ಬೆಂಗಳೂರಿನ ಈ ಬಾರಿಯ ಏರ್ ಶೋನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಅವಘಡದಲ್ಲಿ ಕನಿಷ್ಠ 300ಕ್ಕೂ ಹೆಚ್ಚು ಕಾರುಗಳು ಹಾಗೂ 100ಕ್ಕೂ ಹೆಚ್ಚು ಬೈಕುಗಳು ಅಗ್ನಿಗೆ ಆಹುತಿಯಾಗಿದೆ.
ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿದೆ.
10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದು, ಕಾರಿನ ಇಂಧನ ಟ್ಯಾಂಕ್ ಗಳು ಸ್ಫೋಟಗೊಳ್ಳುತ್ತಿರುವ ಕಾರಣ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ವಿಫಲ ಯತ್ನ ಮಾಡುತ್ತಿದ್ದಾರೆ.
ಕೆಲವು ಸ್ಥಳದಲ್ಲೇ ಇದ್ದ ಚಾಲಕರು ಕಾರಿನ ಗಾಜು ಒಡೆದು, ಹ್ಯಾಂಡ್ ಬ್ರೇಕ್ ತೆಗೆದು ಕಾರನ್ನು ತಳ್ಳುವ ಮೂಲಕ ಕೆಲವು ಕಾರುಗಳನ್ನು ರಕ್ಷಿಸಿದರು.
ವೈಮಾನಿಕ ಪ್ರದರ್ಶನದ 5ನೇ ಗೇಟ್ ಬಳಿಯ ಬೆಂಕಿ ಅವಘಡದಿಂದಾಗಿ ತಾತ್ಕಾಲಿಕವಾಗಿ ವೈಮಾನಿಕ ಹಾರಾಟ ಸ್ಥಗಿತಗೊಳಿಸಲಾಗಿದೆ.
ಐ ಟ್ವೆಂಟಿ ಕಾರಿನಲ್ಲಿ ಕೂಲೆಂಟ್ ಕಡಿಮೆ ಇದ್ದ ಕಾರಣ ಬೆಂಕಿ ಹೊತ್ತಿಕೊಂಡಿದ್ದು, ನಂತರ ಪಕ್ಕದಲ್ಲೇ ಇದ್ದ ಸಿಲಿಂಡರ್ ಕಾರಿಗೂ ಬೆಂಕಿ ಹಬ್ಬಿ ಒಣ ಹುಲ್ಲಿನ ಮೂಲಕ 500 ಕ್ಕೂ ಹೆಚ್ಚು ಕಾರಿಗೆ ಬೆಂಕಿ ಪಸರಿಸಿದೆ ಎಂದು ಮೂಲಗಳು ತಿಳಿಸಿದೆ. ಆದರೆ ಕೆಲ ಪ್ರತ್ಯಕ್ಷದರ್ಶಿಗಳು ಚಾಲಕನೊಬ್ಬ ಬಿಸಾಡಿದ ಸಿಗರೇಟಿನಿಂದ ಬೆಂಕಿ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.
ಅಂದಾಜು 50 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂ. ಎನ್ ರೆಡ್ಡಿ ತಿಳಿಸಿದ್ದಾರೆ.
ಏರ್ ಶೋನಲ್ಲಿ ಬೆಂಕಿ ಅವಘಡ ಹಿನ್ನೆಲೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.
ವಾರದ ಹಿಂದಷ್ಟೇ ಏರ್ ಶೋ ಆರಂಭಕ್ಕೂ ಹಿಂದಿನ ದಿನ ವೈಮಾನಿಕ ಹಾರಾಟ ತಾಲೀಮಿನ ವೇಳೆ ಸೂರ್ಯ ಕಿರಣ್ ವಿಮಾನ ಪಥನವಾಗಿ ಓರ್ವ ಪೈಲಟ್ ಮೃತಪಟ್ಟಿದ್ದು, ಇಬ್ಬರು ಪೈಲಟ್ ಗಾಯಗೊಂಡಿದ್ದರು. ಇದೀಗ ಏರ್ ಶೋ ಇನ್ನೇನು ನಾಳೆ ಅಂತ್ಯವಾಗಬೇಕು ಎನ್ನುವ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ.