಅಪರೇಷನ್ ಕಮಲ’ಕ್ಕೆ ಸಹಕರಿಸುತ್ತಿರುವ ಗಂಭೀರವಾದ ಆರೋಪದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ತಮ್ಮ ವೈಯಕ್ತಿಕ ಜೀವನದ ಕೌಟುಂಬಿಕ ಹಿನ್ನೆಲೆ, ತಮ್ಮ ನೈತಿಕ ಬದ್ಧತೆಗಳನ್ನು ಸದನಕ್ಕೆ ಮನವರಿಕೆ ಮಾಡಿಕೊಡುತ್ತಾ ಒಂದು ಸಂದರ್ಭದಲ್ಲಿ ಗದ್ಗದಿತರಾದರು. ಇಂತಹ ಗುರುತರವಾದ ಆರೋಪವು ತಮ್ಮ ಮೇಲೆ ಬಂದಿರುವಾಗ ತಾವು ತಮ್ಮ ಕುಟುಂಬ ಸದಸ್ಯರ ನಡುವೆ ತಲೆ ಎತ್ತಿ ಹೇಗಿರಬೇಕು ಎಂಬ ಪ್ರಶ್ನೆಯನ್ನು ಸದನದ ಮುಂದಿಟ್ಟರು. ತಾವು ಈ ಹಿಂದಿನ ಎರಡು ರಾತ್ರಿಗಳನ್ನು ಕಳೆಯುವಾಗ ಪಟ್ಟ ಸಂಕಟವನ್ನು ಸಹ ತೋಡಿಕೊಂಡರು. ಈ ಮಧ್ಯೆ ‘ಸದನದ ಸದಸ್ಯ’ರಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಬೇಕೆಂದು ಕೇಳಿಕೊಂಡ ಕೃಷ್ಣಭೈರೇಗೌಡ ಅವರು ಸದನದ ಸಭಾಧ್ಯಕ್ಷರ ಮೇಲೆ ಇಂತಹ ಆರೋಪವೊಂದು ಬಂದಾಗ ಅದು ತೆಗೆದುಕೊಳ್ಳುವ ಸ್ವರೂಪದ ಕುರಿತು ವಿವರಣೆ ನೀಡಿದರು. ಸ್ಪೀಕರ್ ಅವರ ಮೇಲಿನ ಆರೋಪವು ಸ್ವತಃ ಸದನದ ಹಕ್ಕುಚ್ಯುತಿಯೇ ಆಗಿರುತ್ತದೆ ತನ್ಮೂಲಕ ಸದನದ ಪ್ರತಿಯೊಬ್ಬ ಸದಸ್ಯನ ಹಕ್ಕುಚ್ಯುತಿಯೂ ಆಗಿರುತ್ತದೆ ಎಂಬುದನ್ನು ಅವರು ಸದನಕ್ಕೆ ಮನವರಿಕೆ ಮಾಡಿಕೊಡುತ್ತಿದ್ದಂತೆ ಇದಕ್ಕೆ ತಕರಾರು ಸಲ್ಲಿಸಿದ್ದು ಬಿಜೆಪಿಯ ಶಾಸಕ ಮಾಧುಸ್ವಾಮಿ. ಬೀದಿಯ ಮೇಲೆ ಯಾರೋ ಮಾತಾಡಿದ್ದೆಲ್ಲಾ ಸದನದ ಹಕ್ಕುಚ್ಯುತಿಯ ಪರಿಧಿಯಲ್ಲಿ ತರಬಾರದು, ಈ ವಿಷಯವನ್ನು ಭಾವುಕವಾಗಿ ತೆಗೆದುಕೊಂದು ತೀರಾ ಗಂಭೀರವಾಗಿ ಪರಿಗಣಿಸದೇ ಸ್ಪೀಕರ್ ಅವರು ತಳ್ಳಿಹಾಕಬೇಕು ಎಂದು ಅವರು ಒತ್ತಾಯ ಪಡಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಕೃಷ್ಣಭೈರೇಗೌಡ ಅವರು ಸದನದ ಸದಸ್ಯರ ಬಗ್ಗೆ ಬೆಳಗಾವಿಯ ಯಾವುದೋ ಸಣ್ಣ ಪತ್ರಿಕೆಯೊಂದರ ಸಂಪಾದಕರು ಮಾಡಿದ ಟೀಕೆಯನ್ನೂ ಸಹ ಹಕ್ಕುಚ್ಯುತಿ ಎಂದು ಪ್ರತಿಪಾದಿಸಿ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಿದ್ದೇವೆ, ಇಂತಹದ್ದರಲ್ಲಿ ಹಕ್ಕು ಚ್ಯುತಿ ಯಾವುದು ಹೌದು ಯಾವುದು ಅಲ್ಲ ಎಂದು ಎಲ್ಲಾದರೂ ಉಲ್ಲೇಖವಾಗಿದೆಯೇ ಎಂದು ಪರುಪ್ರಶ್ನಿಸಿ, ಆಡಿಯೋ ಸಂಭಾಷಣೆಯಲ್ಲಿ ಸ್ಪೀಕರ್ ಕುರಿತು ಮಾತಾಡಿರುವುದು ಯಾರೋ ಆಗಿದ್ದರೆ ಬೇರೆ ಪ್ರಶ್ನೆ. ಆದರೆ ಹಾಗೆ ಆರೋಪ ಮಾಡಿರುವವರು ಜವಾಬ್ದಾರಿಯುತ ವ್ಯಕ್ತಿಗಳಾದಾಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ ಎಂದು ಪ್ರತಿಪಾದಿಸಿದರು. ಅವರೂ ಸಹ ಯಾವುದೇ ವ್ಯಕ್ತಿಗಳನ್ನು ಉಲ್ಲೇಖಿಸಲಿಲ್ಲ. ಈ ಕುರಿತು ತನಿಖೆಯಾಗಬೇಕಾದ ಅಗತ್ಯವನ್ನು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಮೇಶ್ ಕುಮಾರ್ ಅವರ ಕೋರಿಕೆಯ ಆಹ್ವಾನದ ಮೇರೆಗೆ ಮಾತನಾಡಿ ರಮೇಶ್ ಕುಮಾರ್ ಅವರು ಇಂತಹ ಕೃತ್ಯದಲ್ಲಿ ತೊಡಗಲು ಸಾಧ್ಯವೇ ಇಲ್ಲ. ಇದರಲ್ಲಿ ಅವರ ಹೆಸರನ್ನು ದುರುದ್ದೇಶದಿಂದ ತರಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತ್ತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಸದನವನ್ನು ಒತ್ತಾಯಿಸಿದರು. ಸ್ಪೀಕರ್ ರಮೇಶ್ ಕುಮಾರ್ ಅವರು ಸಹ ಮಾಧುಸ್ವಾಮಿ ಅವರ ಸಲಹೆಗೆ ವ್ಯತಿರಿಕ್ತವಾಗಿ ಆಡಿಯೋದಲ್ಲಿ ಮಾತಾಡಿರುವುದು ಈ ಸದನದ ಜವಾಬ್ದಾರಿಯುತ ವ್ಯಕ್ತಿಗಳೇ ಆಗಿರುವಾಗ ಇದರ ಬಗ್ಗೆ ತನಿಖೆ ಆಗಬೇಕಾದ ಅವಶ್ಯಕತೆ ಇದೆ. ಆದರೆ ಆರೋಪ ಇರುವುದು ಸ್ವತಃ ನನ್ನ ಮೇಲಾದ್ದರಿಂದ ಹಾಗೂ 15 ದಿನಗಳಲ್ಲಿ ನಾನು ಈ ಆರೋಪದಿಂದ ಮುಕ್ತನಾಗಬೇಕಾಗಿರುವುದರಿಂದ ಇದರ ತನಿಖೆಗಾಗಿ ಒಂದು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ಸೋಮವಾರದ ಸದನ ಕಲಾಪದಲ್ಲಿ ಮಧ್ಯಾಹ್ನದ ವರೆಗೂ ಕಲಾಪವು ಅತ್ಯಂತ ಗಂಭಿರವಾಗಿಯೇ ಜರುಗಿತು. ಮಾತನಾಡಿದ ಯಾರೊಬ್ಬರೂ ಸ್ಪೀಕರ್ ಸುರೇಶ್ ಕುಮಾರ್ ಅವರ ಮೇಲೆ ಅನುಮಾನ ವ್ಯಕ್ತಪಡಿಸಲಿಲ್ಲ. ಎಲ್ಲರೂ ಅವರ ಕುರಿತು ಸಹಾನುಭೂತಿಯಿಂದಲೇ ಮಾತನಾಡಿದರು ಮಾತ್ರವಲ್ಲ ಇಡೀ ಕಲಾಪದ ಚರ್ಚೆ ಸದನದ ಪ್ರತಿಯೊಬ್ಬ ಸದಸ್ಯನಿಗೂ ‘ಅರಿವು’ ಮೂಡಿಸುವಂತಿತ್ತು. ಆದರೆ ಮದ್ಯಾಹ್ನದ ವಿರಾಮದ ನಂತರ ನಡೆದ ಕಲಾಪದಲ್ಲಿ ಚರ್ಚೆಗಳು ಅತ್ಯಂತ ಬಿರುಸಿನಿಂದ ನಡೆದವು. ಆಡಿಯೋದ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಲು ಎಸ್ಐಟಿ ರಚಿಸಬೇಕು ಎಂಬ ಸಲಹೆಯನ್ನು ಸ್ಪೀಕರ್ ಅವರು ಮುಖ್ಯಮಂತ್ರಿಗಳಿಗೆ ನೀಡುತ್ತಿದ್ದಂತೆಯೇ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಎಸ್ಐಟಿ ಬದಲು ಸದನ ಸಮಿತಿಯ ಮೂಲಕ ಅಥವಾ ನ್ಯಾಯಾಂಗ ಸಮಿತಿಯ ಮೂಲಕ ತನಿಖೆ ನಡೆಸಬೇಕು ಎಂಬುದು ವಿರೋಧ ಪಕ್ಷದ ಸದಸ್ಯರ ಒತ್ತಾಯವಾಯಿತು. ಈ ನಡುವೆ ಯಡಿಯೂರಪ್ಪ ಅವರು ಬೆಳಗಿನಿಂದಲೂ ನಡೆದ ಕಲಾಪದಲ್ಲಿ ಬಹುತೇಕ ಮೌನವಾಗಿ ಕುಳಿತಿದ್ದರು. ಒಂದು ಸಂದರ್ಭದಲ್ಲಿ ಮಾತ್ರ ಅವರು ಕೃಷ್ಣ ಭೈರೇಗೌಡರ ಮಾತಿಗೆ ಅಡ್ಡಬಂದು ‘ನಾನು ಆಡಿಯೋದಲ್ಲಿ ಸಂಭಾಷಣೆ ನನ್ನದೆಂದು ಒಪ್ಪಿಕೊಂಡಿದ್ದೇನೆ’ ಎಂಬ ಮಾತನ್ನು ನೀವು ಹಿಂತೆಗೆದುಕೊಳ್ಳಿ ಎಂದು ಪ್ರತಿಭಟಿಸಿದರು. ಈ ಮೂಲಕ ಅವರು ತಾವು ಒಪ್ಪಿಕೊಂಡಿರುವುದು ಶರಣಗೌಡ ಅವರನ್ನು ಭೇಟಿ ಮಾಡಿದ್ದನ್ನು ಮಾತ್ರವೇ ಹೊರತು ಆಡಿಯೋದಲ್ಲಿನ ಮಾತುಕತೆಯನ್ನಲ್ಲ ಎಂದು ಪರೋಕ್ಷವಾಗಿ ಸೂಚಿಸಿದರು.
ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ರಾಜಕಾರಣ ಬಂದು ನಿಂತಿರುವ ಸ್ಥಿತಿ ಇದು ಎಂದು ಪದೇ ಪದೇ ಹೇಳಿದ್ದು ಒಂದು ಕಡೆಯಾದರೆ ಡಿಕೆ ಶಿವಕುಮಾರ್ ಅವರು ಜನರೆಲ್ಲಾ ನಮ್ಮನ್ನು ಕಳ್ಳ ಕಳ್ಳ ಎನ್ನುತ್ತಿದ್ದಾರೆ ಎಂದು ಹೇಳಿದ್ದು ಮಾರ್ಮಿಕವಾಗಿತ್ತು.