ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸರಣಿ ಸಭೆಗಳ ಹಿನ್ನೆಲೆಯಲ್ಲಿ, ಪಕ್ಷ ಸಂಘಟನೆ, ಚುಣಾವಣಾ ತಯಾರಿಯಲ್ಲಿ ಹಿಂದೆ ಬಿದ್ದಿರುವ ಮತ್ತು ಅದೇ ಹೊತ್ತಿಗೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ವಿವಾದ, ಹಗರಣ, ಅಕ್ರಮಗಳ ಸರಮಾಲೆಯನ್ನೇ ಮೈಮೇಲೆ ಎಳೆದುಕೊಂಡಿರುವ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮುಂದೆ ತಮ್ಮ ಸಾಧನೆಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.
‘ಮಿಷನ್ 22’ ಗುರಿಯೊಂದಿಗೆ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಎದುರಿಸಲು ಹೊರಟಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಹಮ್ಮಿಕೊಂಡಿರುವ ‘ಮೋದಿ ವಿಜಯ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇಂದು ಬೆಂಗಳೂರಿಗೆ ಬರುತ್ತಿದ್ದಾರೆ.
ಇದೇ ಭೇಟಿಯ ವೇಳೆ ಅವರು, ಬಿಜೆಪಿ ಶಕ್ತಿಕೇಂದ್ರ ಪ್ರಮುಖರ ಸಭೆ, ಸಂಸದರು ಹಾಗೂ ಶಾಸಕರ ಸಭೆ, ರಾಜ್ಯ ಸಮಿತಿ ಪ್ರಮುಖರ ಸಭೆ ಹಾಗೂ ಪಕ್ಷದ ಪ್ರಮುಖರ ಸಭೆಗಳನ್ನು ಪ್ರತ್ಯೇಕವಾಗಿ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 22 ಸ್ಥಾನಗಳನ್ನು ತನ್ನ ಕೈವಶಮಾಡಿಕೊಳ್ಳುವ ಗುರಿ ಹೊಂದಿರುವ ಬಿಜೆಪಿ, ಈವರೆಗೆ ಆ ನಿಟ್ಟಿನಲ್ಲಿ ಯಾವ ತಯಾರಿ ಮಾಡಿಕೊಂಡಿದೆ. ಸದ್ಯಕ್ಕೆ ಪಕ್ಷ ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳೇನು ಎಂಬ ಸಂಗತಿಗಳು ಪ್ರಮುಖವಾಗಿ ಚರ್ಚೆಗೊಳಗಾಗಲಿವೆ ಎಂಬುದು ನಿರೀಕ್ಷಿತ.
ಆದರೆ, ಈಗಾಗಲೇ ಪ್ರತಿಪಕ್ಷಗಳ ಮಹಾಮೈತ್ರಿ(ಮಹಾಘಟಬಂಧನ್) ಮತ್ತು ಪುಲ್ವಾಮಾ ಭಯೋತ್ಪಾದಕ ದಾಳಿ, ನಿರುದ್ಯೋಗ, ಕೃಷಿ ಬಿಕ್ಕಟ್ಟು, ರಾಫೇಲ್ ಹಗರಣ ಮುಂತಾದ ಕಾರಣದಿಂದಾಗಿ ಎನ್ ಡಿ ಎ ಮೈತ್ರಿಕೂಟಕ್ಕೆ ಈ ಬಾರಿ ಭಾರೀ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಅದರಲ್ಲೂ ಉತ್ತರಪ್ರದೇಶ ಸೇರಿದಂತೆ ಉತ್ತರಭಾರತದಲ್ಲಿ ಬಿಜೆಪಿಗೆ ಈ ಬಾರಿಯ ಚುನಾವಣೆ ಭಾರೀ ಹಿನ್ನಡೆ ತರುವ ಸೂಚನೆಗಳು ಸ್ಪಷ್ಟವಾಗಿವೆ. ಹಾಗಾಗಿ ಬಿಜೆಪಿ ಹೈಕಮಾಂಡ್ ಇದೀಗ ದಕ್ಷಿಣದ ರಾಜ್ಯಗಳತ್ತ ಹೆಚ್ಚು ಆಸಕ್ತಿವಹಿಸಿದ್ದು, ಉತ್ತರದಲ್ಲಿ ಆಗುವ ನಷ್ಟವನ್ನು ದಕ್ಷಿಣದಲ್ಲಿ ಭರಿಸುವ ಯೋಚನೆಯಲ್ಲಿದೆ.
ಆ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯಗಳಿಗೆ ರಹದಾರಿಯಾಗಿರುವ ಕರ್ನಾಟಕದ ಯಶಸ್ಸು ಬಿಜೆಪಿಗೆ ಅತ್ಯಂತ ಮಹತ್ವದ್ದು. ಹಾಗಾಗಿ ಶಾ ಅವರು ಇಂದಿನ ಭೇಟಿಯಲ್ಲಿ ಪ್ರಮುಖವಾಗಿ ಕಳೆದ ಆರು ತಿಂಗಳಲ್ಲಿ ಪಕ್ಷ ಸಂಘಟನೆ ಮತ್ತು ಚುನಾವಣಾ ತಯಾರಿಯ ನಿಟ್ಟಿನಲ್ಲಿ ಇಲ್ಲಿನ ನಾಯಕರು ಮಾಡಿರುವ ಸಾಧನೆಗಳ ಪರಾಮರ್ಶೆ ನಡೆಸಲಿದ್ದಾರೆ ಎನ್ನಲಾಗಿದ್ದು, ಆ ವಿಷಯ ಈಗ ರಾಜ್ಯ ಬಿಜೆಪಿ ವರಿಷ್ಠರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಕಳೆದ ಆರು ತಿಂಗಳಿನಿಂದ ಬಹುತೇಕ ಸಮಯವನ್ನು ಆಪರೇಷನ್ ಕಮಲಕ್ಕಾಗಿ ವ್ಯಯಿಸಿದ ನಾಯಕರು, ಅತ್ತ ಆಪರೇಷನ್ ಕೂಡ ತಿರುಗುಬಾಣವಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರುವುದರಿಂದ ಹೈಕಮಾಂಡ್ ಕಣ್ಣು ಕೆಂಪಾಗಿದೆ ಎಂಬ ಹಿನ್ನೆಲೆಯಲ್ಲಿ ಇನ್ನಷ್ಟು ಗಲಿಬಿಲಿಗೊಂಡಿದ್ದಾರೆ ಎನ್ನಲಾಗಿದೆ.
ಈ ನಡುವೆ, ಪಕ್ಷದ ರಾಜ್ಯ ನಾಯಕರ ನಡುವೆ ಹೊಂದಾಣಿಕೆಯ ಸಮಸ್ಯೆ ಇನ್ನೂ ಮುಂದುವರಿದಿದೆ. ಈಶ್ವರಪ್ಪ, ಯಡಿಯೂರಪ್ಪ ಅವರ ಬಣ ರಾಜಕಾರಣದ ಬಳಿಕ ಇದೀಗ, ಆರ್ ಅಶೋಕ್, ಅನಂತಹೆಗಡೆ ಮುಂತಾದವರೂ ರಾಜ್ಯ ನಾಯಕರೊಂದಿಗೆ ಕೈಜೋಡಿಸದೆ ತಮ್ಮದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಅದಲ್ಲದೆ, ಇತ್ತೀಚೆಗೆ ಸಿಟಿ ರವಿ ಅಪಘಾತ ಪ್ರಕರಣ, ಮೂಡಿಗೆರೆ ಶಾಸಕ ಕುಮಾರಸ್ವಾಮಿ ಕುಡಿದು ಅಧಿಕಾರಿಗಳ ಮೇಲೆ ಎಗರಾಡಿದ್ದು, ಮೈಸೂರು ಶಾಸಕ ನಾಗೇಂದ್ರ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿದ್ದು, ಸೇರಿದಂತೆ ಕಳೆದ ಒಂದು ವಾರದಲ್ಲೇ ಸಾಲು ಸಾಲು ಮುಜುಗರದ ಪ್ರಕರಣಗಳು ಪಕ್ಷಕ್ಕೆ ಮಸಿ ಬಳಿದಿವೆ. ಇಷ್ಟು ಸಾಲದು ಎಂಬಂತೆ ಆಡಿಯೋ ಹಗರಣದ ತನಿಖೆ ಎಸ್ ಐಟಿಗೆ ವಹಿಸಿದ್ದು, ಸ್ವತಃ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೇ ಸಂಕಷ್ಟ ಎದುರಾಗಿದೆ.
ಅಷ್ಟೇ ಅಲ್ಲದೆ, ಲೋಕಸಭಾ ಚುನಾವಣಾ ಗೆಲುವಿನ ತಂತ್ರದ ಭಾಗವಾಗಿ ಈ ಹಿಂದೆ ಪ್ರತಿ ರಾಜ್ಯಗಳಿಗೂ ಬಿಜೆಪಿ ಹೈಕಮಾಂಡ್ 26 ಅಂಶಗಳ ಸೂತ್ರವನ್ನು ನೀಡಿ, ಅನುಷ್ಠಾನಕ್ಕೆ ಸೂಚನೆ ನೀಡಿತ್ತು. ನೆರೆಯ ಮಹಾರಾಷ್ಟ್ರದಂತಹ ಕಡೆ ಆ ನಿಟ್ಟಿನಲ್ಲಿ ಪಕ್ಷದ ರಾಜ್ಯ ಘಟಕಗಳು ಅದ್ಭುತ ಕೆಲಸ ಮಾಡಿವೆ. ಆದರೆ, ಕರ್ನಾಟಕ ರಾಜ್ಯ ಘಟಕದ ಸಾಧನೆ ಆ ವಿಷಯದಲ್ಲಿ ತೀರಾ ಕಳಪೆಯಾಗಿದೆ. ಇಲ್ಲಿನ ನಾಯಕರ ನಡುವಿನ ಮುಸುಕಿದ ಗುದ್ದಾಟ ಮತ್ತು ಸಮ್ಮಿಶ್ರ ಸರ್ಕಾರ ಬೀಳಿಸುವ ಸರ್ಕಸ್ಸಿನಲ್ಲೇ ಮುಳುಗಿದ ನಾಯಕರ ಸ್ವಾರ್ಥ ರಾಜಕಾರಣದ ಪರಿಣಾಮವಾಗಿ ಪಕ್ಷದ ಚುನಾವಣಾ ಕಾರ್ಯತಂತ್ರಕ್ಕೆ ಭಾರೀ ಹಿನ್ನಡೆಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಬಂದಿರುವ ಶಾ, ಇಂದಿನ ಸರಣಿ ಸಭೆಯಲ್ಲಿ ನಾಯಕರಿಗೆ ನೀರಿಳಿಸಲಿದ್ದಾರೆ ಎಂದು ಬಿಜೆಪಿ ಕಟ್ಟಾ ಸಿದ್ಧಾಂತವಾದಿ ನಾಯಕರೇ ಹೇಳುತ್ತಾರೆ.
ಈ ನಡುವೆ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು ನಗರ ವ್ಯಾಪ್ತಿಯ ಕೆಲವು ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಹಾಲಿ ಸಂಸದರ ಸಾಧನೆಗಳ ಬಗ್ಗೆಯೂ ಸ್ವತಃ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯ ಇರದ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆಯೂ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಆ ಹಿನ್ನೆಲೆಯಲ್ಲಿ ತಳಮಟ್ಟದ ಶಕ್ತಿಕೇಂದ್ರದ ಪ್ರಮುಖರೊಂದಿಗೆ ಮೊದಲ ಸಭೆ ನಡೆಯಲಿದ್ದು, ಅಲ್ಲಿನ ಅಭಿಪ್ರಾಯಗಳನ್ನು ಮುಖ್ಯವಾಗಿಟ್ಟುಕೊಂಡು ನಾಯಕರ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಈ ನಡುವೆ ಹೈಕಮಾಂಡ್ ಮುಂದೆ ಪಕ್ಷದ ಸಿದ್ಧಾಂತನಿಷ್ಠ ಆರ್ ಎಸ್ ಎಸ್ ಹಿನ್ನೆಲೆಯ ನಾಯಕರಲ್ಲಿ ಕೆಲವರು ರಾಜ್ಯದ ಬೆಳವಣಿಗೆಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಗೆ ಯಾರು ಕಾರಣ, ಇನ್ನುಳಿದ ಕೆಲವೇ ದಿನಗಳಲ್ಲಿ ಪಕ್ಷ ಅತಿಹೆಚ್ಚು ಸ್ಥಾನ ಪಡೆಯಲು ಮಾಡಬೇಕಾದ ಕಾರ್ಯಗಳೇನು ಎಂಬ ಬಗ್ಗೆ ಅವರ ಗಮನ ಸೆಳೆಯಲಿದ್ದಾರೆ ಎಂದೂ ಮೂಲಗಳು ಹೇಳಿವೆ. ಆಪರೇಷನ್ ಕಮಲದಿಂದ ಆರಂಭದಿಂದಲೂ ಅಂತರ ಕಾಯ್ದುಕೊಂಡು ಬಂದಿದ್ದ ಕೆಲವು ನಾಯಕರು, ಪಕ್ಷ ಹಿತವನ್ನಷ್ಟೇ ಪರಿಗಣಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ, ಪಕ್ಷ ಸಂಘಟನೆ, ಚುಣಾವಣಾ ತಯಾರಿಯಲ್ಲಿ ಹಿಂದೆ ಬಿದ್ದಿರುವ ಮತ್ತು ಅದೇ ಹೊತ್ತಿಗೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ವಿವಾದ, ಹಗರಣ, ಅಕ್ರಮಗಳ ಸರಮಾಲೆಯನ್ನೇ ಮೈಮೇಲೆ ಎಳೆದುಕೊಂಡಿರುವ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮುಂದೆ ತಮ್ಮ ಸಾಧನೆಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.