ಇಬ್ಬರು ಅಮಾಯಕರನ್ನು ಬಲಿ ತೆಗೆದುಕೊಂಡ ಶಾಸಕ ಸಿ ಟಿ ರವಿ ಅವರ ‘ಆಕ್ಸಿಡೆಂಟ್’ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕರು ಹೇಳುವ ಸಮಯಕ್ಕೂ, ಅವರ ಪತ್ನಿ ಹೇಳುವ ಸಮಯಕ್ಕೂ ಎರಡು ಗಂಟೆ ವ್ಯತ್ಯಾಸವಿದೆ. ಆ ಎರಡು ಗಂಟೆಯ ನಡುವಿನ ಅವಧಿಯಲ್ಲಿ ನಡೆದ ಘಟನೆಗಳ ಕುರಿತು ತನಿಖೆ ಮಾಡಿದರೆ, ಬಹುತೇಕ ಅಪಘಾತದಲ್ಲಿ ಮೃತರ ಸ್ನೇಹಿತರ ಆರೋಪಗಳಿಗೆ ಉತ್ತರ ಸಿಗಬಹುದು.
ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ ಟಿ ರವಿ ಅವರ ಫಾರ್ಚೂನರ್ ಕಾರು ಡಿಕ್ಕಿ ಹೊಡೆದು ಇಬ್ಬರು ಅಮಾಯಕರನ್ನು ಬಲಿತೆಗೆದುಕೊಂಡಿರುವ ‘ಆಕ್ಸಿಡೆಂಟ್’ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಣಿಗಲ್ ಪೊಲೀಸರ ಕ್ರಮ ಮತ್ತು ಘಟನೆ ಕುರಿತ ವಿವಿಧ ಮಾಧ್ಯಮ ಹೇಳಿಕೆಗಳ ಹಿನ್ನೆಲೆಯಲ್ಲಿ ಇದೀಗ ಇಡೀ ಪ್ರಕರಣ ಇನ್ನಷ್ಟು ಸಂಶಯಗಳಿಗೆ ಎಡೆಮಾಡಿದೆ.
ಪ್ರಮುಖವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸ್ನೇಹಿತರೇ ಪ್ರತ್ಯಕ್ಷದರ್ಶಿಗಳಾಗಿ ಹೇಳಿಕೆ ನೀಡಿದ್ದರೂ, ಸ್ವತಃ ಶಾಸಕ ಸಿ ಟಿ ರವಿಯವರೇ ತಮ್ಮ ಅಧಿಕೃತ ಹೇಳಿಕೆಯಲ್ಲಿ ಘಟನೆ ನಡೆದಾಗ ತಾನು ಅಲ್ಲಿದ್ದೆ ಎಂದರೂ ಘಟನೆ ವ್ಯಾಪ್ತಿಯ ಕುಣಿಗಲ್ ಠಾಣೆ ಪೊಲೀಸರು ಎಫ್ ಐಆರ್ ನಲ್ಲಿ ಶಾಸಕರ ಹೆಸರನ್ನು ಯಾಕೆ ನಮೂದಿಸಿಲ್ಲ? ಎಂಬ ಪ್ರಶ್ನೆ ಎದುರಾಗಿದೆ. ಹಾಗೆಯೇ, ಪ್ರತ್ಯಕ್ಷದರ್ಶಿಗಳು “ಸ್ವತಃ ರವಿಯವರೇ ತಮ್ಮ ಕಾರು ಚಾಲನೆ ಮಾಡುತ್ತಿದ್ದರು ಮತ್ತು ಅವರು ಮದ್ಯಸೇವಿಸಿದ್ದರು. ಹಾಗೇ ಅತಿವೇಗದ ಚಾಲನೆ ಮಾಡುತ್ತಿದ್ದರು” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಕುಣಿಗಲ್ ಪೊಲೀಸರು, ಶಾಸಕರ ಮದ್ಯಸೇವನೆ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಿದ್ದರೆ? ವಾಹನದ ವೇಗದ ಬಗ್ಗೆ ಸ್ಪೀಡೋಮೀಟರ್ ತಪಾಸಣೆ ಮಾಡಿದ್ದರೆ? ವಾಹನ ಚಾಲನೆ ಯಾರು ಮಾಡುತ್ತಿದ್ದರು ಎಂಬುದನ್ನು ಖಚಿತಪಡಿಸಿಕೊಂಡಿದ್ದರೆ? ಈ ಎಲ್ಲಾ ವಿಷಯಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಶಾಸಕರನ್ನು ಘಟನೆ ಸ್ಥಳದಿಂದ ಕಳಿಸಿದ್ದರೆ? ಹೀಗೆ ಸಾಲು-ಸಾಲು ಪ್ರಶ್ನೆಗಳು ಕುಣಿಗಲ್ ಪೊಲೀಸರ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಅನುಮಾನಗಳನ್ನು ಎತ್ತಿವೆ.
ಅದೇ ಹೊತ್ತಿಗೆ, ಘಟನೆಯ ಕುರಿತು ಶಾಸಕ ಸಿ ಟಿ ರವಿ ಅವರು ನೀಡಿರುವ ಮಾಧ್ಯಮ ಹೇಳಿಕೆಗೂ ಅವರ ಪತ್ನಿ ಚಿಕ್ಕಮಗಳೂರಿನಲ್ಲಿ ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದ್ದು, ಅದು ಸಹ ಸಾಕಷ್ಟು ಅನುಮಾನಗಳಿಗೆ ಇಂಬು ನೀಡಿದೆ. ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಸಿ ಟಿ ರವಿ ಅವರು, “ತಾವು ರಾತ್ರಿ 11.30ಗೆ ಚಿಕ್ಕಮಗಳೂರಿನಿಂದ ಹೊರಟು, ಕಾರಿನಲ್ಲಿ ನಿದ್ದೆ ಮಾಡುತ್ತಿರುವಾಗ ಘಟನೆ ನಡೆದಿದೆ. ಕಾರು ಪಲ್ಟಿಯಾಗಿ ಬಿದ್ದ ಮೇಲೆಯೇ ತಮಗೆ ಎಚ್ಚರವಾಗಿದ್ದು” ಎಂದಿದ್ದಾರೆ. ಆದರೆ, ಮತ್ತೊಂದು ಕಡೆ ಅವರ ಪತ್ನಿ, ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ “ಅವರು (ರವಿ) ಅವರು ರಾತ್ರಿ 9.30ಕ್ಕೆ ಮನೆಯಿಂದ ಹೊರಟ್ಟಿದ್ದರು. ಬೆಳಗ್ಗೆ 6ಕ್ಕೆ ಬೆಂಗಳೂರಿನಿಂದ ಚೆನ್ನೈಗೆ ಹೊರಡುವ ವಿಮಾನದಲ್ಲಿ ಅವರು ಚೆನ್ನೈಗೆ ಹೊರಡಬೇಕಿತ್ತು” ಎಂದಿದ್ದಾರೆ. ಅಂದರೆ, ಶಾಸಕರು ಹೇಳುವ ಸಮಯಕ್ಕೂ, ಅವರ ಪತ್ನಿ ಹೇಳುವ ಸಮಯಕ್ಕೂ ಎರಡು ಗಂಟೆ ವ್ಯತ್ಯಾಸವಿದೆ. ಆ ಎರಡು ಗಂಟೆಯ ನಡುವಿನ ಅವಧಿಯಲ್ಲಿ ನಡೆದ ಘಟನೆಗಳ ಕುರಿತು ತನಿಖೆ ಮಾಡಿದರೆ, ಬಹುತೇಕ ಅಪಘಾತದಲ್ಲಿ ಮೃತರ ಸ್ನೇಹಿತರ ಆರೋಪಗಳಿಗೆ ಉತ್ತರ ಸಿಗಬಹುದು.

ಹಾಗೇ, ಶಾಸಕ ಸಿ ಟಿ ರವಿ ಅವರಿಗೆ ಕಾರು ಚಾಲನೆಯೇ ಬರುವುದಿಲ್ಲ, ಅವರು ವಾಹನ ಓಡಿಸುವುದೇ ಇಲ್ಲ ಎಂಬ ಸಮರ್ಥನೆಗಳೂ ಅವರ ಪಕ್ಷದ ಕೆಲವರಿಂದ ಬಂದಿವೆ. ಆದರೆ, ಅದಕ್ಕೆ ಪ್ರತಿಯಾಗಿ ಸ್ವತಃ ಶಾಸಕರ ಪತ್ನಿ, ತಮ್ಮ ಹೇಳಿಕೆಯಲ್ಲಿ, “ಅವರು ವಾಹನ ಚಾಲನೆ ಮಾಡುತ್ತಿದ್ದರು. ಈಗ ಹತ್ತು ವರ್ಷದಿಂದ ಚಾಲನೆ ಮಾಡುವುದನ್ನು ಬಿಟ್ಟಿದ್ದಾರೆ” ಎಂದಿದ್ದಾರೆ. ಅಂದರೆ, ರವಿ ಅವರಿಗೆ ವಾಹನ ಚಾಲನೆ ಗೊತ್ತು ಎಂದಾಯಿತು. ಅವರಿಗೆ ವಾಹನ ಚಾಲನೆ ಗೊತ್ತಿದ್ದರೂ, ಅವರಿಗೆ ವಾಹನ ಚಾಲನೆ ಗೊತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣದಲ್ಲಿ ಏನನ್ನೋ ಮುಚ್ಚಿಡಲಾಗುತ್ತಿದೆ ಎಂಬ ಅನುಮಾನ ಪೊಲೀಸರಿಗೆ ಕಾಡಲಿಲ್ಲ ಏಕೆ?
ಘಟನೆ ನಡೆದಾಗ ಮೃತರ ಸ್ನೇಹಿತರು ಮಾಡಿರುವ ವೀಡಿಯೋದಲ್ಲಿ ಶಾಸಕರೊಂದಿಗೆ ಅವರ ಚಾಲಕ ಮತ್ತು ಗನ್ ಮ್ಯಾನ್ ಇಬ್ಬರೂ ಇದ್ದಾರೆ. ಚಾಲಕ ಅಮಾಯಕ ಹುಡುಗರಿಗೆ ಧಮಕಿ ಹಾಕುವುದು ಕೂಡ ವೀಡಿಯೋದಲ್ಲಿ ದಾಖಲಾಗಿದೆ. ಆ ವೀಡಿಯೋವನ್ನು ಪರಿಶೀಲಿಸಿದ ಬಳಿಕವೂ, ಪೊಲೀಸರು ಚಾಲಕನನ್ನು ಪರಾರಿಯಾಗಲು ಏಕೆ ಅವಕಾಶಕೊಟ್ಟರು? ಸ್ವತಃ ಶಾಸಕರು, ತಮ್ಮ ಚಾಲಕನಿಗೆ ಪೊಲೀಸ್ ಠಾಣೆಗೆ ಕರೆದೊಯ್ದು ಹಾಜರುಪಡಿಸುವ ನಾಗರಿಕ ಹೊಣೆಗಾರಿಕೆ ತೋರುವ ಬದಲು, ತಮ್ಮ ಜೊತೆಯಲ್ಲೇ ಇದ್ದ ಆತ ಅಲ್ಲಿಂದ ಕಾಲುಕೀಳಲು ಸಹಕರಿಸಿದ್ದು ಕಾನೂನು ರೀತ್ಯ ಸರಿಯೇ?
ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಕೊಡಬೇಕಿರುವುದು ಕುಣಿಗಲ್ ಪೊಲೀಸರು. ಹಾಗೇ, ಹಲವು ಅನುಮಾನಗಳಿಗೆ ಕಾರಣವಾಗಿರುವ ಈ ಪ್ರಕರಣದ ತನಿಖೆ ಸೂಕ್ತರೀತಿಯಲ್ಲಿ ನಡೆದು ಅನ್ಯಾಯವಾಗಿ ಬಲಿಯಾಗಿರುವ ಇಬ್ಬರು ಯುವಕರಿಗೆ ಆಗಿರುವ ಅನ್ಯಾಯವನ್ನು ಕನಿಷ್ಠ ಸಾವಿನ ಬಳಿಕವಾದರೂ ಸರಿಪಡಿಸಬೇಕಾದ ಹೊಣೆ ತುಮಕೂರು ಪೊಲೀಸರು ಮತ್ತು ರಾಜ್ಯ ಸರ್ಕಾರದ್ದು. ಇಲ್ಲದೇ ಹೋದರೆ, ಇದು ಕರ್ನಾಟಕದ ‘ಸಲ್ಮಾನ್ ಖಾನ್ ಪ್ರಕರಣ’ವಾಗುವುದರಲ್ಲಿ ಮತ್ತು ಜನಪ್ರಿಯ ‘ಆಕ್ಸಿಡೆಂಟ್’ ಸಿನಿಮಾದ ರಿಯಲ್ ಕಥೆಯಾಗುವುದರಲ್ಲಿ ಅನುಮಾನವಿಲ್ಲ.
ಶಾಸಕರು ಕುಡಿದು ಗಾಡಿ ಓಡಿಸಿ ಈ ರೀತಿಯ ಮಾಡಿದ್ದೂ ತಪ್ಪು FIR ಹಾಕಾದೆ ಬಿಟ್ಟು ನೀವು ತಪ್ಪು ಮಾಡಿದ್ದೀರಿ .