ಲಕ್ನೋ: ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಹಳ್ಳಿಯೊಂದಕ್ಕೆ ತೆರಳಿ ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದ ಸಿಆರ್ ಪಿಎಫ್ ಯೋಧರಿಬ್ಬರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಯೋಧರ ತಂದೆ ತಾಯಿಗಳಿಗಳ ಬಳಿ ಕುಳಿತು ಮಾತನಾಡಿದ ರಾಹುಲ್ ಗಾಂಧಿ, “ನಾವು ನಿಮ್ಮೊಂದಿಗೆ ಕೊಂಚ ಹೊತ್ತು ಕುಳಿತು ಮಾತಾಡಿ ಹೋಗಲು ಬಂದಿದ್ದೇವೆ. ನಿಮ್ಮ ಈ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ ಎಂದು ನಿಮಗೆ ಹೇಳಬಯಸುತ್ತೇವೆ. ನಾವು ನಿಮ್ಮ ಪುತ್ರರಿಗೆ ಇಡೀ ದೇಶದ ಪರವಾಗಿ ಮನಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇವೆ” ಹೇಳಿದರು.

ಹುತಾತ್ಮ ಯೋಧ ಅಮಿತ್ ಕುಮಾರ್ ಕೋರಿ ಅವರ ಕುಟುಂಬದವರೊಂದಿಗೆ ಸಾಂತ್ವನ ಹೇಳುತ್ತಾ ರಾಹುಲ್ ಗಾಂಧಿಯವರು, “ನಮ್ಮ ತಂದೆಯವರೂ ಸಹ ಇಂತಹುದೇ ದುರಂತದಲ್ಲಿ ಬಲಿಯಾದರು. ಹೀಗಾಗಿ ನಿಮ್ಮ ಮನಸಿಗಾಗಿರುವ ನೋವು, ದುಃಖದ ಪ್ರಮಾಣ ಏನೆಂಬುದು ನಮಗೆ ಅರಿವಾಗುತ್ತದೆ” ಎಂದರು. 1991ರಲ್ಲಿ ತಮ್ಮ ತಂದೆ, ಅಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿಯವರು ತಮಿಳು ಈಳಂನಿಂದ ಬಾಂಬ್ ದಾಳಿಯಲ್ಲಿ ಬಲಿಯಾದ ವಿಷಯವನ್ನು ಪ್ರಸ್ತಾಪಿಸಿ ರಾಹುಲ್ ಗಾಂಧಿ ಮೇಲಿನಂತೆ ಹೇಳಿದರು.

ರಾಹುಲ್, ಪ್ರಿಯಾಂಕಾ ಇಬ್ಬರೊಂದಿಗೆ ಕಾಂಗ್ರೆಸ್ ನಾಯಕರಾದ ಜ್ಯೋತಿರಾದಿತ್ಯ ಸಿಂಧ್ಯ ಮತ್ತು ರಾಜ್ ಬಬ್ಬರ್ ಜೊತೆಗಿದ್ದರು. ಅಮಿತ್ ಕುಮಾರ್ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಪ್ರಾರ್ಥನಾ ಸಭೆಯಲ್ಲಿ ಈ ಎಲ್ಲರೂ ಭಾಗವಹಿಸಿದ್ದರು. ಹಾಗೆಯೇ ಮತ್ತೊಬ್ಬ ಯೋಧ ಪ್ರದೀಪ್ ಕುಮಾರ್ ಅವರ ಮನೆಗೂ ತೆರಳಿ ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಇದಕ್ಕೂ ಮುನ್ನ, ಈ ಹಳ್ಳಿಗೆ ಹೋಗುವ ದಾರಿಯ ಮಧ್ಯದಲ್ಲಿ ಸಿಗುವ ಧಾಬಾ ಒಂದರಲ್ಲಿ ಸೋದರ ಸೋದರಿಯರಿಬ್ಬರೂ ಹೋಗಿ ಸಾಮಾನ್ಯ ಗ್ರಾಹಕರಂತೆ ಹೋಗಿ ಚಾ ಕುಡಿದು, ತಿಂಡಿ ತಿಂದು ಅಲ್ಲಿದ್ದ ಹುಡುಗರಿಗೆ ಸೆಲ್ಫಿಗೆ ಜೊತೆಯಾದರು. ಇದರ ವಿಡಿಯೋ ಒಂದನ್ನು ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ. ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಹೆಣ್ಣುಮಕ್ಕಳ ಮತ್ತು ಚಿಕ್ಕ ಮಕ್ಕಳ ಗುಂಪೊಂದಕ್ಕೆ ಪ್ರಿಯಾಂಕಾ ಜೊತೆಯಾಗಿ ನಿಂತರು. ಆ ಹಳ್ಳಿ ಹೆಣ್ಣುಮಕ್ಕಳೊಂದಿಗೆ ಪ್ರಿಯಾಂಕಾ ಮಾತುಕತೆಯಾಡಿದರು.
ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಬೃಹತ್ ರೋಡ್ ಶೋ ನಡೆಸಿ ರಾಷ್ಟ್ರದ ಗಮನ ಸೆಳೆದಿದ್ದರು. ಇಂದು ಯಾವುದೇ ಸದ್ದು ಗದ್ದಲವಿಲ್ಲದೇ ಯೋಧರ ಹಳ್ಳಿಗೆ ಬಂದು ಅವರ ಕುಟುಂಬದವರನ್ನು ಮಾತಾಡಿಸಿಕೊಂಡು ಹೋಗಿದ್ದು, ಈ ದಿಢೀರ್ ಭೇಟಿ ಹುತಾತ್ಮರಾಗಿರುವ 40 ಮಂದಿ ಯೋಧರ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಲು ಕಾಂಗ್ರೆಸ್ ಬಯಸುವುದಿಲ್ಲ ಎಂಬ ಸಂದೇಶವನ್ನು ನೀಡಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.