ಆಪರೇಷನ್ ಆಡಿಯೋ ಪ್ರಕರಣದ ತನಿಖೆಗೆ ಎಸ್ ಐಟಿ ನೇಮಿಸಬೇಕೆ? ಅಥವಾ ಬೇರೆ ತನಿಖಾ ವ್ಯವಸ್ಥೆ ಬೇಕೆ ಎಂಬುದನ್ನು ಚರ್ಚಿಸಲು ಸ್ಪೀಕರ್ ರಮೇಶ್ ಕುಮಾರ್ ಕರೆದಿದ್ದ ಸಭೆ ವಿಫಲವಾಗಿದೆ. ನಿರೀಕ್ಷೆಯಲ್ಲಿ ಹೋಗಿದ್ದ ಬಿಜೆಪಿ ನಾಯಕರು ಅರ್ಧದಲ್ಲೇ ಸಭೆಯಿಂದ ಹೊರನಡೆದದ್ದು ಯಾಕೆ?ಸ್ಪೀಕರ್ ಸಭೆಯಿಂದ ಹೊರ ನಡೆದ ಬಿಜೆಪಿ: ಆಡಿಯೋ ಪ್ರಕರಣ ಕಗ್ಗಂಟು
ಆಪರೇಷನ್ ಕಮಲದ ಆಡಿಯೋ ಪ್ರಕರಣದ ತನಿಖೆಯ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ಶಮನದ ಉದ್ದೇಶದಿಂದ ಸ್ಪೀಕರ್ ಬುಧವಾರ ಬೆಳಗ್ಗೆ ಕರೆದಿದ್ದ ಉಭಯ ನಾಯಕರ ಸಭೆಯಿಂದ ಬಿಜೆಪಿ ನಾಯಕರು ಅರ್ಧದಲ್ಲೇ ಹೊರನಡೆದಿದ್ದು, ಸಭೆ ವಿಫಲವಾಗಿದೆ. ಹಾಗಾಗಿ, ಪ್ರಕರಣದ ಕುರಿತ ತನಿಖೆಯನ್ನು ಯಾರು ನಡೆಸಬೇಕು ಎಂಬುದು ಇದೀಗ ಮತ್ತಷ್ಟು ಕಗ್ಗಂಟಾಗಿದೆ.
ಸ್ವತಃ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ 50 ಕೋಟಿ ರೂ. ಲಂಚ ನೀಡಿರುವುದು ಸೇರಿದಂತೆ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೂ ಲಂಚ ನೀಡಿ ತಮ್ಮಂತೆ ಮಾಡಿಕೊಳ್ಳಲಾಗುವುದು. ಅದಕ್ಕೆ ಅಗತ್ಯವಾದ ಎಲ್ಲಾ ಏರ್ಪಾಡುಗಳನ್ನು ಈಗಾಗಲೇ ಪಕ್ಷದ ಮುಖಂಡರಾದ ಅಮಿತ್ ಶಾ ಮತ್ತು ಮೋದಿಯವರು ಮಾಡಿದ್ದಾರೆ ಎಂಬಂತಹ ಗಂಭೀರ ಸಂಗತಿಗಳನ್ನು ಒಳಗೊಂಡಿರುವ ಆಪರೇಷನ್ ಕಮಲ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಅವರು ಕಳೆದ ವಾರ ಬಿಡುಗಡೆ ಮಾಡಿದ ಬಳಿಕ, ಆಡಿಯೋದಲ್ಲಿ ಮಾತನಾಡಿದ್ದಾರೆ ಎನ್ನಲಾದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಶಾಸಕ ಶಿವನಗೌಡ ನಾಯಕ ಅವರಿಗೆ ಸಂಕಷ್ಟ ಎದುರಾಗಿತ್ತು.
ಆಡಿಯೋದ ವಿಷಯವನ್ನು ಸೋಮವಾರ ಸದನ ಕಲಾಪ ಆರಂಭವಾಗುತ್ತಿದ್ದಂತೆ ಸ್ವತಃ ತಾವೇ ಪ್ರಸ್ತಾಪಿಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು, ತಮ್ಮ ವಿರುದ್ಧವೇ ಇಂತಹದ್ದೊಂದು ಗುರುತರವಾದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಾವು ಆ ಕುರಿತ ಸತ್ಯಾಸತ್ಯತೆ ಹೊರಬರುವವರಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟಕರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಳಿಕ ಸೋಮವಾರ ಇಡೀ ದಿನ ಸದನ ಆ ವಿಷಯದ ಕುರಿತೇ ಚರ್ಚಿಸಿ, ಅಂತಿಮವಾಗಿ ಸ್ಪೀಕರ್ ಅವರಲ್ಲಿ ವಿಶ್ವಾಸ ವ್ಯಕ್ತಪಡಿಸಿ ಪ್ರಕರಣದ ತನಿಖೆಗೆ ಸಮ್ಮತಿಸಿತ್ತು. ಆದರೆ, ತನಿಖೆಯನ್ನು ಯಾರು ಮಾಡಬೇಕು ಎಂಬ ವಿಷಯದಲ್ಲಿ ಪ್ರತಿಪಕ್ಷ ಮತ್ತು ಆಡಳಿತಪಕ್ಷಗಳ ನಡುವೆ ಸಹಮತ ಇರಲಿಲ್ಲ.
ಸ್ಪೀಕರ್ ಕೂಡ ರಾಜ್ಯ ಸರ್ಕಾರವೇ ತನಿಖೆಗೆ ಎಸ್ ಐ ಟಿ ರಚಿಸುವಂತೆ ಸೂಚಿಸಿದ್ದರು. ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಕೂಡ ಎಸ್ ಐಟಿ ತನಿಖೆಗೆ ಪಟ್ಟು ಹಿಡಿದಿದ್ದರು. ಆದರೆ, ಬಿಜೆಪಿ ಶಾಸಕರು ಎಸ್ ಐಟಿ ತನಿಖೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿ ನ್ಯಾಯಾಂಗ ಅಥವಾ ಸದನ ಸಮಿತಿ ತನಿಖೆಗೆ ಆಗ್ರಹಿಸಿದ್ದರು. ಆದರೆ, ನ್ಯಾಯಾಂಗ ತನಿಖೆ ಮತ್ತು ಸದನ ಸಮಿತಿ ತನಿಖೆಗಳು ನಿಗದಿತ ಅವಧಿಯಲ್ಲಿ ಶೀಘ್ರಗತಿಯಲ್ಲಿ ಮುಗಿಯುವುದಿಲ್ಲ ಮತ್ತು ಆ ತನಿಖಾ ವ್ಯವಸ್ಥೆಯಲ್ಲಿ ಅಪರಾಧ ಪ್ರಕರಣಗಳ ತನಿಖೆ ಮತ್ತು ಶಿಕ್ಷೆಗೆ ಅವಕಾಶವಿಲ್ಲ. ಇದೊಂದು ಖಚಿತ ಅಪರಾಧ ಪ್ರಕರಣವಾದ್ದರಿಂದ ಇದನ್ನು ಐಪಿಸಿ, ಸಿಆರ್ ಪಿಸಿ ಅಡಿಯಲ್ಲೇ ತನಿಖೆ ನಡೆಸುವುದು ಸೂಕ್ತ ಎಂದು ಆಡಳಿತಪಕ್ಷಗಳು ಒತ್ತಾಯಿಸಿದ್ದವು. ಸ್ಪೀಕರ್ ಕೂಡ, ಕಳಂಕ ಹೊತ್ತುಕೊಂಡು ಸ್ಪೀಕರ್ ಸ್ಥಾನದಲ್ಲಿ ಹೆಚ್ಚು ದಿನ ಕೂರಲಾಗದು. ಹಾಗಾಗಿ, ಕೇವಲ 15 ದಿನದಲ್ಲಿ ತನಿಖೆ ಪೂರ್ಣಗೊಳಿಸಿ ನನಗೆ ನನ್ನ ತೀರ್ಮಾನ ಕೈಗೊಳ್ಳಲು ಅವಕಾಶ ಕೊಡಬೇಕು ಎಂದು ಸಿಎಂಗೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಸ್ಪೀಕರ್ ಕೂಡ ಎಸ್ ಐಟಿ ತನಿಖೆಯನ್ನೇ ಸಮರ್ಥಿಸಿದ್ದರು. ಮಂಗಳವಾರ ಕೂಡ ಇದೇ ವಿಷಯದ ಮೇಲೆ ಸದನ ಇಡೀ ದಿನ ಚರ್ಚೆ ನಡೆಸಿತ್ತು.

ಆದರೆ, ಪ್ರತಿಪಕ್ಷ ನಾಯಕ ಹಾಗೂ ಆಡಿಯೋದಲ್ಲಿ ದನಿ ಕೇಳಿಬಂದಿದೆ ಎನ್ನಲಾಗುತ್ತಿರುವ ಬಿಎಸ್ ಯಡಿಯೂರಪ್ಪ ಅವರು ಎಸ್ ಐಟಿ ತನಿಖೆ ಬೇಡ. ದಯವಿಟ್ಟು ನ್ಯಾಯಾಂಗ ತನಿಖೆ, ಅಥವಾ ಸದನ ಸಮಿತಿ ತನಿಖೆ ನಡೆಸಿ. ಇಂತಹ ವಿಷಯದಲ್ಲಿ ನೀವು ಒಮ್ಮೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರೊಂದಿಗೆ ಸಮಾಲೋಚಿಸಿ ನಿರ್ಧರಿಸಿ ಎಂದು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಕಲಾಪ ಆರಂಭಕ್ಕೆ ಮುನ್ನ ಸ್ಪೀಕರ್ ತಮ್ಮ ಕೊಠಡಿಯಲ್ಲಿ ಉಭಯ ಪಕ್ಷಗಳ ನಾಯಕರ ಸಭೆ ಕರೆದಿದ್ದರು.
ಸಭೆಯಲ್ಲಿ ಹಾಜರಿದ್ದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ ಪರಮೇಶ್ವರ್ ಮತ್ತಿತರು ಮತ್ತೆ ಎಸ್ ಐಟಿ ತನಿಖೆಯೇ ಆಗಬೇಕು ಎಂದು ಪಟ್ಟು ಹಿಡಿದರು ಹಾಗೂ ಸ್ಪೀಕರ್ ಕೂಡ ಎಸ್ ಐಟಿ ತನಿಖೆಯನ್ನೇ ಸಮರ್ಥಿಸಿದರು. ಆ ವೇಳೆಗಾಗಲೇ ಆಪರೇಷನ್ ಕಮಲದ ಮತ್ತಷ್ಟು ಆಡಿಯೋ ತುಣುಕುಗಳು ಮಾಧ್ಯಮಗಳಲ್ಲಿ ಹರಿದಾಡತೊಡಗಿದ್ದರಿಂದ ಸ್ಪೀಕರ್ ಮತ್ತು ಆಡಳಿತ ಪಕ್ಷ ನಾಯಕರು ತಮ್ಮ ಪಟ್ಟನ್ನು ಸಡಿಸಲಿಲ್ಲ. ಹಾಗಾಗಿ, ತಮ್ಮ ಪ್ರಯತ್ನ ಫಲಿಸದ ಹಿನ್ನೆಲೆಯಲ್ಲಿ ಮುನಿಸಿಕೊಂಡ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಜೆಸಿ ಮಾಧುಸ್ವಾಮಿ ಮತ್ತಿತರ ಬಿಜೆಪಿ ನಾಯಕರು ಸಭೆಯಿಂದ ಹೊರನಡೆದರು ಎನ್ನಲಾಗಿದೆ.
ಒಟ್ಟಾರೆ, ಆಡಿಯೋ ಪ್ರಕರಣದ ತನಿಖೆ ಮತ್ತಷ್ಟು ಕಗ್ಗಂಟಾಗಿದ್ದು, ಸೋಮವಾರ ಸಂಜೆ ಎಸ್ ಐಟಿ ತನಿಖೆಗೆ ಸೂಚಿಸಿ ಸ್ಪೀಕರ್ ನೀಡಿದ್ದ ರೂಲಿಂಗ್ ಆಧಾರದ ಮೇಲೆ ಸರ್ಕಾರ ಎಸ್ ಐಟಿ ತನಿಖೆಗೆ ಆದೇಶಿಸುತ್ತದೆಯೇ? ಬಿಜೆಪಿ ನಾಯಕರು ಸದನದಲ್ಲಿ ಹೇಳಿದಂತೆ, ಒಂದು ವೇಳೆ ಸರ್ಕಾರದ ಎಸ್ ಐಟಿ ತಂಡ ರಚಿಸಿದ್ದಲ್ಲಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತದೆಯೇ? ಹಾಗಾದಲ್ಲಿ ಇಡೀ ರಾಷ್ಟ್ರದ ಗಮನ ಸೆಳೆದಿರುವ, ಪ್ರಜಾಪ್ರಭುತ್ವದ ಆಧಾರಸ್ತಂಭಗಳಿಗೇ ಕೊಡಲಿ ಪೆಟ್ಟು ನೀಡುವಂತಹ ಆರೋಪಗಳನ್ನು ಹೊಂದಿರುವ ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆ ಏನಾಗಲಿದೆ? ಎಂಬ ಪ್ರಶ್ನೆಗಳು ಸದ್ಯಕ್ಕೆ ಗೋಜಲಾಗಿಯೇ ಉಳಿದಿವೆ.