ದೇಶವನ್ನೇ ತಲ್ಲಣಗೊಳಿಸಿದ ಪುಲ್ವಾಮಾ ಬಾಂಬ್ ದಾಳಿಯಲ್ಲಿ 42 ಮಂದಿ ವೀರಯೋಧರು ಹುತಾತ್ಮರಾದ ಘಟನೆ ಎಲ್ಲಾ ಭಾರತೀಯರಲ್ಲಿ ದುಃಖವನ್ನುಂಟು ಮಾಡಿದೆ. ಇದಕ್ಕೆ ಕಾರಣರಾದವ ಕುರಿತು ಆಕ್ರೋಶ ತರಿಸಿದೆ. ಆದರೆ ಇದೇ ವೇಳೆಗೆ ಈ ಘಟನೆಯನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ದುರುಪಯೋಗಪಡಿಸಿಕೊಳ್ಳಲು ಹೊಂಚು ಹಾಕಿ ಮತಾಂಧ ಶಕ್ತಿಗಳು ದೇಶದ ನಾನಾ ಕಡೆಗಳಲ್ಲಿ ಕಾಶ್ಮೀರದ ಪ್ರಜೆಗಳನ್ನು ಹಿಂಸಿಸಲು ತೊಡಗುತ್ತಿರುವ ಘಟನೆಗಳು ನಡೆದಿವೆ. ಆದರೆ ಮತಾಂಧ ಶಕ್ತಿಗಳ ಇಂತಹ ಹೇಡಿತನದ ನೀಚ ಕೆಲಸಗಳಿಗೆ ಪ್ರತ್ಯುತ್ತರವೆಂಬಂತೆ ದೇಶದ ಹೆಮ್ಮೆಯ ಪೊಲೀಸ್ ಪಡೆಯಾದ CRPF ಮಿಂಚಿನ ಗತಿಯಲ್ಲಿ ಕಾಶ್ಮೀರಿಗಳಿಗೆ ಸಹಾಯವಾಣಿಯನ್ನು ಆರಂಭಿಸಿದೆ.
CRPF ಆರಂಭಿಸಿರುವ ಈ 24X7 ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 14411 ಅಥವಾ 7082814411 ಸಂಖ್ಯೆಗೆ ಎಸ್ ಎಂ ಎಸ್ ಕಳಿಸಿ ಸಹಾಯ ಪಡೆಯುವ ಸೌಲಭ್ಯವನ್ನು ಕಲ್ಪಿಸಿದೆ. ‘ಕಾಶ್ಮೀರದಿಂದ ಹೊರಗಡೆ ದೇಶದ ಯಾವುದೇ ಭಾಗದಲ್ಲಿ ವಾಸಿಸುವ ಕಾಶ್ಮೀರಿ ಪ್ರಜೆಗಳು ತಮ್ಮ ಮೇಲೆ ಯಾವುದೇ ಬಗೆಯ ಕಿರುಕುಳ ಅಥವಾ ತೊಂದರೆ ಉಂಟಾದರೆ CRPF ಮದದ್ಗಾರ್ ಆರಂಭಿಸಿರುವ ಈ ವಿಶೇಷ ಸಹಾಯವಾಣಿಯ ಸಹಾಯ ಪಡೆಯಬಹುದು ಎಂದು ಪ್ರಕಟಿಸಿದೆ. ಸಿಆರ್ಪಿಎಫ್ ಈ ಕುರಿತು ಟ್ವಿಟರ್ ಮೂಲಕವೂ ಜಾಹೀರಾತು ನೀಡಿದೆ.
ಮತಾಂಧರಿಂದ ಕಾಶ್ಮೀರಿ ಪ್ರಜೆಗಳ ಮೇಲೆ ಹಲ್ಲೆ
ಪುಲ್ವಾಮಾ ಉಗ್ರರ ದಾಳಿಗೆ ಭಾರತವು ಕೂಡಲೇ ಪ್ರತಿಕಾರ ಪಡೆಯಬೇಕು ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಮುಖ್ಯವಾಗಿ ಮಾಧ್ಯಮಗಳು ಒಂದು ಬಗೆಯ ಯುದ್ಧೋನ್ಮಾದದ ಮನಸ್ಥಿತಿಯನ್ನು ರೂಪಿಸುವಲ್ಲಿ ಯಶಸ್ವಿಯಾಗಿವೆ. ಭಾರತ ದೇಶದ ಸೈನ್ಯವು ಬಲಿಷ್ಠವಾಗಿದ್ದು ತನ್ನ ಮೇಲೆ ನಡೆಯುವ ಯಾವುದೇ ದಾಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಿಂದಲೂ ಪ್ರದರ್ಶಿಸಿದೆ. ಮುಂದೆಯೂ ಅದು ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಉಗ್ರರ ದಾಳಿಗೆ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರಿಗೆ ಉತ್ತರಿಸಲಿದೆ. ಆದರೆ ದೇಶದಲ್ಲಿ ಅನೇಕ ಮತಾಂಧ ಶಕ್ತಿಗಳು ಇಂತಹ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳದೇ ಕಂಡ ಕಂಡವರ ಮೇಲೆ ಪ್ರತೀಕಾರದ ಹುಯಿಲೆಬ್ಬಿಸುತ್ತಿವೆ. ಇದು ಎಂತಹ ಅತಿರೇಕದ ಸ್ಥಿತಿ ಮುಟ್ಟಿದೆ ಎಂದರೆ ನೆನ್ನೆ ಉತ್ತರಾಖಂಡ, ಬಿಹಾರ, ದೆಹಲಿ ಮುಂತಾದ ಕಡೆಗಳಲ್ಲಿ ‘ಕಾಶ್ಮೀರ ಮೂಲದ ವಿದ್ಯಾರ್ಥಿಗಳನ್ನು, ವ್ಯಾಪಾರಿಗಳನ್ನು ಹುಡುಕಿ ಹುಡುಕಿ ಹಲ್ಲೆ ನಡೆಸುವ, ಬೆದರಿಕೆ ಒಡ್ಡುವ ಮಟ್ಟಕ್ಕೆ ತಲುಪಿದೆ. ಹಾಗಾದರೆ ಕಾಶ್ಮೀರದ ಈ ಸಾಮಾನ್ಯ ಜನತೆ ಮಾಡಿರುವ ತಪ್ಪಾದರೂ ಏನು? ಯಾರೋ ಮಾಡುವ ತಪ್ಪಿಗೆ ಎಲ್ಲಾ ಕಾಶ್ಮೀರಿಗಳನ್ನು ಶಿಕ್ಷಿಸಬೇಕೆನ್ನುವ ಮನಸ್ಥಿತಿಯಾದರೂ ಎಷ್ಟು ಕ್ರೂರವಲ್ಲವೇ?
ಜಮ್ಮುವಿನಲ್ಲಿ ಮತಾಂಧರು ಕಾಶ್ಮೀರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ತಿ ಪಾಸ್ತಿಗಳನ್ನು ನಾಶ ಮಾಡಿದ್ದಾರೆ. ಹಾಗೆಯೇ ಉತ್ತರಾಖಂಡದ ಡೆಹ್ರಾಡೂನಿನಲ್ಲಿ ಭಜರಂಗದಳ ಮತ್ತು ವಿಎಚ್ಪಿಗೆ ಸೇರಿದ ಗೂಂಡಾಗಳು ಕಾಶ್ಮೀರದ 12 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಕೂಡಲೇ ರಾಜ್ಯ ಬಿಟ್ಟು ಹೋಗಲು ಗಡುವುದು ನೀಡಿದ್ದಾರೆ. ಇದೇ ರೀತಿಯ ಹಲ್ಲೆ, ಬೆದರಿಕೆಯ ಘಟನೆಗಳು ಬಿಹಾರ, ದೆಹಲಿಯಲ್ಲಿಯೂ ಹಾಸ್ಟೆಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸುವ ಯತ್ನ ನಡೆದಿದೆ. ಪುಲ್ವಾಮಾದ ಘಟನೆಯನ್ನು ಬಲಪಂಥೀಯ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಕಾಶ್ಮೀರಿಗಳ ಮೇಲೆ ಹಲ್ಲೆ ನಡೆಸಿ ಕೋಮು ದ್ವೇಷ ಭಾವನೆ ಹರಡಲು, ದೇಶದಲ್ಲಿ ಹಿಂಸೆಯ ವಾತಾವರಣ ಸೃಷ್ಟಿಸಲು ಚಿತಾವಣೆ ನಡೆಸಿರುವುದು ಕಂಡು ಬರುತ್ತದೆ.
ಇಂತಹ ಹೊತ್ತಿನಲ್ಲಿ ಸಿಆರ್ಪಿಎಫ್ ಕಾಶ್ಮೀರಿಗಳ ಪರವಾಗಿ ನಿಂತು ಸಹಾಯ ಹಸ್ತ ಚಾಚಿರುವುದು ನಿಜಕ್ಕೂ ಶ್ಲಾಘನೀಯವಾದುದು. ಮತಾಂಧ ಶಕ್ತಿಗಳಿಗಿರುವ ಸಂಕುಚಿತ ಮನೋಭಾವ ಸಿಆರ್ಪಿಎಫ್ಗೆ ಇಲ್ಲದಿರುವುದು ಎಷ್ಟೋ ಸಮಾಧಾನದ ಸಂಗತಿ. ಸಿಆರ್ಪಿಎಫ್ ಈ ಸಹಾಯವಾಣಿ ಆರಂಭಿಸಿರುವ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್ ಎನ್ ವೋಹ್ರಾ ಅವರುಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.
‘ಕೆಲವು ಅನಪೇಕ್ಷಿತ ಘಟನೆಗಳಿಂದಾಗಿ ಕಾಶ್ಮೀರದಲ್ಲಿ ಅಪನಂಬಿಕೆ ಉಂಟಾಗಿದೆ. ಈ ಸಹಾಯವಾಣಿಯು ಕಾಶ್ಮೀರದ ಜನರಲ್ಲಿ ವಿಶ್ವಾಸ ತಂದುಕೊಡಲು ಸಹಾಯವಾಗಲಿದೆ. ಕಾಶ್ಮೀರದ ವಿದ್ಯಾರ್ಥಿಗಳು ಎಲ್ಲೇ ಇರಲಿ, ಅವರು ಸಿಆರ್ಪಿಎಫ್ ಮದದ್ಗಾರ್ ನ ಸಹಾಯವಾಣಿಯ ಸೌಲಭ್ಯ ಪಡೆಯಬಹುದಾಗಿದೆ’ ಎಂದಿದ್ದಾರೆ.
ರಾಜ್ಯಪಾಲ ಎನ್ ಎನ್ ವೋಹ್ರಾ
ಉಗ್ರರು ಮಾಡಿದ ಕೃತ್ಯಕ್ಕೆ ಕಾಶ್ಮೀರಿಗಳನ್ನು ಶಿಕ್ಷಿಸಲು ತೊಡಗುವುದಾದರೆ ಇದರಿಂದ ಎಲ್ಲರಿಗಿಂತ ಹೆಚ್ಚು ಸಂತೋಷ ಪಡುವುದು ಪಾಕಿಸ್ತಾನ ಮತ್ತು ಕಾಶ್ಮೀರದಲ್ಲಿ ಭಾರತ ವಿರೋಧಿ ಕೃತ್ಯದಲ್ಲಿ ತೊಡಗಿರುವ ಪಾಕಿಸ್ತಾನದ ಭಯೋತ್ಪಾದಕರೇ. ಯಾಕೆಂದರೆ ಭಾರತೀಯರ ನಡುವೆಯೇ ಇಂತಹ ಒಂದು ಅಪನಂಬಿಕೆಯ ಸ್ಥಿತಿ ಉಂಟಾಗಬೇಕೇಂದರೇ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಬಯಸುತ್ತಾರೆ. ಇದು ಅವರ ಉದ್ದೇಶಗಳಿಗೆ ಪೂರವ ವಾತಾವರಣ ಸೃಷ್ಟಿಸುತ್ತದೆ. ಕಾಶ್ಮೀರದ ಪ್ರಜೆಗಳನ್ನು ದ್ವೇಷಿಸುವ, ಅವರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿಯು ಭವಿಷ್ಯದಲ್ಲಿ ಮತ್ತಷ್ಟು ಆತಂಕವಾದಿಗಳನ್ನು, ಮತ್ತಷ್ಟು ಪುಲ್ವಾಮಾಗಳನ್ನು ಸೃಷ್ಟಿಸಬಹುದೇ ಹೊರತು ಶಾಂತಿಯುತ ಭಾರತವನ್ನು ಸೃಷ್ಟಿಸಲು ಸಹಾಯ ಮಾಡುವುದಿಲ್ಲ. ಇದನ್ನು ಸರಿಯಾಗಿ ಅರ್ಥೈಸಿಕೊಂಡಿರುವ ಸಿಆರ್ಪಿಎಫ್ ಸೂಕ್ತ ರೀತಿಯಲ್ಲಿ ಮಧ್ಯಪ್ರವೇಶ ಮಾಡಿರುವುದಕ್ಕೆ ದೇಶದ ಪ್ರಜೆಗಳೆಲ್ಲರೂ ಅಭಿನಂದನೆ ಸಲ್ಲಿಸಬೇಕು.
ಒಂದು ಕಡೆ ಮತಾಂಧರಿಂದ ಕಾಶ್ಮೀರಿಗಳ ಮೇಲೆ ಹಲ್ಲೆ, ಸಿಆರ್ಪಿಎಫ್ ನ ಸಹಾಯವಾಣಿಗಳ ನಡುವೆಯೇ ‘ಭಾರತೀಯತೆಯನ್ನು ಉಳಿಸಿಕೊಳ್ಳಬಯಸುವ ಅನೇಕ ಸಹೃದಯರು ಆತಂಕಗೊಂಡಿರುವ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಒದಗಿಸಲು ಮುಂದಾಗಿರುವ ವಿದ್ಯಮಾನವೂ ಕಾಣಿಸುತ್ತಿದೆ.

ತನ್ನದೇ ಪಡೆಯ 42 ಯೋಧರನ್ನು ಕಳೆದುಕೊಂಡಿದ್ದರೂ ಸಹ ಬಲಪಂಥೀಯ ಮತಾಂಧರ ತಾಳಕ್ಕೆ ಹೆಜ್ಜೆ ಹಾಕದೇ ಕಾಶ್ಮೀರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಬದ್ಧತೆ, ಪ್ರಬುದ್ಧತೆ ತೋರಿಸಿರುವ ಸಿಆರ್ಪಿಎಫ್ನ ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.