ತಮ್ಮದೇ ಸಮಾಜವಾದಿ ಪಕ್ಷ ಸೇರಿದಂತೆ ಪ್ರತಿಪಕ್ಷಗಳು ಮೋದಿ ಮತ್ತು ಬಿಜೆಪಿಯನ್ನು ಮಣಿಸಲು ರಾಷ್ಟ್ರಮಟ್ಟದಲ್ಲಿ ಇನ್ನಿಲ್ಲದ ಪ್ರಯತ್ನಗಳು ನಡೆಸುತ್ತಿರುವಾಗ, ಸ್ವತಃ ಮುಲಾಯಂ ಸಿಂಗ್ ಯಾದವ್, ಪ್ರಧಾನಿ ಮೋದಿವರಿಗೆ ಮತ್ತೆ ನೀವೇ ಪ್ರಧಾನಿಯಾಗಬೇಕು ಎಂದು ಆಶೀರ್ವಾದ ಮಾಡಿದ್ದರ ಹಿಂದಿನ ಗುಟ್ಟೇನು?–
ಪ್ರಸ್ತುತ 16ನೇ ಲೋಕಸಭೆಯ ಅಂತಿಮ ದಿನವಾದ ಬುಧವಾರ, ಕಲಾಪದ ಹಲವು ಸ್ವಾರಸ್ಯಕರ ಸಂಗತಿಗಳಿಗೆ ಸಾಕ್ಷಿಯಾಯಿತು. ಆ ಪೈಕಿ ಅತಿ ಹೆಚ್ಚು ಗಮನ ಸೆಳೆದದ್ದು ಸಮಾಜವಾದಿ ಪಕ್ಷದ ಸ್ಥಾಪಕ, ಸಂಸದ ಮುಲಾಯಂ ಸಿಂಗ್ ಯಾದವ್ ಅವರ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಬೇಕು ಎಂಬ ಹೇಳಿಕೆ!
ಮಹಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಅಧಿವೇಶನವೇ ಲೋಕಸಭೆಯ ಅಂತಿಮ ಅಧಿವೇಶನವಾಗಿದ್ದು, ಬುಧವಾರ ಲೋಕಸಭೆಯ ಅಂತಿಮ ಕಲಾಪ. ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಮುನ್ನ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್, “ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ಉತ್ತಮ ಕೆಲಸ ಮಾಡಿರುವ ಪ್ರಧಾನಿ ಮೋದಿಯವರನ್ನು ನಾವು ಅಭಿನಂದಿಸುತ್ತೇನೆ. ಈ ಸದನದ ಎಲ್ಲರೂ ಮತ್ತೊಮ್ಮೆ ಆಯ್ಕೆಯಾಗಿ ಬರಬೇಕು. ಹಾಗೇ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹಾರೈಸುತ್ತೇನೆ” ಎಂದು ಯಾದವ್ ಹೇಳುವ ಮೂಲಕ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ಸಂಸದರ ಹುಬ್ಬೇರಿಸಿದರು. ಅವರ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸಂಭ್ರಮ ವ್ಯಕ್ತಪಡಿಸಿದರೆ, ಸ್ವತಃ ಸಮಾಜವಾದಿ ಪಕ್ಷದ ಸಂಸದರು ಸೇರಿದಂತೆ ವಿವಿಧ ಪ್ರತಿಪಕ್ಷಗಳ ಸಂಸದರು ಹೌಹಾರಿದರು.
ಈ ನಡುವೆ, ಮುಲಾಯಂ ಅವರ ಆ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರದೇ ಪಕ್ಷದ ಸಂಸದ ರವಿದಾಸ್ ಮೆಹ್ರೋತ್ರಾ, “ನೇತಾಜಿ ಅವರು ಯಾವ ಹಿನ್ನೆಲೆಯಲ್ಲಿ ಆ ರೀತಿ ಮಾತನಾಡಿದ್ದಾರೆ ಗೊತ್ತಿಲ್ಲ. ಆದರೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಮತ್ತು ಮೋದಿಯವರನ್ನು ಅವರದ್ದೇ ಸ್ವಕ್ಷೇತ್ರದಲ್ಲಿ ಸೋಲಿಸಿ ಮನೆಗೆ ಕಳಿಸಬೇಕು ಎಂಬುದು ನಮ್ಮ ಪಕ್ಷದ ಸ್ಪಷ್ಟ ನಿಲುವು” ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಕಳೆದ ಒಂದೂವರೆ ವರ್ಷದ ಹಿಂದಿನ ಸಮಾಜವಾದಿ ಪಕ್ಷದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮುಲಾಯಂ ಅವರ ಮೋದಿ ಶ್ಲಾಘನೆಯ ಈ ಮಾತು ಹಲವು ವ್ಯಾಖ್ಯಾನಗಳಿಗೆ ಎಡೆಮಾಡಿದ್ದು, ತಮ್ಮನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ ಆ ಸ್ಥಾನಕ್ಕೇರಿದ ಪುತ್ರ ಅಖಿಲೇಶ್, ಬಳಿಕ ತಮ್ಮ ಆಪ್ತ ಸಹೋದರ, ಹಾಗೂ ಪಕ್ಷವನ್ನು ಕಟ್ಟಿಬೆಳೆಸಿದ ಶಿವಪಾಲ್ ಯಾದವ್ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿದ್ದ ಹಿನ್ನೆಲೆಯಲ್ಲಿ ಮುಲಾಯಂ ಈ ಹೇಳಿಕೆ ನೀಡಿರಬಹುದು ಎನ್ನಲಾಗುತ್ತಿದೆ. ಅಲ್ಲದೆ, ತಮ್ಮ ಆಜನ್ಮ ವೈರಿ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರೊಂದಿಗೆ ಮೈತ್ರಿಮಾಡಿಕೊಂಡಿರುವ ತಮ್ಮ ಪುತ್ರನ ರಾಜಕೀಯ ವರಸೆಗೂ ಈ ಹೇಳಿಕೆ ತಿರುಗೇಟು ಎಂದು ಬಣ್ಣಿಸಲಾಗುತ್ತಿದೆ. ಅದೇನೇ ಇರಲಿ; ಎಸ್ಪಿ ಮತ್ತು ಬಿಎಸ್ ಪಿ ಅಷ್ಟೇ ಅಲ್ಲದೆ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಮೋದಿ ವಿರುದ್ಧ ಕೆಂಡ ಕಾರುತ್ತಿರುವಾಗ, ಬಿಜೆಪಿ ಸೋಲಿಸಲು ರಾಷ್ಟ್ರಮಟ್ಟದಲ್ಲಿ ಮಹಾಮೈತ್ರಿಯನ್ನು ಗಟ್ಟಿಗೊಳಿಸುತ್ತಿರುವಾಗ, ಸ್ವತಃ ಸಮಾಜವಾದಿ ಪಕ್ಷದ ನಾಯಕನಾಗಿ ಮುಲಾಯಂ ಆಡಿರುವ ಈ ಮಾತುಗಳು ಮೋದಿಗೆ ಚುನಾವಣಾ ಹೊಸ್ತಿಲ್ಲಲ್ಲಿ ಹೊಸ ಅಸ್ತ್ರವಾಗಿ ಒದಗಿ ಬರಲಿವೆ ಎಂಬುದು ನಿಚ್ಛಳ.
ಹಾಗಾಗಿಯೇ, ಮುಲಾಯಂ ಅವರ ಮಾತಿಗೆ ಸದನದಲ್ಲೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಮುಲಾಯಂ ಅವರ ಆಶೀರ್ವಾದಕ್ಕೆ ಧನ್ಯವಾದಗಳು. ಬಹುಮತದ ಒಂದು ಸರ್ಕಾರ ಅಧಿಕಾರದಲ್ಲಿದ್ದರೆ, ಎಂತಹ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಈ ಸದನ ಈಗಾಗಲೇ ಸಾಕ್ಷಿಯಾಗಿದೆ. 30 ವರ್ಷಗಳ ಬಳಿಕ 2014ರಲ್ಲಿ ಕಾಂಗ್ರೆಸ್ಸೇತರ ‘ಗೋತ್ರ’ ಸರ್ಕಾರ ಬಹುಮತದೊಂದಿಗೆ ಅಸ್ತಿತ್ವಕ್ಕೆ ಬಂದಿತ್ತು. ಈ ಐದು ವರ್ಷಗಳಲ್ಲಿ ಭಾರತವನ್ನು ಜಗತ್ತಿನ ಆರು ಅತಿದೊಡ್ಡ ಆರ್ಥಿಕ ಶಕ್ತಿಗಳ ಸಾಲಿನಲ್ಲಿ ನಿಲ್ಲಿಸಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಅದಕ್ಕೆ ಸ್ಪಷ್ಟ ಬಹುಮತದ ಸರ್ಕಾರ ಅಧಿಕಾರಕ್ಕೆ ಬರಬೇಕು. ಅತಂತ್ರ ಜನಾದೇಶಗಳು ದೇಶದ ಪ್ರಗತಿಗೆ ಮಾರಕ ಎಂಬುದನ್ನು ನಾವೀಗಾಲೇ ಕಂಡಿದ್ದೇವೆ” ಎಂದರು.
ಇದೇ ವೇಳೆ ಕಾಂಗ್ರೆಸ್ ಮತ್ತು ರಾಹುಲ್ ವಿರುದ್ಧವೂ ತಮ್ಮ ಟೀಕೆ ಮತ್ತು ಹಾಸ್ಯ ಚಟಾಕಿ ಹಾರಿಸಿದ ಮೋದಿ, “ಈ ಸದನ ಹಲವು ವಿಚಿತ್ರಗಳನ್ನು ಕಂಡಿದೆ. ಅವುಗಳಲ್ಲಿ ಮೈಮೇಲೆ ಬೀಳುವುದು ಮತ್ತು ಆತ್ಮೀಯವಾಗಿ ಅಪ್ಪುವುದರ ನಡುವಿನ ವ್ಯತ್ಯಾಸವನ್ನು ಕಂಡಿದ್ದೇನೆ, ಭಾರೀ ವಿಮಾನಗಳು ಹಾರಾಡಿದ್ದನ್ನೂ ಕಂಡಿದ್ದೇನೆ ಹಾಗೇ ಭಾರೀ ಭೂಕಂಪಗಳು ಸಂಭವಿಸಿದ್ದನ್ನೂ ನೋಡಿದ್ದೇನೆ” ಎಂದು ರಾಹುಲ್ ಗಾಂಧಿಯವರ ನಡೆ ಮತ್ತು ನುಡಿಗಳ ಬಗ್ಗೆ ಕಟಕಿಯಾಡಿದರು.