ಕೊಲ್ಕತ್ತಾ ಪೊಲೀಸ್ ಆಯುಕ್ತರ ಈ ಪ್ರಕರಣ, ಬಿಜೆಪಿಯ ಪ್ರಧಾನಿ ಮೋದಿ ಮತ್ತು ಅಮಿಶ್ ಶಾ ಜೋಡಿಯ ಕೀಳು ರಾಜಕೀಯ ತಂತ್ರಗಾರಿಕೆಯನ್ನು ಮತ್ತೊಮ್ಮೆ ಬೆತ್ತಲುಗೊಳಿಸಿರುವಂತೆಯೇ, ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿ ಅವರ ಭ್ರಷ್ಟರನ್ನು ರಕ್ಷಿಸುವ ಅನೈತಿಕ ರಾಜಕೀಯ ವರಸೆಯನ್ನೂ ಬಯಲುಮಾಡಿದೆ.
ಚಿಟ್ ಫಂಡ್ ಹಗರಣದ ತನಿಖೆಯ ವಿಷಯದಲ್ಲಿ ಸಿಬಿಐ ಮತ್ತು ಪಶ್ಚಿಮ ಬಂಗಾಳ ಪೊಲೀಸರ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಮೇಲ್ನೋಟಕ್ಕೆ ಎರಡು ತನಿಖಾ ಸಂಸ್ಥೆ(ಸಿಬಿಐ ಮತ್ತು ಎಸ್ಐಟಿ)ಗಳ ನಡುವಿನ ಪ್ರತಿಷ್ಠೆಯ ಪ್ರಶ್ನೆಯಂತೆ ಕಂಡುಬಂದರೂ, ಅಸಲಿಗೆ ಈ ವಿಷಯದಲ್ಲಿ ಪಣಕ್ಕಿಟ್ಟಿರುವುದು ಆ ರಾಜ್ಯದ ಆಡಳಿತದ ಚುಕ್ಕಾಣಿಯನ್ನೇ. ಹಾಗಾಗಿಯೇ ಈಶಾನ್ಯ ಭಾರತದ ಬಹುದೊಡ್ಡ ರಾಜ್ಯದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳುವ ಸಲುವಾಗಿ ಬಿಜೆಪಿ ತನ್ನ ಕೇಂದ್ರ ಸರ್ಕಾರದ ಅಧೀನದ ಸಿಬಿಐಗೆ ಕೀಲಿ ತಿರುವಿ ಬಿಟ್ಟಿದ್ದರೆ, ತನ್ನ ಏಕಮಾತ್ರ ಭದ್ರಕೋಟೆಯಾಗಿರುವ ರಾಜ್ಯದಲ್ಲಿ ಅಧಿಕಾರದ ಕುರ್ಚಿಯನ್ನು ಖಾತ್ರಿಪಡಿಸಿಕೊಳ್ಳಲು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧವೇ ಸೆಡ್ಡುಹೊಡೆದಿದೆ.
ಕಳೆದ ಭಾನುವಾರ ಸಿಬಿಐ ಅಧಿಕಾರಿಗಳು ಕೊಲ್ಕತ್ತಾ ಪೊಲೀಸ್ ಆಯುಕ್ತರ ನಿವಾಸದ ಮೇಲೆ ದಾಳಿಗೆ ಹೋಗಿ ಅಲ್ಲಿನ ಪೊಲೀಸರ ವಶವಾಗಿದ್ದರು. ಚಿಟ್ ಫಂಡ್ ಪ್ರಕರಣಗಳ ತನಿಖೆ ನಡೆಸಿದ್ದ ಪಶ್ಚಿಮಬಂಗಾಳ ಪೊಲೀಸರ ಎಸ್ ಐಟಿ ತಂಡ ತಾನು ಸಂಗ್ರಹಿಸಿದ್ದ ಭಾರೀ ಪ್ರಮಾಣದ ಸಾಕ್ಷ್ಯಾಧಾರಗಳನ್ನು, ಪ್ರಕರಣವನ್ನು ಸಿಬಿಐಗೆ ವಹಿಸಿದ ಬಳಿಕ ಹಸ್ತಾಂತರ ಮಾಡಿಲ್ಲ. ಕೊಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆ ಕುರಿತ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೊಳಪಡಿಸಲು ಹೋದ ಅಧಿಕಾರಿಗಳನ್ನು ತೃಣಮೂಲ ಕಾಂಗ್ರೆಸ್ ಸರ್ಕಾರ ವಶಕ್ಕೆ ಪಡೆದಿರುವುದು ಕೇಂದ್ರ ಸರ್ಕಾರದ ವಿರುದ್ಧದ ದಂಗೆ ಎಂದು ಸಿಬಿಐ ಹೇಳಿದೆ.
ಆದರೆ, ಕೇಂದ್ರದ ಬಿಜೆಪಿ ಸರ್ಕಾರದ ಕೈಗೊಂಬೆಯಾಗಿ ತಮ್ಮ ಸರ್ಕಾರದ ವಿರುದ್ಧ, ಪಶ್ಚಿಮಬಂಗಾಳ ರಾಜ್ಯದ ವಿರುದ್ಧ ಷಢ್ಯಂತ್ರ ನಡೆಸಲು ಸಿಬಿಐ ಅಧಿಕಾರಿಗಳು ಆಗಮಿಸಿದ್ದರು. ಕೊಲ್ಕತ್ತಾ ಪೊಲೀಸ್ ಆಯುಕ್ತರನ್ನು ಬಂಧಿಸುವ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿ, ಅದರ ನೆಪದಲ್ಲಿ ತಮ್ಮ ಸರ್ಕಾರವನ್ನು ವಜಾಗೊಳಿಸಿ ಪರೋಕ್ಷವಾಗಿ ಅಧಿಕಾರ ಹಿಡಿಯುವ ಪ್ರಜಾಪ್ರಭುತ್ವ ವಿರೋಧಿ ಹುನ್ನಾರವನ್ನು ಬಿಜೆಪಿ ಹೆಣೆದಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಆ ಆರೋಪದ ಗುರಾಣಿ ಹಿಡಿದೇ ಅವರು ಮೂರು ದಿನಗಳ ಕಾಲ ಕೊಲ್ಕತ್ತಾದ ಬೀದಿಯಲ್ಲಿ ತಾವೊಬ್ಬ ಸಿಎಂ ಎಂಬುದನ್ನೂ ಲೆಕ್ಕಿಸದೆ ಧರಣಿ ಕೂತಿದ್ದರು.

ಮಮತಾ ಬ್ಯಾನರ್ಜಿ
ಬಳಿಕ ಕೊಲ್ಕತ್ತಾ ಹೈಕೋರ್ಟ್, ಕೊಲ್ಕತ್ತಾ ಪೊಲೀಸ್ ಆಯುಕ್ತರನ್ನು ದೆಹಲಿ ಮತ್ತು ಕೊಲ್ಕತ್ತಾವನ್ನು ಹೊರತುಪಡಿಸಿ ಯಾವುದೇ ಕಡೆಗೆ ಸೇರದ(ಸಿಬಿಐ ಮತ್ತು ಕೊಲ್ಕತ್ತಾ ಪೊಲೀಸರ ನಡುವೆ) ತಟಸ್ಥ ಸ್ಥಳವಾದ ಶಿಲ್ಲಾಂಗ್ ನಲ್ಲಿ ವಿಚಾರಣೆ ನಡೆಸುವಂತೆ ಮತ್ತು ವಿಚಾರಣೆಗೆ ಹಾಜರಾದಾಗ ಅವರ ಬಂಧನ, ವಶದಂತಹ ಯಾವುದೇ ಕ್ರಮ ಕೈಗೊಳ್ಳದಂತೆ ಸಿಬಿಐಗೆ ತಾಕೀತು ಮಾಡಿತ್ತು. ಆ ಬಳಿಕ ಪರಿಸ್ಥಿತಿ ತುಸು ತಿಳಿಯಾಗಿತ್ತು. ಕೋರ್ಟ್ ಆದೇಶದಂತೆ ಕೊಲ್ಕತ್ತಾ ಪೊಲೀಸ್ ಮುಖ್ಯಸ್ಥರು ಶನಿವಾರ ಶಿಲ್ಲಾಂಗ್ನಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಈ ನಡುವೆ, ಕಳೆದ ನವೆಂಬರಿನಲ್ಲಿಯೇ ಪಶ್ಚಿಮಬಂಗಾಳ ಸರ್ಕಾರ ತನ್ನ ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐಗೆ ಯಾವುದೇ ತನಿಖೆಗೆ ಅವಕಾಶ ನೀಡದಿರಲು, ಈ ಹಿಂದೆ ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತ್ತು. ಹಾಗಾಗಿ ಸಿಬಿಐ ಇದೀಗ ಪೊಲೀಸ್ ಆಯುಕ್ತರ ವಿಚಾರಣೆಗೆ ಹೋಗುವ ಮುನ್ನ ಆ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಿತ್ತು ಎಂಬ ವಾದವನ್ನು ಸಿಎಂ ಮಮತಾ ಮುಂದಿಟ್ಟಿದ್ದಾರೆ. ಆದರೆ, ಸಿಬಿಐನ ನೂತನ ನಿರ್ದೇಶಕರ ಪ್ರಕಾರ, ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣದ ವಿಚಾರಣೆಗೆ ಸ್ವತಃ ನ್ಯಾಯಾಲಯವೇ ಸಿಬಿಐಗೆ ಸೂಚನೆ ನೀಡಿರುವುದರಿಂದ, ನ್ಯಾಯಾಂಗದ ಆದೇಶವನ್ನು
ಸಿಬಿಐ ಪಾಲಿಸುತ್ತಿದೆ. ಹಾಗಾಗಿ ಈ ತನಿಖೆಗೆ ಸಂಬಂಧಪಟ್ಟಂತೆ ಸಿಬಿಐ ಆ ರಾಜ್ಯದ ಅನುಮತಿ ಪಡೆಯುವ ಪ್ರಶ್ನೆಯೇ ಉದ್ಭವಿಸದು.
ಇದೆಲ್ಲಾ ಮೇಲ್ನೋಟಕ್ಕೆ ಕಾನೂನಿನ ವ್ಯಾಪ್ತಿ, ಕಾಯ್ದೆಯ ಮಿತಿಗಳ ಪ್ರಶ್ನೆಯ ಚರ್ಚೆಯಷ್ಟೇ. ಆದರೆ, ಪಶ್ಚಿಮಬಂಗಾಳದಲ್ಲಿ ವಾಸ್ತವವಾಗಿ ನಡೆಯುತ್ತಿರುವುದು ಇಷ್ಟು ಸೀಮಿತ ಸಂಗತಿಯ ವಿದ್ಯಮಾನವಲ್ಲವೇ ಅಲ್ಲ ಎಂಬುದು ಅಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿರುವವರಿಗೆ ತಿಳಿದಿರುವುದೇ. ಕೇವಲ ವರ್ಷದ ಹಿಂದೆ ಇಡೀ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸುವುದಾಗಿ ಹೇಳುತ್ತಿದ್ದ ಬಿಜೆಪಿ, ಇದೀಗ ಇತ್ತೀಚಿನ ಐದು ರಾಜ್ಯಗಳ(ರಾಜಸ್ಥಾನ, ಮಧ್ಯಪ್ರದೇಶ ಸೇರಿ) ವಿಧಾನಸಭಾ ಚುನಾವಣೆಯ ಬಳಿಕ ಬೇಸ್ತುಬಿದ್ದಿದೆ. ಮುಂದಿನ ಲೋಕಸಭಾ ಚುನಾವಣೆಗೆ ಕನಿಷ್ಠ ಬಹುಮತದೊಂದಿಗೆ ಕೇಂದ್ರದ ತನ್ನ ಸರ್ಕಾರ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಅದಕ್ಕೆ ಈಗ ತನ್ನ ಪ್ರಭಾವದ ಉತ್ತರಭಾರತದಲ್ಲೇ ಜನಪ್ರಿಯತೆ ಕಳೆದುಕೊಳ್ಳುತ್ತಿರುವುದು ಆಘಾತ ನೀಡಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕ, ಪಶ್ಚಿಮಬಂಗಾಳ, ತಮಿಳುನಾಡು ಮುಂತಾದ ಕಡೆ ಸಿಬಿಐ, ಇಡಿ, ಆದಾಯ ತೆರಿಗೆ ಮುಂತಾದ ತನ್ನ ಅಧೀನ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಅಲ್ಲಿನ ಆಡಳಿತರೂಢ ಪಕ್ಷಗಳ ನಾಯಕರನ್ನು ಬಗ್ಗುಬಡಿಯಲು ಯತ್ನಿಸುತ್ತಿದೆ. ಚುನಾವಣೆಗಳು ಸಮೀಪಿಸುತ್ತಿರುವಂತೆ ಏಕಕಾಲಕ್ಕೆ ಎಲ್ಲಾ ಕಡೆ ಇಂತಹ ದಾಳಿಗಳು ಹೆಚ್ಚುತ್ತಿವೆ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು.
ಅಂತಹ ಆರೋಪಗಳಿಗೆ ಪೂರಕವಾಗಿ ಕೇಂದ್ರದ ಬಿಜೆಪಿ ಸರ್ಕಾರ ಕೂಡ ಕಳೆದ ಐದು ವರ್ಷಗಳ ತನ್ನ ಅಧಿಕಾರವಧಿಯಲ್ಲಿ ಮರೆತು ಕೂತಿದ್ದ ಹಗರಣ, ಪ್ರಕರಣಗಳನ್ನು ಇದೀಗ ಚುನಾವಣೆ ಹೊಸ್ತಿಲಲ್ಲಿ ಕೆದಕತೊಡಗಿದೆ. ಅದೇ ವೇಳೆ ತಾನೇ ಹೇಳುವ ಅಂತಹ ಬಹುಕೋಟಿ ವಂಚನೆಯ ಪ್ರಕರಣಗಳಲ್ಲಿ ಭಾಗಿಯಾದ ತನ್ನ ಪ್ರತಿಸ್ಪರ್ಧಿ ಪಕ್ಷಗಳ ನಾಯಕರು, ಪಕ್ಷ ತೊರೆದು ತನ್ನ ಬಾಗಿಲು ತಟ್ಟಿದರೆ ಅವರಿಗೆ ಧೀರೋದ್ದಾತ ನಾಯಕನೆಂಬ ಪ್ರಮಾಣಪತ್ರ ನೀಡಿ ಮನೆತುಂಬಿಸಿಕೊಳ್ಳುತ್ತಿದೆ. ಅದಕ್ಕೊಂದು ತಾಜಾ ಉದಾಹರಣೆ ಇದೇ ಶಾರದಾ ಚಿಟ್ ಫಂಡ್ ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿ ಎಸ್ ಐಟಿಯಿಂದ ಬಂಧಿತರಾಗಿದ್ದ ತೃಣಮೂಲ ಕಾಂಗ್ರೆಸ್ ನಾಯಕ ಮುಕುಲ್ ರಾಯ್ ಅವರನ್ನು ಕಳೆದ ವಾರವಷ್ಟೇ ಬಿಜೆಪಿ ತನ್ನ ತೆಕ್ಕೆಗೆ
ಸೆಳೆದುಕೊಂಡಿರುವುದು. ಒಟ್ಟಾರೆ, ಕೊಲ್ಕತ್ತಾ ಪೊಲೀಸ್ ಆಯುಕ್ತರ ಈ ಪ್ರಕರಣ, ಬಿಜೆಪಿಯ ಪ್ರಧಾನಿ ಮೋದಿ ಮತ್ತು ಅಮಿಶ್ ಶಾ ಜೋಡಿಯ ಕೀಳು ರಾಜಕೀಯ ತಂತ್ರಗಾರಿಕೆಯನ್ನು ಮತ್ತೊಮ್ಮೆ ಬೆತ್ತಲುಗೊಳಿಸಿರುವಂತೆಯೇ, ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿ ಅವರ ಭ್ರಷ್ಟರನ್ನು ರಕ್ಷಿಸುವ ಅನೈತಿಕ ರಾಜಕೀಯ ವರಸೆಯನ್ನೂ ಬಯಲುಮಾಡಿದೆ. ಈ ರಾಜಕೀಯ ಕೆಸರಾಟದಲ್ಲಿ ನಿಜವಾಗಿಯೂ ಮಸಿ ಬಳಿಸಿಕೊಂಡಿರುವುದು ಸಿಬಿಐ ಮತ್ತು ಪಶ್ಚಿಮಬಂಗಾಳ ರಾಜ್ಯ ಪೊಲೀಸ್ ವ್ಯವಸ್ಥೆ ಎಂಬುದು
ವಿಪರ್ಯಾಸ!