ಕಾಶ್ಮೀರದ ಪುಲ್ವಾಮಾ ಉಗ್ರ ಬಾಂಬ್ ದಾಳಿಯಲ್ಲಿ ಹುತಾತ್ಮರಾದ 42 ಮಂದಿ ವೀರಯೋಧರ ಪೈಕಿ ಕರ್ನಾಟಕದ ಯೋಧರಾದ ಎಚ್ ಗುರು ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಮಂಡ್ಯದ ಕೆ.ಎಂ.ದೊಡ್ಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು .
ಕೆ.ಎಂ.ದೊಡ್ಡಿ/ಮಂಡ್ಯ: ಫೆ. 14ರಂದು ಉಗ್ರರ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ ಬಲಿಯಾದ CRPFನ 42 ಯೋಧರ ಪೈಕಿ ಕರ್ನಾಟಕದವರಾದ ಮಂಡ್ಯದ ಎಚ್. ಗುರು ಅವರ ಪಾರ್ಥಿವ ಶರೀರವು ಇಂದು ಸಂಜೆ 7 ಗಂಟೆಯ ಸುಮಾರಿಗೆ ಗುರು ಅವರ ಹುಟ್ಟೂರನ್ನು ತಲುಪಿತು. ಹುತಾತ್ಮ ಗುರು ಅವರಿಗೆ ಅಂತಿಮ ನಮನ ಸಲ್ಲಿಸಲೆಂದು ಸಹಸ್ರಾರು ಜನರು ನೆರೆದಿದ್ದರು. ಕೆ.ಎಂ ದೊಡ್ಡಿ ಬಳಿಯ ಮೆಳ್ಳೆಹಳ್ಳಿಯಲ್ಲಿ ಮಂಡ್ಯ ಜಿಲ್ಲಾಡಳಿತತವು ಗುರುತಿಸಿ ನಿಗದಿಪಡಿಸಿದ ಜಾಗದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ರಾಜ್ಯದ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವನ ಸಲ್ಲಿಸಿದರು. ಇವರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಸಾ.ರಾ. ಮಹೇಶ್, ದಿನೇಶ್ ಗುಂಡೂರಾವ್. ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಚಿತ್ರ ನಟರಾದ ದೊಡ್ಡಣ್ಣ, ಪ್ರಕಾಶ್ ರಾಜ್, ಮತ್ತು ಅನೇಕ ಗಣ್ಯರು, ನಟರು, ಮಠಾದೀಶರು ಗುರುವಿನ ಪಾರ್ಥಿವ ಶರೀರಕ್ಕೆ ಪುಷ್ಟನಮನ ಸಲ್ಲಿಸಿ ಗೌರವ ಸಲ್ಲಿಸಿದರು. ಪೊಲೀಸ್ ಪಡೆಗಳು ಮೂರು ಬಾರಿ ಕುಶಾಲ ತೋಪು ಗುಂಡು ಹಾರಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗುರು ಅವರ ಪತ್ನಿ ಸಹ ಸೆಲ್ಯೂಟ್ ವಂದನೆ ಸಲ್ಲಿಸಿದರು.

ಮುಖ್ಯಂಮತ್ರಿ ಎಚ್. ಡಿ. ಕುಮಾರ ಸ್ವಾಮಿಯವರು ಗುರು ಅವರ ಪಾರ್ಥೀವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನ ಗುರು ಪತ್ನಿ ಕಲಾವತಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಟುಂಬದವರನ್ನು ಕರೆದು ಸಮಾಲೋಚಿಸಿದ ಮುಖ್ಯಮಂತ್ರಿಗಳು ಪರಿಹಾರ ಮೊತ್ತವಾಗಿ ರೂ. 25 ಲಕ್ಷಗಳ ಚೆಕ್ ನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಗುರು ಅವರ ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗ ನೀಡುವ ವಾಗ್ದಾನವನ್ನೂ ನೀಡಿದರು.

ಮಡಿವಾಳ ಸಮುದಾಯದ ವಿಧಿ ವಿಧಾನಗಳೊಂದಿಗೆ ರಾತ್ರಿ 9 ಗಂಟೆಯ ಸುಮಾರಿಗೆ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಬಸವಣ್ಣ ಅವರ ವಚನಗಳನ್ನು ಹೇಳಲಾಯಿತು.
ಇಂದು ಹುತಾತ್ಮ ಗುರುವ ಅವರಿಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ ದೂರದ, ಅಕ್ಕಪಕ್ಕದ ಊರುಗಳಿಂದ ಜನಸಾಗರವೇ ಸೇರಿತ್ತು. ಹುತಾತ್ಮ ಗುರು ಅಮರವಾಗಲಿ ಎಂಬ ಘೋಷಣೆಗಳು ಮೊಳಗಿದವು. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅನೇಕ ಯೋಧರ ಕಳೇಬರಗಳು ಗುರುತು ಹಿಡಿಯುವುದೂ ಅಸಾಧ್ಯವಾದ ಹಿನ್ನೆಲೆಯಲ್ಲಿ ಗುರು ಅವರ ಮುಖವನ್ನು ಕೊನೆ ಬಾರಿಗೆ ನೋಡುವ ಆಸೆ ಕುಟುಂಬದವರಿಗೆ ಕೈಗೂಡಲೇ ಇಲ್ಲ ಎನ್ನುವುದು ದುಃಖಕರ ಸಂಗತಿ. ದಾಳಿಯಲ್ಲಿ ಗುರು ಮಡಿದ ವಿಷಯ ಸಿಡಿಲಿನಂತೆ ಬಂದೆರಗಿದಾಗಿನಿಂದಲೂ ದುಃಖದ ಕಡಲಲ್ಲಿ ಮುಳುಗಿರುವ ಗುರು ಕುಟುಂಬದವರ, ಬಂಧುಗಳ ದುಃಖ ಹೇಳತೀರದಾಗಿತ್ತು.
ಚಿಕ್ಕ ವಯಸ್ಸಿನಿಂದಲೇ ಯೋಧನಾಗುವ ಕನಸು ಕಂಡಿದ್ದ ಎಚ್. ಗುರು ತನ್ನ ಕನಸಿನಂತೆಯೇ ಯೋಧನಾಗಿ, ದೇಶವನ್ನು ರಕ್ಷಿಸು ಕಾರ್ಯದಲ್ಲಿ ಉಗ್ರರ ದಾಳಿಗೆ ಬಲಿಯಾಗಿ ಹುತಾತ್ಮನಾಗಿ ಇಂದು ಅವರ ದೇಹ ಪಂಚಭೂತಗಳಲ್ಲಿ ಲೀನವಾಯಿತು. ನಾಡಿನ ಜನರ ಹೃದಯದಲ್ಲಿ ಗುರು ಅಜರಾಮರರಾದರು.
TruthIndia