ಪ್ರೀತಂ ಗೌಡ ಮನೆ ಮೇಲಿನ ದಾಳಿಯನ್ನೇ ಮುಂದಿಟ್ಟುಕೊಂಡು ಈಗಾಗಲೇ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗಳಿಗೆ ಚಾಲನೆ ನೀಡಿದೆ. ಆ ಮೂಲಕ ಸದನದ ಒಳಹೊರಗೆ ಇಡೀ ಆಪರೇಷನ್ ಆಡಿಯೋ ಪ್ರಕರಣವನ್ನು ಬದಿಗೆ ಸರಿಸಿ, ದಾಳಿ ಘಟನೆಯನ್ನೇ ದೊಡ್ಡದು ಮಾಡಿ ರಾಜ್ಯ ಸರ್ಕಾರ ಮತ್ತು ದೋಸ್ತಿ ಪಕ್ಷಗಳಿಗೆ ತಿರುಗೇಟು ನೀಡುವುದು ಮತ್ತು ವ್ಯವಸ್ಥಿತವಾಗಿ ಗಂಭೀರ ಆಪರೇಷನ್ ಪ್ರಕರಣವನ್ನು ಜನಸಾಮಾನ್ಯರ ಮನಸ್ಸಿನಿಂದ ಮರೆಮಾಚುವುದು ಬಿಜೆಪಿಯ ತಂತ್ರಗಾರಿಕೆ.
ಮೂರು ದಿನಗಳ ಕಾಲ ರಾಜ್ಯ ವಿಧಾನಸಭೆ ಒಳಹೊರಗೆ ಸಾಕಷ್ಟು ಸದ್ದು ಮಾಡಿದ ಆಪರೇಷನ್ ಆಡಿಯೋ ಹಗರಣ ಗುರುವಾರದ ಹೊತ್ತಿಗೆ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಆಡಿಯೋದಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕೀಳಾಗಿ ಮಾತನಾಡಿರುವುದು ಬಹಿರಂಗವಾಗುತ್ತಲೇ ಹಾಸನದಲ್ಲಿ ಶಾಸಕ ಪ್ರೀತಂ ಗೌಡ ಮನೆಯ ಮೇಲೆ ನಡೆದ ಕಲ್ಲುತೂರಾಟ ಘಟನೆ ಇಡೀ ಆಡಿಯೋ ಪ್ರಕರಣವನ್ನು ಮತ್ತೊಂದು ದಿಕ್ಕಿಗೆ ಹೊರಳಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಶಾಸಕ ಶಿವನಗೌಡ ನಾಯಕ್ ಹಾಗೂ ಹಾಸನ ಶಾಸಕ ಪ್ರೀತಂ ಗೌಡ ಅವರುಗಳು ಶಾಸಕ ನಾಗನಗೌಡ ಅವರ ಪುತ್ರ ಶರಣುಗೌಡ ಅವರೊಂದಿಗೆ ನಡೆಸಿದ್ದಾರೆ ಎನ್ನಲಾಗಿರುವ ಆಡಿಯೋಗಳಲ್ಲಿ ವಿಧಾನಸಭಾ ಸ್ಪೀಕರ್ ಅವರಿಗೆ ಲಂಚ ನೀಡಿದ ಬಗ್ಗೆ ಪ್ರಸ್ತಾಪವಿದ್ದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರೇ ಈ ವಿಷಯವನ್ನು ಪ್ರಸ್ತಾಪಿಸಿ, ಸೂಕ್ತ ತನಿಖೆಯಾಗಿ ಕಳಂಕಮುಕ್ತನಾಗುವವರೆಗೆ ನನಗೆ ಈ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟಕರ ಎಂದಿದ್ದರು. ಪ್ರತಿಪಕ್ಷ ಸದಸ್ಯರೂ ಸೇರಿದಂತೆ ಸದನ ಎಲ್ಲರೂ ಆ ಬಗ್ಗೆ ತನಿಖೆಗೆ ಒಮ್ಮತ ವ್ಯಕ್ತಪಡಿಸಿದ್ದರು. ಆದರೆ, ತನಿಖೆಯನ್ನು ಎಸ್ ಐಟಿ ಮಾಡಬೇಕು ಎಂಬ ಸ್ಪೀಕರ್ ನಿಲುವಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ತನಿಖೆಯನ್ನು ಯಾರು ಮಾಡಬೇಕು ಎಂಬ ಬಗ್ಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮಂಗಳವಾರ ಮತ್ತು ಬುಧವಾರ ಎರಡೂ ದಿನ ತೀವ್ರ ವಾಗ್ವಾದ ನಡೆದಿತ್ತು.
ಈ ನಡುವೆ, ಸರ್ಕಾರ ಎಸ್ ಐಟಿ ತನಿಖೆ ಕುರಿತ ಸ್ಪೀಕರ್ ಅವರ ರೂಲಿಂಗನ್ನೇ ಆಧಾರವಾಗಿಟ್ಟುಕೊಂಡು ಎಸ್ ಐಟಿ ತಂಡ ರಚನೆ ಮತ್ತು ತನಿಖೆಗೆ ಅಧಿಕೃತ ಆದೇಶ ಹೊರಡಿಸಲು ಸಜ್ಜಾಗಿದೆ. ಮತ್ತೊಂದು ಕಡೆ, ಬಿಎಸ್ ಯಡಿಯೂರಪ್ಪ ಸೇರಿದಂತೆ ಆಡಿಯೋ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಶರಣುಗೌಡ ಪಾಟೀಲ್ ಬುಧವಾರ ರಾಯಚೂರು ಮತ್ತು ದೇವದುರ್ಗದಲ್ಲಿ ಎರಡು ಪ್ರತ್ಯೇಕ ಪೊಲೀಸ್ ದೂರು ದಾಖಲಿಸಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಈ ನಡುವೆ, ಬುಧವಾರ ಮಧ್ಯಾಹ್ನ ಹಾಸನದ ಶಾಸಕ ಪ್ರೀತಂ ಗೌಡ ಮನೆಯ ಮೇಲೆ ಕಲ್ಲುತೂರಾಟ ಘಟನೆಯಲ್ಲಿ ಅವರ ಬೆಂಬಲಿಗರೊಬ್ಬರು ಗಾಯಗೊಂಡಿದ್ದರು. ಇದೀಗ, ಬಿಜೆಪಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರವೇ ಪ್ರತಿಪಕ್ಷಗಳ ವಿರುದ್ಧ ದಾದಾಗಿರಿ ನಡೆಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಬಿಜೆಪಿ ನಾಯಕರು, ಅದೇ ವಿಷಯವನ್ನು ಮುಂದಿಟ್ಟುಕೊಂಡು ಗುರುವಾರ ಸದನದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಈ ವಿಷಯದ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ದೂರು ನೀಡಲೂ ಬಿಜೆಪಿ ಸಜ್ಜಾಗಿದೆ ಎನ್ನಲಾಗುತ್ತಿದೆ.
ಈ ನಡುವೆ, ಪ್ರೀತಂ ಗೌಡ ಮನೆ ಮೇಲಿನ ದಾಳಿಯನ್ನೇ ಮುಂದಿಟ್ಟುಕೊಂಡು ಈಗಾಗಲೇ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗಳಿಗೆ ಚಾಲನೆ ನೀಡಿದೆ. ಆ ಮೂಲಕ ಸದನದ ಒಳಹೊರಗೆ ಇಡೀ ಆಪರೇಷನ್ ಆಡಿಯೋ ಪ್ರಕರಣವನ್ನು ಬದಿಗೆ ಸರಿಸಿ, ದಾಳಿ ಘಟನೆಯನ್ನೇ ದೊಡ್ಡದು ಮಾಡಿ ರಾಜ್ಯ ಸರ್ಕಾರ ಮತ್ತು ದೋಸ್ತಿ ಪಕ್ಷಗಳಿಗೆ ತಿರುಗೇಟು ನೀಡುವುದು ಮತ್ತು ವ್ಯವಸ್ಥಿತವಾಗಿ ಗಂಭೀರ ಆಪರೇಷನ್ ಪ್ರಕರಣವನ್ನು ಜನಸಾಮಾನ್ಯರ ಮನಸ್ಸಿನಿಂದ ಮರೆಮಾಚುವುದು ಬಿಜೆಪಿಯ ತಂತ್ರಗಾರಿಕೆ.
ಎಸ್ ಐಟಿಗೆ ವಹಿಸಿದರೆ, ತನ್ನ ರಾಜ್ಯಾಧ್ಯಕ್ಷ ಮತ್ತು ಇತರ ಇಬ್ಬರು ಶಾಸಕರಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ ಮತ್ತು ಅಲ್ಲದೆ ಕಳೆದ ಮೂರು ದಿನಗಳಿಂದ ಈ ವಿಷಯದಲ್ಲಿ ಸದನದಲ್ಲಿ ತನ್ನ ನಾಯಕರುಗಳು ಸ್ಪೀಕರ್ ಎದುರು ‘ತಪ್ಪಾಗಿದೆ ಬಿಟ್ಟುಬಿಡಿ’ ಎಂದು ಅಂಗಾಲಾಚುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ವರ್ಚಸ್ಸಿಗೆ ಭಾರೀ ಹಾನಿಯಾಗಿದೆ ಎಂಬುದು ಬಿಜೆಪಿ ನಾಯಕರ ಆತಂಕ. ಅಲ್ಲದೆ, ಸ್ವತಃ ಯಡಿಯೂರಪ್ಪ ಅವರೇ ಶರಣುಗೌಡನ ಜೊತೆಗೆ ಮಾತನಾಡಿದ್ದು ತಾವೇ ಎಂದು ಮಾಧ್ಯಮಗಳ ಎದುರೇ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ನಾಳೆಯ ಚುನಾವಣೆಯ ಮೇಲೆ ಈ ಇಡೀ ಪ್ರಕರಣ ಪರಿಣಾಮ ಬೀರಲಿದೆ. ಈಗಾಗಲೇ ಪಕ್ಷದ ಹೈಕಮಾಂಡ್ ಕೂಡ ಇದೇ ಆತಂಕವನ್ನು ವ್ಯಕ್ತಪಡಿಸಿದೆ. ಆ ಎಲ್ಲಾ ಹಿನ್ನೆಲೆಯಲ್ಲಿ, ಬಿಜೆಪಿಗೆ ಉಳಿದದ್ದು ಇಡೀ ಘಟನೆಯಿಂದ ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಾರಿಕೆಯ ಮೊರೆಹೋಗುವುದೊಂದೇ!

ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಒಂದೇ ಎಂಬಂತೆ, ಇದೀಗ ಪ್ರೀತಂ ಗೌಡ ಬೆಂಬಲಿಗನ ಮೇಲಿನ ಹಲ್ಲೆ ಘಟನೆ ಬಿಜೆಪಿಗೆ ಒದಗಿ ಬಂದಿದೆ. ಸಂಕಷ್ಟದಲ್ಲಿದ್ದವನಿಗೆ ಹುಲ್ಲುಕಡ್ಡಿಯ ಆಸರೆಯಂತೆ ಪ್ರಕರಣವನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ಬಿಜೆಪಿ ಇಡೀ ರಾಜ್ಯಾದ್ಯಂತ ಹುಯಿಲೆಬ್ಬಿಸಿ, ಇಡೀ ಸರ್ಕಾರವೇ ಆ ಹಲ್ಲೆಯ ಹಿಂದಿದೆ. ಸರ್ಕಾರವೇ ಬಿಜೆಪಿ ವಿರುದ್ಧ ದಾದಾಗಿರಿ ನಡೆಸುತ್ತಿದೆ ಎಂದು ಬೊಬ್ಬೆ ಹೊಡೆಯತೊಡಗಿದೆ.
ಈ ನಡುವೆ, ಇಡೀ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರೀತಂ ಗೌಡ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವಾಗ ಅವರ ನಡುವೆ ಸೇರಿಕೊಂಡು ಕಲ್ಲು ತೂರಲು ಬಿಜೆಪಿ ಮುಖಂಡರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡಿದ್ದರು. ಇದು ಆಡಿಯೋ ಪ್ರಕರಣದಿಂದ ರಾಜ್ಯದ ಗಮನವನ್ನು ಬೇರೆಡೆ ಸೆಳೆಯುವ ಬಿಜೆಪಿಯ ನಾಯಕರ ತಂತ್ರಗಾರಿಕೆಯ ಭಾಗವಾಗಿ ನಡೆದ ಘಟನೆ. ಬಿಜೆಪಿ ಮುಖಂಡರು ಕಲ್ಲು ತೂರಿದ ವ್ಯಕ್ತಿಯೊಂದಿಗೆ ನಡೆಸಿದ ಮಾತುಕತೆಯ ಆಡಿಯೋ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ ಎನ್ನಲಾಗಿದೆ.
ಒಟ್ಟಾರೆ, ಬಿಜೆಪಿ ಮತ್ತೆ ಮತ್ತೆ ತಾನೇ ತೋಡಿದ ಬಾವಿಯಲ್ಲಿ ತಾನೇ ಬೀಳುತ್ತಿದ್ದು, ರಾಜ್ಯದ ಜನರ ಕಣ್ಣಲ್ಲಿ ಅದರ ನಾಯಕರು ನಗೆಪಾಟಲಿಗೀಡಾಗುವಂತಾಗಿದೆ.
TruthIndia