ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಶಾಂತಿ ಸ್ಥಾಪನೆಗಾಗಿ ನೀಡಲಾದ ತಮ್ಮ ಕೊಡುಗೆಯನ್ನು ಗುರುತಿಸಿ ನೀಡಲಾದ ದಕ್ಷಿಣ ಕೊರಿಯಾದ ಪ್ರತಿಷ್ಠಿತ ‘ಸಿಯೋಲ್ ಶಾಂತಿ ಪ್ರಶಸ್ತಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದ್ದಾರೆ. ‘ದ್ವೇಷದ ಜಾಗದಲ್ಲಿ ಸೌಹಾರ್ದತೆಯನ್ನು ನೆಲೆಗೊಳಿಸುವ ಕೆಲಸವಾಗಬೇಕಿದೆ’ ಎಂದು ಮೋದಿಯವರು ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಹೇಳಿದ್ದಾರೆ.
ದೇಶದ ಪ್ರಧಾನಿಯೊಬ್ಬರಿಗೆ, ಕೂಫಿ ಅನ್ನಾನ್, ಬಾನ್ ಕಿ ಮೂನ್, ಏಂಜೆಲಾ ಮರ್ಕೆಲ್, ಮಹಮ್ಮದ್ ಯೂನಸ್ ಅವರಂತಹ ಗಣ್ಯರು ಪಾತ್ರರಾಗಿರುವ ಗೌರವ ಸಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ. ಅದಕ್ಕಾಗಿ ನಾವು ಖಂಡಿತಾವಾಗಿಯೂ ನಾವು ಭಾರತೀಯರು ಎಂದು ದೇಶದ ಪ್ರತಿಯೊಬ್ಬರೂ ಹೆಮ್ಮೆಯಿಂದ ಹೇಳಬಹುದು. ಪ್ರಶಸ್ತಿಯ ಗೌರವ ಮತ್ತು ಘನತೆಯ ವಿಷಯದಲ್ಲಿಯೂ; ಅದೊಂದು ಮಹತ್ವದ ಪುರಸ್ಕಾರವೇ. ಶಾಂತಿಪ್ರಿಯರಾದ ದಕ್ಷಿಣ ಕೊರಿಯಾದ ಜನತೆಯ ಶಾಂತಿ ಮತ್ತು ಸಹಬಾಳ್ವೆಯಲ್ಲಿನ ನಂಬಿಕೆಯ ಧ್ಯೋತಕವಾಗಿ ಆ ಪ್ರಶಸ್ತಿಯನ್ನು 1990ರಲ್ಲಿ ನಡೆದ ಬೇಸಿಗೆ ಒಲಿಪಿಂಕ್ಸ್ ಕ್ರೀಡಾಕೂಟದ ಯಶಸ್ಸಿನ ಸ್ಮರಣೆಗಾಗಿ ಸ್ಥಾಪಿಸಲಾಗಿದೆ. ಈವರೆಗೆ ಬಾಂಗ್ಲಾದಲ್ಲಿ ಸಣ್ಣ ಉಳಿತಾಯ ಕ್ರಾಂತಿ ಮೂಲಕ ದೇಶದ ದುರ್ಬಲ ವರ್ಗದ ಮಹಿಳೆಯ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದ ಮಹಮ್ಮದ್ ಯೂನಸ್ ಸೇರಿದಂತೆ, ತೀವ್ರವಾದಿ ಬಲಪಂಥೀಯರ ವಿರೋಧದ ನಡುವೆಯೂ ಯುರೋಪಿನಲ್ಲಿ ಶಾಂತಿ ಮತ್ತು ಸೌಹಾರ್ದಕ್ಕೆ ಪ್ರಯತ್ನಿಸುತ್ತಿರುವ ಏಂಜೆಲಾ ಮರ್ಕೆಲ್ ವರೆಗೆ ಹಲವು ಗಣ್ಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆದರೆ, ಈ ಬಾರಿ ಪ್ರಧಾನಿ ಮೋದಿಯವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದರಿಂದ ಜಾಗತಿಕವಾಗಿ ಮತ್ತೊಮ್ಮೆ ಕಳೆದ ಐದು ವರ್ಷಗಳ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದಲ್ಲಿ ಆಗಿರುವ ಆರ್ಥಿಕ ಅಭಿವೃದ್ಧಿಯ ಕ್ರಾಂತಿಕಾರಕ ಬದಲಾವಣೆಗಳು ಮತ್ತು ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆ ಕಾಯುವ ನಿಟ್ಟಿನಲ್ಲಿ ಅವರ ಆಡಳಿತ ನಡೆಸಿರುವ ಪ್ರಯತ್ನಗಳು ಗಮನ ಸೆಳೆದಿವೆ.
ಪ್ರಮುಖವಾಗಿ ದೇಶದ ಜಿಡಿಪಿ ದರ, ಉದ್ಯೋಗ ಸೃಷ್ಟಿ, ಉದ್ಯಮ ಮತ್ತು ಸೇವಾ ವಲಯಗಳ ಬೆಳವಣಿಗೆ ದರ, ಕೃಷಿ ವಲಯ ಪ್ರಗತಿಯ ವಿಷಯಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ. ಕಳೆದ ಐದು ವರ್ಷಗಳಲ್ಲಿ ದೇಶದ ಜಿಡಿಪಿ ದರ ಕಂಡಿರುವ ಬದಲಾವಣೆ ಏನು? ಜಿಡಿಪಿ ದರದ ಮೇಲೆ ಪರಿಣಾಮ ಬೀರಿರುವ ಸರ್ಕಾರದ ಆರ್ಥಿಕ ನೀತಿ ಮತ್ತು ಕ್ರಮಗಳೇನು ಎಂಬುದು ಪರಿಶೀಲನೆಗೆ ಒಳಗಾಗುತ್ತಿದೆ.
ಮೋದಿಯವರ ಅವಧಿಯ ಮಹತ್ವದ ಆರ್ಥಿಕ ಕ್ರಮ ಎಂದು ಪರಿಗಣಿಸಲಾಗಿರುವುದು 2016ರ ನವೆಂಬರ್ 8ರಂದು ಘೋಷಿಸಿದ ನೋಟು ಅಮಾನ್ಯೀಕರಣ. ದೇಶದ ಕಪ್ಪುಹಣ, ಉಗ್ರಗಾಮಿಗಳ ಹಣಕಾಸು ಮೂಲ, ಕಾಳದಂಧೆಯ ಮೇಲೆ ನಡೆದ ಸರ್ಜಿಕಲ್ ದಾಳಿ ಎಂದೇ ಆಡಳಿತಾರೂಢ ಬಿಜೆಪಿ ಸಚಿವರು ಮತ್ತು ನಾಯಕರುಗಳು ಬಣ್ಣಿಸಿದ ಈ ಕ್ರಮದ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರತಿಪಕ್ಷಗಳಷ್ಟೇ ಅಲ್ಲ; ಆರ್ಥಿಕ ತಜ್ಞರನ್ನೂ ದೇಶದ್ರೋಹಿಗಳೆಂದೇ ಹೀಯಾಳಿಸಲಾಗಿತ್ತು. ಬಿಜೆಪಿ ಮತ್ತು ಅದರ ಬೆಂಬಲಿಗ ಭಕ್ತಪಡೆಯಷ್ಟೇ ಅಲ್ಲದೆ, ದೇಶದ ಬಹುತೇಕ ಮಾಧ್ಯಮಗಳೂ ಅದೊಂದು ಕ್ರಾಂತಿಕಾರಕ ಕ್ರಮ ಎಂದೂ, ಅದನ್ನು ಶಂಕಿಸುವವರು ದೇಶದ್ರೋಹಿಗಳೆಂದೂ ವಿಶ್ಲೇಷಿಸಿದ್ದವು.
ಆದರೆ, ಸ್ವತಃ ಸರ್ಕಾರದ ಮತ್ತು ಬಿಜೆಪಿಯ ಆಪ್ತರೆಂದೇ ಗುರುತಿಸಿಕೊಂಡಿದ್ದ ಊರ್ಜಿತ್ ಪಟೇಲ್ ಗವರ್ನರ್ ಅವಧಿಯಲ್ಲೇ ಕಳೆದ ವರ್ಷದ ಆಗಸ್ಟ್ ನಲ್ಲಿ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ವರದಿ ಅಂತಿಮವಾಗಿ ನೋಟು ಅಮಾನ್ಯೀಕರಣದ ಪರಿಣಾಮಗಳಿಗೆ ಅಧಿಕೃತ ಮುದ್ರ ಒತ್ತಿತು. ಆ ವರದಿಯ ಪ್ರಕಾರ, ಒಟ್ಟು ಅಮಾನ್ಯೀಕರಣಗೊಂಡ 15.41 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳ(500 ಮತ್ತು 1000 ಮುಖಬೆಲೆಯ) ಪೈಕಿ ಕೇವಲ ರೂ.10,720 ಕೋಟಿ ಮೌಲ್ಯದ ಹಣ ಮಾತ್ರ ಬ್ಯಾಂಕುಗಳಿಗೆ ವಾಪಸು ಬಂದಿಲ್ಲ. ಅಂದರೆ, ಅಮಾನ್ಯೀಕರಣಗೊಂಡ ಒಟ್ಟು ಮೊತ್ತದಲ್ಲಿ ಶೇ.99.3ರಷ್ಟು ಮೊತ್ತದ ಹಣ ಬ್ಯಾಂಕುಗಳಿಗೆ ವಾಪಸು ಬಂದಿದೆ.
ಅಂದರೆ, ಸರ್ಕಾರ ನಿರೀಕ್ಷಿಸಿದ 3 ಲಕ್ಷ ಕೋಟಿ ಕಪ್ಪುಹಣ ಎಲ್ಲಿ ಹೋಯಿತು? ಕಪ್ಪುಹಣದ ವಿಷಯದಲ್ಲಿ ಮೋದಿಯವರ ಮಹತ್ವಾಕಾಂಕ್ಷೆಯ ಆರ್ಥಿಕ ಸುಧಾರಣೆಯ ಕ್ರಮ ಸಂಪೂರ್ಣ ವಿಫಲ ಎಂದಾಯಿತು. ಹಾಗೆಯೇ, ಉಗ್ರಗಾಮಿಗಳ ಹಣದ ಮೂಲ ಕಡಿತ ಮಾಡುವ ಉದ್ದೇಶ ಕೂಡ ಎಷ್ಟರಮಟ್ಟಿಗೆ ನಿಜವಾಯಿತು ಎಂಬುದಕ್ಕೆ ಈಗಲೂ ನಡೆಯುತ್ತಿರುವ ಉಗ್ರ ದಾಳಿಗಳು ಮತ್ತು ಬಹುತೇಕ ಸಂಪೂರ್ಣ ಅಮಾನ್ಯೀಕರಣಗೊಂಡ ಹಣ ಇಡಿಯಾಗಿ ವಾಪಸು ಬಂದದ್ದೇ ನಿದರ್ಶನ.
ದೇಶದ ಒಟ್ಟು ಚಲಾವಣೆಯ ಹಣದ ಪೈಕಿ ಶೇ.86ರಷ್ಟು ಪ್ರಮಾಣವನ್ನು ಅಮಾನ್ಯಗೊಳಿಸಿದ ಪರಿಣಾಮ, ದೇಶದ ಆರ್ಥಿಕ ಬೆಳವಣಿಗೆ ದರಕ್ಕೆ ಬಿದ್ದ ಪೆಟ್ಟು ಶೇ.2ರಷ್ಟು ಬೆಳವಣಿಗೆ ದರ ಕುಸಿತ. ಪರಿಣಾಮವಾಗಿ ಜಿಡಿಪಿ ನೋಟು ರದ್ದತಿಗೆ ಪೂರ್ವದ ಶೇ.8.01ದಿಂದ ಶೇ.7.11ಕ್ಕೆ ಕುಸಿಯಿತು. ಅಲ್ಲದೆ, ಉದ್ಯಮ ಮತ್ತು ಕೃಷಿ ವಲಯದ ಮೇಲೆ ಅದು ಬೀರಿದ ವ್ಯತಿರಿಕ್ತಪರಿಣಾಮದಿಂದಾಗಿ 2016-17ರ ಅಂತಿಮ ಹಣಕಾಸು ತ್ರೈಮಾಸಿಕ ಒಂದರಲ್ಳೇ ದೇಶದಲ್ಲಿ 15 ಲಕ್ಷ ಉದ್ಯೋಗ ನಷ್ಟವಾಯಿತು.
ಒಟ್ಟಾರೆ, ಸಿಯೋಲ್ ಶಾಂತಿ ಪ್ರಶಸ್ತಿ ಸಮಿತಿ ಉಲ್ಲೇಖಿಸಿರುವ ‘ಮೋದಿನಾಮಿಕ್ಸ್’ ಮತ್ತು ‘ಮೋದಿ ಡಾಕ್ಟ್ರಿನ್’ ಎಂಬ ಎರಡು ಬ್ರಾಂಡ್ ಪರಿಕಲ್ಪನೆಗೆ ನೆಲೆ ಒದಗಿಸಿದ್ದ ನೋಟು ಅಮಾನ್ಯೀಕರಣವೇ ಸಂಪೂರ್ಣ ವಿಫಲ ಕಸರತ್ತು ಮತ್ತು ಅಂತಹದ್ದೊಂದು ಬ್ರಾಂಡ್ ಬಿಲ್ಡಿಂಗ್ ಎಕ್ಸರಸೈಸ್ ಪರಿಣಾಮವಾಗಿ ದೇಶದ ಬಡವರು, ರೈತರು, ಕೂಲಿಕಾರ್ಮಿಕರು, ಮಧ್ಯಮ ವರ್ಗ ಅನುಭವಿಸಿದ ಸಂಕಷ್ಟಗಳ ಕುರಿತು ಸಾಲುಸಾಲು ವರದಿಗಳು, ಅಧ್ಯಯನಗಳು ಬಂದಿವೆ. ಒಟ್ಟಾರೆ ದೇಶದ ಆರ್ಥಿಕತೆ, ಉದ್ಯೋಗ ಮಾರುಕಟ್ಟೆ, ಉತ್ಪಾದನಾ ವಲಯ ಮತ್ತು ಕೃಷಿ ವಲಯಗಳು ಹೇಗೆ ಹಿನ್ನಡೆ ಅನುಭವಿಸಿದವು, ದೇಶದ ಜಿಡಿಪಿ ಮತ್ತು ಬೆಳವಣಿಗೆ ದರಕ್ಕೆ ಹೇಗೆ ಬರೆ ಬಿತ್ತು ಎಂಬುದನ್ನು ಸ್ವತಃ ಆರ್ ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಹಾಗೇ, ಶಾಂತಿ ಸ್ಥಾಪನೆಯ ಮತ್ತು ಸೌಹಾರ್ದ ಕಾಯುವ ನಿಟ್ಟಿನಲ್ಲಿ ಮೋದಿಯವರ ಅವಧಿಯಲ್ಲಿ ದೇಶದಲ್ಲಿ ಏನೆಲ್ಲಾ ಕ್ರಾಂತಿಕಾರಕ ಕ್ರಮಗಳು ಜಾರಿಗೆ ಬಂದಿವೆ ಎಂಬುದಕ್ಕೂ ಸಾಲು ಸಾಲು ಉದಾಹರಣೆಗಳಿವೆ. ಅದು ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸವೆಂದು ಶಂಕಿಸಿ ಮಹಮ್ಮದ್ ಅಖ್ಲಾಕ್ನನ್ನು ಗೋರಕ್ಷಕರ ಗುಂಪು ಹೊಡೆದು ಸಾಯಿಸಿದ್ದಿರಬಹುದು, ಗುಜರಾತಿನ ಉನಾದಲ್ಲಿ ದಲಿತರ ಮೇಲೆ ನಡೆದ ಗೋರಕ್ಷಕರ ದಾಳಿ ಇರಬಹುದು, ಕಾಶ್ಮೀರದ ಕಥುವಾದ ಆಸೀಫಾ ಬಾನು ಅತ್ಯಾಚಾರ ಮತ್ತು ಕೊಲೆ ಪ್ರಕರಣವಿರಬಹುದು, ಗೌರಿ ಲಂಕೇಶ್, ಡಾ ಎಂ ಎಂ ಕಲ್ಬುರ್ಗಿ ಸೇರಿದಂತೆ ಸಾಲುಸಾಲು ವಿಚಾರವಾದಿಗಳ ಹತ್ಯೆಗಳಿರಬಹುದು, ಸ್ವತಃ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡುವ ಮಟ್ಟಿಗೆ ಹಬ್ಬಿದ ಸಾಮೂಹಿಕ ದಾಳಿ ಪ್ರಕರಣಗಳಿರಬಹುದು. ದ್ವೇಷ ಹರಡುವ, ಅಸಹಿಷ್ಣುತೆ ಪೊರೆಯುವ ವ್ಯವಸ್ಥಿತ ಶಕ್ತಿಗಳು ಆಡಳಿತ ಪಕ್ಷದ ಜೊತೆ ಗುರುತಿಸಿಕೊಳ್ಳುವ ಸಂಘಪರಿವಾರದ ಬಾಲಂಗೋಚಿಗಳು ಎಂಬುದು ಗುಟ್ಟೇನೂ ಅಲ್ಲ!
ಜಾತಿ, ಧರ್ಮವನ್ನು ಗುರಿಯಾಗಿಸಿಕೊಂಡು ಭಾರತದ ಇತಿಹಾಸದಲ್ಲೇ ಕಂಡಿರದ ಪ್ರಮಾಣದ ದಾಳಿಗಳು ಮೋದಿಯವ ಆಡಳಿತದ ಅವಧಿಯಲ್ಲಿ ದೇಶದ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಾಗಿವೆ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿರುವ ಸಂಗತಿ. ಅಷ್ಟೇ ಅಲ್ಲದೆ, ಸ್ವತಃ ಮೋದಿಯವರೇ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ಗೋರ್ಧಾ ಘಟನೆಯ ನಂತರ ನಡೆದ ಸಾಮೂಹಿಕ ಹತ್ಯಾಕಾಂಡಗಳು ಮತ್ತು ಆ ಹಿಂಸಾಚಾರದ ಹೊತ್ತಲ್ಲಿ ಮೋದಿ ರಾಜಧರ್ಮ ಪಾಲಿಸದೇ ಕೈಕಟ್ಟಿಕೂತ ಬಗ್ಗೆ ಸ್ವತಃ ಅವರದೇ ಪಕ್ಷದ ಮೇರು ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರೇ ಎಚ್ಚರಿಕೆ ನೀಡಿದ್ದು, ಇನ್ನೂ ಇತಿಹಾಸದಲ್ಲಿ ಮುಚ್ಚಿಹೋಗಿಲ್ಲ.
ಇನ್ನು ಕಾಶ್ಮೀರ ಕಣಿವೆಯಲ್ಲಿ ಕಳೆದ ಎರಡು ವರ್ಷದಿಂದ ನಡೆಯುತ್ತಿರುವ ನಿರಂತರ ಸಂಘರ್ಷ ಮತ್ತು ಇದೀಗ ಪುಲ್ವಾಮಾ ದಾಳಿ ಬಳಿಕ ದೇಶಾದ್ಯಂತ ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ಸಾಮೂಹಿಕ ದಾಳಿಗಳು ಗೊತ್ತೇ ಇದೆ. ಕಾಶ್ಮೀರದ ಸ್ಥಳೀಯರಲ್ಲಿ ಅನಾಥಭಾವ, ವ್ಯವಸ್ಥೆಯಿಂದ ಹೊರಗುಳಿದ ಭಾವನೆಗಳು ಎಷ್ಟು ಪ್ರಬಲವಾಗಿ ಬೆಳೆದಿವೆ ಎಂಬುದಕ್ಕೆ ಎರಡು ವರ್ಷಗಳ ಕಳೆದರೂ ಅಲ್ಲಿನ ಜನಸಾಮಾನ್ಯರು ಸರ್ಕಾರ ಮತ್ತು ಸೇನಾಪಡೆಗಳ ವಿರುದ್ಧದ ತಮ್ಮ ಹೋರಾಟವನ್ನು ಕೈಬಿಟ್ಟಿಲ್ಲ. ಬದಲಾಗಿ ಸರ್ಕಾರ ಮತ್ತು ಸೇನೆಯ ವಿರುದ್ಧ ಅವರು ಉಗ್ರಗಾಮಿ ಸಂಘಟನೆಗಳಿಗೆ ಸಹಕರಿಸುವ ಅಪಾಯಕಾರಿ ಸ್ಥಿತಿ ಬಂದಿದೆ. ಅಲ್ಲಿನ ಈ ವಿಷಮ ಸ್ಥಿತಿಗೆ ಮೋದಿ ಅವರ ಆಡಳಿತದ ತಪ್ಪು ನಿರ್ಧಾರಗಳೇ ಕಾರಣ ಎಂಬುದನ್ನು ಮಾಧ್ಯಮಗಳಷ್ಟೇ ಅಲ್ಲ, ಸ್ವತಃ ಎನ್ ಡಿ ಎ ಮಿತ್ರಪಕ್ಷಗಳೂ ಹೇಳಿವೆ. ಪುಲ್ವಾಮಾ ಘಟನೆಯ ಬಳಿಕ ನಡೆಯುತ್ತಿರುವ ದಾಳಿಗಳ ವಿಷಯದಲ್ಲಂತೂ, ಸ್ವತಃ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿಯೇ, ಇದೀಗ ದೇಶದ ಆಂತರಿಕ ಮತ್ತು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಯುವ ಮತ್ತು ಆರ್ಥಿಕ ಸುಧಾರಣೆಯ ಮೂಲಕ ಸಮೃದ್ಧಿ ತರುವ ನಿಟ್ಟಿನಲ್ಲಿ ಮೋದಿಯವರ ಕ್ರಮಗಳ ಬಗ್ಗೆ ‘ಸಿಯೋಲ್ ಶಾಂತಿ ಪ್ರಶಸ್ತಿ’ ಮತ್ತೊಂದು ಸುತ್ತಿನ ಚರ್ಚೆಗೆ ಚಾಲನೆ ನೀಡಿದೆ. ಆ ನೆಪದಲ್ಲಿಯಾದರೂ ಆ ಪ್ರಶಸ್ತಿ ಹಿಂದಿನ ದಕ್ಷಿಣ ಕೊರಿಯಾ ಜನರ ಶಾಂತಿಯ ಆಶಯವನ್ನು ಎಷ್ಟರಮಟ್ಟಿಗೆ ನಿಜ ಮಾಡಲು ಪ್ರಯತ್ನಿಸಿದ್ದೇನೆ ಎಂದು ಸ್ವತಃ ಪ್ರಧಾನಿ ಮೋದಿಯವರು ಅವಲೋಕನ ಮಾಡಿಕೊಳ್ಳಲೂ ಒಂದು ಅವಕಾಶ ಒದಗಿ ಬಂದಿದೆ.