ಸ್ವತಃ ಶಾಸಕ ಸಿ ಟಿ ರವಿ ಘಟನೆ ನಡೆದಾಗ ಕಾರಿನಲ್ಲಿ ತಾವು ಪ್ರಯಾಣಿಸುತ್ತಿದುದಾಗಿ ಮಾಧ್ಯಮಗಳ ಮುಂದೆ ಹೇಳಿದ್ದರೂ, ಕುಣಿಗಲ್ ಪೊಲೀಸರು ಬಿಜೆಪಿ ನಾಯಕ ಮತ್ತು ಅವರ ಚಾಲಕನ ವಿರುದ್ಧ ಎಫ್ ಐ ಆರ್ ದಾಖಲಿಸದೇ ಅವರನ್ನು ಸಾಗಹಾಕಿದ್ದು ಯಾಕೆ ಎಂಬುದು ಈಗ ವಿವಾದಕ್ಕೆ ಕಾರಣವಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಳಗಿನ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವು ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು, ಕಾರಿನಲ್ಲಿದ್ದ ಬಿಜೆಪಿ ಮಾಜಿ ಸಚಿವ ಹಾಗೂ ಚಿಕ್ಕಮಗಳೂರು ಹಾಲಿ ಶಾಸಕ ಸಿ ಟಿ ರವಿ ಅವರ ವಿರುದ್ಧ ಈವರೆಗೆ ಯಾವುದೇ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
“ರಸ್ತೆ ಬದಿ ಇಂಡಿಕೇಟರ್ ಆನ್ ಮಾಡಿಕೊಂಡೇ ವಾಹನವನ್ನು ನಿಲ್ಲಿಸಿದ್ದೆವು. ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋದ ವೇಳೆ, ಹಾಸನ ಕಡೆಯಿಂದ ಬಂದ ಫಾರ್ಚೂನರ್ ಕಾರು, ನಿಂತಿದ್ದ ತಮ್ಮ ಕಾರಿಗೆ ಡಿಕ್ಕಿ ಹೊಡೆದು, ನಂತರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಮ್ಮ ಸ್ನೇಹಿತರಾದ ಸುನಿಲ್ ಗೌಡ, ಶಶಿಕುಮಾರ್, ಮುನಿರಾಜು, ಜಯಚಂದ್ರ ಹಾಗೂ ಮಂಜುನಾಥ್ ಅವರಿಗೂ ಡಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡ ಸುನಿಲ್ ಮತ್ತು ಶಶಿಕುಮಾರ್ ಸ್ಥಳದಲ್ಲೇ ಸಾವುಕಂಡಿದ್ದು, ಉಳಿದವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ” ಎಂದು ಮೃತರ ಸ್ನೇಹಿತ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪುನೀತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ಘಟನೆಯ ನಡೆದ ಸಂದರ್ಭದಲ್ಲಿ ಪುನೀತ್, ಶಾಸಕ ಸಿ ಟಿ ರವಿ ಹಾಗೂ ಅವರ ಕಾರು ಚಾಲಕರೊಂದಿಗೆ ಮಾತನಾಡುವಾಗ ಸಂಪೂರ್ಣ ಘಟನೆಯನ್ನು ವೀಡಿಯೋ ಮಾಡಿದ್ದು, ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ವತಃ ಸಿ ಟಿ ರವಿ ಕೂಡ ಘಟನೆ ನಡೆದಾಗ ಕಾರಿನಲ್ಲಿ ತಾವು ಪ್ರಯಾಣಿಸುತ್ತಿದುದಾಗಿಯೂ, ಘಟನೆ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಿ ಅಲ್ಲಿಂದ ಬೆಂಗಳೂರಿಗೆ ತೆರಳಿರುವುದಾಗಿ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ, ಸ್ವತಃ ಸಿಟಿ ರವಿಯವರೇ ತಮ್ಮ ಟ್ವೀಟರ್ ಹ್ಯಾಂಡಲ್ ನಲ್ಲಿ ಘಟನೆಯ ಪ್ರಸ್ತಾಪ ಮಾಡಿದ್ದು, “ಇವತ್ತು ಮುಂಜಾನೆ ಕುಣಿಗಲ್ ಬಳಿಕ ನನ್ನ ಕಾರು ಅಪಘಾತಕ್ಕೀಡಾಯಿತು. ದುರಾದೃಷ್ಟಕ್ಕೆ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆ ಜೀವನಷ್ಟದಿಂದ ನನಗೆ ತುಂಬಾ ನೋವಾಗಿದೆ. ಆ ಇಬ್ಬರ ಆತ್ಮಕ್ಕೆ ಶಾಂತಿ ಕೋರುವೆ ಮತ್ತು ಅವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ” ಎಂದು ಮಂಗಳವಾರ ಬೆಳಗ್ಗೆ 10.54ಕ್ಕೆ ಟ್ವೀಟ್ ಮಾಡಿದ್ದಾರೆ.
ಆದರೆ, ಕುಣಿಗಲ್ ಪೊಲೀಸರು ದಾಖಲಿಸಿರುವ ಘಟನೆಯ ಎಫ್ ಐಆರ್ ನಲ್ಲಿ ಸಿಟಿ ರವಿಯವರದ್ದಾಗಲೀ, ಅವರೊಂದಿಗೆ ಕಾರಿನಲ್ಲಿ ಚಾಲಕ ಸೇರಿ ಇತರರದ್ದಾಗಲೀ ಹೆಸರು ನಮೂದಾಗಿಲ್ಲ ಮತ್ತು ಪೊಲೀಸರು ಶಾಸಕರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಲ್ಲದೆ, ಅಪಘಾತ ನಡೆದಾಗ ಕಾರು ಚಾಲನೆ ಮಾಡುತ್ತಿದ್ದ ಸಿಟಿ ರವಿ ಅವರ ಖಾಸಗಿ ಚಾಲಕನ ವಿರುದ್ಧವೂ ಪೊಲೀಸರು ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹಾಗಾಗಿ, ಮೃತರ ಕುಟುಂಬದವರು ಮತ್ತು ಸ್ನೇಹಿತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಶಾಸಕರು ರಾಜಕೀಯ ಪ್ರಭಾವ ಬಳಸಿ ಇಡೀ ಪ್ರಕರಣವನ್ನು ತಿರುಚಿದ್ದಾರೆ. ಬಡವರಾದ ನಮಗೆ ನ್ಯಾಯ ಸಿಗುವುದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಮತ್ತೊಂದೆಡೆ, ತಾವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿರುವುದಾಗಿ ಹೇಳಿರುವ ಬಿಜೆಪಿ ನಾಯಕ ಸಿ ಟಿ ರವಿ ಅವರ ಮಾತಿನ ಬಗ್ಗೆ ಆಕ್ರೋಶವ್ಯಕ್ತಪಡಿಸಿರುವ ಮೃತರ ಸ್ನೇಹಿತ ಚೇತನ್, “ಘಟನೆ ನಡೆದಾಗ, ಸೌಜನ್ಯಕ್ಕೂ ಶಾಸಕರು ನಮ್ಮ ಪರಿಸ್ಥಿತಿ ಏನಾಗಿದೆ ಎಂದು ನೋಡಿಲ್ಲ. ನಾವಾಗಿಯೇ ಅವರನ್ನು ಕೇಳಿದಾಗಲೂ ನಮ್ಮೊಂದಿಗೆ ಮಾತು ಕೂಡ ಆಡದೆ ಅಲ್ಲಿಂದ ಹೊರಟುಹೋದರು. ಡಿಕ್ಕಿ ಸಂಭವಿಸಿದಾಗ ಸ್ವತಃ ಸಿ ಟಿ ರವಿಯವರೇ ಕಾರು ಚಾಲನೆ ಮಾಡುತ್ತಿದ್ದರು. ಅವರ ಚಾಲಕ ನಮ್ಮ ಮೇಲೆಯೇ ದಬ್ಬಾಳಿಕೆ ಮಾಡಲು ಯತ್ನಿಸಿದರು. ಕುಡಿದು ಅಜಾಗರೂಕತೆಯಿಂದ ಚಾಲನೆ ಮಾಡಿ, ಅತಿವೇಗದಲ್ಲಿ ಬಂದು ನಿಂತ ವಾಹನಕ್ಕೆ ಡಿಕ್ಕಿ ಹೊಡೆದು, ರಸ್ತೆ ಬದಿ ನಿಂತಿದ್ದವರನ್ನು ಕೊಂದಿದ್ದಾರೆ. ಆದರೆ, ಪೊಲೀಸರು ನಮ್ಮ ದೂರನ್ನು ಸರಿಯಾಗಿ ತೆಗೆದುಕೊಂಡಿಲ್ಲ. ನಮಗೆ ನ್ಯಾಯ ಕೊಡಿಸಿ” ಎಂದು ಮಾಧ್ಯಮಗಳ ಮುಂದೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಪೊಲೀಸರ ನಿರ್ಲಕ್ಷ್ಯ ಮತ್ತು ಪಕ್ಷಪಾತಿ ಧೋರಣೆ ಇಡೀ ಪ್ರಕರಣದಲ್ಲಿ ಎದ್ದುಕಾಣುತ್ತಿದ್ದು, ಎಫ್ ಐಆರ್ ನಲ್ಲಿ ಬಿಜೆಪಿ ಮುಖಂಡ ಸಿ ಟಿ ರವಿ ಅವರ ಚಾಲಕನ ಹೆಸರು ಕೂಡ ನಮೂದಾಗಿಲ್ಲ. ಇಡೀ ಪ್ರಕರಣದಲ್ಲಿ ಪೊಲೀಸರು ಶಾಸಕರನ್ನು ಬಚಾವು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮೃತರ ಸಂಬಂಧಿಕರು ದೂರಿದ್ದಾರೆ.
ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಹಿನ್ನೆಲೆಯಲ್ಲಿ ಸಿ ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, “ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡುವ ನಾಯಕರು, ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಹಿನ್ನೆಲೆಯಲ್ಲಿ ಕೊಲೆ-ಸುಲಿಗೆಗಳಾದರೂ ಅದಕ್ಕೆ ಮತೀಯ ಬಣ್ಣಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ಅದೇ ನಾಯಕರು ಇದೀಗ ರಸ್ತೆ ಬದಿ ನಿಂತವರ ಮೇಲೆ ಕಾರು ಚಲಾಯಿಸಿ ಇಬ್ಬರನ್ನು ಸಾಯಿಸಿದ್ದಾರೆ. ಸತ್ತವರೂ ಹಿಂದೂಗಳೇ ಅಲ್ಲವೇ? ಅಂತಹ ಹಿಂದೂಗಳನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದು ಸರಿಯೇ. ನಿಮ್ಮ ಸನಾತನ ಸಂಸ್ಕೃತಿ ಕಲಿಸುವುದು ಇದನ್ನೇ” ಎಂದು ಸಿಟಿ ರವಿ ವಿರುದ್ಧ ಟೀಕೆಗಳು ಹರಿದಾಡುತ್ತಿವೆ.
ಜನಸಾಮಾನ್ಯರು ಇಂತಹ ಅಪರಾಧ ಎಸಗಿದ್ದರೆ ಪೊಲೀಸರು ಹೀಗೆಯೇ ಸಾಗಹಾಕುತ್ತಿದ್ದರೆ? ಕನಿಷ್ಠ ಪ್ರಕರಣ ದಾಖಲಿಸುವಾಗ ಕೂಡ ಶಾಸಕರನ್ನು ಬಾಧ್ಯಸ್ಥರನ್ನಾಗಿ ಮಾಡುವ ಪ್ರಯತ್ನ ಆಗಿಲ್ಲ. ಸ್ವತಃ ಅವರೇ ತಾನು ಕಾರಿನಲ್ಲಿದ್ದೆ ಎಂದು ಸಾರ್ವಜನಿಕವಾಗಿ ಪದೇಪದೇ ಹೇಳಿಕೊಂಡಿದ್ದರೂ ಪೊಲೀಸರು ಯಾಕೆ ಅವರ ಹೆಸರನ್ನು ನಮೂದಿಸಿಲ್ಲ? ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ತುಮಕೂರು ಪೊಲೀಸರ ಬಳಿ ಉತ್ತರವಿದೆಯೇ?