ಪುಲ್ವಾಮಾ ಬಾಂಬ್ ಸ್ಪೋಟದಲ್ಲಿ ಮಡಿದ ಕರ್ನಾಟಕದ ಯೋಧ ಎಚ್. ಗುರು ಕುರಿತ ಒಂದು ಪ್ರೊಫೈಲ್
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಿನ್ನೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಯೋಧ ಹೆಚ್.ಗುರು ಹುತಾತ್ಮರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆಯ 33 ವರ್ಷದ ಯೋಧ ಗುರು ಕೃಷಿಕ ಹೊನ್ನಯ್ಯ ತಾಯಿ ಚಿಕ್ಕ ತಾಯಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಮೊದಲನೇ ಮಗ.
ಗುರು ತನ್ನ ಪ್ರಾಥಮಿಕ ಶಾಲಾ ವ್ಯಾಸಂಗವನ್ನು ಮದ್ದೂರು ತಾಲೂಕಿನ ಭಾರತೀನಗರ ದಿವ್ಯಜ್ಯೋತಿ ಕಾನ್ವೆಂಟ್ ನಲ್ಲಿ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಶ್ರೀರಂಗಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಎಸ್ಎಸ್ಎಲ್ ಸಿ ಆಧಾರದ ಮೇಲೆ ಸಿ.ಆರ್.ಪಿ.ಎಫ್. ಮೂಲಕ ಮಿಲಿಟರಿ ಸೇರಿದ್ದರು. ಗುರು ಅವರ ಎರಡನೇ ಸೋದರ ಮಧು ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬ ಸೋದರ ಆನಂದ್ ಹೋಂ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೊದಲಿನಿಂದಲೂ ದೇಶ ಸೇವೆ ಮಾಡಬೇಕೆಂಬ ತುಡಿತ ಹೊಂದಿದ್ದ ಗುರುವಿಗೆ ಸೈನಿಕರೇ ಹೀರೋಗಳಾಗಿದ್ದರು. ಗುರುವಿಗೆ ದೇಶ ಸೇವೆ ಮಾಡಬೇಕೆಂಬ ತುಡಿತ, ಆ ಹೀರೋಗಳಂತೆ ದೇಶಕ್ಕೇನಾದರೂ ಸೇವೆ ಮಾಡಿಯೇ ತೀರಬೇಕೆಂಬ ಹಂಬಲ ಹೊಂದಿದ್ದರು.
2011 ರಲ್ಲಿ ಸಿಆರ್ ಪಿಎಫ್ ಗೆ ಸೇರಿದ್ದು, 8 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜಾರ್ಖಂಡ್ ನಲ್ಲಿ 94ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು, ಬಳಿಕ ಶ್ರೀನಗರದಲ್ಲಿ 82ನೇ ಬೆಟಾಲಿಯನ್ ನಲ್ಲಿ ಸಿಟಿ/ಜಿಡಿ ಆಗಿ ಕಾರ್ಯ ಆರಂಭಿಸಿದ್ದರು.
ಯೋಧ ಗುರು ಕಳೆದ 6 ತಿಂಗಳ ಹಿಂದೆ ವಿವಾಹವಾಗಿದ್ದರು, ರಜೆಗಾಗಿ ಕಳೆದ ವಾರವಷ್ಟೇ ಊರಿಗೆ ಬಂದಿದ್ದರು. ನಾಲ್ಕು ದಿನಗಳ ಹಿಂದಷ್ಟೇ ರಜೆ ಮುಗಿಸಿಕೊಂಡು ವಾಪಸ್ ಕರ್ತವ್ಯಕ್ಕೆ ಸೋಮವಾರ ಹಾಜರಾಗಿದ್ದರು. ಈ ಬೆನ್ನಲ್ಲೇ ಗುರುವಾರ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ.
ಗುರು ಅವರ ಅಗಲಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ತಂದೆ, ತಾಯಿ, ಪತ್ನಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
“ನನ್ನ ಮಗ ಯೋಧನಾಗುವ ಬಗ್ಗೆ ನಮಗೇ ಗೊತ್ತಿರಲಿಲ್ಲ, ಅವನೇನು ನಮಗೆ ಹೇಳಿರಲಿಲ್ಲ. ನಾವು ಹೆದರಿಕೊಳ್ಳುತ್ತೇವೆ ಎಂದು ನಮಗೆ ಪೊಲೀಸ್ ಆಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿದ್ದ. ಇತ್ತೀಚೆಗಷ್ಟೇ ನನಗೆ ಅವನು ಯೋಧನಾಗಿ ಕೆಲಸಕ್ಕೆ ಸೇರಿದ ಬಗ್ಗೆ ತಿಳಿದದ್ದು. ನಮ್ಮ ಮನೆಯ ಆಧಾರ ಸ್ಥಂಬವೇ ಇಲ್ಲವಾಗಿದೆ. ಮಗನೇ ಇಲ್ಲದ ಮೇಲೆ ಇನ್ನು ನಾವೇಕೆ ಬದುಕಿರಬೇಕು”
ಗುರು ತಂದೆ ಹೊನ್ನಯ್ಯ

“ಅನೇಕ ಬಾರಿ ಮನೆಯವರಿಗೆ ನಾನು ಹುತಾತ್ಮನಾದಾಗ ಮಾತ್ರ ನನ್ನ ಹೀರೋ ಎಂದು ಕರೆಯಿರಿ ಎಂದು ಮಗ ಗುರು ತಾಯಿ ಚಿಕ್ಕ ತಾಯಮ್ಮಗೆ ಹೇಳಿದ್ದನ್ನು ನೆನೆದು ಕಣ್ಣೀರಿಟ್ಟರು.\
”ನಾನು ಪ್ರತಿದಿನ ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ. ಅವರು ಇಂದು ಬೆಳಗ್ಗೆ 11 ಗಂಟೆಗೆ ಫೋನ್ ಮಾಡಿದ್ದರು. ನಾನು ಕೆಲಸ ಮಾಡುತ್ತಿದ್ದರಿಂದ ಅವರ ಜೊತೆ ಮಾತನಾಡಲು ಸಾಧ್ಯವಾಗಿಲ್ಲ. ಅವರು ಊರಿಂದ ಹೋಗಿ ನಾಲ್ಕು ದಿನಗಳು ಆಗಿರಲಿಲ್ಲ. ತುಂಬಾ ನೋವಾಗುತ್ತಿದೆ. ನನ್ನಿಂದ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುರುವಾರ ಒಂದು ದಿನ ಅವರ ಜೊತೆ ಮಾತನಾಡಿದ್ರೆ ಆಗುತ್ತಿತ್ತು. ನಾನು 6 ಗಂಟೆಯಿಂದ ಫೋನ್ ಮಾಡಿ ಮಾಡಿ ಸಾಕಾಯ್ತು”
ಪತ್ನಿ ಕಲಾವತಿ
ಗುರು ಅವರ ನತದೃಷ್ಟ ಪತ್ನಿ ಕಲಾವತಿ ‘ನನಗೆ ಅವರು ಬೇಕು ಅಮ್ಮಾ..’ ಎಂದು ತಾಯಿ ಮಡಿಲಲ್ಲಿ ಮಲಗಿಕೊಂಡು ಅಳುತ್ತಿದ್ದ ದೃಶ್ಯ ಎಂಥವರ ಮನ ಕಲಕುವಂತಿತ್ತು.