ಮೈತ್ರಿಕೂಟ ಒಟ್ಟಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 15-18 ಸ್ಥಾನ ಗೆಲ್ಲುವ ಮೂಲಕ ಬಿಜೆಪಿಗೆ ಸ್ಥಳೀಯವಾಗಿಯೂ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಲವಾದ ಪೆಟ್ಟು ಕೊಡಲು ಕಾಂಗ್ರೆಸ್ ನಾಯಕರು ಯೋಜಿಸಿದ್ದರೆ, ಪಕ್ಷ ಸಂಘಟನೆಯೊಂದಿಗೆ ರಾಷ್ಟ್ರಮಟ್ಟದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅವಕಾಶವಾಗಿ ಜೆಡಿಎಸ್ ಈ ಚುನಾವಣೆಯನ್ನು ನೋಡುತ್ತಿದೆ.
ಕಳೆದ ವಾರ ಅಂತ್ಯಕಂಡ 16ನೇ ಲೋಕಸಭೆಯ ಕೊನೆಯ ಕಲಾಪದೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳೂ ಈಗಾಗಲೇ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿವೆ. ಹಾಗಾಗಿ ಉತ್ತರದ ರಾಜ್ಯಗಳಲ್ಲಿ ಈಗಾಗಲೇ ಚುನಾವಣೆಯ ಹವಾ ಎದ್ದಿದೆ. ಆದರೆ, ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಇನ್ನಷ್ಟೇ ಪ್ರಚಾರ ಆರಂಭವಾಗಬೇಕಿದೆ.
ಈ ನಡುವೆ, ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ, ಇದೀಗ ತಾನೆ ಭಿನ್ನಮತದ ಹಗ್ಗಹಗ್ಗಾಟ ಮತ್ತು ಸರ್ಕಾರ ಉರುಳಿಸುವ ಆಪರೇಷನ್ ಕಮಲದ ‘ಸರ್ಜಿಕಲ್ ಸ್ಟ್ರೈಕ್’ಗಳಿಗೆ ಬ್ರೇಕ್ ಬಿದ್ದಿದೆ. ಒಂದು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಇನ್ನೇನು ಬಿದ್ದೇ ಹೋಯಿತು ಎಂಬಂತಿದ್ದ ಸರ್ಕಾರವನ್ನು ಉಳಿಸಿಕೊಂಡು ಸಮಾಧಾನ, ಮತ್ತೊಂದು ಕಡೆ ಬಿಜೆಪಿಗೆ ಆಪರೇಷನ್ ಆಡಿಯೋ ಹಗರಣದಲ್ಲಿ ಸಿಲುಕಿ, ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ನಿಟ್ಟುಸಿರು. ಹಾಗಾಗಿ ಹೋದ ಜೀವ ಬಂದಂತಾಗಿ ಇದೀಗ ತಾನೆ ‘ಸದ್ಯ ಬಚಾವಾದೆವು’ ಎಂಬ ಸ್ಥಿತಿಯಲ್ಲಿರುವ ಮೂರೂ ಪಕ್ಷಗಳು, ಇನ್ನಷ್ಟೇ ಚುನಾವಣೆಗೆ ಮೈಕೊಡವಿ ಹೊರಡಬೇಕಿದೆ.
ಆಪರೇಷ್ ಆಡಿಯೋ ಪ್ರಕರಣದಿಂದಾಗಿ, ಚುನಾವಣೆಗೆ ಮುಂಚೆ ಸಮ್ಮಿಶ್ರ ಸರ್ಕಾರ ಕೆಡವಿ, ಮುಖ್ಯಮಂತ್ರಿಯಾಗಿ ಚುನಾವಣಾ ರಥವೇರುವ ಬಿಜೆಪಿ ರಾಜ್ಯಾಧ್ಯಕ್ಷರ ಲೆಕ್ಕಾಚಾರ ತಲೆಕೆಳಗಾಗಿದೆ. ಅಲ್ಲದೆ, ಆ ಹಿನ್ನೆಲೆಯಲ್ಲಿ ಪಕ್ಷಕ್ಕಾದ ಮುಖಭಂಗ ಮತ್ತು ಮುಜುಗರದಿಂದಾಗಿ ರಾಜ್ಯಮಟ್ಟದ ನಾಯಕರಲ್ಲಿ ಒಬ್ಬೊಬ್ಬರ ಮುಖ ಒಂದೊಂದು ಕಡೆ ಎನ್ನುವಂತಾಗಿದೆ. ಹಾಗಾಗಿ, ಕರ್ನಾಟಕದಿಂದ ‘ಜೋಶ್’ಗಾಗಿ ಬಿಜೆಪಿ ಹೈಕಮಾಂಡ್ ಇನ್ನೂ ಕಾಯುತ್ತಿದೆ.
ಇನ್ನು ಮೈತ್ರಿಪಕ್ಷಗಳ ನಡುವೆ, ಸದ್ಯಕ್ಕೆ ಕುರ್ಚಿ ಗಟ್ಟಿ ಮಾಡಿಕೊಂಡ ಹಿನ್ನೆಲೆಯಲ್ಲಿ ಚುನಾವಣೆಯತ್ತ ಚಿತ್ತ ಹರಿದಿದೆ. ಆದರೆ, ಮುನ್ನುಗ್ಗಲು ಯಾರಿಗೆ ಯಾವ ಕ್ಷೇತ್ರ, ಯಾರಿಗೆ ಯಾವ ಸ್ಥಾನ ಎಂಬ ಬಗ್ಗೆಯೇ ಗೊಂದಲ ಬಗೆಹರಿದಿಲ್ಲ. ಮೈತ್ರಿ ಮೂಲಕವೇ ಚುನಾವಣೆ ಎದುರಿಸುವ ಲೆಕ್ಕಾಚಾರದಲ್ಲಿ ಇರುವ ಉಭಯ ಪಕ್ಷಗಳಲ್ಲಿ ಚುನಾವಣೆ ಸಮೀಪಿಸಿದರೂ ಇನ್ನೂ ಲೋಕಸಭಾ ಕ್ಷೇತ್ರಗಳ ಸ್ಥಾನಹೊಂದಾಣಿಕೆಯ ಮಾತುಕತೆಗಳು ಬಗೆಹರಿದಿಲ್ಲ. ಪ್ರಮುಖವಾಗಿ ಜೆಡಿಎಸ್ ಪ್ರಾಬಲ್ಯದ ಹಳೇಮೈಸೂರು ಭಾಗದ ಸೀಟುಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಪೈಪೋಟಿ ಇದ್ದು, ಆ ಕುರಿತ ಸಹಮತ ವ್ಯಕ್ತವಾಗದಿರುವುದೇ ಮಾತುಕತೆಗಳು ಅಂತಿಮಗೊಳ್ಳದಿರುವುದಕ್ಕೆ ಪ್ರಮುಖ ಕಾರಣ ಎಂಬುದು ಗುಟ್ಟೇನಲ್ಲ.
ಬಿಜೆಪಿಯೇತರ ಪಕ್ಷಗಳ ರಾಷ್ಟ್ರೀಯ ಮಹಾಮೈತ್ರಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಮತ್ತು ಮೈತ್ರಿ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ದಿನ ರಾಷ್ಟ್ರಮಟ್ಟದಲ್ಲಿ ಮಹಾಮೈತ್ರಿಯ ಸಂದೇಶ ಸಾರಿದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು, ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡು ಅವಕಾಶ ಸಿಕ್ಕಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ನಿರ್ಣಾಯಕರಾಗುವ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ, ಪಕ್ಷ ಪ್ರಭಾವ ಹೊಂದಿರುವ ಮಲೆನಾಡು ಸೇರಿದಂತೆ ಹಳೇಮೈಸೂರು ಭಾಗದಲ್ಲಿ 10ರಿಂದ 12 ಸ್ಥಾನ ಬಿಟ್ಟುಕೊಡುವಂತೆ ಕಾಂಗ್ರೆಸ್ ಮುಂದೆ ಜೆಡಿಎಸ್ ಪಟ್ಟುಹಿಡಿದಿದೆ.

ಪ್ರಮುಖವಾಗಿ ಹಾಸನ, ಮಂಡ್ಯ, ಬೆಂಗಳೂರು ಉತ್ತರ, ಮೈಸೂರು, ತುಮಕೂರು, ಶಿವಮೊಗ್ಗ, ಬೀದರ್, ಚಿಕ್ಕಬಳ್ಳಾಪುರ ಸೇರಿದಂತೆ 10-12 ಸ್ಥಾನಗಳಲ್ಲಿ ಗೆಲುವು ಸುಲಭವಾಗಲಿದೆ. ಆ ಮೂಲಕ ಪಕ್ಷವನ್ನು ಈ ಭಾಗದಲ್ಲಿ ಸಬಲಗೊಳಿಸಲೂ ಈ ಚುನಾವಣೆ ನೆರವಾಗಲಿದೆ ಎಂಬುದು ಜೆಡಿಎಸ್ ನಾಯಕರ ಲೆಕ್ಕಾಚಾರ. ಆದರೆ, ಪ್ರಮುಖವಾಗಿ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳ ವಿಷಯದಲ್ಲಿ ಕಾಂಗ್ರೆಸ್ ನಾಯಕರಿಗೆ ಸಹಮತವಿಲ್ಲ ಎನ್ನಲಾಗುತ್ತಿದೆ.
ಈ ನಡುವೆ, ಹಾಸನದ ವಿಷಯದಲ್ಲಿ, ಪ್ರಜ್ವಲ್ ರೇವಣ್ಣ ಕಣಕ್ಕಿಳಿಸುವ ಜೆಡಿಎಸ್ ಯೋಚನೆಗೆ ಸ್ಥಳೀಯ ಕಾಂಗ್ರೆಸ್ ನಾಯಕರಿಂದ ವಿರೋಧ ವ್ಯಕ್ತವಾಗಿದೆ. ಪ್ರಜ್ವಲ್ ಕಣಕ್ಕಿಳಿದರೆ ನಾವು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳಿರುವುದಾಗಿ ವರದಿಯಾಗಿದ್ದು, ಅದಕ್ಕೆ ಸೋಮವಾರ ಪ್ರತಿಕ್ರಿಯಿಸಿರುವ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಅವರ ಬೆಂಬಲ ಬೇಕಿಲ್ಲ. ಅವರ ಹೇಳಿಕೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾರು ಕಣಕ್ಕಿಳಿಯಬೇಕು ಎಂಬುದನ್ನು ಜಿಲ್ಲೆಯ ಜನ ತೀರ್ಮಾನಿಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಮೈತ್ರಿ ಹೋರಾಟಕ್ಕೂ ಸೈ, ಪ್ರತ್ಯೇಕ ಸ್ಪರ್ಧೆಗೂ ಜೈ ಎಂಬ ಸಂದೇಶವನ್ನು ಈಗಾಗಲೇ ಜೆಡಿಎಸ್ ರವಾನಿಸಿದೆ. ಆ ಮೂಲಕ ಕಾಂಗ್ರೆಸ್ ಮೇಲೆ ಒತ್ತಡ ಹೇರುವ ತಂತ್ರವನ್ನು ಈಗಾಗಲೇ ಜೆಡಿಎಸ್ ವರಿಷ್ಠರು ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಆದರೆ, ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಮಾತ್ರವಲ್ಲದೆ, ರಾಜ್ಯದ ಮೈತ್ರಿ ಸರ್ಕಾರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿಯೂ ಕಾಂಗ್ರೆಸ್ಸಿಗೆ ಮೈತ್ರಿ ಅನಿವಾರ್ಯವಾಗಿದ್ದು, ಹಳೇ ಮೈಸೂರು ಭಾಗದಲ್ಲಿ ಐದು ಸ್ಥಾನ ಹಾಗೂ ಉತ್ತರಕರ್ನಾಟಕದ 2-3 ಸ್ಥಾನ ಬಿಟ್ಟುಕೊಡಲು ಅದು ಸಜ್ಜಾಗಿದೆ. ಮೈತ್ರಿಕೂಟ ಒಟ್ಟಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 15-18 ಸ್ಥಾನ ಗೆಲ್ಲುವ ಮೂಲಕ ಬಿಜೆಪಿಗೆ ಸ್ಥಳೀಯವಾಗಿಯೂ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಲವಾದ ಪೆಟ್ಟು ಕೊಡಲು ಕಾಂಗ್ರೆಸ್ ನಾಯಕರು ಯೋಜಿಸಿದ್ದಾರೆ ಎನ್ನಲಾಗಿದೆ.
ಆದರೆ, ಪ್ರಮುಖವಾಗಿ ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳ ವಿಷಯದಲ್ಲಿ ಮೈತ್ರಿಗಳ ನಡುವೆ ಹಗ್ಗಜಗ್ಗಾಟ ನಡೆದಿದೆ. ಪಕ್ಷದ ಹೈಕಮಾಂಡ್ ಎಷ್ಟು ಬೇಗ ಆ ಬಿಕ್ಕಟ್ಟು ಬಗೆಹರಿಸಲು ಶಕ್ತವಾಗುತ್ತದೆಯೋ ಅಷ್ಟು ಶೀಘ್ರದಲ್ಲಿ ಉಭಯ ಪಕ್ಷಗಳ ಸ್ಥಾನಹೊಂದಾಣಿಕೆ ಅಂತಿಮವಾಗಲಿದೆ. ಇನ್ನು ಒಂದೆರಡು ದಿನದಲ್ಲಿ ಆ ಬಗ್ಗೆ ನಾಯಕರು ಚರ್ಚಿಸಲಿದ್ದಾರೆ ಎಂಬುದು ಪಕ್ಷದ ಆಂತರಿಕ ಮೂಲಗಳ ವಿಶ್ವಾಸ.