ಭೀಕರ ಎನ್ನಿಸುವ ರೀತಿಯಲ್ಲಿ ಸೂಸೈಡ್ ಬಾಂಬರ್ ದಾಳಿ ನಡೆದು 42 ಮಂದಿ ಭಾರತೀಯ ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಇಡೀ ದೇಶದಲ್ಲಿ ಪ್ರತೀಕಾರದ ಮನೋಭಾವನೆ ಒಡಮೂಡಿದೆ. ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ತಾನೇ ನಡೆಸಿದ್ದು ಎಂದು ಉಗ್ರ ಸಂಘಟನೆ ಜೈಶ್ ಎ ಮಹಮೂದ್ ಘೋಷಿಸಿಕೊಂಡಿದೆ. ಇದು ಪಾಕಿಸ್ತಾನ ಬೆಂಬಲಿತ ಸಂಘಟನೆ ಎಂಬ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತಗೊಳ್ಳುತ್ತಿದೆ.
ಇಂತಹ ಅಭಿಪ್ರಾಯಗಳಲ್ಲಿ ಅನೇಕ ಜನರು ದೇಶದ ಕುರಿತು ಸಹಜ ಅಭಿಮಾನ, ಆತಂಕಗಳಿಂದ ಕೂಡಿದ ಮಾತುಗಳನ್ನು ಆಡುತ್ತಾರೆ. ಇದರಲ್ಲಿ ತಪ್ಪೇನೂ ಇರುವುದಿಲ್ಲ. ಇವರಲ್ಲಿ ಬಹುತೇಕರಿಗೆ ದೇಶಗಳ ನಡುವೆ ಯುದ್ಧ ಅಂದರೆ ಏನೆಂಬ ಕಲ್ಪನೆಯೂ ಇರುವುದಿಲ್ಲ. ಆದರೆ ಮತ್ತೊಂದು ಕೆಟಗರಿಯ ಜನರಿರುತ್ತಾರೆ. ಇವರೆಲ್ಲಾ ದೊಡ್ಡ ದೊಡ್ಡ ನಗರಗಳಲ್ಲಿ ಎಲ್ಲಾ ಸುಖಭೋಗಗಳಲ್ಲಿ ಬದುಕುವವರಾಗಿರುತ್ತಾರೆ. ಇವರು ಇಂತಹ ಸಂದರ್ಭಕ್ಕಾಗಿಯೇ ಕಾದು ಕುಳಿತಿದ್ದವರಂತೆ ನಾಟಕೀಯ ರೀತಿಯಲ್ಲಿ ಮೈಮೇಲೆ ದೆವ್ವ ಬಂದವರಂತೆ ಕಿರುಚುತ್ತಾ ರೋಷಾವೇಷ ತೋರುತ್ತಿದ್ದಾರೆ. ತಮ್ಮ ಹವಾನಿಯಂತ್ರಿತ ನ್ಯೂಸ್ ರೂಮ್ಗಳಲ್ಲಿ ಕುಳಿತೋ, ತಮ್ಮ ಮನೆಗಳಲ್ಲಿಯೇ ದಿನದ ಇಪ್ಪತ್ತು ನಾಲ್ಕು ಗಂಟೆಯೂ ಫೇಸ್ಬುಕ್, ಟ್ವಿಟರುಗಳಲ್ಲೇ ‘ದೇಶಭಕ್ತಿ’ ತೋರುತ್ತಲೋ ಮಾತಾಡುವ ಇವರು ಗಡಿಯಲ್ಲಿ ಪ್ರಾಣ ಕೊಡುವ ಸೈನಿಕರಿಗಿಂತಲೂ ತಾವೇ ಹೆಚ್ಚು ಎಂಬಂತೆ ಆಡುತ್ತಿರುತ್ತಾರೆ.
ಭಾರತ ಎದುರಿಸುತ್ತಿರುವ ಈಗಿನ ಸನ್ನಿವೇಶದಲ್ಲಿ ಭಾರತದ ಗಡಿಯ ಒಳಗೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನ ಸೈನ್ಯದ ನಡವಳಿಕೆಗಳನ್ನು ಸೈನಿಕವಾಗಿಯೇ ಎದುರಿಸಬೇಕು. ನಿಜ. ಆದರೆ ಈ ಕೆಲಸವನ್ನು ಆವೇಶದಿಂದ ಮಾಡಿ ಮುಗಿಸಲು ಅದು ಟೀವಿ ಚಾನಲ್ ಗಳಲ್ಲಿ ನಿರೂಪಣೆ ಮಾಡುವ ಅಥವಾ ಫೇಸ್ಬುಕ್ ಟ್ವಿಟರುಗಳಲ್ಲಿ ಕಮೆಂಟ್ ಹಾಕುವ ಕೆಲಸ ಅಲ್ಲ. ನಮ್ಮ ಸೈನ್ಯ ತುಕಡಿಗಳು ಕೈಗೆತ್ತಿಕೊಳ್ಳು ಒಂದೊಂದು ನಡೆಯೂ ಮುಳ್ಳಿನ ಮೇಲಿನ ನಡಿಗೆಯಾಗಿರುತ್ತದೆ. ಹಾಗೆ ದೇಶಕ್ಕಾಗಿ ಹೋರಾಡುವ ಸಂದರ್ಭದಲ್ಲಿ ನಮ್ಮಂತೆಯೇ, ತಂದೆ, ತಾಯಿ. ಹೆಂಡತಿ, ಮಕ್ಕಳು, ಸೋದರ ಸೋದರಿಯರನ್ನು ಹೊಂದಿರುವ ಸೈನಿಕರು ತಮ್ಮ ಜೀವಗಳನ್ನೇ ಪಣಕ್ಕಿಡಬೇಕಾಗುತ್ತದೆ. ದೇಶಕ್ಕಾಗಿ ಏನು ಬೇಕಾದರೂ ಎದುರಿಸಲು ತಯಾರಿರುವ ಒಬ್ಬೊಬ್ಬ ಸೈನಿಕನ ಜೀವವೂ ಮುಖ್ಯವಾಗಿರುತ್ತದೆ. ಯುದ್ಧ ಘೋಷಿಸಿ, ಸರ್ಜಿಕಲ್ ಸ್ಟ್ರೈಕ್ ಮಾಡಿ, ಮತ್ತೊಂದು ದೇಶವನ್ನೇ ನಾಶ ಮಾಡಿಬಿಡಿ, ಹಾಗೆ ಮಾಡಿ, ಹೀಗೆ ಮಾಡಿ ಎಂದೆಲ್ಲಾ ಪುಗಸಟ್ಟೆ ಮಾತಾಡುವವರು ಕೇವಲ ಮಾತಾಡುವವರೇ ವಿನಃ ಗಡಿಯಲ್ಲಿ ನಿಂತು ಯುದ್ಧವನ್ನೇನೂ ಮಾಡುವವರಲ್ಲ. ಇಂತವರಿಗೆ ಕಣ್ಣು ತೆರೆಸುವ ರೀತಿಯಲ್ಲಿ ಕೆಲವರು ಅತ್ಯಂತ ಪ್ರಬುದ್ಧ ರೀತಿಯಲ್ಲಿ ತಿಳಿಹೇಳಿರುವುದನ್ನೂ ಕಾಣಬಹುದು. ಅಂತಹ ಮೂರು ಹೇಳಿಕೆಗಳನ್ನು ಇಲ್ಲಿ ಕೆಳಗೆ ನೀಡಲಾಗಿದೆ
ನಿವೃತ್ತ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೈನ್
ಭಾರತ ಸೈನ್ಯದಲ್ಲಿ ಥ್ರೀ ಸ್ಟಾರ್ ಗಳಿಸಿ ಲೆಫ್ಟಿನೆಂಟ್ ಜನರಲ್ ಆಗಿ, ಭಾರತೀಯ ಸೇನಾಪಡೆಯ ಮಿಲಿಟರಿ ಸೆಕ್ರೆಟೆರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೈನ್ ಅವರು ನೆನ್ನೆ ಪುಲ್ವಾಮಾ ಘಟನೆ ಆದಾಗಿನಿಂದಲೂ ಹಲವಾರು ಟ್ವೀಟ್ ಗಳನ್ನು ಬರೆದಿದ್ದಾರೆ. ಸೇನಾ ವಿಷಯಗಳ ಕುರಿತು ಅಪಾರ ಜ್ಞಾನ ಮತ್ತು ಅನುಭವ ಇರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಅತಾ ಹಸ್ನೈನ್ ಅವರು ಮಾಡಿರುವ ಒಂದು ಟ್ವಿಟ್ ನಲ್ಲಿ ಹೀಗೆ ಹೇಳಿದ್ದಾರೆ.

ಲೆಫ್ಟಿನೆಂಟ್ ಜನರಲ್ ಅತಾ ಹಸ್ನೈನ್
“ಭಾರತೀಯರಾಗಿ ನಮ್ಮೆಲ್ಲರಲ್ಲಿ ಈಗ ಆಕ್ರೋಶ ಮಡುಗಟ್ಟಿದೆ ಎಂಬುದು ನಿಜ ಮಾತ್ರವಲ್ಲ ಸಮರ್ಥನೀಯವೂ ಹೌದು. ಆದರೆ ನಮ್ಮ ಶತ್ರುಗಳಿಗೆ ಬೇಕಿರುವುದೂ ಕೂಡಾ ಅದೇ ಆಗಿದೆ. ಆವೇಶದಲ್ಲಿ ತೆಗೆದುಕೊಂಡ ತೀರ್ಮಾನಗಳು ಯಾವತ್ತೂ ತಿರುಗಿ ಹೊಡೆಯುತ್ತವೆ. ಇಲ್ಲಿ ನನ್ನ ಕೆಲಸ ಇಷ್ಟು- ನಿಮ್ಮೆಲ್ಲರ ಆಕ್ರೋಶ ಆವೇಶವನ್ನು ಗ್ರಹಿಸುವುದು ಹಾಗೂ ವಿವೇಕಯುತವಾಗಿ ಪರಿಹಾರ ಆಯ್ಕೆಗಳನ್ನು ನೀಡುವುದು. ಅದನ್ನು ನಾನು ನೆರವೇರಿಸದಿದ್ದರೆ ನನ್ನ 40 ವರ್ಷಗಳ ಸೇನಾ ಅನುಭವವೇ ಸುಳ್ಳಾಗುತ್ತದೆ’
ಲೆಫ್ಟಿನೆಂಟ್ ಜನರಲ್ ಅತಾ ಹಸ್ನೈನ್
ಇನ್ನು ವೀರಾವೇಶದಿಂದ ಮಾತಾಡುವವರಿಗೆ ಸೇನೆಯ ಪದಾತಿದಳದಲ್ಲಿ ಮುಂದಿನ ಸಾಲಿನಲ್ಲೇ ಬಿಡಬೇಕು ಎನ್ನುವ ರಾಹುಲ್ ಕುಡ್ವ ಹೇಳುವುದು ಹೀಗೆ:
‘ಈಗ ಪೂರ್ಣ ಪ್ರಮಾಣದ ಯುದ್ಧ ಅಥವಾ ಸರ್ಜಿಕಲ್ ಸ್ಟ್ರೈಕ್ ಗಳನ್ನು ನಡೆಸಬೇಕು ಎಂದು ಪುಕ್ಕಟೆ ಸಲಹೆ ನೀಡುತ್ತಿರುವವರನ್ನು ಮತ್ತು ಈ ವಿಷಯದಲ್ಲಿ ತಮ್ಮ ತಮ್ಮ ರಾಜಕೀಯ ಬೇಳೆಕಾಳು ಬೇಯಿಸಿಕೊಳ್ಳಲು ನೋಡುತ್ತಿರುವವರನ್ನು (ಅವರು ಯಾವುದೇ ಪಕ್ಷ ಸಿದ್ಧಾಂತದವರಾಗಿರಲಿ) ಸೈನ್ಯಕ್ಕೆ ಸೇರಿಸಿಕೊಂಡು, ಅವರನ್ನು ಫ್ರಂಟ್ ಲೈನ್ ಇನ್ಫೆಂಟ್ರಿ ಸೈನಿಕರಾಗಿ ಬಿಡಬೇಕು.
ನಮ್ಮ ಸೈನ್ಯದ ಮೇಲೆ ನಂಬಿಕೆ ಇಡೋಣ, ಅವರು ಯಾವಾಗ ಏನು ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ”
ರಾಹುಲ್ ಕುಡ್ವ

ವಿಕ್ರಂ ಒಬೆರಾಯ್
ವಿಕ್ರಂ ಒಬೆರಾಯ್ ಎಂಬುವವರು ಫೇಸ್ಬುಕ್ ನಲ್ಲಿ ಬರೆಯುತ್ತಾ ಹೀಗೆ ಹೇಳಿದ್ದಾರೆ.

“ನೆನ್ನೆ ನಡೆದ ದುರಂತಕ್ಕೆ ಪ್ರತಿಯಾಗಿ ಯುದ್ಧಕ್ಕೆ ಕರೆ ನೀಡುತ್ತಿದ್ದಾರೆ. ನಾನೊಬ್ಬ ಸೈನಿಕ ಕುಟುಂಬದಿಂದ ಬಂದು, ಯುದ್ಧ ಎಂದರೆ ಹೇಗಿರುತ್ತದೆ ಎಂಬುದನ್ನು ಹತ್ತಿರದಿಂದ ಕಂಡವನಾಗಿ ಹೇಳಬೇಕೆನಿಸುವುದೆಂದರೆ- ನಿಮಗೆ ನೀವು ಏನು ಮಾತಾಡ್ತಾ ಇದೀರಿ ಎಂಬ ಪರಿವೆಯೇ ಇಲ್ಲ. ಸೈನ್ಯ ಎನ್ನುವುದು ಸ್ವಿಚ್ ಹಾಕಿದ ಕೂಡಲೇ ಶತ್ರುಗಳನ್ನು ನಿರ್ನಾಮ ಮಾಡಿಬಿಡುವ ಯಂತ್ರವಾಗಿರುವುದಿಲ್ಲ. ಅದಕ್ಕೆ ತಂದೆಗಳು, ಸೋದರರು, ತಾಯಿಗಳು, ಸೋದರಿಯರು ಎಲ್ಲಾ ಇರುತ್ತಾರೆ. ನೀವಿರುವ ಮನೆಯಲ್ಲಿ ಸುಖಾಸೀನರಾಗಿ ಕುಳಿತು ನೀವು ಹೇಳಿಕೆಗಳಿಂದಷ್ಟೇ ನಮ್ಮ ವೀರ ಯೋಧರನ್ನು ಬೆಂಕಿಗೆ ನೂಕಲು ಎಡೆಮಾಡಲಾಗದು. ಬಹಳ ಮುಖ್ಯವಾಗಿ ಸೈನ್ಯಕ್ಕೆ ತನ್ನ ಜವಾಬ್ದಾರಿ ಏನೆಂದು ಚೆನ್ನಾಗಿ ಗೊತ್ತಿರುತ್ತದೆ. ಅದಕ್ಕೆ ಯಾವಾಗ ಹೇಗೆ ಭೀಕರ ದಾಳಿ ನಡೆಸಬೇಕೆಂಬುದೂ ತಿಳಿದಿರುತ್ತದೆ. ದಯಮಾಡಿ ನಿಮ್ಮ ಕೌಶಲ್ಯದ ಕಮೆಂಟುಗಳನ್ನು IPL ಮಟ್ಟಿಗಷ್ಟೇ ಸೀಮಿತ ಪಡಿಸಿಕೊಳ್ಳಿ, ಧನ್ಯವಾದಗಳು”
ವಿಕ್ರಂ ಒಬೆರಾಯ್

- ನರೇಂದ್ರ
Very heart touchable…. truth word’s said our soldiers….jai bheem jai Bharath