ಬೆಂಗಳೂರು: ಬೆಂಗಳೂರು ಸಬರ್ಬನ್ ರೈಲು ಯೋಜನೆಯು ಕೇಂದ್ರ-ರಾಜ್ಯಗಳ ಸಮಾನ ಪಾಲುದಾರಿಕೆಯೊಂದಿಗೆ ಕಾರ್ಯಾರಂಭವಾಗುವ ಸಾಧ್ಯತೆ ನಿಚ್ಚಳವಾಗಿದೆ. ಇಂದು ಕೇಂದ್ರ ರೈಲು ಸಚಿವ ಪಿಯೂಶ್ ಗೋಯಲ್ ಮತ್ತು ಸಿಎಂ ಎಚ್.ಡಿ.ಕುಮಾರಸ್ವಾಮಿ ಮಧ್ಯೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಮಾತುಕತೆ ನಡೆದಿದ್ದು ಈ ದಿಸೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರು ಕಳೆದ ಫೆ. 8 ರಂದು ಮಂಡಿಸಿದ ಮುಂಗಡ ಪತ್ರದಲ್ಲಿಯೂ ಸಬರ್ಬನ್ ರೈಲು ಯೋಜನೆಯ ಪ್ರಸ್ತಾಪವಿದ್ದು ಇದಕ್ಕಾಗಿ ಬಜೆಟ್ನಲ್ಲಿ 400 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಈ ಸಬರ್ಬನ್ ಯೋಜನೆಗೆ 2018-19ನೇ ಸಾಲಿನ ಕೇಂದ್ರ ಬಜೆಟ್ನಲ್ಲಿಯೂ ಕೇಂದ್ರ ಸರ್ಕಾರವು ಅನುದಾನ ಮೀಸಲಿಟ್ಟಿದ್ದು ಇದರ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರದ ಒಪ್ಪಿಗೆಯನ್ನು ಕೋರಿತ್ತು.
ಕರ್ನಾಟಕ ಸರ್ಕಾರವು ಕೇಂದ್ರದ ಮುಂದೆ 19 ಶರತ್ತುಗಳನ್ನು ಮುಂದಿರಿಸಿದ್ದು ಅವುಗಳಲ್ಲಿ ಬಹುತೇಕ ಶರತ್ತುಗಳಿಗೆ ಕೇಂದ್ರ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಪ್ರಸ್ತಾಪಿತ ಉಪನಗರ ರೈಲು ಯೋಜನೆಯ ಒಟ್ಟು ವೆಚ್ಚ 23,093 ಕೋಟಿ ಎಂದು ಅಂದಾಜಿಸಲಾಗಿದೆ.
ಈ ಹಿಂದೆ 1995ರಲ್ಲಿ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೇ ಈ ಯೋಜನೆಯ ಪ್ರಸ್ತಾಪವಿತ್ತು. ಕೇಂದ್ರ ಸರ್ಕಾರವು 80:20 ಅನುಪಾತದ ವೆಚ್ಚದ ಅನುದಾನದೊಂದಿಗೆ ಜಾರಿಗೊಳಿಸಲು ಬಯಸಿದ್ದು ಈಗ 50:50 ಅನುದಾನ ಹಂಚಿಕೆಯೊಂದಿಗೆ ಜಾರಿಗೊಳಿಸುವ ಸಂಬಂಧ ಮಾತುಕತೆಯಾಗಿದೆ.
ಸಬರ್ಬನ್ ರೈಲ್ವೆ ಮಾರ್ಗಗಳು ದೇಶದ ಮಹಾನಗರಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಮಹತ್ವದ ಮಾತ್ರ ವಹಿಸುತ್ತಿವೆ. ಇದೀಗ ದೇಶ 9 ಕಡೆಗಳಲ್ಲಿ ಈ ಸಬರ್ಬನ್ ರೈಲುಗಳು ಸೇವೆಯಲ್ಲಿವೆ. ಅವುಗಳೆಂದರೆ ಮುಂಬೈ, ಚೆನ್ನೈ, ಕೋಲ್ಕೊತಾ, ಪುಣೆ, ಹೈದರಾಬಾದ್, ಅಹಮದಾಬಾದ್, ಗೋವಾ ಮತ್ತು ಲಕ್ನೋ ಸಬರ್ಬನ್ ರೈಲ್ವೆಗಳು. ಬೆಂಗಳೂರು ಸಬರ್ಬನ್ ರೈಲ್ವೆಯು 10ನೆಯ ಸಬರ್ಬನ್ ರೈಲ್ವೆ ಸಾರಿಗೆಯಾಗಲಿದ್ದು ಒಟ್ಟು 204 ಕಿಮೀ ಉದ್ದದ ರೈಲು ಮಾರ್ಗವನ್ನು ಹೊಂದಲಿದೆ.