ಒಂದು ವೇಳೆ ಎಸ್ ಐಟಿ ಸಮಗ್ರ ತನಿಖೆ ನಡೆಸಿ ಸಾಕ್ಷ್ಯಾಧಾರ ಸಮೇತ ಆರೋಪ ಪಟ್ಟಿ ಸಲ್ಲಿಸಿದಲ್ಲಿ ನಿಜವಾಗಿಯೂ ತಮ್ಮ ನಾಯಕರಿಗೆ ಸಂಕಷ್ಟ ಎದುರಾಗಲಿದೆ. ಅದರಲ್ಲೂ ಕೇವಲ ಹದಿನೈದು ದಿನದಲ್ಲಿ ಸಂಪೂರ್ಣ ತನಿಖೆ ಮುಗಿಯಬೇಕು ಎಂದು ಸ್ಪೀಕರ್ ಹೇಳಿರುವುದರಿಂದ ಆ ಸಂಕಷ್ಟ ಇನ್ನು ಕೆಲವೇ ದಿನಗಳಲ್ಲಿ ಎದುರಾಗಬಹುದು ಎಂಬ ಭೀತಿ ಕಾಡತೊಡಗಿದೆ.
“ನಮ್ಮಿಂದ ತಪ್ಪಾಗಿದೆ. ಪ್ಲೀಸ್ ಬಿಟ್ಟುಬಿಡಿ. ಎಸ್ಐಟಿ ತನಿಖೆ ಬೇಡವೇ ಬೇಡ. ನಿಮ್ಮ ಗೆಳೆಯನಾಗಿ ನಾನು ವಿನಂತಿ ಮಾಡುತ್ತೇನೆ. ನಿಮ್ಮ ಹಿತೈಷಿಯಾಗಿ ಹೇಳುತ್ತಿದ್ದೇನೆ. ದಯಮಾಡಿ ನಿಲ್ಲಿಸಿ. ನಮ್ಮ ತಪ್ಪಾಗಿದೆ ಎಂದು ಒಪ್ಪಿಕೊಳ್ಳುತ್ತೇವೆ. ಹೀಗಾಗಿ ತಮ್ಮ ನಿರ್ಧಾರ ಮರುಪರಿಶೀಲಿಸಿ..”
ಇದು, ಮಂಗಳವಾರ ವಿಧಾನಸಭಾ ಕಲಾಪ ಆರಂಭವಾಗುತ್ತಲೇ ಬಿಜೆಪಿ ಶಾಸಕ ಜೆ ಮಾಧುಸ್ವಾಮಿ ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಪರಿಪರಿಯಾಗಿ ಅಂಗಾಲಾಚಿದ ಪರಿ.
ಮಾತುಗಳಲ್ಲಿ ಸ್ಪಷ್ಟವಾಗುವುದೆಂದರೆ; ಆಪರೇಷನ್ ಕಮಲದ ಆಡಿಯೋದಲ್ಲಿ ನಡೆದಿರುವ ಸಂಭಾಷಣೆ ತಮ್ಮದೇ ಪಕ್ಷದ ನಾಯಕರ ನಡುವೆ ನಡೆದಿರುವುದು ಮತ್ತು ಆ ಮಾತುಕತೆ ಹಾಗೂ ಆ ಆಡಿಯೋ ಸಾಚಾ ಎಂಬುದನ್ನು ಸದನದಲ್ಲಿ ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ ಮತ್ತು ಆ ಇಡೀ ಪ್ರಕರಣ ತಪ್ಪು ಎಂಬುದು ಈಗ ಅವರಿಗೆ ಮನವರಿಕೆಯಾಗಿದೆ. ಹಾಗಾಗಿ ಎಸ್ ಐಟಿ ತನಿಖೆಯ ಪರಿಣಾಮಗಳ ಬಗ್ಗೆ ಆ ನಾಯಕರಿಗೆ ಭಯವಿದೆ. ಆ ಕಾರಣಕ್ಕಾಗಿ ಅವರು ಸಂಪೂರ್ಣ ತಮ್ಮ ತಪ್ಪನ್ನು ಒಪ್ಪಿಕೊಂಡು, ತನಿಖೆಯನ್ನು ಕೈಬಿಡಿ ಎಂದು ಸಭಾಪತಿಗಳಿಗೆ ಗೋಗರೆಯುತ್ತಿದ್ದಾರೆ ಎಂಬುದು ಮಂಗಳವಾರ ಸದನದಲ್ಲಿ ಬಿಜೆಪಿ ನಾಯಕರು ಆಡಿದ ಮಾತುಗಳು ಸೂಚಿಸುತ್ತಿರುವ ತಾತ್ಪರ್ಯ.
ಪ್ರಮುಖವಾಗಿ ಆಡಿಯೋದಲ್ಲಿ ಪ್ರಸ್ತಾಪವಾಗಿರುವ ಹೆಸರುಗಳು ಮತ್ತು ಆಡಿಯೋದಲ್ಲಿ ದನಿ ಕೇಳಿಬರುತ್ತಿರುವ ವ್ಯಕ್ತಿಗಳ ವಿರುದ್ಧ ತನಿಖೆ ನಡೆಯಲಿದೆ. ಅದಕ್ಕೂ ಮುನ್ನ ಆಡಿಯೋದ ಸಾಚಾತನ ಪರೀಕ್ಷೆ ನಡೆಯಲಿದೆ. ಪೊಲೀಸ್ ವ್ಯವಸ್ಥೆಯಡಿ ಅಪರಾಧ ತನಿಖಾ ಪ್ರಕ್ರಿಯೆಯ ರೀತಿಯಲ್ಲಿಯೇ ತನಿಖೆ ನಡೆದರೆ, ಆಡಿಯೋದ ಸಾಚಾತನ ಸಾಬೀತಾದಲ್ಲಿ ಅದರಲ್ಲಿ ಭಾಗಿಯಾದವರ ವಿರುದ್ಧ ಎಫ್ ಐಆರ್ ದಾಖಲಾಗಲಿದೆ ಮತ್ತು ಪರಿಣಾಮವಾಗಿ ಅಗತ್ಯಬಿದ್ದಲ್ಲಿ ಬಂಧನ ಕೂಡ ಆಗಬಹುದು. ಅಂತಹ ಸಂದರ್ಭ ಎದುರಾದಲ್ಲಿ ಅದರಿಂದಾಗಿ ಪಕ್ಷ ಮತ್ತು ಪಕ್ಷದ ನಾಯಕರಿಗೆ ಆಗಬಹುದಾದ ಹಾನಿ ಎಂತಹದ್ದು ಎಂಬುದು ಬಿಜೆಪಿ ನಾಯಕರ ಈ ಪರಿಯ ಅಂಗಾಲಾಚಲು ಕಾರಣ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.
ಸದನದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಇದೇ ಮಾತನ್ನು ಆಡಿದ್ದು, ನೀವು ತಪ್ಪಿತಸ್ಥರಲ್ಲ ಎಂದಾದರೆ ನೀವ್ಯಾಕೆ ಭಯಪಡುತ್ತಿದ್ದೀರಿ ಎಂದು ಪ್ರತಿಪಕ್ಷದವರನ್ನು ಪ್ರಶ್ನಿಸಿದರು. ಬಿಜೆಪಿ ಬೇಡಿಕೆಯ ನ್ಯಾಯಾಂಗ ತನಿಖೆ ಮತ್ತು ಸದನ ಸಮಿತಿ ತನಿಖೆಗಳು ಎರಡೂ ಮೂಲಭೂತವಾಗಿ ವಾಸ್ತವಾಂಶಗಳ ಸತ್ಯಾಸತ್ಯತೆಯ ಪರಿಶೀಲನೆಗೆ ಮಾತ್ರ ಸೀಮಿತ. ಅವುಗಳಿಗೆ ಅಪರಾಧ ತನಿಖೆಯ ವ್ಯಾಪಕತೆ ಇರಲಾರದು. ಈ ಪ್ರಕರಣ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಇದರ ಸರಿಯಾದ ತನಿಖೆ ನಡೆಸಲು ಸಿಆರ್ ಪಿಸಿ ವ್ಯಾಪ್ತಿಯಲ್ಲಿ ಮಾತ್ರ ಅವಕಾಶ. ಹಾಗಾಗಿ ಎಸ್ ಐಟಿ ತನಿಖೆಯೇ ಸೂಕ್ತ ಎಂದು ಸಿದ್ದರಾಮಯ್ಯ ಅವರ ವಾದವಾಗಿತ್ತು.
ಅಷ್ಟಕ್ಕೂ ಬಿಜೆಪಿ ನಾಯಕರು ಎಸ್ ಐಟಿ ಬಗ್ಗೆ ಇಷ್ಟು ಬೇಸ್ತುಬೀಳುತ್ತಿರುವುದು ಏಕೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.
ಆ ಆತಂಕಕ್ಕೆ ಪ್ರಮುಖ ಕಾರಣ; ಆಡಿಯೋವನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದಾಗ, ಅದಕ್ಕೂ ತಮಗೂ ಸಂಬಂಧವಿಲ್ಲ. ತಾವು ಅಂತಹ ಕೃತ್ಯ ಮಾಡಿಲ್ಲ. ಆ ಆಡಿಯೋದಲ್ಲಿರುವುದು ತಮ್ಮ ದನಿ ಎಂಬುದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದಲೇ ನಿವೃತ್ತನಾಗುತ್ತೇನೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಎರಡೇ ದಿನದಲ್ಲಿ ಆ ಆಡಿಯೋದ ದನಿ ತಮ್ಮದೇ ಎಂದು ಸ್ವತಃ ಮಾಧ್ಯಮದ ಎದುರೇ ತಪ್ಪೊಪ್ಪಿಕೊಂಡಿದ್ದರು. ಈ ಅಂಶ ಮೇಲ್ನೊಟಕ್ಕೆ ಇಡೀ ಪ್ರಕರಣದ ರೂವಾರಿಗಳು ಯಾರು ಎಂಬುದಕ್ಕೆ ಬಿಜೆಪಿ ನಾಯಕರತ್ತ ಬೆರಳುಮಾಡತೊಡಗಿದೆ. ಹಾಗಾಗಿಯೇ ಬಿಜೆಪಿ ಶಾಸಕರು ತಮ್ಮ ನಾಯಕನ ರಕ್ಷಣೆಗೆ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಒಂದು ವೇಳೆ ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್ ಐ ಟಿ ತನಿಖೆ ನಡೆಸಿದರೆ, ಪ್ರಮುಖವಾಗಿ ಆಡಿಯೋದಲ್ಲಿ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ಶಾಸಕ ಶಿವನಗೌಡ ನಾಯಕ, ಜೆಡಿಎಸ್ ಶಾಸಕ ನಾಗನಗೌಡ ಪಾಟೀಲ ಅವರ ಪುತ್ರ ಶರಣಗೌಡ ಪಾಟೀಲ ಮತ್ತು ಸ್ವತಃ ಶಾಸಕ ನಾಗನಗೌಡ ಪಾಟೀಲ ಅವರುಗಳು ವಿಚಾರಣೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಒಂದು ವೇಳೆ ಎಸ್ ಐಟಿ ಸಮಗ್ರ ತನಿಖೆ ನಡೆಸಿ ಸಾಕ್ಷ್ಯಾಧಾರ ಸಮೇತ ಆರೋಪ ಪಟ್ಟಿ ಸಲ್ಲಿಸಿದಲ್ಲಿ ನಿಜವಾಗಿಯೂ ಬಿಜೆಪಿ ನಾಯಕರಿಗೆ ಸಂಕಷ್ಟ ಎದುರಾಗಲಿದೆ. ಅದರಲ್ಲೂ ಕೇವಲ ಹದಿನೈದು ದಿನದಲ್ಲಿ ಸಂಪೂರ್ಣ ತನಿಖೆ ಮುಗಿಯಬೇಕು ಎಂದು ಸ್ಪೀಕರ್ ಹೇಳಿರುವುದರಿಂದ ಆ ಸಂಕಷ್ಟ ಇನ್ನು ಕೆಲವೇ ದಿನಗಳಲ್ಲಿ ಎದುರಾಗಬಹುದು ಎಂಬ ಭೀತಿ ಕೂಡ ಕಾಡತೊಡಗಿದೆ.
ಅದರ ಬದಲಾಗಿ ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿ ತನಿಖೆ ನಡೆದರೆ, ಅಂತಹ ತನಿಖೆಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಂಡು, ತಪ್ಪಿತಸ್ಥರಿಗೆ ಶಿಕ್ಷೆಯಾದ ಉದಾಹರಣೆಗಳೇ ಅಪರೂಪವಾಗಿರುವುದರಿಂದ ತಮ್ಮ ನಾಯಕರು ನಿರಾಳರಾಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ, ಸಮಯ ಹೆಚ್ಚು ಸಿಕ್ಕಷ್ಟು ಇಡೀ ಪ್ರಕರಣ ಜನರ ಮನಸ್ಸಿನಲ್ಲಿ ಮರೆಗೆ ಸರಿಯಲಿದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಅವಕಾಶವೂ ಇದೆ ಎಂಬುದು ಎಸ್ ಐಟಿ ತನಿಖೆಗೆ ಬಿಜೆಪಿ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವುದರ ಹಿಂದಿನ ಮರ್ಮ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಸಂಗತಿ.
ಒಟ್ಟಾರೆ, ಮಂಗಳವಾರ ಕಲಾಪದ ಅಂತ್ಯದ ವೇಳೆಗೆ ಸ್ಪೀಕರ್ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಹಾಗಾಗಿ ಎಸ್ ಐಟಿ ತನಿಖೆಗೆ ಸರ್ಕಾರ ಇನ್ನು ಒಂದೆರಡು ದಿನದಲ್ಲಿ ಆದೇಶಿಸುವ ಸಾಧ್ಯತೆ ಇದ್ದು, ಆಪರೇಷನ್ ಮಾಡಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರ ಹಿಡಿಯುವ ಬದಲು, ಇದೀಗ ಸ್ವತಃ ತಾವೇ ಆಪರೇಷನ್ ಮಾಡಿಸಿಕೊಂಡು ಹಾಸಿಗೆ ಹಿಡಿದ ಸ್ಥಿತಿ ಬಿಜೆಪಿ ನಾಯಕರದ್ದಾಗಿದೆ ಎಂಬುದು ರಾಜ್ಯದ ಜನಸಾಮಾನ್ಯರ ನಡುವೆ ನಗೆಪಾಟಲಿನ ಸಂಗತಿಯಾಗಿ ಚಲಾವಣೆಗೆ ಬಂದಿದೆ!
–