ವಿಧಾನ ಸಭೆಯ ಸ್ಪೀಕರ್ ಅವರ ಸಲಹೆಯಂತೆ ‘ಅಪರೇಷನ್ ಕಮಲ’ದ ಆಡಿಯೋ ಕುರಿತು ಎಸ್ ಐ ಟಿ ತನಿಖೆಗೆ ಬಿಜೆಪಿ ಅಡ್ಡಿಪಡಿಸಲು ಯತ್ನಿಸುತ್ತಿದ್ದಂತೆ ಇದೀಗ ಆಡಿಯೋದ ಪೂರ್ಣ ಭಾಗ ಬಹಿರಂಗವಾಗುವ ಮೂಲಕ ಬಿಜೆಪಿ ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿದೆ.
ಮಾಜಿ ಮುಖ್ಯಮಂತ್ರ ಬಿ. ಎಸ್ ಯಡಿಯೂರಪ್ಪನವರ ಆಡಿಯೋ ಪ್ರಕರಣ ಇನ್ನೇನು ಸದನದಲ್ಲಿ ಅಂತ್ಯಗೊಳ್ಳಲಿದೆ ಎನ್ನುವ ಸಂದರ್ಭದಲ್ಲೇ 40 ನಿಮಿಷದ ಮತ್ತೊಂದು ಅಪರೇಶನ್ ಕಮಲದ ಆಡಿಯೋ ಬಹಿರಂಗಗೊಂಡಿದೆ. ಇದು ಈಗ ಮತ್ತಷ್ಟು ಕೋಲಾಹಲಕ್ಕೆ ಕಾರಣವಾಗಿದೆ. ಶಾಸಕ ನಾಗನಗೌಡ ಪುತ್ರ ಶರಣಗೌಡರಿಂದ ಆಡಿಯೋ ಭಾಗ 2 ಬಹಿರಂಗವಾಗಿದೆ ಎನ್ನಲಾಗುತ್ತಿದೆ.
ಅಪರೇಶನ್ ಕಮಲ ಆಡಿಯೋ –ಭಾಗ 2ರಲ್ಲಿ ಏನಿದೆ?
ಆಡಿಯೋದಲ್ಲಿ ಶಿವನಗೌಡ ನಾಯಕ ಹಾಗೂ ಹಾಸನ ಶಾಸಕಪ್ರೀತಂ ಗೌಡ ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ನಿನಗೆ ಎಷ್ಟು ಹಣ ಬೇಕು ಹೇಳಿ; ಅವರಿಗೂ ನಿಮಗೂ ಓಕೆ ಆದರೆ ನಾವೇ ಮನೆಗೆ ತಲುಪಿಸುತ್ತೇವೆ. ಬಿಜೆಪಿಯಲ್ಲಿ ಬ್ರೈಟ್ ಫ್ಯೂಚರ್ ನಿಮಗೆ ಇದೆ. ಇಲ್ಲಿಂದ ಹೊರಡುವ ಮುನ್ನ ಹಣ ಎಷ್ಟು ಹೇಳಿ. ಯಡಿಯೂರಪ್ಪ ಅವರದ್ದು ಬರೀ ಕಮಿಟ್ ಮೆಂಟ್ ಅಷ್ಟೇ, ಅವರು ಮಾತಿಗೆ ತಪ್ಪುವವರಲ್ಲ’ ಎಂದು ಮನವರಿಕೆ ಮಾಡಿದ್ದಾರೆ.
‘ಬಿಜೆಪಿ ಯಿಂದ ಒಟ್ಟು ಐದು ಜನ ಪಕ್ಷಾಂತರ ಮಾಡ್ತಾರಂತೆ?’ ಎಂಬ ಶರಣಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ನಮ್ಮಿಂದ ಒಬ್ಬರೂ ಬರಲು ಸಾಧ್ಯವಿಲ್ಲ. ಎಲ್ಲರೂ ಆರಾಮಾಗಿ ಓಡಾಡಿಕೊಂಡಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಮುಂದುವರೆದು ‘ಮುಂಬೈನಲ್ಲಿ 15 ಜನ ಒಟ್ಟಾಗ್ತಾರೆ. ನಿಮ್ಮ ತಂದೆ ಮುಂಬೈಗೆ ಹೋಗೋದು ಬೇಡ. ನೀನು ಮುಂಬೈಗೆ ಹೋಗು . 2ರಿಂದ 3 ದಿನದಲ್ಲಿ 15 ಜನ ಒಟ್ಟಾಗಿ ರಾಜಿನಾಮೆ ಕೊಡ್ತಾರೆ’ ಎಂದಿರುವುದು ಆಡಿಯೋದಲ್ಲಿ ಕೇಳಿಸುತ್ತದೆ.
ಪಕ್ಷಾಂತರದಿಂದ ಸಭಾಧ್ಯಕ್ಷರು ನಮ್ಮನ್ನು ಅನರ್ಹಗೊಳಿಸಿದರೆ ಎಂದು ಶರಣಗೌಡ ಪ್ರಸ್ನಿಸಿದಾಗ, ನಿಮ್ಮನ್ನು ಅನರ್ಹಗೊಳಿಸುವ ಯಾವುದೇ ಅಧಿಕಾರ ಸ್ಪೀಕರ್ ಗೆ ಇಲ್ಲ . ಅವರ ಮಾತು, ಧಮ್ಕಿಗೆ ಕವಡೆ ಕಾಸಿನ ಬೆಲೆ ಇರಲ್ಲ ಎಂದಿದ್ದಾರೆ.

ಶರಣುಗೌಡ ಅವರು, ಕುಮಾರಸ್ವಾಮಿ ಅವರು ಚುನಾವಣೆಗೆ ಬಹಳ ಸಹಾಯ ಮಾಡಿದ್ದರು. ವೈಯಕ್ತಿಕವಾಗಿ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದಾಗ, ಬಿಎಸ್ ವೈ ಅವರು ಎಷ್ಟು ಹಣ ಕೊಟ್ಟಿದ್ದಾರೆ. ನಿನಗೆ ಎಷ್ಟು ಹಣ ಬೇಕು. ನೀನು ರಾಜಿನಾಮೆ ಕೊಡುತ್ತಿದ್ದ ಹಾಗೆ ಮುಂದಿನದು ನನ್ನ ಜವಾಬ್ದಾರಿ. ಎಲ್ಲಅಂತಿಮ ಗೊಂಡ ಮೇಲೆ ಮಂತ್ರಿ ಘೋಷಣೆ . ನೀನು ಶಾಸಕನಾಗಿ ಚುನಾವಣೆಗೆ ನಿಲ್ಲುವುದಿಲ್ಲ, ಮಂತ್ರಿಯಾಗಿ ನಿಲ್ಲುತ್ತೀಯಾ. ನಿನ್ನ ಚುನಾವಣೇ ನನ್ನ ಜವಾಬ್ದಾರಿ ಕಣಯ್ಯ. ನೀನು ಗೆಲ್ಲಲೇ ಬೇಕಯ್ಯ. 100 ಕ್ಕೆ 100 ರಷ್ಟು ಅದು ನನ್ನ ಜವಾಬ್ದಾರಿ. ನಿನ್ನ ಗೆಲ್ಲಿಸುತ್ತೇನೆ. ಚುನಾವಣೆಗೂ ಮುನ್ನ 10 ಕೋಟಿ ಹಣ ಕೊಡುತ್ತೇವೆ. ಚುನಾವಣೆಗೂ ಹಣ ಕೊಡುತ್ತೇವೆ. ನಂತರ ಮಂತ್ರಿಯಾದ ಮೇಲೆ ಎಷ್ಟು ಬೇಕಾದರೂ ಹಣ ಮಾಡಬಹುದು. ಆದರೆ, ನಿನ್ನ ತಂದೆಯನ್ನು ಒಪ್ಪಿಸುವ ಜವಾಬ್ದಾರಿ ನಿನ್ನದು ಎಂದೂ ಭರವಸೆ ನೀಡಿರುವುದು ಭಾರೀ ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲದೇ, ನನ್ನ ಇಬ್ಬರು ಮಕ್ಕಳಂತೆ ನೀನು ಮೂರನೇ ಮಗನಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ಬಿಜೆಪಿಯಿಂದ ಭರವಸೆಗಳ ಸುರಿಮಳೆ
ನಂತರ ಶಿವನಗೌಡಗೆ, 11 ಜನರಿಗೆ ಕೊಟ್ಟಿರೋ ಹಣವನ್ನೇ ನಿಮಗೂ ಕೊಡೋದು. ನಿಮಗೇನು ಕಡಿಮೆ ಕೊಡಲ್ಲ. ನೀವು ಬಿಟ್ಟು ಬರಬೇಕಿರುವುದು ನಿಮ್ಮ ಸ್ಥಾನ ಹಾಗೂ 50 ವರ್ಷದ ಸಂಬಂಧ ಅಷ್ಟೇ ಎಂದು ಮನವೊಲಿಸಲು ಸಾಕಷ್ಟು ಯತ್ನಿಸಿರುವುದು ಆಡಿಯೋದಲ್ಲಿ ಬಹಿರಂಗಗೊಂಡಿದೆ.
11 ಶಾಸಕರಿಗೆ ನೀಡುವ ಹಣವೇ ಶರಣಗೌಡರಿಗೂ ಕೊಡಬೇಕು. ಚುನಾವಣೆ ಖರ್ಚು ವೆಚ್ಚ ಎಷ್ಟೇ ಬಂದರೂ ನಾವೇ ಭರಿಸಿ ಗೆಲ್ಲಿಸಬೇಕು. ಜತೆಗೆ ಶರಣಗೌಡಗೆ ಒಳ್ಳೆ ಮಂತ್ರಿ ಖಾತೆ ಕೊಡಬೇಕು ಎಂದು ಪ್ರೀತಂ ಗೌಡ, ಶರಣುಗೌಡ ಹೇಳಿದ್ದಾರೆ.
ಹಣದ ವಿಷಯ ನೋಡಿಕೊಳ್ಳುವುದು ಬಿಎಸ್ ವೈ ಪುತ್ರ ವಿಜಯೇಂದ್ರ
ಇಡೀ ಆಡಿಯೋ ಸಂಭಾಷಣೆಯಲ್ಲಿ ಅಪರೇಶನ್ ಕಮಲದ ಕೋಟಿ ಕೋಟಿ ಹಣದ ವ್ಯವಹಾರವನ್ನು ನಿಭಾಯಿಸುತ್ತಿರುವುದು ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಎಂಬದು ಖಾತ್ರಿಯಾಗುತ್ತದೆ. ಈ ಹಿಂದೆ ಆಡಿಯೋ ವಿಷಯಕ್ಕೆ ಸುದ್ದಿಗಾರೊಂದಿಗೆ ಮಾತಾಡಿದ್ದ ವಿಜಯೇಂದ್ರ ತಾವು ಮುಂಬೈ ಹೋಗಿದ್ದನ್ನು ಒಪ್ಪಿಕೊಂಡಿದ್ದರು. ಈ ಆಡಿಯೋದಲ್ಲಿ ಸಹ ‘ಹಣದ ವಿಜಯೇಂದ್ರ ನೋಡಿಕೊಳ್ತಾರೆ’ ಎಂದು ಹೇಳುವುದು ಸ್ಪಷ್ಟವಾಗಿದೆ. ಆದರೆ, ‘ಆಡಿಯೋದಲ್ಲಿ ನನ್ನ ಹೆಸರಿದೆ ಎಂದ ಮಾತ್ರಕ್ಕೆ ನನ್ನ ಪಾತ್ರವಿದೆ ಎನ್ನಲು ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ವಿಜಯೇಂದ್ರ ಅವರು ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಎಲ್ಲ ಸಂಗತಿಗಳ ಕುರಿತು ಈ ಕುರಿತು ನಡೆಯುವ ತನಿಖೆ ಮಾತ್ರ ಎಲ್ಲವನ್ನೂ ಖಚಿತಪಡಿಸಬಲ್ಲದು.
ಪ್ರೀತಂಗೌಡ ವಿವಾದಾತ್ಮಕ ಹೇಳಿಕೆ: ವ್ಯಾಪಕ ಖಂಡನೆ
ಇನ್ನು ಹಾಸನ ಶಾಸಕ ಪ್ರೀತಂ ಗೌಡ ಸಹ ಆಡಿಯೋದಲ್ಲಿ ಮಾತನಾಡಿದ್ದು, ದೇವೆಗೌಡ ವಿಕೆಟ್ ಹೋದ ಮೇಲೆ, ಕುಮಾರಣ್ಣ ಆರೋಗ್ಯ ಸರಿಯಿಲ್ಲ. ಇಬ್ಬರೂ ಹೋದ ಮೇಲೆ ಪಕ್ಷ ಕ್ಕೆ ಉಳಿಗಾಲವಿಲ್ಲ. ಬಿಜೆಪಿ ಸೂರ್ಯ ಚಂದ್ರ ಇರುವವರೆಗೂ ಇರತ್ತೆ. ನಾವೆಲ್ಲಾ ಯುವಕರು. ಇನ್ನೂ 30- 40 ವರ್ಷ ನಾವು ರಾಜಕೀಯ ಮಾಡಬಹುದು ಎಂಬ ಹೇಳಿಕೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ .
ಸಿದ್ದರಾಮಯ್ಯ ಟ್ವೀಟ್
ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿದ್ದಂತೆ ಹಾಸನಲ್ಲಿ ಪ್ರೀತಂ ಗೌಡ ಅವರ ಮಾತಿನಿಂದ ಆಕ್ರೋಶಗೊಂಡ ಜೆ ಡಿ ಎಸ್ ಬೆಂಬಲಿಗರು ಪ್ರೀತಂ ಗೌಡ ಅವರ ಮನೆಯ ಮೇಲೆ ಕಲ್ಲು ಎಸೆದು ದಾಂದಲೆ ನಡಸಿರುವುದು ವರದಿಯಾಗಿದೆ.
–TI_ ಕನ್ನಡ