‘ಲಕ್ಷ ಲಕ್ಷ ಹಣಕ್ಕಾಗಿ, ಕೋಟಿ ಕೋಟಿ ಕಪ್ಪುಹಣದ ಆಸೆಗಾಗಿ ರಾಜಕೀಯ ಪಕ್ಷಗಳ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಏನು ಬೇಕಾದರೂ ಪ್ರಚಾರ ಮಾಡುತ್ತೇವೆ’ ಎಂದು ಹೇಳುವ 36 ಬಾಲಿವುಡ್ ನಟ, ನಟಿಯರ, ಹಿನ್ನೆಲೆ ಗಾಯಕರ ಬಣ್ಣವನ್ನು ‘ಕೋಬ್ರಾಪೋಸ್ಟ್’ನ ಕುಟುಕು ಕಾರ್ಯಾಚರಣೆ ತಂಡ ಬಯಲು ಮಾಡಿದೆ.
ತಾವು ರಾಜಕೀಯ ಪಕ್ಷಗಳ ಸಾರ್ವಜನಿಕ ಸಂಪರ್ಕ (PR) ತಂಡದ ಪ್ರತಿನಿಧಿಗಳು ಎಂದು ಬದಲಿ ಗುರುತಿನೊಂದಿಗೆ ಖ್ಯಾತ ಸಿನಿಮಾ, ಕಿರುತೆರೆ ಕಲಾವಿದರನ್ನು, ಸಾಮಾಜಿಕ ಮಾಧ್ಯಮ ಸೆಲೆಬ್ರಿಟಿಗಳನ್ನು ಸಂಪರ್ಕಿಸಿ ಕೋಬ್ರಾಪೋಸ್ಟ್ ತಂಡವು ಈ ಎಲ್ಲರ ಸಂದರ್ಶನಗಳನ್ನೊಳಗೊಂಡ 60 ನಿಮಿಷಗಳ ವಿಡಿಯೋ ಒಂದನ್ನು ಮಂಗಳವಾರ ಬಿಡುಗಡೆ ಮಾಡಿದೆ. ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಂಗಳಲ್ಲಿ ಲಕ್ಷಾಂತರ ಅಭಿಮಾನಿಗಳ ಅನುಸರಣೆ ಹೊಂದಿರುವ ಇವರೆಲ್ಲಾ ರಾಜಕೀಯ ಪಕ್ಷಗಳು ನೀಡುವ ಕಪ್ಪು ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಹಾಗೂ ಆ ಮೂಲಕ ತಮ್ಮ ಅಭಿಮಾನಿಗಳಿಗೆ ರಾಜಕೀಯ ಪಕ್ಷಗಳ ಅಜೆಂಡಾಗಳನ್ನು ಹೇರಿಕೆ ಮಾಡುತ್ತಾರೆ ಎಂಬ ಆಘಾತಕಾರಿ ಸಂಗತಿಯನ್ನು ಈ ಕೊಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆಯ ವಿಡಿಯೋ ಬಯಲಿಗೆಳೆದಿದೆ.
‘ಅಪರೇಶನ್ ಕರಾವೋಕೆ’ ಎಂದು ಹೆಸರಿಸಲಾಗಿದ್ದ ಈ ಕುಟುಕು ಕಾರ್ಯಾಚರಣೆಯಲ್ಲಿ ಕೋಬ್ರಾಪೋಸ್ಟ್ ತಂಡವು ಸಂಪರ್ಕಿಸಿದ ಬಾಲಿವುಡ್ ಸೆಲೆಬ್ರಿಟಿ ತಾರೆಗಳಲ್ಲಿ ಬಾಲಿವುಡ್ ಬೆಳ್ಳಿತೆರೆ ಮತ್ತು ಕಿರುತೆರೆಯ ನಟ, ನಟಿಯರು, ಗಾಯಕರು, ಹಾಸ್ಯ ನಟರು, ಸೋಷಲ್ ಮೀಡಿಯಾ ಸೆಲೆಬ್ರಿಟಿಗಳು, ಇದ್ದರು. ಇವರಲ್ಲಿ ಪ್ರಮುಖರಾದವರೆಂದರೆ ಅಮಿಶಾ ಪಟೇಲ್, ಸನ್ನಿ ಲಿಯೋನ್, ವಿವೇಕ್ ಒಬೆರಾಯ್, ರಾಖಿ ಸಾವಂತ್, ಜಾಕಿ ಶ್ರಾಫ್, ಶಕ್ತಿ ಕಪೂರ್, ಸೋನು ಸೂದ್, ಶ್ರೇಯಸ್ ತಲ್ಪಡೆ, ಮಹಿಮಾ ಚೌಧರಿ, ಸುರೇಂದ್ರ ಪಾಲ್, ಕೈಲಾಶ್ ಖೇರ್, ಪಂಕಜ್ ಧೀರ್ ಮತ್ತವರ ಪುತ್ರ ನಿಕ್ತಿನ್ ಧೀರ್, ಅಖಿಲೇಂದ್ರ ಮಿಶ್ರಾ, ರೋಹಿತ್ ರಾಯ್, ರಾಹುಲ್ ಭಟ್, ಸಲೀಮ್ ಝೈದಿ, ಅಮಾನ್ ವರ್ಮ, ಹಿತೇನ್ ತೇಜ್ವಾನಿ ಮತ್ತವರ ಪತ್ನಿ ಗೌರಿ ಪ್ರಧಾನ್, ಇವೆಲಿನ್ ಶರ್ಮಾ, ಪೂನಂ ಪಾಂಡೆ, ಅಭಿಜಿತ್ ಭಟ್ಟಾಚಾರ್ಯ, ಮಿಕಾ ಸಿಂಗ್, ಬಾಬಾ ಸೆಹಗಲ್, ರಾಜು ಶ್ರೀವತ್ಸ, ಸುನಿಲ್ ಪಾಲ್, ರಾಜ್ಪಾಲ್ ಯಾದವ್, ಉಪಾಸನಾ ಸಿಂಗ್, ಕೃಷ್ಣ ಅಭಿಷೇಕ್, ಈಶ್ವರ್ ಪವಾರ್, ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಮತ್ತು ಬಿಗ್ಬಾಸ್ ಸ್ಪರ್ಧಿಯಾಗಿದ್ದ ಸಂಭಾವನಾ ಸೇಠ್ ಇದ್ದಾರೆ. ಇವರೆಲ್ಲರೂ ಹಣಕ್ಕಾಗಿ ತಮ್ಮ ಸಾಮಾಜಿಕ ಮಾಧ್ಯಮಗಳ ಅಕೌಂಟ್ಗಳ ಮೂಲಕ ‘ರಾಜಕೀಯ’ ಸಂದೇಶಗಳನ್ನು ಪ್ರಚಾರ ಮಾಡಲು ಒಪ್ಪಿಕೊಂಡವರು.
ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆಯಲ್ಲಿ ಮಾತನಾಡಿಸಲಾದ ಇವರಲ್ಲಿ ಬಹುತೇಕರು ತಾವು 2019ರ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಸಂದೇಶಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡುವುದಾಗಿ ಹೇಳಿದ್ದಾರೆ. ನಟ ಮತ್ತು ನಿರ್ದೇಶಕ್ ಶ್ರೇಯಸ್ ತಲ್ಪಡೆ ಮಾತ್ರ ತಾವು ಆಮ್ ಆದ್ಮಿ ಪಕ್ಷದ ಪರವಾಗಿ ಪ್ರಚಾರ ಮಾಡಲು ಒಪ್ಪಿದ್ದಾರೆ. . ಬಾಲಿವುಡ್ ನಟಿ ವಿದ್ಯಾಬಾಲನ್, ಕಿರುತೆರೆ ನಡಿ ಸೌಮ್ಯ ಟಂಡನ್ ಮತ್ತು ಕೆಲವರು ಮಾತ್ರ ತಾವು ಇಂತಹ ಕೆಲಸಕ್ಕೆ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ರಾಜಕೀಯ ಪ್ರಚಾರಕ್ಕೆ ಒಪ್ಪಿಕೊಂಡ ಈ ಸೆಲೆಬ್ರಿಟಿಗಳು ತಮಗೆ 20 ರಿಂದ 60 ಲಕ್ಷಗಳ ವರೆಗೂ ಹಣ ಕೇಳಿದ್ದಾರೆ. ಸೋನು ಸೂದ್ ಅವರು ತನಗೆ 8 ತಿಂಗಳಿಗೆ 20 ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟು, ‘ನಿಮಗೆ ಬೇಕಿದ್ದೆಲ್ಲವನ್ನೂ ಮಾಡುತ್ತೇನೆ’ ಎಂದಿದ್ದಾರೆ. ಮತ್ತೊಬ್ಬ ಸೆಲೆಬ್ರಿಟಿ ಮಹಿಮಾ ಚೌಧರಿ ಅವರು, “ಬಿಜೆಪಿಯವರು 1 ಕೋಟಿ ರೂಪಾಯಿ ಕೊಡಬಲ್ಲರು. ಒಂದು ವೇಳೆ ಅವರು ಕೊಡದೇ ಇದ್ದರೆ ನಾನು ಕಾಂಗ್ರೆಸ್ನವರ ಬಳಿ ಹೋಗುತ್ತೇನೆ” ಎಂದಿದ್ದಾರೆ.

ತಮ್ಮ ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂಗಳ ಮೂಲಕ ಜನರಿಗೆ ಹಣ ಪಡೆದು ಪ್ರಚಾರ ಮಾಡುವುದು ತಿಳಿಯದಂತೆ ಚುನಾವಣಾ ರಾಜಕೀಯ ಪ್ರಚಾರ ಮಾಡಲು ಒಪ್ಪಿಕೊಂಡ ಎಲ್ಲರೂ, ತಮಗೆ ನಗದು ರೂಪದಲ್ಲಿಯೇ ಹಣ ನೀಡಬೇಕು ಎಂದು ಹೇಳಿರುವುದು ವಿಶೇಷವಾಗಿದೆ. “ನೀವು ಸಂಪೂರ್ಣ ಹಣವನ್ನು ನಗದು ರೂಪದಲ್ಲಿಯೇ ನೀಡುತ್ತೇವೆ” ಎಂದು ಹೇಳಿದ್ದಿರಿ ಎಂದು ಲಾಂಬಾ ಅವರು ಹೇಳಿದ್ದರೆ, ಕಿರುತೆರೆ ನಟ ಅಮಾನ್ ವರ್ಮ ‘ನಗದು ರೂಪದಲ್ಲಿ ಪಾವತಿಯೇ ನನಗಿಷ್ಟ’ ಎಂದಿದ್ದಾರೆ.
ಅನೇಕ ಸೆಲೆಬ್ರಿಟಿಗಳು ತಾವು ಹಣಕ್ಕಾಗಿ ರಾಜಕೀಯ ಪ್ರಚಾರ ನಡೆಸಲು ಒಪ್ಪಿಕೊಳ್ಳುವ ಜೊತೆಗೆ ತಮ್ಮ ಕುಟುಂಬದವರನ್ನೂ, ಪರಿಚಯದವರಿಗೂ ಇದರಲ್ಲಿ ತೊಡಗಿಸಲು ಕೋರಿದ್ದಾರೆ. ಮಹಾಭಾರತ ಧಾರವಾಹಿಯ ದ್ರೋಣಾಚಾರ್ಯ ಪಾತ್ರಕ್ಕೆ ಪ್ರಸಿದ್ಧರಾದ ಸುರೇಂದ್ರ ಪಾಲ್ ಅವರು ಕೋಬ್ರಾಪೋಸ್ಟ್ ವರದಿಗಾರರಿಗೆ ಪುನೀತ್ ಇಸ್ಸಾರ್ ಮತ್ತು ಉಪಾಸನಾ ಸಿಂಗ್ ಅವರನ್ನು ಸಂಪರ್ಕಿಸಲು ತಿಳಿಸಿದ್ದಾರೆ. ನಟ ಹಿತೇನ್ ತೇಜ್ವಾನಿ ಅವರು ತಮ್ಮ ಪತ್ನಿ ಗೌರಿ ಪ್ರಧಾನ್ರನ್ನೂ ಈ ಪ್ರಚಾರದಲ್ಲಿ ಒಳಗೊಳ್ಳಲು ಸಲಹೆ ನೀಡಿದ್ದಾರೆ. ನಟ ರೋಹಿತ್ ರಾಯ್ ತಮ್ಮ ಸೋದರ ರೋನಿತ್ನನ್ನು ಸಹ ಈ ಸಾಮಾಜಿಕ ಮಾಧ್ಯಮ ಪ್ರಚಾರದಲ್ಲಿ ತೊಡಗಿಸುವುದಾಗಿ ಹೇಳಿದ್ದಾರೆ. ಗಾಯಕ ಮಿಕಾ ಸಿಂಗ್, “ಬೇಕಿದ್ದರೆ ಇನ್ನಷ್ಟು ಜನರನ್ನು ನಾನು ಇದರಲ್ಲಿ ಸೇರಿಸುತ್ತೇನೆ. ಮೊದಲು ನಾನು ಶುರು ಮಾಡುವಂತೆ ಆಗಲಿ” ಎಂದಿದ್ದಾರೆ. ‘ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ’ ಎಂಬ ಮಾತನ್ನು ಈ ಸೆಲೆಬ್ರಿಟಿ ತಾರೆಗಳೆಲ್ಲರೂ ಅಕ್ಷರಶಃ ನಿಜವಾಗಿಸಿದ್ದಾರೆ ಎಂದಬುದು ಈ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ.
“ನೋಡುಗರ ರಕ್ತ ಕುದಿಯುವಂತೆ ವಿಡಿಯೋ ಮಾಡಿ ಹಾಕುತ್ತೇನೆ” ಎಂದ ಖ್ಯಾತ ಹಿನ್ನೆಲೆ ಗಾಯಕ ಅಭಿಜಿತ್ ಬಟ್ಟಾಚಾರ್ಯ
ಸುಮಾರು 18 ವಿವಿಧ ಭಾಷೆಗಳಲ್ಲಿ ಹಿನ್ನೆಲೆ ಗಾಯಕನಾಗಿ ಪ್ರಸಿದ್ಧಿ ಹೊಂದಿರುವ ಕಾನ್ಪುರ ಮೂಲದ ಖ್ಯಾತ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ, ‘ನಾನು ಹಾಕುವ ವಿಡಿಯೋಗಳನ್ನು ನೋಡಿದವರಲ್ಲಿ ರಕ್ತ ಕುದಿಯುವಂತೆ ಹಾಕುತ್ತೇನೆ’ ಎಂದು ಹೇಳಿದ್ದಾರಲ್ಲದೇ ಯಾವ ವಿಚಾರಗಳನ್ನು ಚರ್ಚೆಗೆ ಕೊಂಡೊಯ್ಯಬಹುದು ಎಂಬ ಸಲಹೆಯನ್ನೂ ನೀಡಿದ್ದಾರೆ. ತ್ರಿವಳಿ ತಲಾಖ್ ವಿಷಯವನ್ನು ಪ್ರಧಾನಿ ಮೋದಿಯವರ ಬೇಟಿ ಪಡಾವೋ, ಭೇಟಿ ಬಚಾವೋ ಆಂದೋಲದೊಂದಿಗೆ ಥಳುಕು ಹಾಕಿ ನಾನು ಪೋಸ್ಟ್ ಹಾಕುತ್ತೇನೆ. ಆಗ ಇದು ಅಸಹಜ ಎನಿಸುವುದಿಲ್ಲ. “ನಾನು ನನ್ನ ಮೊಬೈಲ್ನಲ್ಲಿಯೂ ಕೆಲವು ವಿಡಿಯೋ ಮಾಡಿ ಹಾಕುತ್ತೇನೆ” ಎಂದೂ ಅವರು ಹೇಳಿದ್ದಾರೆ.

ಹೀಗೆ ಹೇಳುವ ಅಭಿಜಿತ್, ತಾನು ಪಶ್ಚಿಮ ಬಂಗಾಳ ಮತ್ತು ಟಿಎಂಸಿ ಕುರಿತು ಮಾತ್ರ ಏನೂ ಮಾತಾಡಲಾರೆ – “ಸಿರ್ಫ್ ಬಂಗಾಲ್ ಔರ್ ಟಿಎಂಸಿ ಚೋಡ್ ಕೆ ಸಭ್ ಕರೂಂಗಾ.. ಹಮಾರಾ ರೋಜೀ ರೋಟೀ ಮ್ಯಾಕ್ಸಿಮಮ್ ವಹಾ ಸೇ ಹೈ” ಎಂದು ಹೇಳಿದ್ದಾರೆ. ಟಿಎಂಸಿ ಕುರಿತು ನಕಾರಾತ್ಮಕವಾಗಿ ಮಾತಾಡಿದರೆ ತನ್ನ ಆದಾಯಕ್ಕೆ ಪೆಟ್ಟು ಬೀಳುತ್ತದಾದ್ದರಿಂದ ಅದೊಂದನ್ನು ಬಿಟ್ಟು ಬಿಜೆಪಿ ಹೇಳುವ ಯಾವುದೇ ವಿಷಯದ ಬಗ್ಗೆ ಟ್ವೀಟ್ ಮಾಡುವುದಾಗಿ ಹೇಳಿದ್ದಾರೆ. ತಾವು ಬಿಜೆಪಿಯ ಪರವಾಗಿ ಮಾಡುವ ಈ ಕೆಲಸಕ್ಕೆ ಪ್ರತಿಯಾಗಿ ಹಣದ ವಿಚಾರವನ್ನು ಮಾತಾಡಲು ತಮ್ಮ ಮ್ಯಾನೇಜರ್ ನಿತಿನ್ ಅವರೊಂದಿಗೆ ಮಾತಾಡಲು ಸೂಚಿಸುತ್ತಾರೆ. ನಿತಿನ್ ಅವರು ತಮ್ಮ ಬಾಸ್ಗೆ ತಿಂಗಳಿಗೆ 60 ಲಕ್ಷ ರೂಪಾಯಿ ನೀಡಬೇಕು ಎಂದು ತಾಕೀತು ಮಾಡಿರುವುದನ್ನು ಕೋಬ್ರಾಪೋಸ್ಟ್ ಸ್ಟಿಂಗ್ ವಿಡಿಯೋದಲ್ಲಿ ದಾಖಲಾಗಿದೆ.
ಟ್ವಿಟರ್ ನಲ್ಲಿ ಮಹಿಳೆಯರ ಕುರಿತು ಅವಾಚ್ಯವಾಗಿ ಟ್ವೀಟ್ ಮಾಡಿದ ಕಾರಣಕ್ಕೆ 2016ರಲ್ಲಿ ಅಭಿಜಿತ್ ಭಟ್ಟಾಚಾರ್ಯ ಬಂಧನಕ್ಕೂ ಒಳಗಾಗಿದ್ದರಲ್ಲದೇ ಇವರ ಟ್ವಿಟರ್ ಅಕೌಂಟನ್ನು ಅಳಿಸಿ ಹಾಕಿತ್ತು. ಅದಕ್ಕೂ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕಾರು ರಸ್ತೆಯ ಮೇಲೆ ಮಲಗಿದ್ದವರ ಮೇಲೆ ಹರಿದದ್ದನ್ನು ಸಮರ್ಥಿಸಿಕೊಂಡಿದ್ದ ಅಭಿಜಿತ್, ‘ರಸ್ತೆಯ ಮೇಲೆ ನಾಯಿಗಳು ಮಲಗಿ ನಾಯಿಗಳಂತೆ ಸಾಯುತ್ತವೆ’ ಎಂಬ ಕೀಳು ಮಟ್ಟದ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು.
“ಮೋದಿ ಸರ್ ನನ್ನ ಗಂಡ ಡೇನಿಯಲ್ ಗೆ ಸಾಗರದಾಚೆಯ ಪೌರತ್ವ ಹಕ್ಕು ಕೊಡಿಸಲಿ” ಎಂದ ಸನ್ನಿ ಲಿಯೋನ್
ಚುನಾವಣೆಯಲ್ಲಿ ತಾನು ಬಿಜೆಪಿಯ ಪರವಾಗಿ ಪ್ರಚಾರಕ್ಕೆ ಸಿದ್ಧ ಎಂದು ತಿಳಿಸಿದ, ಬಾಲಿವುಡ್ ನಟಿಯಾಗಿ ಬದಲಾಗಿರುವ ವಿಶ್ವಪ್ರಸಿದ್ಧ ಪೋರ್ನ್ ನಟಿ ಸನ್ನಿ ಲಿಯೋನ್ ಇದಕ್ಕೆ ಪ್ರತಿಯಾಗಿ, “ಮೋದಿ ಸರ್ ನನ್ನ ಗಂಡ ಡೇನಿಯಲ್ ಅವರಿಗೆ ಓವರ್ ‘ಸಾಗರದಾಚೆಯೆ ಪೌರತ್ವ’ ನೀಡುವುದಾದರೆ ಖಂಡಿತವಾಗಿಯೂ ಬೆಂಬಲಿಸುತ್ತೇನೆ” (ಮೋದಿ ಸರ್ ಡೇನಿಯಲ್ ಕೊ ಓವರ್ಸೀಸ್ ಸಿಟಿಜನ್ ಬನಾಯಾ ತೋ ಗಮ್ ಜರೂರ್ ಸಪೋರ್ಟ್ ಕರೇಂಗೆ) ಎಂದಿದ್ದಾರೆ. ಕೋಬ್ರಾಪೋಸ್ಟ್ ತಂಡವು ಸನ್ನಿ ಲಿಯೋನ್ ಪತಿ ಡೇನಿಯಲ್ ಅವರನ್ನು ಮಾತಾಡಿಸಿದಾಗ ಅವರು, “ಸರ್ಜಿಕಲ್ ಸ್ಟ್ರೈಕ್ನಂತಹ ವಿಷಯಗಳ ಬಗ್ಗೆ ಸನ್ನಿ ಲಿಯೋನ್ ಮಾತಾಡುವುದು ಅಸಹಜ ಎನಿಸಬಹುದು. ಈ ‘ಸಂಪೂರ್ಣ ವಿದ್ಯುದೀಕರಣ’ ದಂತಹ ವಿಷಯಗಳ ಬಗ್ಗೆ ಪ್ರಚಾರ ಮಾಡಲು ಅಡ್ಡಿಯಿಲ್ಲ ಎಂದಿದ್ದಾರೆ.

ಇನ್ನು ಪ್ರಸಿದ್ಧ ಬಾಲಿವುಡ್ ಗಾಯಕ ಕೈಲಾಶ್ ಖೇರ್ ಸಹ ಬಿಜೆಪಿ ಪರವಾಗಿ ಪ್ರಚಾರ ಮಾಡಲು ಒಪ್ಪಿ, “ಅವರ ಜೊತೆ (ತಮ್ಮ ಏಜೆನ್ಸಿ) ಮಾತಾಡಿ, ಅದರ ಬಗ್ಗೆ ಎಲ್ಲಾ ಹೇಳುತ್ತಾರೆ” ಎಂದು ಹಣಕಾಸು ವಿಷಯವನ್ನು ತಮ್ಮ ಏಜೆನ್ಸಿ ಜೊತೆ ಮಾತಾಡಲು ತಿಳಿಸಿದ್ದಾರೆ.
ಕಹೋನಾ ಪ್ಯಾರ್ ಹೇ, ಗದಾರ್-ಏಕ್ ಪ್ರೇಮ್ ಕಹಾನಿ ಸಿನಿಮಾಗಳ ಮೂಲಕ ಪ್ರಸಿದ್ಧಿ ಕಂಡಿದ್ದ ಬಾಲಿವುಡ್ ಸೆಲೆಬ್ರಿಟಿ ತಾರೆ ಅಮೀಷಾ ಪಟೇಲ್ ಅವರನ್ನು ಸಂಪರ್ಕಿಸಿರುವ ಕೋಬ್ರಾಪೋಸ್ಟ್ ವಿಡಿಯೋ ಚಿತ್ರೀಕರಣ ಮಾಡಿದೆ. ಅದರಲ್ಲಿ ಅಮಿಷಾ ಪಟೇಲ್, “ನೀವು 28ನೇ ತಾರೀಖು ಹಣ ನೀಡಿದರೆ, 28ರ ಸಂಜೆಯೇ ನಾನು ಟ್ವೀಟ್ ಶುರು ಮಾಡುತ್ತೇನೆ. ನಾನು ಸೆಪ್ಟೆಂಬರ್ ಮೊದಲ ವಾರದಲ್ಲಿ ಮೊದಲ ಮುಂಗಡ ಹಣ ಪಡೆದರೆ ಐದು ದಿನಗಳ ಅಂತರವಿರುತ್ತದೆ” ಎಂದು ನುಡಿದಿದ್ದಾರೆ.
ಮೋದಿಯವರ ಅನಾಣ್ಯೀಕರಣ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಬಾಲಿವುಡ್ ನಟ ಶಕ್ತಿ ಕಪೂರ್, ‘ನಂಬರ್ ಒನ್ ಮೇ ಡಾಲೋ ಮತ್’ ಎಂದು ಹೇಳಿ ಕಪ್ಪು ಹಣದಲ್ಲಿಯೇ ಹಣ ಪಾವತಿ ಮಾಡುವುದನ್ನು ‘ಅಪರೇಶನ್ ಕರಾವೋಕೆ’ ಬಯಲುಗೊಳಿಸಿದೆ.
ಹಿಂದೆ ರಾಜನಾಥ್ ಸಿಂಗ್ ಅವರಿಗೂ ನಾನು ಪ್ರಚಾರ ಮಾಡಿದ್ದೆ ಎಂದ ರಾಖಿ ಸಾವಂತ್
“ಕಳೆದ ಸಲವೂ ಹೀಗೇ ಆಗಿತ್ತು. ನನ್ನನ್ನು ರಾಜನಾಥ್ ಸಿಂಗ್ ಹಣ ನೀಡಿ ನೇಮಿಸಿಕೊಂಡಿದ್ದರು ಗೊತ್ತಾ? ಇದನ್ನೆಲ್ಲಾ ಹೀಗೆ ಹೇಳಬಾರದು. ಇದೆಲ್ಲಾ ಕಾನೂನು ಬಾಹಿರ. ನಾನು ನಿಮ್ಮ ಬಳಿ ಹೇಳುತ್ತಿದ್ದೇನೆ. ಯಾಕೆಂದರೆ ಕಲಾವಿದರು ಮಾತಾಡಬಾರದು” ಎಂದು ಹೇಳಿದ್ದಾರೆ.
“ಒಲ್ಲೆ” ಎಂದ ಸೆಲೆಬ್ರಿಟಿಗಳು
‘ಅಪರೇಷನ್ ಕರಾವೋಕೆ’ ಮೂಲಕ ಕೋಬ್ರಾಪೋಸ್ಟ್ ಸಂಪರ್ಕಿಸಿದ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ನಾಲ್ಕು ಮಂದಿ ಮಾತ್ರ ಹಣಕ್ಕಾಗಿ ರಾಜಕೀಯ ಪಕ್ಷಗಳಿಗೆ ತಮ್ಮನ್ನು ಮಾರಿಕೊಳ್ಳಲು ನಿರಾಕರಿಸಿದ್ದಾರೆ. ಅವರೆಂದರೆ ಅರ್ಷಾದ್ ವಾರ್ಸಿ, ವಿದ್ಯಾ ಬಾಲನ್, ರಾಝಾ ಮುರಾದ್ ಮತ್ತು ಭಾಬೀ ಜೀ ಘರ್ ಪರ್ ಹೈಂ ಧಾರವಾಹಿ ಖ್ಯಾತಿಯ ಸೌಮ್ಯ ಟಂಡನ್.
ಸೌಮ್ಯ ಟಂಡನ್ ಅವರನ್ನು ಕೋಬ್ರಾ ತಂಡವು ಫೋನ್ ಮೂಲಕ ಸಂಪರ್ಕಿಸಿದಾಗ, ಹಣಕ್ಕಾಗಿ ಪ್ರಚಾರ ಮಾಡುವ ಕೋರಿಕೆಯನ್ನು ಖಂಡತುಂಡವಾಗಿ ತಿರಸ್ಕರಿಸಿದ್ದಾರೆ.
‘ನಾನು ನನ್ನ ವೈಯಕ್ತಿಕ ಲಾಭಕ್ಕಾಗಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಬಯಸುವುದಿಲ್ಲ. ಯಾಕೆಂದರೆ ಅದು ನನ್ನ ತತ್ವ ಆದರ್ಶಗಳಿಗೆ ವಿರುದ್ಧವಾದದ್ದು. ಹಣಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿರುವ ನಟ ನಟಿಯರು ನಿಮಗೆ ಸಿಗುತ್ತಾರೆ. ನಾನು ಹಣಕ್ಕಾಗಿ ನನ್ನನ್ನು ಮಾರಿಕೊಳ್ಳಲಾರೆ. ಆದರೆ ನಾನು ಒಂದೊಮ್ಮೆ ಯಾವುದಾದರೂ ಪಕ್ಷದ ಪರವಾಗಿ ಕೆಲಸ ಮಾಡಲು ನಿರ್ಧರಿಸಿದರೆ ಮಾತ್ರ, ಅದರ ವಿಚಾರದಲ್ಲಿ ನಾನು ಪ್ರಾಮಾಣಿಕವಾಗಿ ನಂಬಿಕೆ ಇದ್ದಾಗ ಮಾತ್ರ ನಾನು ಅದರ ಪರವಾಗಿ ಮಾತಾಡಬಲ್ಲೆನೇ ಹೊರತು ಹಣಕ್ಕಾಗಿ ಅಲ್ಲ”
ಸೌಮ್ಯ ಟಂಡನ್

ರಾಝಾ ಮುರಾದ್ ಅವರನ್ನು ತಂಡವು ಸಂಪರ್ಕಿಸಿದಾಗ, ಈ ಕೊಳಕು ರಾಜಕೀಯದಲ್ಲಿ ತಲೆ ತೂರಿಸಲು ತಮಗೆ ಇಷ್ಟವಿಲ್ಲ, ನನಗೆ ಟ್ವಿಟರ್ ಅಕೌಂಟ್ ಕೂಡಾ ಇಲ್ಲ ಎಂದಿದ್ದಾರೆ. ನಿಮಗಾಗಿ ಒಂದು ಟ್ವಿಟರ್ ಅಕೌಂಟ್ ಮಾಡಿ ಕೊಡುತ್ತೇವೆ ಎಂದಿದ್ದಕ್ಕೆ ಪ್ರತಿಯಾಗಿ ಮುರಾದ್ ಅವರು “ಬೇಡ, ಟ್ವಿಟರ್ ಅಕೌಂಟ್ ತೆರೆಯಲು ನನಗೆ ಇಷ್ಟವಿಲ್ಲ” ಎಂದಿದ್ದಾರೆ. ಇದೇ ರೀತಿಯಲ್ಲಿ ಅರ್ಷಾದ್ ವಾರ್ಸಿ ಸಹ ನಿರಾಕರಿಸಿದ್ದಾರೆ. ಖ್ಯಾತ ನಟಿ ವಿದ್ಯಾ ಬಾಲನ್ ಅವರೂ ಸಹ ತಮಗೆ ಬಂದ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿ ತಮ್ಮ ಸಾಮಾಜಿಕ ಮಾಧ್ಯಮ ಅಕೌಂಟ್ಗಳನ್ನು ಪಕ್ಷವೊಂದ ರಾಜಕೀಯ ಅಜೆಂಡಾವನ್ನು ಮುಂದೆ ತರಲು ಹಣ ಪಡೆದುಕೊಳ್ಳುವುದು ತಮಗೆ ಇಷ್ಟವಿಲ್ಲದ ಸಂಗತಿ, ನಾನಿದರ ಭಾಗವಾಗಲಾರೆ ಎಂದು ಹೇಳಿದ್ದಾರೆ.
ಈ ಇಡೀ ಕಾರ್ಯಾಚರಣೆಯಲ್ಲಿ ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ತಂಡದ ಸದದ್ಯರು ತಾವು ಯಾವುದೇ ರಾಜಕೀಯ ಪಕ್ಷದ ಅಧಿಕೃತ ಪ್ರತಿನಿಧಿಗಳಲ್ಲ, ಬದಲಾಗಿ ನಾವೊಂದು ಸ್ವತಂತ್ರವಾದ ಸಾರ್ವಜನಿಕ ಪ್ರತಿನಿಧಿ ಸಂಸ್ಥೆಯವರು. ಈ ಕೆಲಸಕ್ಕಾಗಿ ನಾವು ರಾಜಕೀಯ ಪಕ್ಷಗಳಿಗೂ ಸೆಲೆಬ್ರಿಟಿಗಳಿಗೂ ನಡುವೆ ಕೊಂಡಿಗಳಾಗಿರುತ್ತೇವೆ ಎಂದು ಹೇಳಿಕೊಂಡೇ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುಟುಕು ಕಾರ್ಯಾಚರಣೆಯ ಫಲಿತಾಂಶವನ್ನು ಮಂಗಳವಾರ ಬಹಿರಂಗಪಡಿಸಿರುವ ಕೋಬ್ರಾಪೋಸ್ಟ್, ನಾವು ನಮ್ಮ ಕಾರ್ಯಾಚರಣೆಯಲ್ಲಿ ರಾಜಕೀಯ ಪಕ್ಷಗಳ ಹೆಸರುಗಳನ್ನು ಬಳಸಿಕೊಂಡಿರುವುದು ಅವುಗಳ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದಲೇ ವಿನಃ ಬೇರೆ ಉದ್ದೇಶದಿಂದ ಅಲ್ಲ ಎಂದು ಸ್ಪಷ್ಟಪಡಿಸಿದೆ.
TruthIndiaKannada