ಅದು, 1971ರ ಮಾರ್ಚ್ ತಿಂಗಳು. ಪಾಕಿಸ್ತಾನದ ಅತ್ಯಂತ ದಾರುಣ, ದುರ್ದಿನಗಳ ಕಾಲವದು. ಜನರಲ್ ಯಾಹ್ಯಾ ಖಾನ್ ಪಾಕಿಸ್ತಾನದ ಅಧ್ಯಕ್ಷನಾಗಿದ್ದ. ಪಾಕಿಸ್ತಾನ ಒಬ್ಬರಾದ ಮೇಲೊಬ್ಬರಂತೆ ಸರ್ವಾಧಿಕಾರಿಗಳ ಆಡಳಿತದಲ್ಲಿ ನರಳುತ್ತ ಬಂದಿತ್ತು. ಯಾಹ್ಯಾ ಖಾನ್ ಇದಕ್ಕೆ ಹೊರತಾಗಿರಲಿಲ್ಲ. ಯಾಹ್ಯಾ ಖಾನ್ ನಂತೆಯೇ ಸರ್ವಾಧಿಕಾರಿಯಾಗಿದ್ದ ಅಯೂಬ್ ಖಾನ್ ನಿಂದ ಈತ ಅಧಿಕಾರವನ್ನು ಕಿತ್ತುಕೊಂಡಿದ್ದ. ಹೀಗಿದ್ದಾಗ್ಯೂ ಯಾಹ್ಯಾ ಖಾನ್ ಪಾಕಿಸ್ತಾನದ ಮೊದಲ ಸಾರ್ವತ್ರಿಕ ಚುನಾವಣೆಯನ್ನು ನಡೆಸಿದ್ದ. ಆದರೆ ಈ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ ಅವಾಮಿ ಲೀಗ್ ಬಹುಮತ ಪಡೆಯಿತು. ಶೇಕ್ ಮುಜಿಬುರ್ ರೆಹಮಾನ್ಗೆ ಸರ್ಕಾರ ರಚಿಸಲು ಆಹ್ವಾನಿಸಬೇಕಿತ್ತು. ಆದರೆ ಪಶ್ಚಿಮ ಪಾಕಿಸ್ತಾನೀಯರ ಒತ್ತಡದಿಂದ ಮುಜಿಬುರ್ ಅವರ ಹಕ್ಕನ್ನು ನಿರಾಕರಿಸಲಾಯಿತು. ಯಾಹ್ಯಾಖಾನ್ ದೇಶದ ಸಂವಿಧಾನವನ್ನೇ ಅಮಾನತ್ತಿನಲ್ಲಿ ಇಟ್ಟು, ಸೇನಾಡಳಿತವನ್ನು ತೀವ್ರಗೊಳಿಸಿದ. ಅದರ ಪರಿಣಾಮ ಭೀಕರವಾಗಿತ್ತು.

1971ರ ಮಾರ್ಚ್ 7ರಂದು ಶೇಕ್ ಮುಜೀಬುರ್ ರೆಹಮಾನ್ ಪೂರ್ವ ಪಾಕಿಸ್ತಾನದ ಢಾಕಾ ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತ, ‘ಇದು ಸಂಘರ್ಷದ ಕಾಲ. ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳುವ ಸಂಘರ್ಷದ ಕಾಲ’ ಎಂದು ಘೋಷಿಸಿ ರಣಕಹಳೆ ಮೊಳಗಿಸಿದರು. ಅವಾಮಿ ಲೀಗ್ ಗೆ ಅಧಿಕಾರ ಹಸ್ತಾಂತರಿಸದೇ ಹೋಗಿದ್ದು ಪೂರ್ವ ಪಾಕಿಸ್ತಾನಿಯರನ್ನು ತೀವ್ರವಾಗಿ ಕೆರಳಿಸಿತ್ತು. ಮಾ.9ರಂದು ಚಿತ್ತಗಾಂಗ್ ಬಂದರಿನಲ್ಲಿ ಸ್ವಾತ್ ಎಂಬ ಹಡಗಿನಿಂದ ಶಸ್ತ್ರಾಸ್ತ್ರಗಳನ್ನು ಇಳಿಸಿಕೊಳ್ಳಲು ಬಂದರಿನ ಕಾರ್ಮಿಕರು ನಿರಾಕರಿಸಿದರು. ಇದು ಪಶ್ಚಿಮ ಪಾಕಿಸ್ತಾನದ ವಿರುದ್ಧದ ಮೊದಲ ಬಂಡಾಯವಾಗಿತ್ತು. ಮಾರ್ಚ್ 10ರಂದು ಬಂಗಾಳಿ ವಿದ್ಯಾರ್ಥಿಗಳು ವಿಶ್ವಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬಂಗಾಳಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ-ಹಿಂಸೆಯ ಕುರಿತು ಗಮನಸೆಳೆದಿದ್ದಲ್ಲದೇ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕೆಂದು ಕೋರಿದರು. ಮಾ.19ರಂದು ಪಾಕಿಸ್ತಾನ ಸೈನ್ಯ ಬಂಗಾಳಿ ಪ್ರತಿಭಟನಾಕಾರರ ಮೇಲೆ ಜಯದೇವ್ ಪುರದಲ್ಲಿ ಗುಂಡಿನ ದಾಳಿ ನಡೆಸಿ ಸುಮಾರು ಐವತ್ತು ಮಂದಿಯನ್ನು ಕೊಂದುಹಾಕಿತು. ಮಾರ್ಚ್ 24೪ರಂದು ಸೈಯದ್ ಪುರ, ರಂಗ್ ಪುರ ಮತ್ತು ಚಿತ್ತಗಾಂಗ್ ನಲ್ಲಿ ನಡೆದ ಪ್ರತಿಭಟನೆಗಳ ಮೇಲೆ ಪಾಕಿಸ್ತಾನಿ ಪೊಲೀಸರು ಭೀಕರ ದಾಳಿ ನಡೆಸಿದರು. ಈ ಭೀಕರ ನರಮೇಧದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಬಂಗಾಳಿಗಳು ಜೀವತೆತ್ತರು. ಪ್ರತಿಭಟಿಸಿದ ನಾಗರಿಕರನ್ನು ಹುಳುಗಳಂತೆ ಹೊಸಕಿಹಾಕಲಾಯಿತು.
ಮಾ.25ರಂದು ಪಾಕಿಸ್ತಾನ ಸೇನೆ ‘ಆಪರೇಷನ್ ಸರ್ಚ್ಲೈಟ್’ ಎಂಬ ಕಾರ್ಯಾಚರಣೆ ಆರಂಭಿಸಿ, ಹೀನಾತಿಹೀನ ದುಷ್ಕೃತ್ಯಗಳನ್ನು ಎಸಗಿತು. ಸಾಮಾನ್ಯ ನಾಗರಿಕರು, ರಾಜಕೀಯ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಬಂಡುಕೋರರನ್ನು ಹುಡುಹುಡುಕಿ ದಾರುಣವಾಗಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಮಾರ್ಚ್ 26ರಂದು ಪಾಕಿಸ್ತಾನ ಸೈನ್ಯ ಅವಾಮಿ ಲೀಗ್ ಮುಖ್ಯಸ್ಥ ಶೇಕ್ ಮುಜಿಬುರ್ ರೆಹಮಾನ್ ಅವರನ್ನು ಬಂಧಿಸಿತು. ಮುಜಿಬುರ್ ಅವರನ್ನು ಬಂಧಿಸಲು ಕೆಲವೇ ಹೊತ್ತು ಮುಂದೆ ಮುಜಿಬುರ್ ಸ್ವತಂತ್ರ ಬಾಂಗ್ಲಾದೇಶದ ಘೋಷಣೆಯನ್ನು ಮಾಡಿದ್ದರು. ಮುಜಿಬುರ್ ಅವರನ್ನು ‘ಬಂಗೊಬಂಧು’ (ರಾಷ್ಟ್ರಪಿತ) ಎಂದು ಘೋಷಿಸಲಾಗಿತ್ತು. ಇದೇ ಬಾಂಗ್ಲಾದೇಶೀಯರ ಅಧಿಕೃತ ಸ್ವಾತಂತ್ರ್ಯ ದಿನವೆಂದು ಗುರುತಿಸಲಾಗುತ್ತದೆ.
ಕುಶ್ತಿಯಾ ದಂಗೆ: ಪಾಕಿಸ್ತಾನದ 27ನೇ ಬಲೂಚ್ ರೆಜಿಮೆಂಟ್ನ ಸೈನಿಕರು ಮಾರ್ಚ್. ೨೫ರಂದು ಕುಶ್ತಿಯಾ ಜಿಲ್ಲೆಯಲ್ಲಿ ಮಿಲಿಟರಿ ನೆಲೆಯನ್ನು ನಿರ್ಮಿಸಲು ಯತ್ನಿಸಿದರು. ಸ್ಥಳೀಯ ಪೊಲೀಸ್ ಠಾಣೆಯನ್ನು ವಶಪಡಿಸಿಕೊಂಡು ಅಲ್ಲೊಂದು ಔಟ್ ಪೋಸ್ಟ್ ತೆರೆದರು. ಆದರೆ ಸ್ಥಳೀಯ ಜನರಿಂದ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಯಿತು. ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳು, ವಿದ್ಯಾರ್ಥಿಗಳು, ಸ್ಥಳೀಯ ನಾಗರಿಕರು ಪ್ರತಿದಾಳಿ ನಡೆಸಿ ಪಾಕಿಸ್ತಾನ ಪಡೆಯನ್ನು ಅಲ್ಲಿಂದ ಓಡಿಸಿದರು. ಬಾಂಗ್ಲಾ ವಿಮೋಚನೆಯ ಚರಿತ್ರೆಯಲ್ಲಿ ಕುಶ್ತಿಯಾ ದಂಗೆಗೆ ವಿಶೇಷ ಮಹತ್ವವಿದೆ. ಯಾಕೆಂದರೆ ಪಾಕಿಸ್ತಾನ ಪಡೆಗಳನ್ನು ಸಾಮಾನ್ಯ ನಾಗರಿಕರು ಮಣಿಸಿದ್ದರು. ಜನರ ಪ್ರತಿರೋಧ ‘ಮುಕ್ತಿವಾಹಿನಿ’ ಎಂಬ ಬಂಡುಕೋರ ಸೈನ್ಯದ ರೂಪ ತಾಳುತ್ತ ಹೋಯಿತು.
ತೊಡೆ ತಟ್ಟಿ ನಿಂತ ಮುಕ್ತಿವಾಹಿನಿ…
ಪಶ್ಚಿಮ ಪಾಕಿಸ್ತಾನಿ ಪಡೆಗಳ ದಾರುಣ ದಾಳಿಗಳಿಂದ ಪೂರ್ವ ಪಾಕಿಸ್ತಾನ ಕಂಗಾಲಾಗಿತ್ತು. ಆದರೆ ನಿಧಾನವಾಗಿ ಪ್ರತಿರೋಧ ತೋರಲು ಆರಂಭಿಸಿತು. ನಾಗರಿಕರು ಬರಿಗೈಯಲ್ಲಿ ಎಷ್ಟು ಕಾಲ ಹೋರಾಡಲು ಸಾಧ್ಯ? ಇದಕ್ಕಾಗಿಯೇ ‘ಮುಕ್ತಿವಾಹಿನಿ’ ಎಂಬ ಪ್ರತ್ಯೇಕ ಪೂರ್ವ ಪಾಕಿಸ್ತಾನಿ ಪಡೆ ರೂಪುಗೊಳ್ಳತೊಡಗಿತು. 1971ರ ಏಪ್ರಿಲ್ ೪ರಂದು ಮುಕ್ತಿವಾಹಿನಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಿತು. ಜನರಲ್ ಎಂ.ಎ.ಜಿ.ಒಸ್ಮಾನ್ ಅವರ ನೇತೃತ್ವದಲ್ಲಿ ಏಳು ಮಂದಿ ವಿಭಾಗೀಯ ಕಮ್ಯಾಂಡರ್ಗಳು ಮುಕ್ತಿವಾಹಿನಿಗೆ ನಾಯಕತ್ವ ನೀಡಿದರು. ಮುಕ್ತಿವಾಹಿನಿ ಎಷ್ಟು ವ್ಯವಸ್ಥಿತವಾಗಿ ರಚನೆಯಾಗಿತ್ತೆಂದರೆ, ಇದರಲ್ಲಿ ಸಾಮಾನ್ಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ, ಬುದ್ಧಿಜೀವಿಗಳಿಗೆ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿತ್ತು. ವಿಶೇಷವೆಂದರೆ ಮುಜಿಬುರ್ ಅವರ ಅವಾಮಿ ಲೀಗ್ನ ಮುಖಂಡರೂ ಸಹ ಈ ಮುಕ್ತಿವಾಹಿನಿಯಲ್ಲಿದ್ದರು.
ಮುಕ್ತಿವಾಹಿನಿ ಗೆರಿಲ್ಲಾ ರಣತಂತ್ರವನ್ನೇ ತನ್ನ ದಾಳವನ್ನಾಗಿ ಮಾಡಿಕೊಂಡಿತ್ತು. ಪಶ್ವಿಮ ಪಾಕಿಸ್ತಾನದ ಪಡೆಗಳನ್ನು ಗುರಿಯಾಗಿಸಿಕೊಂಡು ಮುಕ್ತಿವಾಹಿನಿ ತನ್ನದೇ ಆದ ಮಾರ್ಗದಲ್ಲಿ ದಾಳಿಗಳನ್ನು ಸಂಘಟಿಸುತ್ತಿತ್ತು. ಮುಕ್ತಿವಾಹಿನಿಗೆ ಭಾರತ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿತ್ತಲ್ಲದೆ, ಯೋಧರಿಗೆ ತರಬೇತಿಯನ್ನೂ ಸಹ ನೀಡುತ್ತಿತ್ತು. ಪೂರ್ವ ಪಾಕಿಸ್ತಾನೀಯರ ಭಾಷೆ-ಸಂಸ್ಕೃತಿ ಹೆಚ್ಚುಹೆಚ್ಚಾಗಿ ಭಾರತದ ಈಶಾನ್ಯ ಮತ್ತು ಪಶ್ಚಿಮದ ರಾಜ್ಯಗಳ ಭಾಷೆ-ಸಂಸ್ಕೃತಿಗಳನ್ನು ಹೋಲುತ್ತಿದ್ದರಿಂದ ಹೊಂದಾಣಿಕೆ ಸುಲಭಸಾಧ್ಯವಾಗಿತ್ತು.
ಪೂರ್ವ ಪಾಕಿಸ್ತಾನದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿ ಬಲುಬೇಗ ಬಂಡಾಯವನ್ನು ಹತ್ತಿಕ್ಕಬಹುದು ಎಂದು ಪಾಕಿಸ್ತಾನ ಭಾವಿಸಿತ್ತು. ಆದರೆ ಹಾಗಾಗಲಿಲ್ಲ. ಪೂರ್ವ ಪಾಕಿಸ್ತಾನೀಯರು ಕೆರಳುತ್ತಲೇಹೋದರು. ಮುಕ್ತಿವಾಹಿನಿಗೆ ಜನರ ಬೆಂಬಲ ಹೆಚ್ಚುತ್ತಲೇ ಹೋಯಿತು. ಮುಕ್ತಿವಾಹಿನಿಯ ಗೆರಿಲ್ಲಾ ರಣತಂತ್ರ ಪಾಕ್ ಪಡೆಗೆ ತಲೆನೋವಾಗಿ ಪರಿಣಮಿಸಿತು. ಪೂರ್ವ ಪಾಕಿಸ್ತಾನದ ಈಸ್ಟ್ ಬೆಂಗಾಲ್ ರೆಜಿಮೆಂಟ್ನ ಮುಕ್ತಿವಾಹಿನಿಯಲ್ಲಿ ಸೇರಿಕೊಂಡು ಪಶ್ಚಿಮ ಪಾಕಿಸ್ತಾನಿ ಪಡೆಯಮೇಲೆ ಮುಗಿಬಿದ್ದಿತು. ಪಾಕಿಸ್ತಾನ ಮತ್ತು ಮುಕ್ತಿವಾಹಿನಿ ಸೇನೆಗಳು ಎಲ್ಲೆಡೆ ಮುಖಾಮುಖಿಯಾದವು. ಕೆಲವೆಡೆ ಪಾಕಿಸ್ತಾನದ ಸೈನ್ಯ ಮೇಲುಗೈ ಸಾಧಿಸಿದರೆ, ಮತ್ತೆ ಕೆಲವೆಡೆ ಮುಕ್ತಿವಾಹಿನಿ ಮೇಲುಗೈ ಸಾಧಿಸಿತು.

ಅಂತರ್ಯುದ್ಧಗಳು ತಮ್ಮ ಸ್ವರೂಪದಲ್ಲೇ ಭೀಕರವಾಗಿರುತ್ತವೆ. ಯಾವುದೇ ಸೇನೆ ಸಶಸ್ತ್ರ ಪ್ರತಿರೋಧವನ್ನು ತೀವ್ರವಾಗಿಯೇ ದಮನ ಮಾಡಲು ಪ್ರಯತ್ನಿಸುತ್ತದೆ. ಅದಕ್ಕಾಗಿ ಎಂಥ ಹೀನಾಯವಾದ, ಅಮಾನವೀಯವಾದ ಕೃತ್ಯಕ್ಕೂ ಕೈಹಾಕುತ್ತದೆ. ಪೂರ್ವ ಪಾಕಿಸ್ತಾನದಲ್ಲಿ ನಡೆದಿದ್ದೂ ಅದೇ. ಮುಕ್ತಿವಾಹಿನಿಯ ಸದ್ದಡಗಿಸಲು ಪಶ್ಚಿಮ ಪಾಕಿಸ್ತಾನದ ಪಡೆ ಭೀಕರ ಕುಕೃತ್ಯಗಳಿಗೆ ಕೈಹಾಕಿತು. ನರಮೇಧಗಳ ಮೇಲೆ ನರಮೇಧಗಳು ನಡೆದವು. ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಸತ್ತು ಹೋದವರ ಸಂಖ್ಯೆ ಸುಮಾರು ಮೂವತ್ತು ಲಕ್ಷ ಎಂದರೆ ಇದರ ಭೀಕರತೆಯನ್ನು ಸ್ವಲ್ಪಮಟ್ಟಿಗೆ ಅಂದಾಜು ಮಾಡಬಹುದು. ಯಾವುದೇ ಯುದ್ಧದಲ್ಲಿ ಮೊದಲು ಗುರಿಯಾಗುವುದು ವಿರೋಧಿ ದೇಶದ ಹೆಣ್ಣುಮಕ್ಕಳೇ ಎಂಬುದು ಕ್ರೂರ ಸತ್ಯ. ಇಲ್ಲೂ ಹೀಗೇ ಆಯಿತು. ಬಂಗಾಳಿ ಭಾಷಿಕ ಹೆಣ್ಣುಮಕ್ಕಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಗಳನ್ನು ವಿವರಿಸಲಾಗದು. ಈ ಹೆಣ್ಣುಮಕ್ಕಳಲ್ಲಿ ಮುಸ್ಲಿಮರೂ ಇದ್ದರು, ಹಿಂದೂಗಳೂ ಇದ್ದರು, ಬೌದ್ಧ-ಜೈನರೂ ಇದ್ದರು. ಈ ಭೀಕರತೆಯನ್ನು ವಿವರಿಸುವುದು ಅಸಾಧ್ಯ.
(ಮುಂದುವರೆಯುತ್ತದೆ)
ದಿನೇಶ್ ಕುಮಾರ್ ದಿನೂ
ಬಾಂಗ್ಲಾದೇಶ ವಿಮೋಚನೆಯ ಭಾರತ–ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 1 ಓದಲು ಕ್ಲಿಕ್ ಮಾಡಿ
Disclaimer: The views expressed in the articles are those of the authors and do not necessarily represent or reflect the views of TruthIndia