ವಾರದ ಹಿಂದೆ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ CRPF ನ 40 ಸೈನಯಕರು ಪ್ರಾಣ ಕಳೆದುಕೊಂಡು, ನಂತರ ಸೈನ್ಯ ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ಯೋಧರು ಹತ್ಯೆಯಾದ ಹಿನ್ನೆಲೆಯಲ್ಲಿ ದೇಶದ ಭದ್ರತೆಗಾಗಿ ಸಮಗ್ರ ರೂಪುರೇಷೆಯೊಂದನ್ನು ರೂಪಿಸುವ ಕಾರ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂದಾಗಿದ್ದಾರೆ.
ಇದಕ್ಕಾಗಿ 2016ರಲ್ಲಿ ಭಾರತೀಯ ಸೈನ್ಯ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ನ ರೂವಾರಿಯಾಗಿದ್ದ ಸೇನಾ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಪಡೆಯೊಂದನ್ನು ರಚಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.
“ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಷ್ಟ್ರದ ಭದ್ರತೆಯ ಕುರಿತು ರೂಪುರೇಷೆ ಸಿದ್ಧಪಡಿಸಲು ರಾಷ್ಟ್ರೀಯ ಭದ್ರತೆ ಕುರಿತ ಕಾರ್ಯಪಡೆಯೊಂದನ್ನು (ಟಾಸ್ಕ್ ಫೋರ್ಸ್) ರಚಿಸಲಿದ್ದು ಇದನ್ನು ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಅವರು ಮುನ್ನಡೆಸಲಿದ್ದಾರೆ. ದೇಶದ ಹಲವು ಪ್ರಮುಖ ವಿಷಯತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ರೂಪುರೇಷೆಯನ್ನು ಅವರು ತಯಾರಿಸಲಿದ್ದಾರೆ ಎಂದು ಗುರುವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಹುಲ್ ಗಾಂಧಿಯವರ ಈ ಕಾರ್ಯಪಡೆಯ ನೇತೃತ್ವ ವಹಿಸಲಿರುವ ಡಿ.ಎಸ್.ಹೂಡಾ ಅವರು 2016ರಲ್ಲಿ ಪಾಕಿಸ್ತಾನ ನಡೆಸಿದ ‘ಉರಿ’ ದಾಳಿಗೆ ಪ್ರತಿಕಾರಾರ್ಥವಾಗಿ ಸೆಪ್ಟೆಂಬರ್ 2016ರಲ್ಲಿ ಭಾರತೀಯ ಸೇನೆಯು ನಡೆಸಿದ ಸರ್ಜಿಕಲ್ ದಾಳಿಯನ್ನು ಯೋಜಿಸಿ, ಅದರ ಕಾರ್ಯಾಚರಣೆಯನ್ನು ಮುನ್ನಡೆಸಿದವರು. ಜಮ್ಮು ಕಾಶ್ಮೀರದಲ್ಲಿ ಉತ್ತರದ ಸೈನ್ಯದ ಕಮಾಂಡರ್ ಆಗಿಯೂ ಕಾರ್ಯ ನಿರ್ವಹಿಸಿದ್ದವರು. ಹೂಡಾ ಅವರು ನವೆಂಬರ್ 2016ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದರು.
ಸರ್ಜಿಕಲ್ ದಾಳಿಯನ್ನು ಮೋದಿ ಮತ್ತು ಬಿಜೆಪಿ ತಮ್ಮ ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡ ಸಂದರ್ಭದಲ್ಲಿ ಇದರನ್ನು ಲೆಫ್ಟಿನೆಂಟ್ ಜನರಲ್ ಹೂಡಾ ಅವರು ಪ್ರಶ್ನಿಸಿದ್ದರು. “ಸೇನೆ ನಡೆಸಿದ ಸರ್ಜಿಕಲ್ ದಾಳಿಯನ್ನು ಓವರ್ ಹೈಪ್ ಮಾಡಲಾಗಿದೆ ಮತ್ತು ರಾಜಕೀಯಗೊಳಿಸಲಾಗಿದೆ” ಎಂದು ಅವರು 2016ರ ಡಿಸೆಂಬರ್ನಲ್ಲಿ ಹೇಳಿದ್ದರು. ಅವರ ಈ ಹೇಳಿಕೆ ವಿವಾದವನ್ನುಂಟುಮಾಡಿತ್ತು. “ಉರಿ ದಾಳಿಗೆ ಪ್ರತಿಯಾಗಿ ನಮ್ಮ ಕಡೆಯಿಂದ ಸೈನಾ ಕಾರ್ಯಾಚರಣೆ ಅಗತ್ಯವಿತ್ತು, ನಾವದನ್ನು ಮಾಡಿದ್ದೆವು. ಆದರೆ ಅದನ್ನು ರಾಜಕಾರಣಕ್ಕೆ ಎಷ್ಟು ಬಳಸಿಕೊಳ್ಳಬೇಕು ಎಂಬ ಪ್ರಶ್ನೆಯನ್ನು ರಾಜಕಾರಣಿಗಳಿಗೆ ಕೇಳಿಕೊಳ್ಳಿ” ಎಂದು ಅವರು ಹೇಳಿದ್ದರು.
ರಾಷ್ಟ್ರೀಯ ಭದ್ರತೆಯ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ, ಅಗತ್ಯ ಸಂದರ್ಭಗಳಲ್ಲಿ ಸೇನಾ ಕಾರ್ಯಾಚರಣೆಗಳನ್ನೂ ಸಮರ್ಥವಾಗಿ ಮುನ್ನಡೆಸುತ್ತಿದ್ದ ಲೆಫ್ಟಿನೆಂಟ್ ಜನರಲ್ ಹೂಡಾ ಅವರು ಕಾಶ್ಮೀರದಲ್ಲಿ ಸೈನ್ಯವು ತಪ್ಪೆಸಗಿದ್ದಾಗಲೂ ಅದನ್ನು ಒಪ್ಪಿಕೊಂಡು ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದರು. ಈ ಮೂಲಕ ಭಾರತೀಯ ಸೇನೆಯು ನೈತಿಕ ಮೌಲ್ಯಗಳಿಗೆ ಬದ್ಧವಾಗಿದೆ ಎಂಬ ಸಂದೇಶ ನೀಡಿದ್ದರು. 2013ರಲ್ಲಿ ಕಾಶ್ಮೀರದ ಉಗ್ರ ಬುರ್ಹಾನ್ ವಾನಿಯನ್ನು ಸೈನ್ಯ ಹೊಡೆದು ಹಾಕಿದಾಗ ಇಡೀ ಕಣಿವೆಯಲ್ಲಿ ಸೇನೆಗೆ ವ್ಯತಿರಿಕ್ತ ಭಾವನೆ ಉಂಟಾಗುವ ಸ್ಥಿತಿ ನಿರ್ಮಾಣವಾದಾಗ ಪರಿಸ್ಥಿತಿಯನ್ನು ಚಾಕಚಕ್ಯತೆಯಿಂದ ನಿರ್ವಹಿಸಿದ್ದವರು ಹೂಡಾ.
ಈ ಸಂದರ್ಭದಲ್ಲಿ ಅಂದು ಜಮ್ಮು ಕಾಶ್ಮೀರದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರವು ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಬುರ್ಹಾನ್ ವಾನಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನೂ, ಕುಟುಂಬ ಸದಸ್ಯರಿಗೆ ಉದ್ಯೋಗವನ್ನೂ ನೀಡಿತ್ತು.
ಸೇನಾ ವಿಷಯಗಳಲ್ಲಿ ಅಪಾರ ಅನುಭವ ಮತ್ತು ತಿಳುವಳಿಕೆ ಹೊಂದಿರುವ ಲೆ.ಜ. ಹೂಡಾ ಅವರು ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ರಾಷ್ಟ್ರದ ಹಿತಾಸಕ್ತಿಯಿಂದ ದೇಶದ ಭದ್ರತೆಗೆ ಬೇಕಾದ ಸಮಗ್ರ ರೂಪುರೇಷೆಯನ್ನು ಸಿದ್ಧಪಡಿಸಬಹುದೆಂದು ನಿರೀಕ್ಷಿಸಬಹುದು. ರಾಹುಲ್ ಗಾಂಧಿಯವರ ಈ ಯೋಜನೆಗೆ ಈಗಾಗಲೇ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಡತೊಡಗಿದೆ. ‘ರಾಹುಲ್ ಗಾಂಧಿಯವರು ಈ ಪ್ರಸ್ತಾಪವನ್ನು ನನ್ನೆದುರು ಇಟ್ಟ ಸಂದರ್ಭದಲ್ಲಿ ನನಗೆ ಅತಿಯಾದ ಅನುಮಾನಗಳೇನೂ ಬರಲಿಲ್ಲ. ಪುಲ್ವಾಮಾ ಘಟನೆಗೂ ಮುನ್ನವೇ ಈ ಪ್ರಸ್ತಾಪ ಇಟ್ಟಿದ್ದರು. ದೇಶದ ಭದ್ರತೆಯ ಹಿತದಿಂದ ನಾನಿದನ್ನು ಒಪ್ಪಿಕೊಂಡಿದ್ದೇನೆ’ ಎಂದಿರುವ ಹೂಡಾ, ನಾವು ಆಂತರಿಕ ಮತ್ತು ಬಾಹ್ಯ ಭದ್ರತೆಗಳೆರಡನ್ನೂ ಗಮನಿಸಿ ಮುಂದಿನ ಐದು ವರ್ಷಗಳಿಗೆ ಅಗತ್ಯವಾದ ಒಂದು ಕಾರ್ಯತಂತ್ರವನ್ನು ರೂಪಿಸುತ್ತೇವೆ’ ಎಂದಿದ್ದಾರೆ.
ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಹೂಡಾ ಅವರ ನೇತೃತ್ವದಲ್ಲಿ ರಚಿಸಲಿರುವ ಭದ್ರತೆಯ ರೂಪುರೇಷೆಗಳನ್ನು ಸಿದ್ಧಪಡಿಸುವ ಕಾರ್ಯಪಡೆ ಸೈನಿಕವಾಗಿಯೂ ರಾಜಕೀಯವಾಗಿಯೂ ಮಹತ್ವ ಪಡೆದಿದೆ. ಈ ಹೇಳಿಕೆ ಹೊರಬರುತ್ತಿದ್ದಂತೆ ಲೆ.ಜ.ಹೂಡಾ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹವು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದೆ. ಹೂಡಾ ಸಧ್ಯ ಕಾಂಗ್ರೆಸ್ ಪಕ್ಷ ಸೇರುವ ಅಥವಾ ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ನನಗಿಲ್ಲ ಆದರೆ ರಾಷ್ಟ್ರದ ಹಿತಾಸಕ್ತಿಯಿಂದ ಈ ಹೊಣೆ ಹೊತ್ತಿದ್ದೇನೆ’ ಎಂದಿದ್ದಾರೆ.
TruthIndiaKannada