ಒಂದು ಕಡೆ ರಾಫೇಲ್ ಒಪ್ಪಂದ ವಿವಾದಕ್ಕೆ ಸಿಲುಕಿದೆ, ಮತ್ತೊಂದು ಎರಿಕ್ಸನ್ ಕಂಪನಿಗೆ ನಾಲ್ಕು ವಾರದಲ್ಲಿ 453 ಕೋಟಿ ರೂ. ಪಾವತಿ ಮಾಡಿ, ಇಲ್ಲವೇ ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಹಾಗಾದರೆ, ಧೀರೂಭಾಯಿ ಅಂಬಾನಿಯ ಕಿರಿಯ ಮಗನ ಮುಂದಿರುವ ಆಯ್ಕೆಗಳೇನು?
ನಾಲ್ಕು ವಾರದಲ್ಲಿ ಎರಿಕ್ಸನ್ ಇಂಡಿಯಾ ಕಂಪನಿಗೆ ರೂ.453 ಕೋಟಿ ಪಾವತಿ ಮಾಡಬೇಕು. ಇಲ್ಲವಾದರೆ ಮೂರು ತಿಂಗಳು ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಸುಪ್ರೀಂಕೋರ್ಟ್ ಬುಧವಾರ ಉದ್ಯಮಿ ಅನಿಲ್ ಅಂಬಾನಿಗೆ ಎಚ್ಚರಿಸಿದೆ.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಈ ಹಿಂದೆ ನೀಡಿದ್ದ ಆದೇಶ ಪಾಲನೆ ಮಾಡದೆ, ಉದ್ಧಟತನ ತೋರಿ ನ್ಯಾಯಾಂಗ ನಿಂದನೆ ಎಸಗಿರುವ ಅಂಬಾನಿ ಮತ್ತು ಇತರ ಇಬ್ಬರು ನಿರ್ದೇಶಕರಿಗೆ ತಲಾ ಒಂದು ಕೋಟಿ ರೂ. ದಂಡವನ್ನೂ ವಿಧಿಸಲಾಗಿದೆ. ಆ ದಂಡ ಪಾವತಿಗೆ ವಿಫಲವಾದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಎಂದೂ ನ್ಯಾಯಾಲಯ ಚಾಟಿ ಬೀಸಿದೆ.
ಬಹುಕೋಟಿ ರಾಫೇಲ್ ಡೀಲ್ ಹಗರಣದಲ್ಲಿ ಪ್ರಮುಖವಾಗಿ ಹೆಸರು ಕೇಳಿಬಂದಿದ್ದ ಅನಿಲ್ ಅಂಬಾನಿಯ ವಿರುದ್ಧ ನ್ಯಾಯಾಲಯ ಕೇವಲ ರೂ.453 ಕೋಟಿ ವಿಷಯದಲ್ಲಿ ಛೀಮಾರಿ ಹಾಕುವ ಮಟ್ಟಿಗೆ ಅವರ ಉದ್ಯಮ ವಹಿವಾಟು ದುರವಸ್ಥೆಗೆ ತಲುಪಿದೆಯೇ? ಯಾವ ವಿಷಯದಲ್ಲಿ ಎರಿಕ್ಸನ್ ಮತ್ತು ಅಂಬಾನಿಯ ರಿಲೆಯನ್ಸ್ ನಡುವೆ ಈ ಬಿಕ್ಕಟ್ಟು ತಲೆದೋರಿದೆ? ಈಗ ಈ ಪ್ರಮಾಣದ ಮೊತ್ತ ಮತ್ತು ನ್ಯಾಯಾಲಯದ ದಂಡವನ್ನು ಅದು ಹೇಗೆ ಪಾವತಿ ಮಾಡುತ್ತದೆ? ಎಂಬ ಪ್ರಶ್ನೆಗಳು ಈಗ ಜನಸಾಮಾನ್ಯರಲ್ಲಿ ಹುಟ್ಟಿಕೊಂಡಿವೆ.
ಸ್ವೀಡನ್ ಮೂಲದ ಟೆಲಿಕಾಂ ಸಲಕರಣೆ ಉತ್ಪಾದಕ ಸಂಸ್ಥೆ ಎರಿಕ್ಸನ್ ಭಾರತೀಯ ಘಟಕ ಎರಿಕ್ಸನ್ ಇಂಡಿಯಾ ಮತ್ತು ಅನಿಲ್ ಅಂಬಾನಿ ಮಾಲೀಕತ್ವದ ರಿಲೆಯನ್ಸ್ ಸಮೂಹದ ರಿಲೆಯನ್ಸ್ ಕಮ್ಯುನಿಕೇಷನ್ಸ್(ಆರ್ ಕಾಂ) 2014ರಲ್ಲಿ ಒಂದು ಒಪ್ಪಂದಕ್ಕೆ ಸಹಿಹಾಕಿದ್ದವು. ರಿಲೆಯನ್ಸ್ ಕಂಪನಿಯ ಭಾರತೀಯ ಕಮ್ಯುನಿಕೇಷನ್ ಜಾಲದ ನಿರ್ವಹಣೆಗೆ ಸಂಬಂಧಪಟ್ಟ ಆ ಒಪ್ಪಂದದ ಪ್ರಕಾರ, ತನಗೆ ಬರಬೇಕಾದ ಬಾಕಿ ಮೊತ್ತ ರೂ.550 ಕೋಟಿ(ಮೂಲತಃ 1150 ಕೋಟಿ ರೂ.) ಹಣವನ್ನು ಪಾವತಿ ಮಾಡಿಲ್ಲ ಎಂದು ಅನಿಲ್ ಅಂಬಾನಿ ಕಂಪನಿಯ ವಿರುದ್ಧ ಎರಿಕ್ಸನ್ ಇಂಡಿಯಾ ಕಳೆದ ವರ್ಷ ಸುಪ್ರೀಂಕೋರ್ಟ್ ಮೊರೆಹೋಗಿತ್ತು. ಪ್ರಮುಖವಾಗಿ ರಾಫೇಲ್ ಜೆಟ್ ವ್ಯವಹಾರದಲ್ಲಿ ಹೂಡಿಕೆ ಮಾಡಲು ಬೇಕಾದಷ್ಟು ಹಣ ಹೊಂದಿರುವ ರಿಲೆಯನ್ಸ್ ಸಮೂಹ, ತನ್ನ ಬಾಕಿ ಪಾವತಿ ಮಾಡಲು ಸಿದ್ಧವಿಲ್ಲ ಎಂಬುದನ್ನೇ ಎರಿಕ್ಸನ್ ಇಂಡಿಯಾ ನ್ಯಾಯಾಲಯದ ಮುಂದಿಟ್ಟಿತ್ತು.
ರಿಲೆಯನ್ಸ್ ಕಮ್ಯುನಿಕೇಷನ್(ಆರ್ ಕಾಂ.) ದಿವಾಳಿ ಎಂದು ಘೋಷಿಸಿ ತನಗೆ ಬರಬೇಕಾಗಿರುವ ಒಟ್ಟು 1,150 ಕೋಟಿ ರೂ. ಹಣವನ್ನು ನೀಡಲು ಆದೇಶಿಸಬೇಕು ಎಂದು ಎರಿಕ್ಸನ್, ದಿವಾಳಿ ನ್ಯಾಯಾಲಯದ ಕಟ್ಟೆ ಏರಿತ್ತು. ಅಷ್ಟೊತ್ತಿಗಾಗಲೇ ಸುಮಾರು 35 ಸಾವಿರ ಕೋಟಿ ಸಾಲದ ಹೊರೆಯಲ್ಲಿದ್ದ ಆರ್ ಕಾಂ. ಕಂಪನಿಗೆ ಈ ಬೆಳವಣಿಗೆ ದೊಡ್ಡ ಪೆಟ್ಟು ನೀಡಿತ್ತು. ಅಷ್ಟರಲ್ಲಿ ಅಂಬಾನಿ ಕಂಪನಿಗೆ ಸಾಲ ನೀಡಿದ್ದ ಎಸ್ ಬಿಐ ಮತ್ತಿತರ ಬ್ಯಾಂಕುಗಳು ಕೂಡ ಮಧ್ಯಪ್ರವೇಶಿಸಿ, ದಿವಾಳಿ ಎಂದು ಘೋಷಣೆಯಾದರೆ ತಮ್ಮ ಸಾಲ ವಾಪಸು ಬರುವುದಿಲ್ಲ ಎಂಬ ಕಾರಣ ಮುಂದೊಡ್ಡಿ ರಿಲೆಯನ್ಸ್ ಮತ್ತು ಎರಿಕ್ಸನ್ ನಡುವೆ ಮಾತುಕತೆ ಮೂಲಕ ಪ್ರಕರಣ ಬಗೆಹರಿಸಲು ಯತ್ನಿಸಿದ್ದವು. ಪರಿಣಾಮವಾಗಿ, ಎರಿಕ್ಸನ್ 1150 ಕೋಟಿಗೆ ಬದಲಾಗಿ, 550 ಕೋಟಿ ರೂ.ಗಳಿಗೆ ಹೊಂದಾಣಿಕೆ ಮಾಡಿಕೊಂಡಿತ್ತು.

ಆ ನಡುವೆ ಸುಪ್ರೀಂಕೋರ್ಟಿನಲ್ಲಿ ರಿಲೆಯನ್ಸ್, ತಮ್ಮ ಸಹೋದರ ಮುಖೇಶ್ ಅಂಬಾನಿಯ ಜಿಯೋ ಕಂಪನಿಯೊಂದಿಗೆ ತಮ್ಮ ಆಸ್ತಿ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಅದು ಪೂರ್ಣಗೊಳ್ಳುತ್ತಲೇ ಬಾಕಿ ಹಣ ಪಾವತಿ ಮಾಡುವುದಾಗಿ ಹೇಳಿತ್ತು. ಮತ್ತು ಖಾತ್ರಿಯಾಗಿ 131 ಕೋಟಿ ರೂ. ಗಳನ್ನು ನ್ಯಾಯಾಲಯದಲ್ಲಿ ಜಮಾ ಮಾಡಿತ್ತು. ಆದರೆ, ಆಸ್ತಿ ಮಾರಾಟ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಕಂಪನಿ ತೀವ್ರ ನಷ್ಟದಲ್ಲಿದ್ದು, ದೊಡ್ಡ ಮೊತ್ತದ ಹಣ ಹೊಂದಿಸುವುದು ಸಾಧ್ಯವಿಲ್ಲ ಎಂದು ಹೇಳಿತ್ತು. ಆ ಬಳಿಕ ಎರಿಕ್ಸನ್ ಇಂಡಿಯಾ, ಅನಿಲ್ ಅಂಬಾನಿ, ರಿಲೆಯನ್ಸ್ ಟೆಲಿಕಾಂ ಚೇರ್ಮನ್ ಸತೀಶ್ ಶೇಠ್ ಹಾಗೂ ರಿಲೆಯನ್ಸ್ ಇನ್ಫ್ರಾಟೆಲ್ ಚೇರ್ಮನ್ ಛಾಯಾ ವಿರಾನಿ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿತ್ತು.
ಕಳೆದ ಅಕ್ಟೋಬರ್ 23ರಂದು ನ್ಯಾಯಾಲಯ, ಡಿಸೆಂಬರ್ 15ರ ಒಳಗೆ ಬಾಕಿ ತೀರಿಸುವಂತೆ ರಿಲೆಯನ್ಸ್ ಸಂಸ್ಥೆಗೆ ಆದೇಶಿಸಿತ್ತು. ವಿಳಂಬವಾದಲ್ಲಿ ವಾರ್ಷಿಕ ಶೇ.12ರಷ್ಟು ಬಡ್ಡಿ ಪಾವತಿ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆ ಆದೇಶವನ್ನೂ ಅನಿಲ್ ಅಂಬಾನಿ ಕಂಪನಿ ಪಾಲನೆ ಮಾಡದೇ ನ್ಯಾಯಾಂಗ ನಿಂದನೆ ಎಸಗಿದೆ ಎಂದು ಎರಿಕ್ಸನ್ ಇಂಡಿಯಾ ಮತ್ತೆ ನ್ಯಾಯಾಲಯದ ಮೊರೆಹೋಗಿತ್ತು. ಇದೀಗ, ನ್ಯಾಯಾಲಯ ಅನಿಲ್ ಅಂಬಾನಿ ಮತ್ತು ಅವರ ಇಬ್ಬರು ನಿರ್ದೇಶಕರಿಗೆ ಚಾಟಿ ಬೀಸಿದ್ದು, ಬಾಕಿ ಹಣ ಮತ್ತು ನ್ಯಾಯಾಂಗ ನಿಂದನೆಯ ದಂಡವನ್ನು ನಾಲ್ಕು ವಾರದಲ್ಲಿ ಪಾವತಿಸಿ ಇಲ್ಲವೇ ಮೂರು ತಿಂಗಳು ಜೈಲಿಗೆ ಹೋಗಿ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಇದೀಗ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಅನಿಲ್ ಅಂಬಾನಿಯ ರಿಲೆಯನ್ಸ್ ಸಮೂಹ, ನಾಲ್ಕು ವಾರಗಳ ಅವಧಿಯಲ್ಲಿ 453 ಕೋಟಿ ರೂ. ಹೊಂದಿಸಲು ತನ್ನ ಸ್ಥಿರಾಸ್ತಿ ಮಾರಾಟ ಮಾಡುವ ಒತ್ತಡಕ್ಕೆ ಸಿಲುಕಿದೆ. ಸದ್ಯಕ್ಕೆ ಅದಕ್ಕೆ ಬೇರೆ ಆದಾಯ ಮೂಲಗಳಿಲ್ಲ. ಹಾಗಾಗಿ ತನ್ನ ಯಾವುದಾದರೂ ಒಂದು ಸ್ಥಿರಾಸ್ತಿ ಮಾರಾಟ ಮಾಡುವುದೇ ಉಳಿದಿರುವ ದಾರಿ ಎಂಬುದು ಉದ್ಯಮ ವಿಶ್ಲೇಷಕರ ಅಭಿಪ್ರಾಯ. ಈ ನಡುವೆ, ರಾಫೇಲ್ ಒಪ್ಪಂದದ ಕುರಿತ ಹಲವು ಸಂದೇಹಗಳು ಇತ್ತೀಚಿಗೆ ಪ್ರಮುಖ ದಾಖಲೆಗಳು ಬೆಳಕಿಗೆ ಬಂದ ಬಳಿಕ ಇನ್ನಷ್ಟು ಗಟ್ಟಿಯಾಗಿವೆ. ಅಲ್ಲದೆ, ಸುಪ್ರೀಂಕೋರ್ಟ್ ನಲ್ಲಿ ಪ್ರಕರಣದ ಮರು ವಿಚಾರಣೆಗೆ ಅರ್ಜಿ ಸಲ್ಲಿಸುವ ಪ್ರಯತ್ನಗಳೂ ನಡೆಯುತ್ತಿವೆ. ಆ ಹಿನ್ನೆಲೆಯಲ್ಲಿ, ಸದ್ಯಕ್ಕೆ ಅನಿಲ್ ಅಂಬಾನಿಗೆ ಇನ್ನಷ್ಟು ದುರ್ದಿನಗಳು ಕಾದಿವೆ ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿವೆ.