ಮಂಗಳವಾರ ಮಧ್ಯಾಹ್ನ ಆಡಿಯೋ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಬಳಿಕ ತಮ್ಮ ಸ್ಥಿತಿ ಏನಾಗಿದೆ ಎಂಬುದನ್ನು ವಿವರಿಸುವ ಯತ್ನದಲ್ಲಿ ಸ್ಪೀಕರ್, ನೀಡಿದ ಅತ್ಯಾಚಾರ ಸಂತ್ರಸ್ಥೆಯ ಸ್ಥಿತಿಯ ಹೋಲಿಕೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.–
ಆಪರೇಷನ್ ಕಮಲದ ಆಡಿಯೋ ವಿವಾದದ ಕುರಿತ ಕಳೆದ ಎರಡು ದಿನಗಳ ಗಂಭೀರ ಚರ್ಚೆಯ ಮೂಲಕ ರಾಜ್ಯ ವಿಧಾನಸಭೆ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಮಂಗಳವಾರ ಅಂತಹ ಸಂಸದೀಯಪಟುತ್ವದ ಗಂಭೀರತೆಯ ಪ್ರದರ್ಶನದ ನಡುವೆಯೇ, ಇಡೀ ಸದನವನ್ನು ಪ್ರಬುದ್ಧತೆಯಿಂದ ನಡೆಸಿದ ಸಭಾಧ್ಯಕ್ಷರೇ ವಿವಾದಾತ್ಮಕ ಹೇಳಿಕೆ ನೀಡಿ ಈಗ ಪೇಚಿಗೆ ಸಿಲುಕಿದ್ದಾರೆ. ಪ್ರಬುದ್ಧತೆಯ ನಡುವೆಯೇ ಸದನದಲ್ಲಿ ಅಸೂಕ್ಷ್ಮತೆಯ, ಪುರುಷಪ್ರಧಾನ ಮನಸ್ಥಿತಿಯ ಕೀಳು ವರಸೆಯ ಅನಾವರಣವೂ ಆಗಿಹೋಗಿದೆ.
ಹೌದು, ಆಡಿಯೋ ಹಗರಣದ ವಿಷಯದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಈ ಬಜೆಟ್ ಅಧಿವೇಶನ ಭಾರೀ ಕೋಲಾಹಲ, ಮಾರಾಮಾರಿ, ಅಸಹ್ಯ ಚರ್ಚೆಗೆ ಸಾಕ್ಷಿಯಾಗಲಿದೆ ಎಂಬ ನಿರೀಕ್ಷೆಗಳನ್ನು ಹುಸಿಗೊಳಿಸಿ, ಸ್ಪೀಕರ್ ರಮೇಶ್ ಕುಮಾರ್ ಅವರು ಎರಡೂ ದಿನವೂ ಇಡೀ ಚರ್ಚೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡುಹೋಗುವ ಮೂಲಕ, ದಶಕಗಳ ಹಿಂದಿನ ತಮ್ಮ ಸಂಸದೀಯಪಟುತ್ವವನ್ನು ಮತ್ತೊಮ್ಮೆ ಸಾಬೀತುಮಾಡಿದ್ದರು. ಶಾಸಕರ ಹಠ- ಹುಮ್ಮಸ್ಸು, ಆಕ್ರೋಶಗಳ ಹೊರತಾಗಿಯೂ ಸದನದಲ್ಲಿ ಯಾವುದೇ ಗೊಂದಲ, ಅಹಿತಕರ ಘಟನೆಗಳು ನಡೆಯದಂತೆ ಕಳೆದ ಒಂದೂವರೆ ದಶಕದಲ್ಲೇ ಕಂಡಿರದ ಮಟ್ಟಿಗಿನ ಪ್ರಬುದ್ಧತೆಯನ್ನು ಮೆರೆಯಲು ಸದನಕ್ಕೆ ಕಡಿವಾಣ ಹಾಕಿ ನಡೆಸಿದ್ದರು.
ಆದರೆ, ಮಂಗಳವಾರ ಮಧ್ಯಾಹ್ನ ಆಡಿಯೋ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಬಳಿಕ ತಮ್ಮ ಸ್ಥಿತಿ ಏನಾಗಿದೆ ಎಂಬುದನ್ನು ವಿವರಿಸುವ ಯತ್ನದಲ್ಲಿ ಸ್ಪೀಕರ್, ನೀಡಿದ ಅತ್ಯಾಚಾರ ಸಂತ್ರಸ್ಥೆಯ ಸ್ಥಿತಿಯ ಹೋಲಿಕೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
“ಈ ವಿಷಯದಲ್ಲಿ ನನ್ನದು ರೇಪ್ ವಿಕ್ಟಿಮ್ ಸ್ಟೋರಿ ಆಗಿದೆ. ರೇಪ್ ಆಗಿದ್ದು ಒಂದೇ ಸಲ. ಸುಮ್ಮನಿದ್ದು ಬಿಟ್ಟಿದ್ದರೆ ಅತ್ಲಾಗೆ ಹೊರಟೋಗ್ತಾಯಿತ್ತು. ರೇಪ್ ಆಗಿದೆ ಅಂತ ಕಂಪ್ಲೇಂಟ್ ಮಾಡಿದ್ದಕ್ಕೆ, ಏನಾಯ್ತು ಅಂದ್ರೆ, ಅವನ ಮೇಲೆ ಕೇಸಾಯ್ತು, ಅವನ್ನ ಪೊಲೀಸರು ಜೈಲಿಗೆ ಹಾಕಿದ್ರು. ಅವನ ಪರವಾಗಿ ವಕೀಲರು, ಕೋರ್ಟಲ್ಲಿ ಹೆಂಗೆ ಮಾಡಿದ, ….. ಆಮೇಲೆ ರೇಪ್ ವಿಕ್ಟಿಮ್ ಹೊರಬಂದ ಮೇಲೆ ಕೇಳ್ತಾರೆ, ಕೋರ್ಟಲ್ಲಿ ನ್ಯಾಯ ಸಿಕ್ತಾ ಅಂತ. ಅದಕ್ಕೆ ಅವಳು, ನ್ಯಾಯ ಸಿಕ್ತೋ ಇಲ್ಲವೋ, ಆದರೆ, ಆತ ಒಂದು ಸಲ ರೇಪ್ ಮಾಡಿದ್ದ, ಕೋರ್ಟಲ್ಲಿ ನೂರು ಸಲ ಮಾಡಿದ್ರು ಅಂತ ಹೇಳ್ತಾಳೆ. ಈಗ ನನ್ನ ಪರಿಸ್ಥಿತಿ ಕೂಡ.. ಹಾಗೇ ಆಗಿದೆ”
ಸ್ಪೀಕರ್ ರಮೇಶ್ ಕುಮಾರ್
ಸಭಾಧ್ಯಕ್ಷರ ಈ ಮೇಲಿನ ಲಘುವಾದ ಹೇಳಿಕೆಗೆ ಸದನದಲ್ಲಿದ್ದ ಮಹಿಳಾ ಶಾಸಕರೂ ಸೇರಿದಂತೆ ಶಾಸಕರು, ಮಾಜಿ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು, ಪ್ರತಿಪಕ್ಷ ನಾಯಕರು, ಎಲ್ಲರೂ ಗಹಗಹಿಸಿ ನಕ್ಕಿದ್ದರು. ಇಡೀ ದೃಶ್ಯಾವಳಿ ಟಿವಿ ವಾಹಿನಿಗಳ ಲೈವ್ ನಲ್ಲಿ ಬಿತ್ತರವಾಗಿತ್ತು.
ಇದೀಗ ಅತ್ಯಾಚಾರದಂತಹ ವಿಷಯವನ್ನು ಪ್ರಸ್ತಾಪಿಸಿ ಹೋಲಿಕೆ ನೀಡಿದ್ದು, ಹೆಣ್ಣೊಬ್ಬಳ ಮೇಲಿನ ಅತ್ಯಂತ ಹೇಯ ದಾಳಿಯ ಘಟನೆಯನ್ನು ಉದಾಹರಿಸಿ ಜೋಕ್ ಮಾಡಿದ್ದು ಮತ್ತು ಇಡೀ ಸದನ ಅದಕ್ಕೆ ನಕ್ಕು ರಂಜಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. “ಹೆಣ್ಣಿನ ಬಗ್ಗೆ ಇಂತಹ ಕೀಳು ಅಭಿಪ್ರಾಯ ಮತ್ತು ಅವಮಾನಕರ ಮನೋಧರ್ಮ ಹೊಂದಿರುವ ತೀರಾ ಮನುಷ್ಯತ್ವಕ್ಕೇ ಕಳಂಕ ತರುವಂತ ವರಸೆ ಪ್ರದರ್ಶಿಸಿರುವ ಸ್ಪೀಕರ್ ಮತ್ತು ವಿಧಾನಸಭೆಯ ಎಲ್ಲಾ ಸದಸ್ಯರು ಈ ಬಗ್ಗೆ ಕ್ಷಮೆ ಕೋರಬೇಕು” ಎಂಬ ದನಿ ಅಭಿಯಾನದ ಸ್ವರೂಪ ಪಡೆದುಕೊಂಡಿದೆ.
“ಗೌರವಯುತ ಸ್ಥಾನದಲ್ಲಿರುವವರು ತಮ್ಮ ಮಾತು ಮತ್ತು ನಡತೆಯ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಸ್ತ್ರೀ-ಪುರುಷ ತಾರತಮ್ಯದ ಸಮಾಜದಲ್ಲಿ ಮಹಿಳಾ ಸಮಾನತೆ ಮತ್ತು ಲಿಂಗಸಂವೇದನೆಯ ವಿಷಯದಲ್ಲಿ ನಮ್ಮ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕು. ಆದರೆ, ಈಗ ಇವರು ಅಂತಹ ಸಂವಿಧಾನಿಕ ಆಶಯಕ್ಕೆ ತದ್ವಿರುದ್ಧವಾಗಿ ಸದನ ಒಳಗೇ ನಡೆದುಕೊಂಡಿದ್ದಾರೆ. ಇದು ಅತ್ಯಂತ ಖಂಡನೀಯ. ಸ್ಪೀಕರ್ ಕ್ಷಮೆ ಕೋರಿ, ಇಲ್ಲವೇ ರಾಜೀನಾಮೆ ನೀಡಿ” ಎಂಬ ಘೋಷಣೆಗಳು ಫೇಸ್ಬುಕ್, ವಾಟ್ಸಪ್, ಟ್ವಿಟರ್ ಮುಂತಾದ ಜಾಲತಾಣಗಳಲ್ಲಿ ಮೊಳಗಿವೆ. ಅಲ್ಲದೆ, #ShameShameSpeaker, #StepdownSpeaker, #MisogynistSpeaker ಎಂಬ ಹ್ಯಾಶ್ ಟ್ಯಾಗ್ಗಳು ಟ್ರೆಂಡ್ ಆಗಿವೆ.
ಸ್ಟೀಕರ್ ಅವರ ಹೇಳಿಕೆ ಕುರಿತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕೆ .ಎಸ್. ವಿಮಲಾ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ :

ಕೆ ಎಸ್ ವಿಮಲಾ
“ಸದನದ ಒಳಗೆ ಇಂತಹ ಅಸೂಕ್ಷ್ಮ ಮನಸ್ಸುಗಳು ಇರುವುದರಿಂದಲೇ ಇವತ್ತು ನಾವು ಹೊರಗೆ, ಸಮಾಜದಲ್ಲಿ ಹೆಣ್ಣಿನ ಮೇಲೆ ಪೈಶಾಚಿಕ ಕೃತ್ಯಗಳು ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಅತ್ಯಾಚಾರದಂತಹ ಭೀಕರ ದಾಳಿಗೊಳಗಾದ ಹೆಣ್ಣಿನ ಸಂಕಟ, ಹತಾಶೆಯನ್ನು ನಗೆಚಟಾಕಿ ಮಾಡಿ ಮಜಾ ತೆಗೆದುಕೊಳ್ಳುವ ಮಂದಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಕೇಂದ್ರದಲ್ಲಿದ್ದಾರೆ ಎಂಬುದೇ ದುರಂತ. ಅಂತಹ ಮಾತುಗಳನ್ನು ಲಿಂಗ ಸಂವೇದನೆ ಅಷ್ಟೇ ಅಲ್ಲ, ಕನಿಷ್ಠ ಮನುಷ್ಯ ಸಂವೇದನೆ ಹೊಂದಿರುವ ಎಲ್ಲರೂ ಖಂಡಿಸಬೇಕಿತ್ತು. ಆದರೆ, ಸದನದಲ್ಲಿದ್ದ ಮಹಿಳಾ ಶಾಸಕಿಯರು ಸೇರಿದಂತೆ ಸಿಎಂ, ಮಾಜಿ ಸಿಎಂಗಳೆಲ್ಲಾ ಅದನ್ನು ಕೇಳಿ ಗಹಗಹಿಸಿ ನಕ್ಕದ್ದು ಅತ್ಯಂತ ಹೀನಾಯ. ಆ ಹಿನ್ನೆಲೆಯಲ್ಲಿ ಕೇವಲ ಸ್ಪೀಕರ್ ಮಾತ್ರವಲ್ಲ, ಇಡೀ ಸದನವೇ ರಾಜ್ಯದ ಜನತೆಯ ಕ್ಷಮೆ ಕೋರಬೇಕು” .
ಕೆ ಎಸ್ ವಿಮಲಾ
ಆಡಿಯೋ ಹಗರಣದ ಕುರಿತ ವಿವಾದ ಇನ್ನೂ ಬಗೆಹರಿಯುವ ಮುನ್ನವೇ ಇದೀಗ ಸ್ವತಃ ಸ್ಪೀಕರ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಲಿಂಗ ಸೂಕ್ಷ್ಮತೆ ಮತ್ತು ಮಾನವೀಯತೆಯನ್ನೇ ಅಣಕಿಸುವಂತಹ ವಿವಾದಿತ ಹೇಳಿಕೆ ಮಹಿಳೆಯೂ ಸೇರಿದಂತೆ ಎಲ್ಲರ ಹಿತ ಕಾಯಬೇಕಾದ, ಹಕ್ಕುಗಳನ್ನು ರಕ್ಷಿಸಬೇಕಾದ, ಸುರಕ್ಷತೆ ಮತ್ತು ಘನತೆಯ ಬದುಕು ಖಾತ್ರಿಪಡಿಸಬೇಕಾದ ಸದನವೇ ಮನುಷ್ಯತ್ವ ಮತ್ತು ಮಹಿಳಾ ಸಂವೇದನೆಗೆ ವ್ಯತಿರಿಕ್ತವಾದ, ಘನತೆಗೆ ಧಕ್ಕೆ ತರುವಂತಹ ಹೇಳಿಕೆಗೆ ಸಾಕ್ಷಿಯಾಗಿರುವುದು ಮತ್ತು ಅಂತಹ ಹೇಳಿಕೆಯನ್ನು ಸ್ವತಃ ಸದನದ ಮುಖ್ಯಸ್ಥರಾದ ಸ್ಪೀಕರ್ ಅವರೇ ಆಡಿರುವುದು ಸಮಾಜದ ಎಲ್ಲಾ ಸ್ತರಗಳಲ್ಲಿ ಆಕ್ರೋಶದ, ಆಘಾತದ ಪ್ರತಿಕ್ರಿಯೆಯ ಅಲೆಗಳನ್ನು ಹೊಮ್ಮಿಸಿದೆ.