ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ರಾಯಚೂರು ಮತ್ತು ದೇವದುರ್ಗದಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿವೆ. ಆ ಮೂಲಕ ವಿಧಾನಸಭೆಯ ಒಳಗೆ ಎಸ್ ಐಟಿ ತನಿಖೆಗೆ ಪ್ರಬಲ ವಿರೋಧ ವ್ಯಕ್ತಪಡಿಸುವ ಮೂಲಕ ಶತಾಯಗತಾಯ ಕ್ರಿಮಿನಲ್ ವಿಚಾರಣೆಯಿಂದ ಪಾರಾಗುವ ಪ್ರಯತ್ನ ನಡೆಸುತ್ತಿರುವ ಬಿಎಸ್ವೈ ಮತ್ತು ಬಿಜೆಪಿ ನಾಯಕರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಬಿಜೆಪಿಗೆ ಬರುವಂತೆ ಹಣದ ಆಮೀಷವೊಡ್ಡಿದ್ದಾರೆ ಎಂದು ಗುರುಮಿಟಕಲ್ ಶಾಸಕರ ಪುತ್ರ ಶರಣಗೌಡ ಕಂದಕೂರ ರಾಯಚೂರು ಎಸ್ಪಿ ಡಿ.ಕಿಶೋರಬಾಬು ಅವರಿಗೆ ಆಪರೇಷನ್ ಆಡಿಯೋ ಧ್ವನಿಸುರಳಿಯ ಸಿಡಿಸಹಿತ ಬುಧವಾರ ದೂರು ಸಲ್ಲಿಸಿದ್ದಾರೆ.
ಮೂರು ಪುಟಗಳ ದೂರಿನ ಪ್ರತಿಯೊಂದಿಗೆ ಆಡಿಯೋ ಸಿಡಿಯನ್ನೂ ನೀಡಿದ್ದು, ಜಿಲ್ಲೆಯ ದೇವದುರ್ಗ ಪ್ರವಾಸಿ ಮಂದಿರದಲ್ಲಿ ಜರುಗಿದ ಘಟನಾವಳಿಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮೌಖಿಕವಾಗಿಯೂ ವಿವರಿಸಿರುವುದಾಗಿ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಕೆ.ಶಿವನಗೌಡ ನಾಯಕ, ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಹಾಗೂ ಬಿಎಸ್ವೈ ಮಾಧ್ಯಮ ಸಲಹೆಗಾರ ಎಂ.ಬಿ. ಮರಮಕಲ್ ಅವರುಗಳು ಬಿಜೆಪಿಗೆ ಬರುವಂತೆ ತಮಗೆ ಹಣದ ಆಮಿಷವೊಡ್ಡಿದ್ದು, ಪಕ್ಷಕ್ಕೆ ಬರದೇ ಇದ್ದಲ್ಲಿ ಸರಿ ಇರದು ಎಂದು ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಶರಣಗೌಡ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ನಡೆದ ದಿನ ರಾತ್ರಿ 10.40ಕ್ಕೆ ಫೋನ್ ಕರೆ ಬಂದಾಗಿನಿಂದ ಯಾದಗಿರಿಗೆ ವಾಪಸ್ ಬರುವವರೆಗೂ ಜರುಗಿದ ಘಟನೆಗಳನ್ನು ಎಸ್ಪಿ ಅವರಿಗೆ ವಿವರಿಸಿದ್ದು, ಶಾಸಕ ಕೆ.ಶಿವನಗೌಡ ನಾಯಕ ನಮಗೆ ಚಿರಪರಿಚಿತರು. ಅವರು ಅಂದು ರಾತ್ರಿ ಕರೆ ಮಾಡಿ ಹಿರಿಯರು ಮಾತನಾಡುತ್ತಾರೆ ಎಂದು ಬಿಎಸ್ವೈಗೆ ಕೊಟ್ಟರು. ಅವರು ಬಾ ಎಂದು ಕರೆದಾಗ ಬರುವುದಾಗಿ ಹೇಳಿದೆ. ನಂತರ ಈ ವಿಷಯವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿದಾಗ ಅವರು ಹೋಗಿ ಬರುವಂತೆ ಹೇಳಿದರು.
ಅಲ್ಲಿಗೆ ಹೋದಾಗ ಅಲ್ಲಿ ನಾಲ್ಕು ಜನರಿದ್ದರು. 10 ಕೋಟಿ ಹಣ ಕೊಡುತ್ತೇವೆ ಎಂದು ಹೇಳಿದ್ದು, ಬಿಜೆಪಿಗೆ ಬಾರದಿದ್ದರೆ ರಾಜಕೀಯವಾಗಿ ಮುಗಿಸುತ್ತೇವೆ ಎಂದು ಬೆದರಿಸಿದರು ಎಂದು ಶರಣುಗೌಡ ವಿವರಿಸಿದ್ದಾರೆ.
ಸರ್ಕಾರ ಬೀಳಿಸಲು ಪ್ರಯತ್ನಿಸುವ ಮೂಲಕ ತೊಂದರೆ ಕೊಡುತ್ತಿರುವುದು ಹಾಗೂ ಕ್ಷೇತ್ರದ ಜನತೆ ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು ಎನ್ನುವ ಕಾರಣ ಮಾತುಕತೆಯನ್ನು ನಾನೇ ರೆಕಾರ್ಡ ಮಾಡಿಕೊಂಡೆ.
ಇದೀಗ ಆಡಿಯೋ ಬಹಿರಂಗವಾದ ಬಳಿಕ ಬೆದರಿಕೆ ಕರೆಗಳು ಬರುತ್ತಿದ್ದು, ಆ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಿಲ್ಲ. ಬೆದರಿಕೆ ಕರೆಗಳಿಗೆ ನಾನೆ ಉತ್ತರಿಸುತ್ತೇನೆ ಎಂದು ಶರಣಗೌಡ ಕಂದಕೂರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತೊಂದು ದೂರು:
ಅದೇ ವೇಳೆ, ಪ್ರಕರಣಕ್ಕೆ ಸಂಬಂಸಿದಂತೆ ಶರಣಗೌಡ ಕಂದಕೂರು ಅವರು ಘಟನೆ ನಡೆದ ದೇವದುರ್ಗ ಐಬಿ ಒಳಪಡುವ ದೇವದುರ್ಗ ಪೊಲೀಸ್ ಠಾಣೆಯಲ್ಲಿಯೂ ಬುಧವಾರ ರಾತ್ರಿ ಮತ್ತೊಂದು ದೂರು ದಾಖಲಿಸಿದ್ದಾರೆ.
ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೇವದುರ್ಗ ಪ್ರವಾಸಿ ಮಂದಿರಕ್ಕೆ ಫೆ.8ರಂದು ರಾತ್ರಿ ತಮ್ಮನ್ನು ಕರೆಸಿಕೊಂಡ ಮಾಜಿ ಸಿಎಂ ಬಿಎಸ್ವೈ, ಶಾಸಕರಾದ ಕೆ.ಶಿವನಗೌಡ ನಾಯಕ, ಪ್ರೀತಂಗೌಡ ಹಾಗೂ ಪತ್ರಕರ್ತ ಮರಂಕಲ್ ಅವರುಗಳು, ನಿಮ್ಮ ತಂದೆಯವರ ರಾಜೀನಾಮೆ ಕೊಡಿಸು. ಬಳಿಕ ನಿನ್ನನ್ನು ಶಾಸಕನನ್ನಾಗಿ ಮಾಡುತ್ತೇವೆ. ಚುನಾವಣೆಯ ಸಂಪೂರ್ಣ ಖರ್ಚು ನೋಡಿಕೊಳ್ಳುತ್ತೇವೆ. ಮುಂಗಡವಾಗಿ 10 ಕೋಟಿ ರೂ. ಕೊಡುವುದಾಗಿ ಲಂಚದ ಆಮೀಷವೊಡ್ಡಿದರು. ಅಲ್ಲದೆ ಬೆದರಿಕೆಯೊಡ್ಡಿದರು. ಅದಕ್ಕೆ ನಾನು ಒಪ್ಪದಿದ್ದಾಗ ನಿಮ್ಮ ತಂದೆಯ ರಾಜಕೀಯ ಜೀವನವನ್ನೇ ಮುಗಿಸಿ ಬಿಡುತ್ತೇವೆ ಎಂದು ಹೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೇವದುರ್ಗ ಠಾಣೆ ಪೊಲೀಸರು ಅಪರಾಧ ಒಳಸಂಚು, ಬೆದರಿಕೆ ಹಾಗೂ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.