ಸಾಮಾಜಿಕ ಜಾಲತಾಣಗಳ ಶೂರರು, ಟಿವಿ ಸ್ಟುಡಿಯೋಗಳ ಪ್ರಕಾಂಡ ಪಂಡಿತರು, ತಮ್ಮ ಮನೆಯ ಟಿವಿ ಮುಂದೆ ಕೂತು ಯುದ್ಧ ಸಾರುವ ಧೀರರು, ಸೇರಿದಂತೆ ಬಹುತೇಕ ಎಲ್ಲರೂ ಈ ಹೊತ್ತಿನಲ್ಲಿ ಮರೆತಿರುವುದು; ಜಮ್ಮು ಕಾಶ್ಮೀರ ಎಂಬ ಕಣಿವೆ ರಾಜ್ಯದಲ್ಲಿ ಮಂಜುಹಾಸಿನ ರಸ್ತೆಗಳಲ್ಲಿ ಇನ್ನೂ ಗಲ್ಲಿ ಕ್ರಿಕೆಟ್ ಆಡುವ ವಯಸ್ಸಿನ ಹುಡುಗನೊಬ್ಬ ತನ್ನದೇ ಊರಿನಲ್ಲಿ ಸ್ಫೋಟಕ ತುಂಬಿದ ವಾಹನದೊಂದಿಗೆ ತನ್ನನ್ನೂ ಸ್ಫೋಟಿಸಿಕೊಂಡು ಇಂತಹದ್ದೊಂದು ಭೀಕರ ಆತ್ಮಾಹುತಿ ದಾಳಿಯನ್ನು ನಡೆಸಿದ್ದು ಯಾಕೆ? –
ಪುಲ್ವಾಮಾ ಉಗ್ರರ ಅಟ್ಟಹಾಸದ ಬಳಿಕ ದೇಶಾದ್ಯಂತ ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಹಿಂದಿರುವ ಪಾಕಿಸ್ತಾನದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹೀನಾಯ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂತಾಪಸಭೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟಿವಿ ಡಿಬೇಟುಗಳಲ್ಲಿ ಉಗ್ರರ ಹುಟ್ಟಡಗಿಸಲು ಕೂಡಲೇ ಭಾರತ ಪಾಕಿಸ್ತಾನದ ಮೇಲೆ ಯುದ್ಧ ನಡೆಸಬೇಕು, ಮತ್ತೊಂದು ಸುತ್ತಿನ ಸರ್ಜಿಕಲ್ ದಾಳಿ ನಡೆಸಬೇಕು. ಯೋಧರ ಹನಿ ಹನಿ ರಕ್ತಕ್ಕೂ ಪ್ರತೀಕಾರವಾಗಬೇಕು ಎಂಬ ಆಗ್ರಹಗಳು ಕೇಳಿಬರತೊಡಗಿವೆ.
ಈ ನಡುವೆ, ಯೋಧರ ಮೇಲಿನ ಇಂತಹದ್ದೊಂದು ಭೀಕರ ದಾಳಿಯ ಕುರಿತು ಮೊದಲೇ ಗುಪ್ತಚರ ಮಾಹಿತಿ ಇದ್ದರೂ ಅಗತ್ಯ ಮುಂಜಾಗ್ರತೆ ವಹಿಸದ ಲೋಪದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜಮ್ಮುಕಾಶ್ಮೀರದ ರಾಜ್ಯಪಾಲರೇ ಭದ್ರತಾ ಲೋಪವಾಗಿದೆ ಎಂದಿದ್ದಾರೆ. ಫೇಸ್ಬುಕ್ ಮತ್ತು ಟ್ವಿಟರ್ ಜಾಲತಾಣಗಳಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಇಂತಹ ಲೋಪಗಳನ್ನು ಪ್ರಶ್ನಿಸುವುದು, ಪ್ರಧಾನಿ ಮೋದಿಯವರನ್ನು ಪ್ರಶ್ನಿಸುವುದು ಇಡೀ ದೇಶದ ವಿರುದ್ಧವೇ ಮಾತನಾಡಿದಂತೆ, ದೇಶದ ವಿರುದ್ಧ ನಿಂತು ಉಗ್ರರ ಪರ ವಕಾಲತು ವಹಿಸಿದಂತೆ ಎಂಬಂತಹ ಉಗ್ರ ದೇಶಾಭಿಮಾನದ ವಾದಗಳೂ ಜೋರಾಗಿವೆ. ಜೊತೆಗೆ ಇಂತಹ ಪರ- ವಿರೋಧದ ನಿಲುವುಗಳಿಗೆ ತಕ್ಕಂತೆ ಸುಳ್ಳು ಸುದ್ದಿಗಳು, ಫೋಟೋಶಾಪ್ ಚಮತ್ಕಾರಗಳು, ಪೊಳ್ಳು ಭಕ್ತಿಯ ವರಸೆಗಳೂ ಪ್ರವಾಹವೋಪಾದಿಯಲ್ಲಿ ಸಾರ್ವಜನಿಕ ವಲಯ(ಸ್ಪೇಸ್)ಕ್ಕೆ ನುಗ್ಗಿವೆ.
ಭದ್ರತಾ ಲೋಪಗಳ ಬಗ್ಗೆ ಮಾತಿದ್ದರೆ, ಮೋದಿ ಸರ್ಕಾರದ ಅವಧಿಯ ಪಠಾಣ್ ಕೋಟ್, ಉರಿ ಮುಂತಾದ ಭೀಕರ ದಾಳಿಗಳ ಸಂದರ್ಭದ ಲೋಪಗಳ ಬಗ್ಗೆ ಪ್ರಶ್ನಿಸಿದರೆ, ಅಂತಹವರನ್ನೂ ಉಗ್ರರ ಜೊತೆ ನಿಲ್ಲಿಸಿ ಗುಂಡಿಕ್ಕಬೇಕು ಎಂಬ ಅತ್ಯುಗ್ರ ದೇಶಭಕ್ತಿಯ ವರಾತಗಳೂ ಕೇಳಿಬರುತ್ತಿವೆ.
ಆದರೆ, ಸಾಮಾಜಿಕ ಜಾಲತಾಣಗಳ ಶೂರರು, ಟಿವಿ ಸ್ಟುಡಿಯೋಗಳ ಪ್ರಕಾಂಡ ಪಂಡಿತರು, ತಮ್ಮ ಮನೆಯ ಟಿವಿ ಮುಂದೆ ಕೂತು ಯುದ್ಧ ಸಾರುವ ಧೀರರು, ಸೇರಿದಂತೆ ಬಹುತೇಕ ಎಲ್ಲರೂ ಈ ಹೊತ್ತಿನಲ್ಲಿ ಮರೆತಿರುವುದು; ಜಮ್ಮು ಕಾಶ್ಮೀರ ಎಂಬ ಕಣಿವೆ ರಾಜ್ಯದಲ್ಲಿ ಮಂಜುಹಾಸಿನ ರಸ್ತೆಗಳಲ್ಲಿ ಇನ್ನೂ ಗಲ್ಲಿ ಕ್ರಿಕೆಟ್ ಆಡುವ ವಯಸ್ಸಿನ ಹುಡುಗನೊಬ್ಬ ತನ್ನದೇ ಊರಿನಲ್ಲಿ ಸ್ಫೋಟಕ ತುಂಬಿದ ವಾಹನದೊಂದಿಗೆ ತನ್ನನ್ನೂ ಸ್ಫೋಟಿಸಿಕೊಂಡು ಇಂತಹದ್ದೊಂದು ಭೀಕರ ಆತ್ಮಾಹುತಿ ದಾಳಿಯನ್ನು ನಡೆಸಿದ್ದು ಯಾಕೆ? ಕಳೆದ ನಾಲ್ಕು ವರ್ಷಗಳಲ್ಲಿ ಕಾಶ್ಮೀರದಲ್ಲಿ ಇನ್ನೂ ಮೀಸೆ ಮೂಡದ ಹುಡುಗರು ಹೀಗೆ ಸಾಲುಸಾಲಾಗಿ ಉಗ್ರ ಸಂಘಟನೆ ಸೇರಿ ತಮ್ಮದೇ ಜನರ ವಿರುದ್ಧ ಬಂದೂಕು ಹಿಡಿದಿರುವುದು ಯಾಕೆ? ಅಲ್ಲಿ ದಿಢೀರನೇ ಈ ವರ್ಷಗಳಲ್ಲಿ ಆಗಿರುವ ಬದಲಾವಣೆ ಏನು? ಅಂತಹ ಬದಲಾವಣೆಗೆ ಹೊಣೆ ಯಾರು ಮತ್ತು ಮುಂದಿನ ಪರಿಹಾರವೇನು? ಎಂಬ ಅಸಲೀ ಸಂಗತಿಗಳನ್ನು.
ಲೋಕಸಭೆಯಲ್ಲಿ ಗೃಹ ಖಾತೆ ರಾಜ್ಯ ಸಚಿವರು ನೀಡಿದ ಮಾಹಿತಿಯ ಪ್ರಕಾರ, 2014ರಿಂದ 2018ರ ಅವಧಿಯಲ್ಲಿ ಜಮ್ಮುಕಾಶ್ಮೀರದಲ್ಲಿ ಉಗ್ರರ ದಾಳಿ ಪ್ರಮಾಣ ಶೇ.176ರಷ್ಟು ಹೆಚ್ಚಾಗಿದ್ದು, ಆ ಅವಧಿಯಲ್ಲಿ ಉಗ್ರರ ದಾಳಿಯಲ್ಲಿ ಭದ್ರತಾ ಪಡೆಗಳ ಸಾವಿನ ಪ್ರಮಾಣ ಶೇ.93ರಷ್ಟು ಏರಿಕೆಯಾಗಿದೆ. ಹಾಗೇ, ಜನಸಾಮಾನ್ಯರ ಸಾವಿನ ಸಂಖ್ಯೆ ಶೇ.35.71ರಷ್ಟು ಏರಿಕೆಯಾಗಿದ್ದರೆ, ಉಗ್ರರ ಹತ್ಯೆ ಪ್ರಮಾಣದಲ್ಲಿ ಶೇ.133.63ರಷ್ಟು ಏರಿಕೆಯಾಗಿದೆ ಎಂದು ‘ಇಂಡಿಯಾ ಟುಡೆ’ ವರದಿ ಹೇಳಿದೆ.
ಹಾಗೇ, 2016 ಮತ್ತು 2018ರ ಅವಧಿಯಲ್ಲಿ ಸುಮಾರು 400 ಉಗ್ರರು ಜಮ್ಮುಕಾಶ್ಮೀರದ ಒಳನುಸುಳಿದ್ದಾರೆ ಎಂಬುದನ್ನು ಕೂಡ ಸ್ವತಃ ಗೃಹ ಸಚಿವಾಲಯವೇ ಕೇವಲ ಎರಡು ದಿನಗಳ ಹಿಂದೆ(ಫೆ.13) ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ. ಅದರ ಪ್ರಕಾರ, 2018ರಲ್ಲಿ ಬರೋಬ್ಬರಿ 38 ಉಗ್ರರು ಒಳನುಸುಳಿದ್ದಾರೆ. ಹಾಗೆಯೇ, 2016ರ ಬಳಿಕ ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿಗಳು ದಿಢೀರ್ ಹೆಚ್ಚಾಗಿದ್ದು, 2016ರಲ್ಲಿ ಶೇ.54.8ರಷ್ಟು ಹೆಚ್ಚಳ ಕಂಡಿದ್ದ ದಾಳಿಗಳು, 2018ರಲ್ಲಿ ಶೇ.79.53 ರಷ್ಟು ಹೆಚ್ಚಾಗಿವೆ.
ಹಾಗೇ, ಆದಿಲ್ ಅಹಮದ್ ಮತ್ತು ಆತನ ವಯಸ್ಸಿನ ಶಿಕ್ಷಿತ ಯುವಕರು, ಆರ್ಥಿಕವಾಗಿಯೂ ಅನುಕೂಲಸ್ಥ ಕುಟುಂಬಗಳ ಹಿನ್ನೆಲೆಯಿಂದ ಬಂದವರು, ಯಾಕೆ ಹೀಗೆ ತಮ್ಮದೇ ಜೀವ ಪಣಕ್ಕಿಟ್ಟು ಆತ್ಮಾಹುತಿ ಪಡೆ(ಫಿದಾಯಿನ್)ಗಳಿಗೆ ಸೇರುತ್ತಿದ್ದಾರೆ? 2015ರಲ್ಲಿ ಬುಹ್ರಾನ್ ವಾನಿ ಎಂಬ ಹದಿಹರೆಯದ ಯುವಕ, ಕಾಶ್ಮೀರ ವಲಯದಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರರ ಪಡೆಯ ಕಮಾಂಡರ್ ಆಗುವ ಮಟ್ಟಿಗೆ ಬೆಳೆದಿದ್ದೇ ಅಲ್ಲದೆ, ಆತ ಕಣಿವೆ ರಾಜ್ಯದ ಯುವ ಜನತೆಯ ಪಾಲಿಗೆ ಪೋಸ್ಟರ್ ಬಾಯ್ ಆಗಿಬಿಟ್ಟಿದ್ದೇಕೆ? ಆತನ ಎನ್ ಕೌಂಟರ್ ಬಳಿ ಇಡೀ ಕಾಶ್ಮೀರ ಕಣಿವೆ ತಿಂಗಳುಗಟ್ಟಲೆ ಹೊತ್ತಿ ಉರಿದಿದ್ದು ಯಾಕೆ? ಒಬ್ಬ ಉಗ್ರನ ಸಾವನ್ನು ಮುಂದಿಟ್ಟುಕೊಂಡು ಕಣಿವೆಯ ಜನ ನಮ್ಮ ಭದ್ರತಾ ಪಡೆ ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದು ಏಕೆ?
ತಿಂಗಳುಗಳ ಕಾಲ ಕರ್ಫ್ಯೂ ಹೇರಿದರೂ ಕಾಶ್ಮೀರದ ಸ್ಥಿತಿ ಸಹಜತೆಗೆ ಬರಲಿಲ್ಲ. ಅಲ್ಲದೆ, 2015ರಿಂದ 2018ರ ಅವಧಿಯಲ್ಲಿ ಕಾಶ್ಮೀರ ವಲಯದಲ್ಲಿ ದಿಢೀರನೇ ಮನೆಬಿಟ್ಟು ಹೋಗಿ ಉಗ್ರ ಸಂಘಟನೆ ಸೇರಿಕೊಳ್ಳುವ ಹದಿಹರೆಯದ ಯುವಕರ ಸಂಖ್ಯೆ ಭಾರೀ ಏರಿಕೆ ಕಂಡಿತು. ಪ್ರತಿ ವರ್ಷ ನೂರಾರು ಯುವಕರು ಮನೆ ತೊರೆದು ಹೀಗೆ ಏಕಾಏಕಿ ಭಯೋತ್ಪಾದಕರಾಗಿ ಮತ್ತೆ ತಾವೇ ಆಡಿ, ಓಡಿ ಬೆಳೆದ ಬೀದಿಗಳಲ್ಲೇ ಗನ್ನು ಹಿಡಿದು ರಕ್ತದ ಕೋಡಿಹರಿಸತೊಡಗಿದ್ದಾರೆ. ಇದು ಕಾಶ್ಮೀರ ಕಣಿವೆಯಲ್ಲಿ 90ರ ದಶಕದ ಬಳಿಕ, ಹೊಸ ಬಗೆಯಲ್ಲಿ ಮರುಕಳಿಸುತ್ತಿರುವ ಹೊಸ ವರಸೆ. ಇದೀಗ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ತಂತ್ರಜ್ಞಾನ, ಇಂಟರ್ನೆಟ್ ನಂತಹ ತಂತ್ರಜ್ಞಾನದೊಂದಿಗೆ, ಆಳುವ ಸರ್ಕಾರ ಮತ್ತು ಭದ್ರತಾ ಪಡೆಗಳ ನೀತಿ-ನಡೆಗಳಿಂದ ರೋಸಿದ ಕೆಲವು ಸ್ಥಳೀಯ ಜನಸಾಮಾನ್ಯರ ಬೆಂಬಲವೂ ಅಂತಹ ಕೃತ್ಯಗಳಿಗೆ ಒದಗಿಬಂದಿದೆ.
ಹಾಗಾಗಿ, ಈಗಿನ ಸವಾಲು ಸಂಕೀರ್ಣ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಸದ್ಯ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಸುಮಾರು 350ಕ್ಕೂ ಹೆಚ್ಚು ಉಗ್ರರು ಕಾರ್ಯನಿರ್ವಹಿಸುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ಅವರು ಅಲ್ಲಿ ಬೀಡುಬಿಟ್ಟಿದ್ದಾರೆ. ಅಂದರೆ, ಸ್ಥಳೀಯರ ಬೆಂಬಲವಿಲ್ಲದೆ, ಇಷ್ಟೊಂದು ಪ್ರಮಾಣದ ಉಗ್ರರು ಇಷ್ಟು ದೀರ್ಘಕಾಲ ಅಲ್ಲಿ ಅನಾಯಾಸವಾಗಿ ತಮ್ಮ ಕೃತ್ಯಗಳನ್ನು ಎಸಗಲು ಸಾಧ್ಯವೇ? ಎಂಬ ಪ್ರಶ್ನೆ ಕಾಡದೇ ಇರದು.
ಆ ಹಿನ್ನೆಲೆಯಲ್ಲಿ ಒಂದು ಕಡೆ ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಮತ್ತು ಸೇನಾ ಒತ್ತಡ ಹೇರುವ ಜೊತೆಜೊತೆಗೆ, ಕಣಿವೆಯ ಜನರನ್ನು ವಿಶ್ವಾಸಕ್ಕೆ ಪಡೆಯುವ, ಯುವಕರು ಹಾದಿತಪ್ಪದಂತೆ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ನೀತಿನಿರೂಪಣೆ ರೂಪಿಸುವ ಪ್ರಯತ್ನಗಳೂ ಆಗಬೇಕಿದೆ. ಎಲ್ಲಕ್ಕೂ ಅಗತ್ಯವಾಗಿ, ರಾಜಕೀಯ ಮೇಲಾಟವನ್ನು ಬದಿಗಿಟ್ಟು ಶಾಪಗ್ರಸ್ಥ ರಾಜ್ಯದಲ್ಲಿ ಆದಷ್ಟು ಬೇಗ ಚುನಾವಣೆ ನಡೆಸಿ, ಜನರಿಂದ ಆಯ್ಕೆಯಾದ ಸರ್ಕಾರವನ್ನು ಸ್ಥಾಪಿಸಬೇಕಿದೆ.