ಇಡೀ ಜಗತ್ತೇ ಕಟು ಮಾತುಗಳಲ್ಲಿ ಖಂಡಿಸಿದ, ಭಾರತದ ಸೇನಾ ಇತಿಹಾಸದಲ್ಲೇ ಭೀಕರ ಎನ್ನಲಾದ ಒಂದು ಹೇಯ ದಾಳಿಯ ಮಾರನೇ ದಿನವೇ ಪಾಕಿಸ್ತಾನಕ್ಕೆ ಭೇಟಿ ನೀಡಿ, “ನಾನು ಪಾಕಿಸ್ತಾನದ ರಾಯಭಾರಿ” ಎಂದು ಹೇಳಿಕೆ ನೀಡಿದ ದೊರೆ ಸಲ್ಮಾನ್, ಯಾವ ಮೌಲ್ಯಗಳ ರಾಯಭಾರಿ? ಅವರನ್ನು ಹೀಗೆ ಅಪ್ಪಿಮುದ್ದಾಡಿ ಸ್ವಾಗತಿಸಿದ ಪ್ರಧಾನಿ ಮೋದಿ ಯಾವ ಸಂದೇಶ ರವಾನಿಸುತ್ತಿದ್ದಾರೆ? ಎಂಬ ಟೀಕೆಗಳು ಕೇಳಿಬಂದಿವೆ.
ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಭಾರತದ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಶಿಷ್ಟಾಚಾರವನ್ನು ಬದಿಗೊತ್ತಿ ಸ್ವತಃ ದೆಹಲಿ ವಿಮಾನ ನಿಲ್ದಾಣಕ್ಕೆ ಹೋಗಿ ಅಪ್ಪುಗೆಯೊಂದಿಗೆ ಅವರನ್ನು ಸ್ವಾಗತಿಸಿದ್ದು, ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಪ್ರಮುಖವಾಗಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ಬೆಂಬಲದೊಂದಿಗೆ ಜೈಷ್ ಎ ಮೊಹಮ್ಮದ್ ಉಗ್ರರು ಕಾಶ್ಮೀರದ ಪುಲ್ವಾಮಾದಲ್ಲಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ದೇಶದ 44 ಮಂದಿ ಯೋಧರು ಬಲಿಯಾದ ಹೊತ್ತಲ್ಲಿ, ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯಾಗಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಹೇಳುತ್ತಿರುವ ಪ್ರಧಾನಿ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ, ದಾಳಿ ನಡೆದ ಮಾರನೇ ದಿನವೇ ಪಾಕಿಸ್ತಾನಕ್ಕೆ ಭೇಟಿ ನೀಡಿ, ಆ ದೇಶಕ್ಕೆ ಬರೋಬ್ಬರಿ ರೂ. 1.42 ಲಕ್ಷ ಕೋಟಿ ಹೂಡಿಕೆಯನ್ನು ಘೋಷಿಸಿದ ಸೌದಿ ದೊರೆಯನ್ನು ಹೀಗೆ ಅತ್ಯಾದರದಿಂದ ಸ್ವಾಗತಿಸುವ ಅಗತ್ಯವೇನಿತ್ತು? ಎಂಬ ಪ್ರಶ್ನೆ ಪ್ರತಿಪಕ್ಷಗಳು ಮತ್ತು ಸಮಾಜದ ವಿವಿಧ ವಲಯಗಳಿಂದ ಕೇಳಿಬಂದಿದೆ.
ಅದರಲ್ಲೂ ಜೈಷ್ ಎ ಮೊಹಮ್ಮದ್ ಉಗ್ರ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಅಧಿಕೃತವಾಗಿ ಘೋಷಿಸುವಂತೆ ವಿಶ್ವಸಂಸ್ಥೆಯ ಮೇಲೆ ಭಾರತ ಒತ್ತಡ ಹಾಕುತ್ತಿರುವಾಗ, ದೇಶದ ಬೇಡಿಕೆಗೆ ಅಮೆರಿಕ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಬೆಂಬಲಿಸುತ್ತಿರುವಾಗ, ಸೌದಿ ದೊರೆ, ಪಾಕಿಸ್ತಾನದಲ್ಲಿ “ವಿಶ್ವಸಂಸ್ಥೆಯ ಘೋಷಣೆಯ ವಿಷಯದಲ್ಲಿ ರಾಜಕೀಯ ಮಾಡಬಾರದು” ಎಂದು ಹೇಳಿಕೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವರನ್ನು ಹೀಗೆ ಸ್ವಾಗತಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.
ಆದರೆ, ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟು ಅಷ್ಟೇ ಅಲ್ಲದೆ, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ವ್ಯೂಹಾತ್ಮಕ ತಂತ್ರಗಾರಿಕೆಯ ಕುರಿತೂ ಸೌದಿ ದೊರೆ ಮತ್ತು ಪ್ರಧಾನಿ ಮೋದಿಯವರು ಈ ಭೇಟಿಯಲ್ಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಸಂಬಂಧ ಉಭಯ ರಾಷ್ಟ್ರಗಳು ಐದಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರದ ವಿವಿಧ ಮೂಲಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. “ಇದೇ ಮೊದಲ ಬಾರಿಗೆ ದೊರೆ ಸಲ್ಮಾನ್ ಭಾರತಕ್ಕೆ ಭೇಟಿ ನೀಡುತ್ತಿದ್ದು, ಇದು ಉಭಯ ರಾಷ್ಟ್ರಗಳ ನಡುವೆ ಹೊಸ ಅಧ್ಯಾಯ ಆರಂಭಕ್ಕೆ ಮುನ್ನುಡಿ” ಎಂದು ವಿದೇಶಾಂಗ ಖಾತೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಆದರೆ, ಇಡೀ ಜಗತ್ತೇ ಕಟು ಮಾತುಗಳಲ್ಲಿ ಖಂಡಿಸಿದ, ಭಾರತದ ಸೇನಾ ಇತಿಹಾಸದಲ್ಲೇ ಭೀಕರ ಎನ್ನಲಾದ ಒಂದು ಹೇಯ ದಾಳಿಯ ಮಾರನೇ ದಿನವೇ ಪಾಕಿಸ್ತಾನಕ್ಕೆ ಭೇಟಿ ನೀಡಿ, “ನಾನು ಪಾಕಿಸ್ತಾನದ ರಾಯಭಾರಿ” ಎಂದು ಹೇಳಿಕೆ ನೀಡಿದ ದೊರೆ ಸಲ್ಮಾನ್, ತಾವು ಯಾವ ಮೌಲ್ಯಗಳ ರಾಯಭಾರಿ ಎಂದಿದ್ದಾರೆ? ಪಾಕಿಸ್ತಾನ ಮೂಲದ ವಹಾಬಿ ಉಗ್ರವಾದಕ್ಕೆ ಹಣಕಾಸು ಮತ್ತು ಶಸ್ತ್ರಾಸ್ತ್ರ ಪೂರೈಸುವ ಮೂಲಕ ಭಯೋತ್ಪಾದನೆಗೆ ಬೆಂಬಲ ನೀಡುವ ಆರೋಪ ಸ್ವತಃ ಸೌದಿ ಅರೇಬಿಯಾದ ಮೇಲೆಯೇ ಇದೆ. ಮಧ್ಯಪ್ರಾಚ್ಯ ವಲಯದಲ್ಲಿ ಸೌದಿಯ ಭಯೋತ್ಪಾದನಾ ಪರ ತೆರೆಮರೆಯ ಆಟಗಳು ಅಲ್ಲಿನ ಹಲವು ರಾಷ್ಟ್ರಗಳ ನಡುವಿನ ಸಂಬಂಧವನ್ನೇ ಕಡಿದುಹಾಕಿದೆ. ಅಲ್ಲದೆ, ಕಳೆದ ವರ್ಷ ಇಸ್ತಾಂಬುಲ್ನಲ್ಲಿ ನಡೆದ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯಲ್ಲಿ ಸ್ವತಃ ರಾಜಮನೆತನದ ಕೈವಾಡ ಇದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಸೌದಿಯೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿವೆ.
ಇಂತಹ ಹಿನ್ನೆಲೆಯ ಅರಿವಿದ್ದೂ ಭಾರತ ಸರ್ಕಾರ ಸೌದಿ ದೊರೆಯ ವಿಷಯದಲ್ಲಿ ಅತಿ ಕಾಳಜಿ ತೋರುತ್ತಿರುವುದು ಸಹಜವಾಗೇ ಹಲವರು ಹುಬ್ಬೇರಿಸುವಂತೆ ಮಾಡಿದೆ. ಅದರಲ್ಲೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಪುತ್ರರಿಬ್ಬರು ಸೌದಿ ದೊರೆಯ ಸಹೋದರನೊಂದಿಗೆ ಹೊಂದಿರುವ ರಕ್ಷಣಾ ಕ್ಷೇತ್ರದಲ್ಲಿನ ಹೂಡಿಕೆ ಮತ್ತು ಹಣಕಾಸು ವ್ಯವಹಾರ ಪಾಲುಗಾರಿಕೆ ವಿಷಯಗಳು ಬಯಲಾದ ಬಳಿಕ ಸೌದಿ ದೊರೆ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಬಂಧಗಳ ಮೇಲೆ ಅನುಮಾನದ ಕರಿನೆರಳು ಚಾಚಿದೆ. ಆ ವ್ಯವಹಾರಿಕ ಕಾರಣಗಳ ಹಿನ್ನೆಲೆಯಲ್ಲಿಯೂ ಈ ಭೇಟಿಯಲ್ಲಿ ಪ್ರಧಾನಿ ತೋರುತ್ತಿರುವ ಆಸಕ್ತಿ ಭಿನ್ನಭಿನ್ನ ವಿಶ್ಲೇಷಣೆಗಳಿಗೆ ಇಂಬುನೀಡಿದೆ.
ಹಾಗಾಗಿ, ಒಂದು ಕಡೆ ಪಾಕಿಸ್ತಾನವನ್ನು ಏಕಾಂಗಿಯಾಗಿಸುತ್ತೇವೆ. ಯೋಧರ ಹನಿಹನಿ ರಕ್ತಕ್ಕೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದು ಹೇಗೆ ಮತ್ತು ಯಾವಾಗ ಎಂಬುದು ಗೊತ್ತಿದೆ ಎಂಬ ಘೋಷಣೆ ಮಾಡುವ ಪ್ರಧಾನಿ ಮೋದಿಯವರು, ಅದೇ ಹೊತ್ತಿಗೆ ಅದೇ ಪಾಕಿಸ್ತಾನವನ್ನು ಗಟ್ಟಿಗೊಳಿಸುವ, ಅದು ನಡೆಸುತ್ತಿರುವ ಭಯೋತ್ಪಾದನಾ ಬೆಂಬಲದ ಕಾರ್ಯಗಳಿಗೆ ಹಣಕಾಸು ನೆರವು ನೀಡುವ ಸೌದಿ ಅರೇಬಿಯಾದ ದೊರೆಯನ್ನು ಅಪ್ಪಿ ಮುದ್ದಾಡಿ ಸ್ವಾಗತಿಸುತ್ತಿದ್ದಾರೆ. ಹಾಗಾದರೆ, ಅವರ ಮಾತನ್ನು ನಂಬಬೇಕೋ, ಇಲ್ಲವೇ ಅವರ ನಡೆಯನ್ನು ನಂಬಬೇಕೋ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ಇದೇ ವೇಳೆ, ಪುಲ್ವಾಮಾದಲ್ಲಿ ಉಗ್ರನ ದಾಳಿಗೆ 44 ಯೋಧರು ಬಲಿಯಾದ ದಿನ ಸಂಜೆ, ಪ್ರಧಾನಿ ಮೋದಿಯವರು ಉತ್ತರಖಾಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕಿನಲ್ಲಿ ಡಿಸ್ಕವರಿ ಚಾನೆಲ್ ಗಾಗಿ ತಮ್ಮ ಡಾಕ್ಯುಮೆಂಟರಿ ಶೂಟಿಂಗ್ ನಡೆಸುತ್ತಿದ್ದರು ಎಂಬ ಸಂಗತಿ ಕೂಡ ಪ್ರಸ್ತಾಪವಾಗಿದ್ದು, “ಇಲ್ಲಿ ನಮ್ಮ ಯೋಧರು ದೇಶರಕ್ಷಣೆಗಾಗಿ ಜೀವ ಬಲಿಕೊಡುತ್ತಿದ್ದರೆ, ಪ್ರಧಾನಿಗಳು ನ್ಯಾಷನಲ್ ಪಾರ್ಕಿನಲ್ಲಿ ತಮ್ಮ ಡಾಕ್ಯುಮೆಂಟರಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಇದು ಅವರ ಕಾಳಜಿ” ಎಂಬ ಟೀಕೆಗಳೂ ವ್ಯಕ್ತವಾಗಿವೆ.