2019ರ ಫೆಬ್ರವರಿ 14. ಜಾತಿ, ಮತ, ಭಾಷೆ, ಅಂತಸ್ತು ಮೀರಿದ ಪ್ರೇಮವನ್ನು ಹೇಳುವ ಇದೇ ದಿನದಂದು ಒಂದು ಕಡೆ ಮಾನವ ನಿರ್ಮಿತ ಗಡಿಗಳ ಮೀರಿ ಪ್ರೀತಿಯ ಮಾತುಗಳು ಕೇಳಿಬರುತ್ತಿದ್ದವು. ಅತ್ತ ಕಾಶ್ಮೀರದ ಗಡಿಭಾಗದ ಪುಲ್ವಾಮಾದಲ್ಲಿ ಉಗ್ರಗಾಮಿಗಳು ಸಿಡಿಸಿದ ಸ್ಫೋಟಕಗಳಿಗೆ ನಮ್ಮ ದೇಶದ ನಲವತ್ತು ಯೋಧರು ಬಲಿಯಾದ ಹೃದಯವಿದ್ರಾವಕ ಘಟನೆ ನಡೆಯಿತು. ಈ ಯೋಧರೆಲ್ಲರೂ ದೇಶದ ಒಂದು ಭದ್ರತಾ ಪಡೆಯಾದ ಸಿಆರ್ಪಿಎಫ್ ಗೆ ಸೇರಿದವರಾಗಿದ್ದರು. ಪುಲ್ವಾಮಾ ಘಟನೆ ನಡೆದು ವಾರ ಕಳೆದಿದೆ. ದೇಶಕ್ಕಾಗಿ ತಮ್ಮ ಅಮೂಲ್ಯ ಪ್ರಾಣಗಳನ್ನು ಅರ್ಪಿಸಿದ ಸಿಆರ್ ಪಿಎಫ್ ಯೋಧರು ಪ್ರತಿಯೊಬ್ಬ ನಾಗರಿಕರ ಹೃದಯದಲ್ಲಿ ಅಜರಾಮರರಾಗಿದ್ದಾರೆ. ಈ ಯೋಧರು ಸೇವೆ ಸಲ್ಲಿಸುತ್ತಿದ್ದ ಸಿಆರ್ಪಿಎಫ್ ಸೇನಾ ಪಡೆಯ ಹಿನ್ನೆಲೆ ಮತ್ತು ಸಧ್ಯದಲ್ಲಿ ಅದರ ಪಾತ್ರಗಳನ್ನು ತಿಳಿಯುವ ಜೊತೆಗೆ ಈ ಪಡೆಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಸೈನಿಕರ ಸ್ಥಿತಿಗತಿಯನ್ನೂ ಅವಲೋಕಿಸಲು ಇದು ಸಕಾಲ.
1939ರರಷ್ಟು ಹಿಂದೆಯೇ ರಚನೆಗೊಂಡ ಸಿಆರ್ ಪಿಎಫ ಇಂದಿಗೆ ದೇಶದ ಅತಿದೊಡ್ಡ ಕೇಂದ್ರೀಯ ಸಶಸ್ತ್ರ ಪಡೆಯಾಗಿದೆ. ಆರಂಭಗೊಳ್ಳುವಾಗ ಇದನ್ನು ಕ್ರೌನ್ ರೆಪ್ರೆಸೆಂಟೇಟಿವ್ ಪೊಲೀಸ್ ಪಡೆ ಎಂದು ಹೆಸರಿಸಲಾಗಿತ್ತು. 1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡಾಗ ಇದನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ಎಂದು ಮರುನಾಮಕರಣ ಮಾಡಲಾಯಿತು. ದೇಶದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯೊಂದಿಗೆ ಎಲ್ಲೇ ಆಂತರಿಕ ದಂಗೆಗಳು ನಡೆದರೆ ಅವುಗಳನ್ನು ನಿಯಂತ್ರಿಸುವ ಉದ್ದೇಶದೊಂದಿಗೆ ಈ ಪಡೆ ಕೆಲಸ ಮಾಡುತ್ತಿದೆ. ಒಟ್ಟು 239 ಬೆಟಾಲಿಯನ್ ಗಳಲ್ಲಿ 3 ಲಕ್ಷ ಸೈನಿಕರನ್ನು ಹೊಂದಿರುವ ಅರೆಸೇನಾ ಪಡೆಯಾಗಿರುವ (ಪ್ಯಾರಾ ಮಿಲಿಟರಿ) ಸಿಆರ್ ಪಿ ಎಫ್ ಬಹುದೊಡ್ಡ ಸೇನಾ ರಚನೆಯಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಇದರಲ್ಲಿ ಮಹಿಳಾ ಬೆಟಾಲಿಯನ್ಗಳು ಕೂಡ ಅಸ್ತಿತ್ವದಲ್ಲಿವೆ.
ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಗಳಿಗೆ ನೆರವಾಗುತ್ತಾ ದೇಶದ ಸುಭದ್ರತೆಗಾಗಿ ಹೋರಾಡುವುದು ಸಿಆರ್ಪಿಎಫ್ ಯೋಧರ ಕರ್ತವ್ಯವಾಗಿರುತ್ತದೆ. ಈ ಪಡೆಗೆ ನೇಮಕಗೊಳ್ಳುವ ಯೋಧರು ಬಹುತೇಕ ದೇಶದ ಗ್ರಾಮೀಣ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗದ ಯುವಜನರಾಗಿದ್ದಾರೆ. ಫುಲ್ವಾಮ ದಾಳಿಗೆ ಬಲಿಯಾದ ಯೋಧರೂ ದೇಶದ ವಿವಿಧ ರಾಜ್ಯಗಳಿಂದ ಉದ್ಯೋಗ ಅರಸಿ ಬಂದು ಸಿಆರ್ಪಿಎಫ್ ಸೇರ್ಪಡೆಯಾದವರಾಗಿದ್ದರು.
ಅತ್ಯಂತ ಬದ್ಧತೆ ಮತ್ತು ದಕ್ಷತೆಯಿಂದ ಸಿಆರ್ ಪಿಎಫ್ ನ ಸೈನಿಕರು ಎಂತಹ ಕಠಿಣ ಸಂದರ್ಭದಲ್ಲಿಯೂ ಎದೆಗುಂದದೇ ಕೆಲಸ ಮಾಡುತ್ತಾರೆ. ಆದರೆ ಇವರು ಮಾಡುವ ಕೆಲಸದ ಕಠಿಣತೆಗೆ ಹೋಲಿಸಿದರೆ ಅವರಿಗೆ ನೀಡುವ ವೇತನ, ಭತ್ಯೆಗಳು ತೀರಾ ಕಡಿಮೆ. ಭಾರತೀಯ ಸೇನಾ ಪಡೆಗೆ ಹೋಲಿಸಿದರೆ ಸಿಆರ್ ಪಿಎಫ್ ನಲ್ಲಿ ಸಂಪನ್ಮೂಲಗಳ ಕೊರತೆ ಎದ್ದುಕಾಣುತ್ತಿದೆ ಎಂಬುದು ಇದರಲ್ಲಿರುವ ಹಿರಿಯ ಅಧಿಕಾರಿಗಳ ನೋವಿನ ನುಡಿ. ಸಿಆರ್ಪಿಎಫ್ ತುಕಡಿಗಳನ್ನು ಕಾಶ್ಮೀರದಲ್ಲಿ ಉಗ್ರಗಾಮಿಗಳ ವಿರುದ್ಧ ಸೆಣೆಸಲು ನಿಯೋಜಿಸಲಾಗುತ್ತದೆ. ಅಸ್ಸಾಂ, ತ್ರಿಪುರಾ ಮುಂತಾದೆಡೆ ಪ್ರತ್ಯೇಕತಾವಾಗಿಗಳನ್ನು, ಛತ್ತೀಸ್ ಗಡ, ಜಾರ್ಖಂಡ್ ಗಳಲ್ಲಿ ನಕ್ಸಲರನ್ನು ನಿಯಂತ್ರಿಸಲು ನಿಯೋಜಿಸಲಾಗುತ್ತದೆ. ದಂಗೆ, ಗಲಭೆಗಳ ಪರಿಸ್ಥಿತಿಗಳನ್ನು ಹತೋಟಿಗೆ ತರಬೇಕಾದಾಗ ಸಿಆರ್ಪಿಎಫ್ ಪಡೆಯನ್ನು ಮೊದಲು ಕ್ರಿಯೆಗೆ ಇಳಿಸಲಾಗುತ್ತದೆ ಎಂದು ನಿವೃತ್ತ ಅಧಿಕಾರಿಗಳು ಹೇಳುತ್ತಾರೆ.
ಸೇನಾ ಪಡೆಯ ಜೊತೆ ಜೊತೆಯಲ್ಲಿ ಸಮಾನ ಮಟ್ಟದಲ್ಲಿ ಸಿಆರ್ಪಿಎಫ್ ಕಾರ್ಯ ನಿರ್ವಹಿಸಿದರೂ ಸಿಆರ್ಪಿಎಫ್ ಯೋಧರಿಗೆ ಸಿಗುವ ತರಬೇತಿ ಮತ್ತು ವೇತನ ಸೌಲಭ್ಯಗಳು ಸೇನೆಯ ಯೋಧರಿಗಿಂತ ಸಾಕಷ್ಟು ಕಡಿಮೆಯೇ. ಭಾರತೀಯ ಸೈನ್ಯದ ಸಾಮಾನ್ಯ ಸೈನಿಕನೊಬ್ಬ ಗಳಿಸುವ ವೇತನದ ಸುಮಾರು ಒಂದೂವರೆ ಪಟ್ಟು ಕಡಿಮೆ ವೇತನವನ್ನು ಅಷ್ಟೇ ಅನುಭವವುಳ್ಳ ಸಿಆರ್ಪಿಎಫ್ ಯೋಧ ಪಡೆಯುತ್ತಾನೆ. ಇದೇ ತಾರತಮ್ಯ ಅವರ ಪಿಂಚಣಿಯಲ್ಲೂ ಪ್ರತಿಫಲಿತವಾಗುತ್ತದೆ. ಮನೆ ಮಠ, ಮಕ್ಕಳನ್ನು ದೀರ್ಘಕಾಲ ತೊರೆದು , ಕುಟುಂಬ ಸಂತೋಷವನ್ನು ತ್ಯಾಗ ಮಾಡಿ ಬಂದು ದೇಶದ ಗಡಿಗಳನ್ನು ಕಾಯುವ, ದೇಶದೊಳಗೂ ಪೊಲೀಸ್ ಇಲಾಖೆಗೆ ನೆರವಾಗುವ ಯೋಧರ ನಡುವೆಯೇ ಸರ್ಕಾರಗಳು ಈ ಬಗೆಯಲ್ಲಿ ತಾರತಮ್ಯ ಸೃಷ್ಟಿಸಿರುವುದು ದುರದೃಷ್ಟಕರವೇ.
ಕೆಲವು ನಿವೃತ್ತ ಸಿಆರ್ಪಿಎಫ್ ಅಧಿಕಾರಿಗಳ ಪ್ರಕಾರ ಇಡೀ ಸೇನಾ ಪಡೆ ಒಂದು ದೇಹವಿದ್ದಂತೆ. ಆದರೆ ಹೃದಯಕ್ಕೆ ಮಾತ್ರ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ, ಅರೆಸೇನಾ ಪಡೆಗಳು ಕೈಕಾಲಿದ್ದಂತೆ ಎಂದ ಮಾತ್ರಕ್ಕೆ ಅವುಗಳನ್ನು ಅಲಕ್ಷ್ಯಮಾಡಬಾರದಲ್ಲವೇ ಎಂಬ ಅವರ ಪ್ರಶ್ನೆ ನೈತಿಕವಾದದ್ದು ಮತ್ತು ತಾತ್ವಿಕವಾದದ್ದೂ ಕೂಡ. ಅವರು ಹೇಳುವಂತೆ ಸಿಆರ್ಪಿಎಫ್ ಯೋಧರು ದೇಶದ ಯಾವುದೋ ಮೂಲೆಗಳಿಂದ ಬಂದಿರುತ್ತಾರೆ, ಇಲ್ಲಿ ಅವರ ಬದುಕಿನ ಸ್ಥಿತಿಗತಿಗಳು ಅಮಾನವೀಯವಾಗಿವೆ. ಸೇನೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆಗಳು ಸಿಆರ್ಪಿಎಫ್ ನೊಳಗೆ ಸಂಭವಿಸುತ್ತಿವೆ ಎಂಬ ಭಯಾನಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಬಹುಶಃ ಇದು ಗೃಹ ಇಲಾಖೆಯ ಪಾಲಿಗೆ ನಗ್ನ ಸತ್ಯವೇ ಇರಬಹುದು. ಸಿಆರ್ಪಿಎಫ್ ಯೋಧರ ವಸತಿ ಸಮಸ್ಯೆ ಗಾಢವಾಗಿದೆ ಎಂಬುದನ್ನೂ ನಿವೃತ್ತ ಅಧಿಕಾರಿಗಳು ಒಪ್ಪಿಕೊಳ್ಳುತ್ತಾ ಬಹುತೇಕ ಯೋಧರು ವಸತಿಗಾಗಿ ತಾವೇ ಹಣ ಭರಿಸಬೇಕಾದ ಹೀನಾಯ ಪರಿಸ್ಥಿತಿ ಇದೆ ಎನ್ನುತ್ತಾರೆ.
ಸಿಆರ್ಪಿಎಫ್ ಯೋಧರು ಇಂತಹ ದುಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದಾರಾದರೂ ಇವುಗಳ ಬಗ್ಗೆ ಧ್ವನಿ ಎತ್ತುವ ಹಕ್ಕನ್ನು ನಮ್ಮ ನಾಗರಿಕ ಸಮಾಜ ಅವರಿಗೆ ನೀಡಿಲ್ಲ ಎಂಬುದು ಇನ್ನೂ ಘೋರ. ಯೋಧರು ಪ್ರಾಣ ತೆತ್ತಾಗ ಅವರ ಬಗ್ಗೆ ಕಂಬನಿ ಸುರಿಸುವ ಸರ್ಕಾರ, ಯುದ್ಧ ತಯಾರಿ- ಶಸ್ತ್ರಾಸ್ತ್ರಗಳಿಗೆಂದು ಸಾವಿರಾರು ಕೋಟಿಗಳನ್ನು ವೆಚ್ಚ ಮಾಡುವ ಸರ್ಕಾರ, ಯೋಧರು ಬದುಕಿದ್ದಾಗ ಅವರ ಜೀವನಾವಶ್ಯಕತೆಗಳ ಕುರಿತು ಚಿಂತಿಸುವುದಿಲ್ಲವೇಕೆ? ಯೋಧರ ಜೊತೆ ಸೆಲ್ಫಿ ತೆಗೆಸಿಕೊಂಡು ಅಗ್ಗದ ಪ್ರಚಾರಕ್ಕೆ ಬಳಸಿಕೊಳ್ಳುವ ಅಧಿಕಾರಸ್ಥರು ಕಷ್ಟಕೋಟಳೆಗಳನ್ನೇ ಬದುಕುತ್ತಿರುವ ಸಿಆರ್ಪಿಎಫ್ ಯೋಧರೊಳಗೆ ಹೆಪ್ಪುಗಟ್ಟಿರುವ ಮನ್ ಕೀ ಬಾತ್ ಕೇಳಬಾರದೇನು? ಅವರ ನೋವುಗಳಿಗೆ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸಿದರೆ ಮಾತ್ರ ದೇಶಕ್ಕಾಗಿ ಬಲಿಯಾದ ಈ ಎಲ್ಲಾ ಸಿಆರ್ಪಿಎಫ್ ಯೋಧರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಿದಂತೆ. ಯುದ್ಧದ ಬಗೆಗಿನ ಮಾತು ತೊರೆದು ಯೋಧರ ಬದುಕಿನ ಕುರಿತ ಚಿಂತನೆ ನಡೆಯಬೇಕಿರುವುದು ಈ ಹೊತ್ತಿನ ತುರ್ತಾಗಿದೆ.