ಮುಖ್ಯಾಂಶಗಳು
- ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಭಾರತ ಭಯಪಡುವುದೇಕೆ? ಎಂದು ಪ್ರಶ್ನಿಸಿದ್ದ ಕಮಲ್.
- ತನ್ನ ಮಾತುಗಳನ್ನು ಸಂದರ್ಭದಿಂದ ಹೊರಗಿಟ್ಟು ವಿವಾದ ಎಬ್ಬಿಸಲಾಗಿದೆ ಎಂದು ಸ್ಪಷ್ಟನೆ
- ಭಾರತ ಮತ್ತು ಪಾಕಿಸ್ತಾನಗಳು ಸರಿಯಾಗಿ ವರ್ತಿಸಿದರೆ ಸೈನಿಕರೂ ಸಾಯುವ ಅಗತ್ಯವಿಲ್ಲ ಎಂದಿದ್ದ ಕಮಲ್
ಚೆನ್ನೈ: ನಟ-ರಾಜಕಾರಣಿ ಕಮಲ್ ಹಸನ್ ಕಾಶ್ಮೀರದ ಕುರಿತು ತನ್ನ ಹೇಳಿಕೆಯಿಂದ ಆಗಿದ್ದ ವಿವಾದದ ನಂತರದಲ್ಲಿ , “ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಇಂದು ಅಲ್ಲಿ ಜನಾಭಿಪ್ರಾಯ ಸಂಗ್ರಹದ ಅಗತ್ಯವಿಲ್ಲ” ಎಂದು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಇದಕ್ಕೂ ಮೊದಲು, ಭಾನುವಾರ ವಿದ್ಯಾರ್ಥಿಗಳೊಂದಿಗೆ ಸಂವಾದವೊಂದರಲ್ಲಿ ಪಾಲ್ಗೊಂಡಿದ್ದ ಕಮಲ್ ಹಸನ್, ‘ಕಾಶ್ಮೀರದಲ್ಲಿ ಏಕೆ ಜನಾಭಿಪ್ರಾಯ (plebiscite) ಸಂಗ್ರಹ ನಡೆಸಿಲ್ಲ. ಈ ಬಗ್ಗೆ ಜನರಿಗೆ ಮಾತಾಡಲು ಏಕೆ ಬಿಡಲಿಲ್ಲ? ಯಾವುದಕ್ಕೆ ಭಯಗೊಂಡಿದ್ದಾರೆ? ಈಗಏನೂ ಮಾಡಲು ಸಾಧ್ಯವಿಲ್ಲ. ಅವರು ದೇಶವನ್ನು ಒಡೆಯಲಿಲ್ಲವೇ? ನೀವು ಅವರನ್ನು ಮತ್ತೆ ಏಕೆ ಪ್ರಶ್ನಿಸಬಾರದು? ಅವರ ಇದ್ಯಾವುದನ್ನೂ ಮಾಡುವುದಿಲ್ಲ” ಎಂದು ಹೇಳಿದ್ದಲ್ಲದೇ ಪಾಕ್ ಆಕ್ರಮಿತ ಕಾಶ್ಮೀರವನ್ನು ‘ಆಝಾದ್ ಕಾಶ್ಮೀರ’ ಎಂದೂ ಕರೆದಿದ್ದರು.
ಕಳೆದ ಫೆ. 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ 42 ಸೈನಿಕರನ್ನು ಹತ್ಯೆ ಮಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡುತ್ತಿದ್ದ ಕಮಲ್ ಹಸನ್, ತಾವು ಮೈಯಂ ಎಂಬ ಪತ್ರಿಕೆ ನಡೆಸುತ್ತಿದ್ದಾಗ ಕಾಶ್ಮೀರ ಸಮಸ್ಯೆಯ ಬಗ್ಗೆ ಬರೆದಿದ್ದಾಗಿ ಹೇಳುತ್ತಾ ಮೇಲಿನಂತೆ ಮಾತನಾಡಿದ್ದರು.
“ಆಝಾದ್ ಕಾಶ್ಮೀರದಲ್ಲಿ ಅವರು ಜಿಹಾದಿಗಳನ್ನು ಹೀರೋಗಳಂತೆ ಬಿಂಬಿಸಲು ಅವರ ಚಿತ್ರಗಳನ್ನು ರೈಲುಗಳಲ್ಲಿ ಹಚ್ಚುತ್ತಾರೆ. ಭಾರತದ ದೃಷ್ಟಿಯಲ್ಲಿ ಇದು ಮೂರ್ಖತನ. ಭಾರತವು ಎಷ್ಟೋ ಉತ್ತಮ ದೇಶ ಎಂದು ತೋರಿಸಬೇಕೇಂದರೆ ಈ ರೀತಿಯಲ್ಲಿ ವರ್ತಿಸಬಾರದು. ರಾಜಕೀಯ ಶುರುವಾಗುವುದೇ ಇಲ್ಲಿ, ಹೊಸ ರಾಜಕೀಯ ಸಂಸ್ಕೃತಿ ಆರಂಭವಾಗುತ್ತದೆ’ ಎಂದು ಹೇಳಿದ್ದರು.
‘ಭಾರತ ಮತ್ತು ಪಾಕಿಸ್ತಾನಗಳ ರಾಜಕಾರಣಗಳು ಸರಿಯಾಗಿ ವರ್ತಿಸಿದರೆ ಗಡಿರೇಖೆಯು (ಲೈನ್ ಆಫ್ ಕಂಟ್ರೋಲ್) ನಿಯಂತ್ರಣದಲ್ಲಿರುತ್ತದೆ” ಎಂದಿದ್ದರಲ್ಲದೆ, ‘ಸೈನಿಕರು ಯಾಕೆ ಸಾಯುತ್ತಾರೆ? ನಮ್ಮ ಮನೆಗಳನ್ನು ರಕ್ಷಿಸುತ್ತಿರುವ ಸೈನಿಕರು ಯಾಕೆ ಸಾಯಬೇಕು? ಎರಡೂ ದೇಶಗಳು ಸರಿಯಾಗಿ ವರ್ತಿಸಿದ್ದರೆ ಯಾವ ಸೈನಿಕರೂ ಸಾಯಬೇಕಿರಲಿಲ್ಲ’ ಎಂದು ಹೇಳಿದ್ದರು.

ಕಮಲ್ ಹಸನ್ ಮಾತಾಡಿದ್ದ ಈ ಮಾತುಗಳು ವಿವಾದವನ್ನು ಸೃಷ್ಟಿಸಿದ್ದವು. ಅವರು ಜನಾಭಿಪ್ರಾಯ ಸಂಗ್ರಹಣೆ ಕುರಿತು ಹೇಳಿದ್ದ ಅಭಿಪ್ರಾಯ ಹಾಗೂ ‘ಆಝಾದ್ ಕಾಶ್ಮೀರ’ ಎಂದು ಬಳಸಿದ್ದ ಪದಗಳು ಟೀಕೆಗೆ ಒಳಗಾಗಿದ್ದವು.
ಈ ಹಿನ್ನೆಲೆಯಲ್ಲಿ ತಮ್ಮ ಮಾತುಗಳ ಬಗ್ಗೆ ಸ್ಪಷ್ಟನೆ ನೀಡಿರುವ ಕಮಲ್ ಹಸನ್, ನಾನು ದಶಕಗಳ ಹಿಂದೆ ನಡೆಸುತ್ತಿದ್ದ ಪತ್ರಿಕೆಯ ಕುರಿತು ಮಾತನಾಡಿದ ಮಾತುಗಳನ್ನು ಸಂದರ್ಭದಿಂದ ಬೇರ್ಪಡಿಸಿ ಹೀಗೆ ವಿವಾದ ಸೃಷ್ಟಿಸಲಾಗಿದೆ. ಜನಾಭಿಪ್ರಾಯದ ಕುರಿತು ಇಂದು ಆ ಆಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.