ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಶಾಸಕರನ್ನು ಸೆಳೆಯಲು ಹಣ ಹಾಗೂ
ಮಂತ್ರಿಗಿರಿಯ ಆಮಿಷವೊಡ್ಡಿ ಆಪರೇಷನ್ ಕಮಲ ನಡೆಸಲು ಯತ್ನಿಸಿದ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ ಪ್ರಕರಣದ ಕುರಿತು ಸದನದಲ್ಲಿಂದು ಭಾರೀ ಚರ್ಚೆಯಾಯಿತು.
ಆಡಿಯೋ ವಿವಾದದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಎಲ್ಲ ಪಕ್ಷದ ಶಾಸಕರು ಒಕ್ಕೊರಲಿನಲ್ಲಿ ಒತ್ತಾಯಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ಗಂಭೀರ ಆರೋಪ ಬರುವ ರೀತಿ ಮಾತನಾಡಿದ್ದಾರೆ. ಯಾರೆಂಬುದು ಇನ್ನೂ ಗೊತ್ತಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಿದ್ದರಾಮಯ್ಯನವರು ನಮಗೆ ಜವಾಬ್ದಾರಿಯುತ ಸಭಾಧ್ಯಕ್ಷರ ಸ್ಥಾನ ನೀಡಿದ್ದಾರೆ. ತಾನು ಈ ಸ್ಥಾನದಲ್ಲಿ ಇರದಿದ್ದರೆ ಇಂಥ ಯಾತನೆ ಅನುಭವಿಸುವ ಅವಶ್ಯಕತೆಯೇ ಇರಲಿಲ್ಲ ಎಂದು ವಿಶಾದ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ನಿಮ್ಮ ಮೇಲೆ ನಮಗೆ ಎಳ್ಳಷ್ಟು ಅನುಮಾನವಿಲ್ಲ. ಹಲವು ವರ್ಷಗಳಿಂದ ನಿಮ್ಮ ರಾಜಕೀಯ ಜೀವನವನ್ನು ನೊಡುತ್ತಾ ಬಂದಿದ್ದೇನೆ, ನಿಮ್ಮ ಬಗ್ಗೆ ಅಪಾರ ಗೌರವವಿದೆ. ಈ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮಾತನಾಡುವುದು ಸರಿಯಲ್ಲ. ಆರೋಪದಿಂದ ನೀವು ಹೊರಬರಬೇಕು. ಇದು ಗಂಭೀರ ಪ್ರಕರಣ, ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆಡಿಯೋ ಬಗ್ಗೆ ಸಮಗ್ರ ತನಿಖೆಯಾಗಲಿ, ತಪ್ಪಿತ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಹೇಳಿದರು.
ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್, ಇಡೀ ಸದನ ಸಭಾಧ್ಯಕ್ಷರ ಮೇಲೆ ವಿಶ್ವಾಸವಿಟ್ಟಿದೆ. ಈ ಬಗ್ಗೆ ಯಾರಿಗೂ ಸಂಶಯವಿಲ್ಲ. ವ್ಯಕ್ತಿಗತ ತೀರ್ಮಾನ ಬೇಡ. ಸಭಾಧ್ಯಕ್ಷ ಸ್ಥಾನಕ್ಕೆ ಅವಮಾನ ಮಾಡಿದವರ್ಯಾರು?, ಏಕೆ ಮಾಡಿದರು ಎಂಬ ಬಗ್ಗೆ ತನಿಖೆಯಾಗಲಿ ಎಂದು ರಮೇಶ್ ಅವರ ಬೆಂಬಲಕ್ಕೆ ನಿಂತರು
ನಂತರ ಜಲಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ್, ಸಭಾಧ್ಯಕ್ಷರು ಯಾವುದೇ
ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಕೈಗೊಳ್ಳಬಾರದು. ನಾವೆಲ್ಲರೂನಿಮ್ಮೊಂದಿಗಿದ್ದೇವೆ. ಇದು
ಸದನದ ಗೌರವದ ಪ್ರಶ್ನೆ. ಸಮಗ್ರ ತನಿಖೆ ನಡೆಯಲಿ ಎಂದು ಹೇಳಿದರು.
ಮಾಜಿ ಸಚಿವ ಎಚ್. ಕೆ ಪಾಟೀಲ್, ಆಡಿಯೋ ವಿವಾದವನ್ನು ಗಂಭೀರವಾಗಿ ಪರಿಗಣಿಸಬೇಕು.
ಭ್ರಷ್ಟಾಚಾರದಲ್ಲಿ ಸಭಾಧ್ಯಕ್ಷರ ಹೆಸರು ಪ್ರಸ್ತಾಪಿಸಿರುವುದು ಪ್ರಜಾಪ್ರಭುತ್ವಕ್ಕೆ ಕಳಂಕ ಎಂದರು.
ಬಿಜೆಪಿ ಹಿರಿಯ ಶಾಸಕ ಕೆ.ಎಸ್ ಈಶ್ವರಪ್ಪ, ಸಭಾಧ್ಯಕ್ಷರ ಮೇಲಿನ ರೋಪ ತರವಲ್ಲ. ಆ ಧ್ವನಿ
ಸುರುಳಿ ನೈಜವೋ, ನಕಲಿಯೋ ಇತ್ಯರ್ಥವಾಗಬೇಕು. ಈ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು
ಆಗ್ರಹಿಸಿದರು.
ನಂತರ ಸ್ಪೀಕರ್ ರಮೇಶ್ ಕುಮಾರ್, “ನನ್ನ ಮೇಲೆ ವಿಶ್ವಾಸವಿಟ್ಟು ವಿಶ್ವಾಸ ಮಂಡನೆ ಮಾಡಿದ್ದಕ್ಕೆ
ನಾನು ಎಲ್ಲರಿಗೂ ಖುಣಿ’’ ಎಂದರು..
ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ 15 ದಿನದೊಳಗೆ ಸಮಗ್ರ
ತನಿಖೆ ನಡೆಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲಹೆ
ನೀಡಿದರು. ಆಡಿಯೋದಲ್ಲಿ ಪ್ರಸ್ತಾಪವಾಗಿರುವ ಎಲ್ಲರ ಬಗ್ಗೆಯೂ ತನಿಖೆ ನಡೆಯಲಿ, ಸತ್ಯ
ಹೊರಬರಲಿ ಎಂದು ಆಗ್ರಹಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ಶಾಸಕ ಗೋವಿಂದ ಕಾರಜೋಳ, ತನಿಖೆ ನಡೆಸಲು
ಸರ್ಕಾರಕ್ಕೆ ಅವಕಾಶ ನೀಡಬಾರದೆಂದು ಮನವಿ ಮಾಡಿದರು. ,ಮಾಜಿ ಮುಖ್ಯಮಂತ್ರಿ ಜಗದೀಶ್
ಶೆಟ್ಟರ್ ಸಹ ಧ್ವನಿಗೂಡಿಸಿ, ಸರ್ಕಾರಕ್ಕೆ ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರ ನೀಡಿರುವ
ಕುರಿತು ಮರುಪರೀಶಿಲನೆ ನಡೆಸಲೇಬೇಕು ಎಂದು ಒತ್ತಾಯಿಸಿದರು.
ಸ್ಪೀಕರ್ ರಮೇಶ್, ಇದು ತನ್ನಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.