ದೊಡ್ಡ ಪ್ರಮಾಣದಲ್ಲಿ ಸೈನಿಕರ ಸಾಗಣೆಯ ವೇಳೆ, ಜಮ್ಮುಕಾಶ್ಮೀರ ಹೆದ್ದಾರಿಯಲ್ಲಿ ನಡೆದಿರುವ ಈ ದಾಳಿ, ಗಡಿಯಷ್ಟೇ ಅಲ್ಲ, ದೇಶದ ಒಳಗೂ ಭೀಕರ ದಾಳಿ ನಡೆಸುವ ಮಟ್ಟಿಗೆ ಉಗ್ರರು ದೇಶದ ಭದ್ರತಾ ವ್ಯವಸ್ಥೆಯನ್ನು ಬೇಧಿಸಿದ್ದಾರೆ ಎಂಬುದಕ್ಕೆ ನಿದರ್ಶನ.
ಜಮ್ಮು ಕಾಶ್ಲೀರದ ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಕೇಂದ್ರ ಭದ್ರತಾ ಮೀಸಲು ಪಡೆಯ(ಸಿಆರ್ಪಿಎಫ್) ಮೂವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, 15ಕ್ಕೂ ಹೆಚ್ಚು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಸುಮಾರು 2500ಕ್ಕೂ ಹೆಚ್ಚು ಯೋಧರು ವಾಹನಗಳಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಅವಂತಿಪುರದಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಳದ ಉಗ್ರನೊಬ್ಬ 350 ಕೆಜಿ ಸ್ಫೋಟಕ ತುಂಬಿದ ವಾಹನವನ್ನು ನುಗ್ಗಿಸುವ ಮೂಲಕ ಈ ದಾಳಿ ನಡೆಸಿದ್ದು, ಉರಿ ಸೇನಾ ನೆಲೆ ಮೇಲಿನ ಭಯೋತ್ಪಾದನಾ ದಾಳಿಯ ಬಳಿಕ ದೇಶ ಕಂಡ ಭೀಕರ ದಾಳಿ ಇದಾಗಿದೆ.
ದಾಳಿಯ ಕುರಿತು ಎಲ್ಲೆಡೆಯಿಂದ ಖಂಡನೆ ಮತ್ತು ಆಘಾತದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೇಂದ್ರ ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಘಟನೆಯನ್ನು ಖಂಡಿಸಿದ್ದಾರೆ. ನಮ್ಮ ಯೋಧರ ಪ್ರತಿ ಹನಿ ರಕ್ತಕ್ಕೂ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡ ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಭದ್ರತಾ ಸಲಹಾ ಮಂಡಳಿಯ ತುರ್ತು ಸಭೆ ಕರೆದಿದ್ದಾರೆ.
ಆದರೆ, ದೊಡ್ಡ ಸಂಖ್ಯೆಯಲ್ಲಿ ಯೋಧರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿರುವಾಗ ಆ ಕುರಿತ ಎಲ್ಲಾ ಮಾಹಿತಿ ಪಡೆದುಕೊಂಡು ಭಯೋತ್ಪಾದಕರು ದೇಶದ ಒಳಗೇ ಇಂತಹ ಭೀಕರ ದಾಳಿ ನಡೆಸಿರುವುದು ಇದೀಗ ಭದ್ರತಾ ಪಡೆಗಳ ಸುರಕ್ಷತೆ ಮತ್ತು ದೇಶದ ಗುಪ್ತಚರ ವ್ಯವಸ್ಥೆಯ ಬಗ್ಗೆಯೇ ಆತಂಕ ಹುಟ್ಟಿಸಿದೆ. ದೊಡ್ಡ ಪ್ರಮಾಣದಲ್ಲಿ ಸೈನಿಕರ ಸಾಗಣೆಯ ವೇಳೆ, ಜಮ್ಮುಕಾಶ್ಮೀರ ಹೆದ್ದಾರಿಯಲ್ಲಿ ನಡೆದಿರುವ ಈ ದಾಳಿ, ಗಡಿಯಷ್ಟೇ ಅಲ್ಲ, ದೇಶದ ಒಳಗೂ ಭೀಕರ ದಾಳಿ ನಡೆಸುವ ಮಟ್ಟಿಗೆ ಉಗ್ರರು ದೇಶದ ಭದ್ರತಾ ವ್ಯವಸ್ಥೆಯನ್ನು ಬೇಧಿಸಿದ್ದಾರೆ ಎಂಬುದಕ್ಕೆ ನಿದರ್ಶನ.
ಆ ಹಿನ್ನೆಲೆಯಲ್ಲಿ ಭೀಕರ ದಾಳಿಯನ್ನು ಖಂಡಿಸುತ್ತಲೇ, ಹುತಾತ್ಮ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುತ್ತಲೇ, ಗಡಿ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳು ಮತ್ತು ಕೇಂದ್ರ ಸರ್ಕಾರದ ಕ್ರಮಗಳ ಕುರಿತು ಟೀಕೆ ಮತ್ತು ಅಸಮಧಾನಗಳೂ ವ್ಯಕ್ತವಾಗುತ್ತಿವೆ. ಪ್ರಮುಖ ಪ್ರತಿಪಕ್ಷ ನಾಯಕರು ಮತ್ತು ರಕ್ಷಣಾ ಪರಿಣಿತರು ಹಾಗೂ ಮಾಧ್ಯಮಗಳಲ್ಲಿ, ಉಗ್ರರು ದೇಶದ ಒಳ ನುಸುಳಿ ಇಷ್ಟೊಂದು ಭೀಕರ ದಾಳಿ ನಡೆಸುವ ಮಟ್ಟಿಗೆ ನಮ್ಮ ಭದ್ರತಾ ವ್ಯವಸ್ಥೆ ದುರ್ಬಲವಾಗಿದೆಯೇ ಎಂಬ ಪ್ರಶ್ನೆಗಳನ್ನು ಕೇಳತೊಡಗಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು, 26/11 ಮುಂಬೈ ದಾಳಿಯ ಬಳಿಕ ಅಂದಿನ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿತ್ತು. ನಾವು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸರ್ಜಿಕಲ್ ದಾಳಿ ಮೂಲಕ ಉಗ್ರರ ಹುಟ್ಟಡಗಿಸಿದ್ದೇವೆ. ದೇಶದ ಮೇಲಿನ ಭಯೋತ್ಪಾದಕ ದಾಳಿಗಳು ಸಂಪೂರ್ಣ ನಿಂತುಹೋಗಿವೆ ಎಂದು ಹೇಳಿಕೊಂಡಿದ್ದರು. ಹಾಗೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ 2014ರ ಬಳಿಕ ದೇಶದಲ್ಲಿ ಒಂದೇ ಒಂದು ಭಯೋತ್ಪಾದಕ ದಾಳಿ ನಡೆದಿಲ್ಲ ಎಂದು ತಿಂಗಳ ಹಿಂದಷ್ಟೇ ಹೇಳಿದ್ದರು.
ಆದರೆ, ವಾಸ್ತವವಾಗಿ, 2016ರಲ್ಲಿ ಪಂಜಾಬಿನ ಪಠಾನ್ ಕೋಟ್ ಮತ್ತು ಜಮ್ಮುಕಾಶ್ಮೀರದ ಉರಿ ಸೇನಾ ನೆಲೆ ಮೇಲಿನ ದಾಳಿಗಳಲ್ಲಿ ೨೪ ಮಂದಿ ಯೋಧರು ಸೇರಿದಂತೆ ಮೂವತ್ತು ಮಂದಿ ಬಲಿಯಾಗಿದ್ದರು ಮತ್ತು ಸೇನೆಯ ಅಪಾರ ಆಸ್ತಿಪಾಸ್ತಿ ಹಾನಿಯಾಗಿತ್ತು ಎಂಬುದನ್ನು ಮರೆಮಾಚಲಾಗಿತ್ತು. ಹಾಗೆಯೇ, ಕಾಶ್ಮೀರ ವಲಯದಲ್ಲಿ 2018ರಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಬರೋಬ್ಬರಿ 451 ಮಂದಿ(ಯೋಧರು ಸೇರಿ) ಬಲಿಯಾಗುವ ಮೂಲಕ ಕಳೆದ ಒಂದು ದಶಕದಲ್ಲೇ ಅತಿಹೆಚ್ಚು ಮಂದಿ ಭಯೋತ್ಪಾದಕ ದಾಳಿಗೆ ಬಲಿಯಾದ ವರ್ಷವಾಗಿ ದಾಖಲಾಯಿತು.

ಇದೀಗ ಭೀಕರ ದಾಳಿಯ ಹಿನ್ನೆಲೆಯಲ್ಲಿ ಈ ವಿಷಯಗಳು ಮತ್ತೆ ಚರ್ಚೆಗೆ ಬಂದಿವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಸರ್ಜಿಕಲ್ ದಾಳಿಯಂತಹ ಸೂಕ್ಷ್ಮ ವಿಷಯಗಳಲ್ಲೂ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಎಲ್ಲಾ ವಿವರಗಳನ್ನು ಬಹಿರಂಗಗೊಳಿಸುವ, ಸೇನೆ ಮತ್ತು ಯೋಧರ ಸೌಕರ್ಯಗಳ ಕುರಿತ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದ್ದೇವೆ ಎಂದು ಪ್ರಚಾರ ನಡೆಸುವ ನಡೆಗಳು ಕೂಡ, ಇಂತಹ ದಾಳಿಗಳಿಗೆ ಪರೋಕ್ಷವಾಗಿ ಕಾರಣವಾಗಿರಬಹುದು. ಸೂಕ್ಷ್ಮ ಮಾಹಿತಿ ಸೋರಿಕೆ ಮತ್ತು ಅನಗತ್ಯ ಪ್ರಚಾರ ವೈಖರಿಗಳು ಭಯೋತ್ಪಾದಕ ಶಕ್ತಿಗಳಿಗೆ ದೇಶದ ಒಳನುಗ್ಗಿ ಇಂತಹ ಭೀಕರ ಕೃತ್ಯ ನಡೆಸಲು ದಾರಿಮಾಡಿಕೊಡುತ್ತಿರಬಹುದು ಎಂಬ ಆತಂಕ ಕೂಡ ವ್ಯಕ್ತವಾಗಿದೆ.
ಹಾಗೆಯೇ, ಚುನಾವಣಾ ಪ್ರಚಾರದ ತಂತ್ರವಾಗಿ ದೇಶದ ರಕ್ಷಣೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳನ್ನು ಬಳಸುತ್ತಿರುವುದು, ಭಾರತ- ಪಾಕ್ ಗಡಿಯಲ್ಲಿನ ಸ್ಮಾರ್ಟ್ ಬೇಲಿಯಂತಹ ಸಂಗತಿಗಳನ್ನು ವಾಸ್ತವಾಂಶಗಳನ್ನು ಮರೆಮಾಚಿ, ಬಣ್ಣಬಣ್ಣದ ಮಾತುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ಇಡೀ ದೇಶದ ಇತಿಹಾಸದಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವಷ್ಟೇ ಸೇನೆ ಮತ್ತು ಗಡಿಯನ್ನು ಸದೃಢಗೊಳಿಸಲಾಗಿದೆ ಎಂಬಂತೆ ಪೊಳ್ಳು ಚಿತ್ರಣಗಳನ್ನು ನೀಡುವುದು,.. ಇಂತಹ ಗಿಮಕ್ಕುಗಳ ನಡುವೆ, ನಮ್ಮ ಸೇನಾ ನೆಲೆಗಳು ಮತ್ತು ಸೇನಾ ಪಡೆಗಳ ಮೇಲೆ ಇತ್ತೀಚಿನ ವರ್ಷಗಳಲ್ಲೇ ಕಂಡಿರದ ಪ್ರಮಾಣದ ಭೀಕರ ದಾಳಿಗಳು ನಡೆಯುತ್ತಲೇ ಇವೆ.