ಬಂಡೀಪುರ ಅಭಯಾರಣ್ಯದ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಈಗಾಗಲೇ ಅಂದಾಜು ಹತ್ತು ಸಾವಿರ ಎಕರೆ ದಟ್ಟ ಅರಣ್ಯ ಸಂಪೂರ್ಣ ಸುಟ್ಟು ಬೂದಿಯಾಗಿರುವುದಾಗಿ ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳ ಪ್ರಕಾರ ಸುಮಾರು ಎಂಟು ಸಾವಿರ ಎಕರೆ ಕಾಡು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದ್ದರೂ, ವಾಸ್ತವವಾಗಿ ಆ ಪ್ರಮಾಣ ದುಪ್ಪಟ್ಟು ಎಂಬುದು ಅರಣ್ಯದಂಚಿನ ಜನರ ಅಭಿಪ್ರಾಯ.
ಬೆಂಕಿಯ ಕೆನ್ನಾಲಗೆಗೆ ಅಪಾರ ಗಿಡಮರಗಳಷ್ಟೇ ಅಲ್ಲದೆ, ಹುಲಿ, ಚಿರತೆ ಸೇರಿದಂತೆ ಅಪರೂಪದ ಅಮೂಲ್ಯ ಪ್ರಾಣಿಗಳೂ ಬಲಿಯಾಗಿವೆ ಎಂದು ತಳಮಟ್ಟದ ಅರಣ್ಯ ಸಿಬ್ಬಂದಿ ಹೇಳುತ್ತಿದ್ದರೆ, ಬೆಂಗಳೂರಿನ ಅರಣ್ಯಭವನದ ಉನ್ನತ ಅಧಿಕಾರಿಗಳು ನೀಡುತ್ತಿರುವ ಚಿತ್ರಣ ಬೇರೆಯದೇ. ಅರಣ್ಯ ಭವನದ ಅಧಿಕಾರಿಗಳ ಪ್ರಕಾರ, ಹಲ್ಲಿ, ಓತಿಯಂತಹ ಚಿಕ್ಕಪುಟ್ಟ ಜೀವಿಗಳನ್ನು ಬಿಟ್ಟರೆ, ಹಾವುಗಳೂ ಸಹ ಈ ಬೆಂಕಿಗೆ ಬಲಿಯಾಗಿಲ್ಲ! ಕಿ.ಮೀಗಟ್ಟಲೆ ಕಾಡು ಏಕಾಏಕಿ ಉರಿದುಹೋದರೆ, ಒಂದೇ ಬಾರಿಗೆ ಬೃಹತ್ ಮರಗಳೂ ಹೊತ್ತಿ ಉರಿಯವ ಅಗಾಧ ಪ್ರಮಾಣದ ಬೆಂಕಿ ನಾಲ್ಕೂ ದಿಕ್ಕಿನಿಂದ ಸುತ್ತುವರಿದರೆ, ಬೆಂಕಿಗೆ ಸಿಲುಕಿದ ಹಾವು, ಜಿಂಕೆ, ಮೊಲ, ಕರಡಿ, ಚಿರತೆಯಂತಹ ಸಹಜ ಪ್ರಾಣಿಗಳನ್ನು ಅರಣ್ಯಭವನ ಹೇಗೆ ರಕ್ಷಿಸಿದೆ ಎಂಬುದು ನಿಜಕ್ಕೂ ಪವಾಡವೇ ಸರಿ.
ಇನ್ನು ಅಷ್ಟು ವ್ಯಾಪಕವಾಗಿ ಬೆಂಕಿ ಹರಡಲು ಕಾರಣವೇನು? ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ ಮತ್ತು ಪ್ರಾಜೆಕ್ಟ್ ಟೈಗರ್ ಪ್ರದೇಶಗಳನ್ನೂ ಹೊಂದಿರುವ ಬಂಡೀಪುರ ವ್ಯಾಪ್ತಿಯ ಅರಣ್ಯಗಳನ್ನು ಬೆಂಕಿಯಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಮತ್ತು ಒಂದು ವೇಳೆ ಬೆಂಕಿ ಕಾಣಿಸಿಕೊಂಡಲ್ಲಿ ಕೂಡಲೇ ಅದನ್ನು ಆರಿಸುವ ನಿಟ್ಟಿನಲ್ಲಿ ಅರಣ್ಯ ಭವನದ ಅಧಿಕಾರಿಗಳು ಯಾವೆಲ್ಲಾ ಕ್ರಮಕೈಗೊಂಡಿದ್ದರು ಎಂಬುದನ್ನು ಅವರು ಮೊದಲು ಬಹಿರಂಗಪಡಿಸಬೇಕಿದೆ.
ಹಾಗೆಯೇ, ಬೆಂಕಿ ಬಿದ್ದ ನಾಲ್ಕು ದಿನಗಳ ಬಳಿಕವೂ ಬೆಂಕಿಯನ್ನು ಸಂಪೂರ್ಣ ಆರಿಸಲು ಆಗಿಲ್ಲವೆಂದರೆ, ಅದಕ್ಕೆ ಕಾರಣವೇನು? ವಾರ್ಷಿಕವಾಗಿ ಬೆಂಕಿ ತಡೆ ಫೈರ್ ಲೈನ್ ಮಾಡುವುದು ನಿಯಮಾನುಸಾರ ಅಗತ್ಯ. ಹಾಗೇ ಮಾಡಿದ್ದಾರೆಯೇ? ಮಾಡಿದ್ದರೆ, ಸುಮಾರು ಹತ್ತು ಕಿ.ಮೀ ದೂರದವರೆಗೆ ಬೆಂಕಿ ಹರಡಲು ಹೇಗೆ ಸಾಧ್ಯವಾಯಿತು? ಬೆಂಕಿ ತಡೆ ಫೈರ್ ಲೈನ್ ಮಾಡದೇ ಇದ್ದರೆ, ಆ ಉದಾಸೀನಕ್ಕೆ ಹೊಣೆಯಾರು?
ಕಳೆದ ವರ್ಷ ಸುಮಾರು 600 ಕೋಟಿ ರೂ. ನಷ್ಟು ದೊಡ್ಡ ಮೊತ್ತದ ಹಣ ರಾಜ್ಯ ಅರಣ್ಯ ಇಲಾಖೆಯಿಂದ ಕರ್ಚು ಮಾಡದೇ ವಾಪಸು ಹೋಗಿದೆ ಎಂಬ ಮಾಹಿತಿ ಇದೆ. ಹಾಗಾದರೆ, ಕನಿಷ್ಠ ಅಭಯಾರಣ್ಯಗಳನ್ನಾದರೂ ಬೆಂಕಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಬೇಕಾದ ಕಾರ್ಬಲ್ ಟೆಟ್ರಾ ಕ್ಲೋರೈಡ್ ನಂತಹ ಅಗತ್ಯ ರಾಸಾಯನಿಕ, ಹೆಲಿಜಾಗ್ವಾರ್ ನಂತಹ ಬೆಂಕಿ ನಂದಿಸುವ ಹೆಲಿಕಾಪ್ಟರ್, ಏರ್ ಜೆಟ್ ಗಳನ್ನು ವ್ಯವಸ್ಥೆ ಮಾಡಬಹುದಿತ್ತಲ್ಲವೇ? ಅಲ್ಲದೆ, ಪ್ರತಿ ವರ್ಷ ವಿವಿಧ ಯೋಜನೆಗಳಡಿ ಅರಣ್ಯ ಇಲಾಖೆಗೆ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಕೆರೆ, ಹೊಂಡ ನಿರ್ಮಾಣಕ್ಕೆ ನೂರಾರು ಕೋಟಿ ಅನುದಾನ ನೀಡಲಾಗುತ್ತದೆ. ಆ ಅನುದಾನದಲ್ಲ ನಿರ್ಮಾಣವಾದ ಕೆರೆ-ಕಟ್ಟೆಗಳು ಎಲ್ಲಿ ಹೋದವು? ನಿಜವಾಗಿಯೂ ಕೆರೆಕಟ್ಟೆಗಳನ್ನು ನಿರ್ಮಿಸಿದ್ದರೆ, ಬೆಂಕಿ ಆರಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿತ್ತು ಮತ್ತು ಪ್ರಾಣಿಗಳ ಜೀವಹಾನಿಯನ್ನೂ ಕಡಿಮೆ ಮಾಡಬಹುದಿತ್ತು.
ಸಚಿವರು, ಸಿಎಂಗಳ ಪ್ರವಾಸಕ್ಕೆ ಜನರ ತೆರಿಗೆ ಹಣದಲ್ಲಿ ಮನಸೋಯಿಚ್ಛೆ ಹೆಲಿಕಾಪ್ಟರ್, ವಿಮಾನ ಬಳಸುವ ಸರ್ಕಾರಗಳು ಮತ್ತು ಅರಣ್ಯ ಭವನದ ಅಧಿಕಾರಿಗಳು, ಇಂತಹ ಭೀಕರ ಅಗ್ನಿ ದುರಂತದ ಸಮಯದಲ್ಲಿ ನಾಲ್ಕು ದಿನ ಗತಿಸಿದರೂ, ಅಂತಹ ತಂತ್ರಜ್ಞಾನಗಳನ್ನು ಬಳಸಲು ಯೋಚಿಸಿಲ್ಲ ಏಕೆ? ವಾರ್ಷಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರಾಜೆಕ್ಟ್ ಟೈಗರ್, ಅಭಯಾರಣ್ಯ ನಿರ್ವಹಣೆ, ಮೃಗಾಯಲ ಪ್ರಾಧಿಕಾರ, ಸಾಮಾಜಿಕ ಅರಣ್ಯ, ವನ್ಯಜೀವಿ ವಿಭಾಗ ಹಾಗೂ ಗ್ರಾಮೀಣ ಉದ್ಯೋಗ ಖಾತರಿ, ಜಲಾನಯನ ಅಭಿವೃದ್ಧಿ, ಸಣ್ಣ ನೀರಾವರಿ, ಜಿಲ್ಲಾ ಪಂಚಾಯ್ತಿ ಮುಂತಾದ ವಿವಿಧ ಮೂಲಗಳಿಂದ ಸಾವಿರಾರು ಕೋಟಿ ರೂ. ಅಭಿವೃದ್ಧಿ ಅನುದಾನ ಪಡೆಯುವ ಅರಣ್ಯ ಇಲಾಖೆ, ಕನಿಷ್ಠ ಅಭಯಾರಣ್ಯಗಳನ್ನು ಅತ್ಯಂತ ನಿರೀಕ್ಷಿತವಾದ ಕಾಡಿನ ಬೆಂಕಿಯಿಂದ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಬಗೆಯ ದೂರಗಾಮಿಯಾದ ಮತ್ತು ಪ್ರಾಯೋಗಿಕವಾದ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ ಏಕೆ ಎಂಬುದಕ್ಕೆ ಅರಣ್ಯಭವನದ ಅಧಿಕಾರಿಗಳು ಉತ್ತರ ಕೊಡಬೇಕಿದೆ.
ಹಾಗೇ, ಅರಣ್ಯ ಬೆಂಕಿ ಪತ್ತೆಗೆ ಉಪಗ್ರಹ ಬಳಕೆ ಮಾಡುವುದಾಗಿ ಅರಣ್ಯ ಇಲಾಖೆಯೇ ಹೇಳಿಕೊಂಡು 15 ವರ್ಷಗಳೇ ಕಳೆದಿವೆ. ಆದರೆ, ಈವರೆಗೆ ಹಾಗೇ ಉಪಗ್ರಹ ಮೂಲಕ ಅರಣ್ಯ ಬೆಂಕಿ ಪತ್ತೆ ಮಾಡಿ, ಅದನ್ನು ನಿಯಂತ್ರಿಸಲು ಕ್ರಮಕೈಗೊಂಡ ಒಂದೇ ಒಂದು ಪ್ರಕರಣವನ್ನೂ ಈವರೆಗೆ ಇಲಾಖೆ ಗುರುತಿಸಿದ್ದಿಲ್ಲ. ಬಂಡೀಪುರ ಪ್ರಕರಣದಲ್ಲಿಯೂ ಸ್ಥಳೀಯ ಸಿಬ್ಬಂದಿ ಮತ್ತು ಸುತ್ತಮುತ್ತಲ ಗ್ರಾಮಸ್ಥರ ನೆರವಿನಿಂದಷ್ಟೇ ಬೆಂಕಿ ಕಾಣಿಸಿಕೊಂಡಿರುವ ಸಂಗತಿ ಇಲಾಖೆಗೆ ತಿಳಿದದ್ದು. ಹಾಗಾದರೆ, ಉಪಗ್ರಹ ಮೂಲಕ ಅರಣ್ಯ ಬೆಂಕಿ ಪತ್ತೆ ಮಾಡುವ, ಅರಣ್ಯ ಅತಿಕ್ರಮ ಪತ್ತೆ ಮಾಡುವ ಉದ್ದೇಶದಿಂದ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ, ಆ್ಯಪ್ ಹಾಗೂ ಅಗತ್ಯ ತಾಂತ್ರಿಕ ಸಲಕರಣೆಗಳಿಗೆ ವ್ಯಯ ಮಾಡಿದ ಅನುದಾನ ಬೆಂಕಿಯಲ್ಲಿ ಹೋಮವಾದಂತೆಯೇ? ಈ ಪ್ರಶ್ನೆಗೂ ಅರಣ್ಯಭವನವೇ ಉತ್ತರಿಸಬೇಕಿದೆ.
ಹಾಗೇ, ಸಾವಿರಾರು ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಬೆಂಕಿಯನ್ನು ತಳಮಟ್ಟದ ಸಿಬ್ಬಂದಿ ಮತ್ತು ಅರಣ್ಯದಂಚಿನ ಜನ ಬಹುತೇಕ ಹಸಿಸೊಪ್ಪು, ವಿರಳ ನೀರು ಬಳಸಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಕನಿಷ್ಠ ಬೆಂಕಿಯ ಅಪಾಯದ ಎದುರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆ ಸಿಬ್ಬಂದಿಗಳಿಗೆ ಅಗತ್ಯ ಪರಿಕರ, ಸುರಕ್ಷಣಾ ಸೌಲಭ್ಯಗಳನ್ನು ನೀಡಲಾಗಿದೆಯೇ ಎಂದರೆ, ಅದೂ ಕೂಡ ಇಲ್ಲ! ಹಾಗಾದರೆ, ಅರಣ್ಯ ಇಲಾಖೆಯ ಅನುದಾನ ಯಾರ ಹಿತಕ್ಕೆ ಬಳಕೆಯಾಗುತ್ತಿದೆ? ಅಥವಾ ಬಳಕೆಯಾಗದೆ ವಾಪಸು ಕಳಿಸುವುದಕ್ಕಾಗಿಯೇ ಅನುದಾನ ನೀಡಲಾಗುತ್ತಿದೆಯೇ? ಎಂಬುದನ್ನೂ ಅರಣ್ಯಭವನದ ಉನ್ನತಾಧಿಕಾರಿಗಳು ವಿವರಿಸಬೇಕಿದೆ.
ಕನಿಷ್ಠ, ಆಗಿರುವ ಅನಾಹುತವನ್ನು ಸರಿಪಡಿಸಲಾಗದಿದ್ದರೂ, ಮುಂದೆ ಮತ್ತೊಂದು ಕಡೆ ಇಂತಹದ್ದೇ ಅನಾಹುತವಾಗದಂತೆ ತಡೆಯಲಿಕ್ಕಾದರೂ, ಅರಣ್ಯ ಭವನ ಸಾಲುಸಾಲು ಪ್ರಶ್ನೆಗಳಿಗೆ ಉತ್ತರ ಕೊಡಬೇಕಿದೆ.
What is the point? Precautions or take a blame? Funny that an outdated, unprofessional piece appears as news report.
By the by check the photos circulating around in the name of Bandipura Fire incident if you really want to chase Fake News around here.