NSSO ಕೇಂದ್ರ ಸರ್ಕಾರದ ಸಚಿವಾಲಯದ ಒಂದು ಸಂಸ್ಥೆಯಾಗಿದ್ದು ಅದು ನೀಡಿರುವ ಅಧಿಕೃತ ವರದಿಯನ್ನೇ ಒಂದು “ಫೇಕ್ ನ್ಯೂಸ್” ಎಂದಿರುವ ಸ್ಮೃತಿ ಇರಾನಿಯವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ದೇಶದಲ್ಲಿರುವ ನಿರುದ್ಯೋಗದ ಪ್ರಮಾಣದ ಕುರಿತು ಸಿದ್ಧವಾಗಿದ್ದ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (NSSO) ವರದಿಯು ‘ಫೇಕ್ ನ್ಯೂಸ್’ ಹರಡುವುದಕ್ಕೆ ಒಂದು ಉದಾಹರಣೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಅವರು ಇಂದು ದೆಹಲಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮೇಲಿನಂತೆ ಹೇಳಿಕೆ ನೀಡಿದ್ದಾರೆ.
ಶ್ರೀರಾಮ್ ಕಾಲೇಜ್ ಆಫ್ ಬಿಸ್ನೆಸ್ ಕಾನ್ಕ್ಲೇವ್ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು NSSO ವರದಿ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಇರಾನಿಯವರು ಈ ರೀತಿ ಉತ್ತರಿಸುತ್ತಾ, ‘ನೀವು ಈ ಪ್ರಶ್ನೆ ಕೇಳಿದ್ದು ಸಂತೋಷ… ‘ಫೇಕ್ ನ್ಯೂಸ್’ ಮೂಲಕ ಹೇಗೆಲ್ಲಾ ಜನರ ನಡುವೆ ಮಾಹಿತಿ ತಿರುಚಲಾಗುತ್ತದೆ ಎಂದು ನನಗೆ ನಿಮ್ಮ ಪ್ರಶ್ನೆಯ ಮೂಲಕ ಅರಿವಿಗೆ ಬಂತು’’ ಎಂದು ಉತ್ತರಿಸಿದ್ದಾರೆ.
NSSO ಕೇಂದ್ರ ಸರ್ಕಾರದ ಸಚಿವಾಲಯದ ಒಂದು ಸಂಸ್ಥೆಯಾಗಿದ್ದು ಅದು ನೀಡಿರುವ ಅಧಿಕೃತ ವರದಿಯನ್ನೇ ಒಂದು “ಫೇಕ್ ನ್ಯೂಸ್” ಎಂದಿರುವ ಸ್ಮೃತಿ ಇರಾನಿಯವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
NSSO ವರದಿಯಲ್ಲಿ ಇದ್ದಿದ್ದಾದರೂ ಏನು? ವಿವಾದ ಸೃಷ್ಟಿಸಿದ್ದಾದರೂ ಯಾಕೆ?
ದೇಶದಲ್ಲಿ 2017-18ರ ಆರ್ಥಿಕ ವರ್ಷದಲ್ಲಿ ದಾಖಲಾಗಿರುವ ನಿರುದ್ಯೋಗ ಪ್ರಮಾಣವು ಕಳೆದ ನಾಲ್ಕು ದಶಕಗಳಲ್ಲೇ ಅತಿ ಹೆಚ್ಚಿನ ಮಟ್ಟದಲ್ಲಿ (6.1%) ಏರಿದೆ ಎಂಬ ಸಂಗತಿಯನ್ನು ರಾಷ್ಟ್ರೀಯ ಸಮೀಕ್ಷಾ ಆಯೋಗದ ವರದಿ ಹೊರಗೆಡವಿದೆ. 15 ರಿಂದ 29 ವರ್ಷಗಳ ವಯೋಮಾನದ ಯುವಕರು ಅತಿ ಹೆಚ್ಚು ಸಂಖ್ಯೆಯಲ್ಲಿ ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಹೆಚ್ಚೆಚ್ಚು ಸಂಖ್ಯೆಯಲ್ಲಿ ಶಿಕ್ಷಿತರು ಹೊರಬರುತ್ತಿದ್ದರೂ ಉದ್ಯೋಗಗಳ ಪ್ರಮಾಣ ಗಾಬರಿ ಎನಿಸುವ ಮಟ್ಟದಲ್ಲಿ ಕಡಿತವಾಗಿರುವ ಕುರಿತ ಅಂಕಿ ಅಂಶಗಳು ವರದಿಯಲ್ಲಿವೆ ಎಂದು ಎಂದು ಬಿಸ್ನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.
ಈ ಸಮೀಕ್ಷಾ ವರದಿಯನ್ನು ಸರ್ಕಾರವು ತಿರಸ್ಕರಿಸಿದ್ದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. NSSO ಸಮೀಕ್ಷಾ ವರದಿಗಳು ಪ್ರತಿ ಐದು ವರ್ಷಗಳಿಗೊಮ್ಮೆ ಬಿಡುಗಡೆಯಾಗುತ್ತವೆ. ನೀತಿ ಆಯೋಗವು ಈ ವರದಿಗಳ ಕುರಿತು ಒಂದು ಕಾರ್ಯಪಡೆಯನ್ನು ರಚಿಸಿದ್ದು, ಆ ಕಾರ್ಯಪಡೆಯು ಈ ಐದು ವರ್ಷದ ವರದಿಗೆ ವ್ಯತಿರಿಕ್ತ ಶಿಫಾರಸುಗಳನ್ನು ನೀಡಿದೆ.
ಕೇಂದ್ರ ಸರ್ಕಾರವು ವರದಿಯನ್ನು ಬಿಡುಗಡೆ ಮಾಡದಿರುವ ಕ್ರಮವನ್ನು ಖಂಡಿಸಿ ರಾಷ್ಟ್ರೀಯ ದತ್ತಾಂಶ ಆಯೋಗದ ಇಬ್ಬರು ಸರ್ಕಾರೇತರ ಸದಸ್ಯರು (ಪಿ.ಸಿ. ಮೋಹನನ್ ಹಾಗೂ ಪ್ರೊ.ಜೆ.ವಿ. ಮೀನಾಕ್ಷಿ) ಜನವರಿ 27ರಂದು ರಾಜೀನಾಮೆ ನೀಡಿದ್ದರು. ನಂತರದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆಯೋಗದ ಅಧ್ಯಕ್ಷರಾಗಿದ್ದ ಪಿ.ಸಿ.ಮೋಹನನ್, “ನಿರುದ್ಯೋಗದ ಕುರಿತ ರಾಷ್ಟ್ರೀಯ ಸಮೀಕ್ಷೆಯನ್ನು ಡಿಸೆಂಬರ್ 2018ರಲ್ಲಿ ಬಿಡುಗಡೆಗೊಳಿಸಬೇಕಿತ್ತು. ಆದರೆ ಬಿಡುಗಡೆಯಾಗದಂತೆ ತಡೆಯಲಾಗಿದೆ. ಜನವರಿ 2019ರಲ್ಲಿ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದ್ದೆವು. ಆದರೆ ಇಲಾಖೆಯ ಜಾಲತಾಣದಲ್ಲಿ ಈ ವರದಿಯನ್ನು ಪ್ರಕಟಿಸಿಲ್ಲ. ನಮ್ಮ ಮಾತಿಗೆ ಬೆಲೆ ನೀಡದೇ ಕಡೆಗಣಿಸಲಾಗುತ್ತಿದೆ. ನಮ್ಮ ಹುದ್ದೆಯಲ್ಲಿ ಕುಳಿತು ನಮ್ಮ ಕರ್ತವ್ಯಗಳನ್ನು ನಿಭಾಯಿಸಲು ನಮಗೆ ಸಾಧ್ಯವಾಗದಿರುವುದೇ ನಮ್ಮ ರಾಜೀನಾಮಗೆ ಕಾರಣವಾಗಿದೆ’ ಎಂದು ತಿಳಿಸಿದ್ದರು.

ಪಿ.ಸಿ.ಮನಮೋಹನ್ ಹಾಗೂ ಪ್ರೊ.ಜೆ.ವಿ. ಮೀನಾಕ್ಷಿ
ದೇಶದ ಆರ್ಥಿಕತೆಗೆ ಸಂಬಂಧಿಸಿದ ಸಂಗತಿಗಳ ಕುರಿತು ಸಮೀಕ್ಷೆ ನಡೆಸಿ, ಅಂಕಿ ಅಂಶ ಸಂಗ್ರಹಿಸಿ ವರದಿ ಸಿದ್ಧಪಡಿಸುವ ಸಂಸ್ಥೆಗಳಾದ ಕೇಂದ್ರ ದತ್ತಾಂಶ ಕಚೇರಿ (CSO) ಹಾಗೂ NSSOಗಳಿಗೆ ಸಹಾಯಕವಾಗಿ ಕೇಂದ್ರ ದತ್ತಾಂಶ ಆಯೋಗವನ್ನು ಒಂದು ಸ್ವಾಯತ್ತ ಸಂಸ್ಥೆಯಾಗಿ ಕೇಂದ್ರ ಸರ್ಕಾರವು 2005ರಲ್ಲಿ ಸ್ಥಾಪಿಸಿತ್ತು. ಆರ್ಥಿಕ ತಜ್ಞ ಎಸ್ ರಂಗರಾಜನ್ ವರದಿಯ ಆಧಾರದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಎರಡೂ ಸಂಸ್ಥೆಗಳು ತಯಾರಿಸುವ ವರದಿಗಳಿಗೆ ಅಂತಿಮ ಅಂಗೀಕರಾರ ನೀಡುವ ಅಧಿಕಾರವನ್ನು ಈ ಆಯೋಗವು ಹೊಂದಿರುತ್ತದೆ.
ಪ್ರಸ್ತುತ ದೇಶದಲ್ಲಿರುವ ನಿರುದ್ಯೋಗದ ಕುರಿತಾದ NSSO ವರದಿಯನ್ನು ಆಯೋಗವು ಅಂಗೀಕರಿಸಿದ್ದು ಅದನ್ನು ಜಾಲತಾಣದಲ್ಲಿ ಪ್ರಕಟಿಸುವುದಷ್ಟೇ ಬಾಕಿಯಿತ್ತು. ಈ ಹಂತದಲ್ಲಿ ವರದಿಯ ಪ್ರಕಟಣೆಯನ್ನು ಸರ್ಕಾರವು ತಡೆದಿದೆ. NSSO ವರದಿಯು ಕೇವಲ ಕರಡು ದಾಖಲೆಯಾಗಿತ್ತು ಎಂದು ಸಚಿವರು ಹೇಳಲಾರಂಭಿಸಿದ್ದಾರೆ. ಆದರೆ ಆಯೋಗದ ಅಧ್ಯಕ್ಷರಾಗಿದ್ದ ಮನಮೋಹನ್ ಈ ಹೇಳಿಕೆಗಳನ್ನು ಬಲವಾಗಿ ಅಲ್ಲಗಳೆಯುತ್ತಾರೆ.

“NSSO ಸಿದ್ಧಪಡಿಸಿದ್ದ ವರದಿಯ ಕರಡನ್ನು ಆಯೋಗವು ಅಂಗೀಕರಿಸಿದೆ. ಒಮ್ಮೆ ಆಯೋಗವು ವರದಿಗೆ ಒಪ್ಪಿಗೆ ನೀಡಿ, ಸಹಿ ಹಾಕಿದ ಮೇಲೆ ಅದು ಕರಡು ಎನಿಸಿಕೊಳ್ಳುವುದಿಲ್ಲ. ಅದೇ ಅಂತಿಮ ವರದಿಯಾಗಿರುತ್ತದೆ. ಅದನ್ನು ಕರಡು ಎಂದು ಹೇಳಲು ಹೇಗೆ ಸಾಧ್ಯ?’
ಪಿ.ಸಿ.ಮೋಹನನ್ , ರಾಷ್ಟ್ರೀಯ ದತ್ತಾಂಶ ಆಯೋಗದ ಮಾಜಿ ಅಧ್ಯಕ್ಷರು
ರಾಷ್ಟ್ರೀಯ ದತ್ತಾಂಶ ಆಯೋಗವು ಸಿದ್ಧಪಡಿಸಿದ ವರದಿಯಲ್ಲಿ ದೇಶದ ನಿರುದ್ಯೋಗದ ಕುರಿತು ದಾಖಲಾಗಿರುವ ಸಮೀಕ್ಷೆಯ ಅಂಕಿ ಅಂಶಗಳು ಕೇಂದ್ರ ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಸರ್ಕಾರ ಸಚಿವಾಲಯದ ಅಡಿ ಕೆಲಸ ಮಾಡುವ ಈ ಅಧಿಕೃತ ವರದಿಯನ್ನು ಕೇಂದ್ರ ಮಂತ್ರಿಗಳೇ ‘ಫೇಕ್’ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಕೇಂದ್ರ ಸಚಿವ ಸದಾನಂದ ಗೌಡ ಅವರೂ ಸಹ ಈ ವರದಿ ಒಂದು ಫೇಕ್ ವರದಿ ಎಂದು ಪ್ರತಿಕ್ರಿಯಿಸಿದ್ದನ್ನು ಸ್ಮರಿಸಬಹುದು.