ಒಂದು ಕಡೆ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ನಮ್ಮ ಭದ್ರತಾ ಪಡೆಗಳು ದಾಳಿಯ ಮಾಸ್ಟರ್ ಮೈಂಡ್ ಘಾಜಿಯನ್ನು ಹೊಡೆದುರುಳಿಸಿ ಯೋಧರ ಆತ್ಮಕ್ಕೆ ನೆಮ್ಮದಿ ನೀಡಿವೆ. ಮತ್ತೊಂದು ಕಡೆ ಯೋಧರ ಭೀಕರ ಸಾವಿನ ಘಟನೆಯನ್ನೂ ಕೂಡ ರಾಜಕೀಯ ಲಾಭಕ್ಕೆ ಬಳಸುವ ಕ್ಷುಲ್ಲಕ ಯತ್ನ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತವಾಗತೊಡಗಿದೆ.
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಸೋಮವಾರ ಬೆಳಗ್ಗೆ ಪುಲ್ವಾಮಾದಲ್ಲಿ ನಡೆದ ಎನ್ಕೌಂಟರಿನಲ್ಲಿ ಹೊಡೆದುರುಳಿಸಿವೆ. ಭಾನುವಾರ ತಡರಾತ್ರಿಯಿಂದಲೇ ಉಗ್ರರ ಅಡಗುದಾಣದ ಮೇಲೆ ದಾಳಿ ನಡೆಸಿದ್ದ ಭದ್ರತಾ ಪಡೆಗಳು, ಹಲವು ತಾಸು ನಡೆದ ಕಾರ್ಯಾಚರಣೆಯಲ್ಲಿ ಅಂತಿಮವಾಗಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಜಿ ಅಲಿಯಾಸ್ ಕಮ್ರಾನ್ ಎಂಬಾತ ಸೇರಿದಂತೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಈ ವೇಳೆ, ನಾಲ್ವರು ಭದ್ರತಾ ಪಡೆ ಯೋಧರು ಕೂಡ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಜೈಷ್ ಎ ಮೊಹಮ್ಮದ್ ಉಗ್ರ ಫೆ.14ರಂದು ಪುಲ್ವಾಮಾದಲ್ಲಿ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಿಆರ್ ಪಿಎಫ್ ಪಡೆಯ 44 ಮಂದಿ ಯೋಧರು ಹುತಾತ್ಮರಾಗಿದ್ದರು. ಭಾರತೀಯ ಭದ್ರತಾ ಪಡೆಗಳ ಇತಿಹಾಸದಲ್ಲೇ ತೀರಾ ಆಘಾತಕಾರಿಯಾಗಿದ್ದ ಆ ಭೀಕರ ದಾಳಿಯನ್ನು ಯೋಜಿಸಿದ್ದ ಘಾಜಿಯ ಹತ್ಯೆಯೊಂದಿಗೆ, ಮಡಿದ ಯೋಧರಿಗೆ ತಕ್ಕ ಗೌರವ ಸಲ್ಲಿಸಲಾಗಿದೆ ಎಂದು ಭದ್ರತಾ ಪಡೆಗಳ ಕಾರ್ಯವನ್ನು ಶ್ಲಾಘಿಸಲಾಗಿದೆ. ಈ ನಡುವೆ, ಫೆ.14ರ ದಾಳಿಯ ಸಂದರ್ಭದಲ್ಲಿ ಜೈಷ್ ಎ ಮೊಹಮ್ಮದ್ ಉಗ್ರರಿಗೆ ನೆರವು ನೀಡಿದ ಸ್ಥಳೀಯರ ಬೇಟೆ ಆರಂಭಿಸಿರುವ ಭದ್ರತಾ ಪಡೆಗಳು, ಈಗಾಗಲೇ 23ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿವೆ ಎಂದು ವರದಿಗಳು ಹೇಳಿವೆ.
ಈ ನಡುವೆ, ಪುಲ್ವಾಮಾ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ರಾಜತಾಂತ್ರಿಕ ಕ್ರಮಗಳಿಗೆ ಮುಂದಾಗಿದ್ದು, ದೆಹಲಿಯ ತನ್ನ ರಾಯಭಾರಿ ಸೊಹೈಲ್ ಮೊಹಮ್ಮದ್ ಅವರನ್ನು ವಾಪಸು ಕರೆಸಿಕೊಂಡಿರುವುದಾಗಿ ಪಾಕಿಸ್ತಾನ ಹೇಳಿದೆ. ಸೊಹೈಲ್ ಸೋಮವಾರ ಬೆಳಗ್ಗೆಯೇ ದೆಹಲಿಯಿಂದ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದೂ ಪಾಕ್ ವಿದೇಶಾಂಗ ಇಲಾಖೆ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಒಂದು ಕಡೆ ಪುಲ್ವಾಮಾ ಭೀಕರ ದಾಳಿಯ ಪ್ರತೀಕಾರವಾಗಿ ಭದ್ರತಾ ಪಡೆಗಳು ಜಮ್ಮುಕಾಶ್ಮೀರದಲ್ಲಿ ಉಗ್ರರನ್ನು ಬೇಟೆಯಾಡತೊಡಿದ್ದರೆ, ಮತ್ತೊಂದು ಕಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಗುಂಪುಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದನ್ನು ಸತತ ನಾಲ್ಕನೇ ದಿನವೂ ಮುಂದುವರಿಸಿವೆ. ಆ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಸತತ ನಾಲ್ಕನೇ ದಿನವೂ ಕರ್ಫ್ಯೂ ಮುಂದುವರಿದಿದೆ. ಈ ನಡುವೆ, ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಸರ್ಕಾರಿ ಭದ್ರತೆಯನ್ನು ವಾಪಸು ಪಡೆದಿದೆ. ಈ ಕ್ರಮ ಉಗ್ರಗಾಮಿಗಳು ಮತ್ತು ಪ್ರತ್ಯೇಕತಾವಾದಿಗಳ ನಡುವಿನ ನಂಟಿನ ಹಿನ್ನೆಲೆಯಲ್ಲಿ ಮಹತ್ವದ ಕ್ರಮ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಅದೇ ಹೊತ್ತಿಗೆ, ಬಹುತೇಕ ಪ್ರತ್ಯೇಕತಾವಾದಿಗಳು ಈ ಮೊದಲೇ ಸರ್ಕಾರದ ಭದ್ರತೆಯನ್ನು ವಾಪಸು ಪಡೆಯುವಂತೆ ಒತ್ತಾಯಿಸಿದ್ದರು. ಈಗಲೂ ಸರ್ಕಾರದ ಕ್ರಮವನ್ನು ಅವರು ಸ್ವಾಗತಿಸಿದ್ದಾರೆ. ಹಾಗಾಗಿ ಉಗ್ರಗಾಮಿ ಸಂಘಟನೆಗಳು ವಿರುದ್ಧದ ತಂತ್ರಗಾರಿಕೆಯಾಗಿ ಇದು ಯಾವ ಪರಿಣಾಮವನ್ನೂ ಬೀರಲಾರದು ಎಂಬ ಮಾತುಗಳೂ ಕೇಳಿಬಂದಿವೆ.

ಈ ನಡುವೆ, ಎನ್ ಡಿಎ ಮಿತ್ರಪಕ್ಷ ಶಿವಸೇನೆ, ಪ್ರಧಾನಿ ಮೋದಿಯವರ ವಿರುದ್ಧ ಹರಿಹಾಯ್ದಿದ್ದು, ಯೋಧರ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಯುದ್ಧ ಸಾರಬೇಕು. ಅದಿಲ್ಲದೇ ಹೋದರೆ, ಪ್ರಧಾನಿಯವರ ಪ್ರತೀಕಾರದ ಮಾತುಗಳಿಗೆ ಅರ್ಥವಿರದು. ಅವರು ತಮ್ಮ ಮಾತುಗಳನ್ನು ಕೃತಿಗಿಳಿಸಿದಾಗಲೇ ಆ ಮಾತು ವಿಶ್ವಾಸ ಉಳಿಸಿಕೊಳ್ಳುವುದು ಎಂದು ಕಟಕಿಯಾಡಿದೆ.
ಈ ನಡುವೆ, ಪ್ರಧಾನಿ ಮೋದಿಯವರು ಪುಲ್ವಾಮಾ ದಾಳಿಯ ಮಾರನೇ ದಿನದಿಂದಲೇ ವಿವಿಧ ರಾಜ್ಯಗಳ ಚುನಾವಣಾ ಸಭೆಗಳಲ್ಲಿ ಭಾಗವಹಿಸುತ್ತಿರುವುದು ಮತ್ತು ಯೋಧರ ಮೇಲಿನ ದಾಳಿಯನ್ನು ಪ್ರಸ್ತಾಪಿಸಿ ಬಿಜೆಪಿಗೆ ಮತ ಹಾಕಿ ಎಂದು ಪ್ರಚಾರ ನಡೆಸುತ್ತಿರುವುದು ಕೂಡ ಸಮಾಜದ ವಿವಿಧ ವಲಯಗಳ ಟೀಕೆಗೆ ಗುರಿಯಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಸ್ವತಃ ದಾಳಿ ನಡೆದ ದಿನವೂ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಕಟುಟೀಕೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು.
ದಾಳಿ ನಡೆದ ಮಾರನೇ ದಿನ ಪ್ರಧಾನಿ ಮೋದಿ, ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರೆ, ಫೆ.16 ರಿಂದ 18ರವರೆಗೆ ಬಿಹಾರ, ಜಾರ್ಖಂಡ್, ಮಹಾರಾಷ್ಟ್ರಗಳಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮ ಮತ್ತು ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ವಕ್ತಾರರು, ‘ದಾಳಿಯ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಪಕ್ಷದ ಎಲ್ಲಾ ಸಭೆ-ಸಮಾರಂಭಗಳನ್ನು ಮುಂದೂಡಲಾಗಿದೆ’ ಎಂದು ಟ್ವೀಟ್ ಮಾಡಿದ್ದರು. ಆದರೆ, ಪ್ರಧಾನಿ ಮೋದಿಯಷ್ಟೇ ಅಲ್ಲದೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ರಾಜಸ್ತಾನ, ಅಸ್ಸಾಂಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಅಷ್ಟೇ ಅಲ್ಲ, ಪುಲ್ವಾಮಾ ಘಟನೆಯನ್ನು ನೇರವಾಗಿ ಉಲ್ಲೇಖಿಸಿ, ‘ಅಸ್ಸಾಂನ್ನು ಮತ್ತೊಂದು ಕಾಶ್ಮೀರ ಮಾಡಲು ಅವಕಾಶ ಕೊಡಬೇಡಿ. ಬಿಜೆಪಿಗೆ ಮತ ನೀಡಿ’ ಎಂದು ಬಹಿರಂಗ ಕರೆಕೊಟ್ಟಿದ್ದಾರೆ.
ಇದು, ಸಹಜವಾಗಿಯೇ ಟೀಕೆಗೆ ಗುರಿಯಾಗಿದ್ದು, ಯೋಧರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಟು ಟೀಕೆಗಳು ವ್ಯಕ್ತವಾಗಿದೆ. ಅದರಲ್ಲೂ ದಾಳಿ ಘಟನೆಯನ್ನು ರಾಜಕೀಯಕ್ಕೆ ಬಳಸಬೇಡಿ ಎಂದು ದಾಳಿ ನಡೆದ ದಿನ ಕರೆ ನೀಡಿದ್ದ ಮೋದಿಯವರು ಮತ್ತು ಅವರ ಪಕ್ಷದ ಅಧ್ಯಕ್ಷರೇ ಈಗ ಅಂತಹ ಕೆಲಸ ಮಾಡುತ್ತಿರುವುದು ಪ್ರತಿಪಕ್ಷಗಳು ಮತ್ತು ಜನಸಾಮಾನ್ಯರ ಕುಹಕಕ್ಕೆ ಗುರಿಯಾಗಿದೆ. “ಬಿಜೆಪಿಗೆ ದೇಶದ ಭದ್ರತೆ ಮತ್ತು ಸಮಗ್ರತೆಗಿಂತ ಮತ ಮುಖ್ಯ. ಮತ ಪಡೆದು ಅಧಿಕಾರಕ್ಕೇರುವುದು ಮುಖ್ಯ. ಹಾಗಾಗಿ, ಇಂತಹ ಘಟನೆಯನ್ನು ಕೂಡ ರಾಜಕೀಯಕ್ಕೆ ಬಳಸಿಕೊಳ್ಳುವ ಕೀಳು ಮನಸ್ಥಿತಿ ಪ್ರದರ್ಶಿಸುತ್ತಿದೆ” ಎಂಬುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರತೊಡಗಿದೆ.