ನವದೆಹಲಿ: “ಪುಲ್ವಾಮಾ ದುರ್ಘಟನೆಯ ಬಳಿಕ ಇಡೀ ದೇಶವೇ ಆಘಾತಗೊಂಡು, ಪ್ರಾಣ ಕಳೆದುಕೊಂಡ ಯೋಧರಿಗಾಗಿ ದುಃಖಿಸುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಿನಿಮಾ ಚಿತ್ರೀಕರಣ ನಡೆಸುವುದರಲ್ಲಿ ಬ್ಯುಸಿಯಾಗಿದ್ದರು” ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ನಡೆಸಿದೆ. ಇಂದು ದೆಹಲಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಈ ಮೇಲಿನಂತೆ ಆರೋಪಿಸಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು. “ಇಡೀ ದೇಶವು ಉಗ್ರರ ದಾಳಿಯಲ್ಲಿ 40 ಮಂದಿ ವೀರ ಯೋಧರನ್ನು ಕಳೆದುಕೊಂಡು ದುಃಖದಲ್ಲಿದ್ದಾಗ ಅಂದು ಸಂಜೆಯವರೆಗೂ ನರೇಂದ್ರ ಮೋದಿಯವರು ಸಿನಿಮಾ ಶೂಟಿಂಗ್ ನಡೆಸುವುದರಲ್ಲಿ ತೊಡಗಿದ್ದರು. ಜಗತ್ತಿನಲ್ಲಿ ಇಂತಹ ಪ್ರಧಾನಿ ಬೇರೆ ಯಾರಾದರೂ ಇರಲು ಸಾಧ್ಯವೇ? ಇವರ ಬಗ್ಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ” ಎಂದು ಅವರು ಹೇಳಿದರು.
ಪುಲ್ವಾಮಾ ದಾಳಿಯನ್ನು ತೀವ್ರವಾಗಿ ಖಂಡಿಸಿದ ರಣದೀಪ್ ಸುರ್ಜೇವಾಲಾ, “ಪುಲ್ವಾಮಾ ಉಗ್ರ ದಾಳಿಯು ದೇಶದ ಸಮಗ್ರತೆಯ ಮೇಲೆ ನಡೆಸಿದ ದಾಳಿಯಾಗಿದೆ. ಈ ದುರಂತದ ವೇಳೆಯಲ್ಲಿ ಕಾಂಗ್ರೆಸ್ ಪಕ್ಷವು ನಮ್ಮ ರಕ್ಷಣಾ ಪಡೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದು ತಿಳಿಸಿದರಲ್ಲದೆ, ‘ಈ ದಾಳಿಯ ವಿಷಯದಲ್ಲಿ ಕೇಂದ್ರ ಸರ್ಕಾರವು ನಿರ್ಣಾಯಕ ತೀರ್ಮಾನ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಪಕ್ಷವು ಒತ್ತಾಯಿಸಿದೆ’ ಎಂದೂ ಹೇಳಿದರು.
ಈ ಹಿಂದೆ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿದ್ದಾಗ ಇಂತಹುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಕ್ರಮಕ್ಕೂ ನರೇಂದ್ರ ಮೋದಿ ಸರ್ಕಾರ ಅವರು ಅನುಸರಿಸಿರುವ ಕ್ರಮಕ್ಕೂ ನಡುವೆ ಹೋಲಿಕೆ ನೀಡಿದ ಸುರ್ಜೇವಾಲಾ, ‘ ಈ ಹಿಂದೆ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ಕಾಂಗ್ರೆಸ್ ನೀಡಿತ್ತು. 1971ರಲ್ಲಿ ನಾವು ಪಾಕಿಸ್ತಾನವನ್ನು ಸೋಲಿಸಿದ್ದೆವು. ಇಂದಿರಾ ಗಾಂಧಿಯವರು ಬಾಂಗ್ಲಾದೇಶ ಸ್ವತಂತ್ರಗೊಳ್ಳಲು ಸಹಾಯ ಮಾಡಿದ್ದು ಮಾತ್ರವಲ್ಲ, 91,000 ಪಾಕಿಸ್ತಾನದ ಸೈನಿಕರು ಶರಣಾಗುವಂತೆಯೂ ಮಾಡಿದ್ದರು. ಪಾಕಿಸ್ತಾನಕ್ಕೆ ಮುಖಭಂಗವಾಗುವಂತೆ ಮಾಡಿದ್ದರು” ಎಂದರು.
ನರೇಂದ್ರ ಮೋದಿಯವರು ಪುಲ್ವಾಮಾ ದುರ್ಘಟನೆಯನ್ನು ಬಳಸಿಕೊಂಡು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನಷ್ಟೇ ಮಾಡುತ್ತಿದ್ದಾರೆ ಎಂದು ದೂರಿದರು.
‘ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡುವುದನ್ನು ನಾವು ಬೆಂಬಲಿಸುತ್ತೇವೆ. ಆದರೆ ಮೋದೀಜಿಯವರು ತಮ್ಮ ‘ರಾಜಧರ್ಮ’ (ಕರ್ತವ್ಯ) ಮರೆತು ಬರೀ ತಮ್ಮ ರಾಜ್ (ಸರ್ಕಾರ) ಉಳಿಸಿಕೊಳ್ಳುವುದಕ್ಕಷ್ಟೇ ಒತ್ತು ನೀಡುತ್ತಿದ್ದಾರೆ, ಹುತಾತ್ಮರ ಮೇಲಿನ ಗೌರವಕ್ಕಿಂತಲೂ ಅವರಿಗೆ ತಮ್ಮ ಅಧಿಕಾರದ ಮೇಲಿನ ಆಸೆಯೇ ಹೆಚ್ಚಾಗಿದೆ’
ರಣದೀಪ್ ಸಿಂಗ್ ಸುರ್ಜೆವಾಲಾ

ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಮೇಲೂ ಟೀಕಾಪ್ರಹಾರ ನಡೆಸಿದ ಕಾಂಗ್ರೆಸ್ ವಕ್ತಾರ, ಅಸ್ಸಾಂನಲ್ಲಿ ಅಮಿತ್ ಷಾ ಮಾತಾಡುವಾಗ ‘ಹುತಾತ್ಮರ ತ್ಯಾಗ ವ್ಯರ್ಥವಾಗಲು ಈಗ ಕಾಂಗ್ರೆಸ್ ಅಧಿಕಾರದಲ್ಲಿಲ್ಲ, ಬಿಜೆಪಿ ಅಧಿಕಾರದಲ್ಲಿದೆ’ ಎಂದು ಬಾಲಿಶವಾಗಿ ಮಾತಾಡಿದ್ದಾರೆ. ಆದರೆ ಪಾಕಿಸ್ತಾನದ ವಿರುದ್ಧ ಯುದ್ಧಗಳನ್ನು ನಡೆಸಿ ಜಯಿಸಿರುವುದು ಕಾಂಗ್ರೆಸ್ ಪಕ್ಷವೇ ಎಂಬ ಸತ್ಯವನ್ನು ಷಾ ಮರೆತಿದ್ದಾರೆಯೇ?’ ಎಂದು ಪ್ರಶ್ನಿಸಿದರು. ‘ಬಿಜೆಪಿಯು ಪುಲ್ವಾಮಾ ದಾಳಿಯನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ’ ಎಂದೂ ಅವರು ಹೇಳಿದರು.
ಇದೇ ಸಂದರ್ಭದಲ್ಲಿ 26/11ರ ಮುಂಬೈ ಉಗ್ರ ದಾಳಿ ನಡೆದಾಗ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಮಾಡಿದ್ದ ಉಗ್ರ ಭಾಷಣದ ವಿಡಿಯೋ ಪ್ರದರ್ಶಿಸಿದ ರಣದೀಪ್ ಸುರ್ಜೇವಾಲಾ, “ಅಂದು ಆ ನರೇಂದ್ರ ಮೋದಿ ಕೇಳಿದ ಪ್ರಶ್ನೆಗಳನ್ನು ಇಂದು ನಾವು ಈ ಪ್ರಧಾನಿ ನರೇಂದ್ರ ಮೋದಿಗೆ ಕೇಳುತ್ತಿದ್ದೇವೆ. ಅವರ ಪ್ರಶ್ನೆಗೆ ಅವರೇ ಉತ್ತರ ನೀಡಲಿ” ಎಂದರು.