ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆ ಬಯಸಿರುವ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಚುನಾವಣೆಗೆ ಮುನ್ನವೇ ಕ್ಷೇತ್ರದಲ್ಲಿ ಅವರದೇ ಪಕ್ಷದ ಕಾರ್ಯಕರ್ತರೇ ‘ಗೋ ಬ್ಯಾಕ್ ಶೋಭಕ್ಕ’ ಎನ್ನತೊಡಗಿದ್ದಾರೆ.
ಆ ಮೂಲಕ, ಐದು ವರ್ಷಗಳ ಕಾಲ ತಮ್ಮ ಸೇವೆ ಮಾಡಿದ್ದು ಸಾಕು, ನೀವಿನ್ನು ಕ್ಷೇತ್ರದಿಂದ ಹೊರನಡೆಯಬಹುದು ಎಂದು ಕಳೆದ ಚುನಾವಣೆಯಲ್ಲಿ ಬಹುಮತದ ಜಯ ತಂದುಕೊಡಲು ಶ್ರಮಿಸಿದ್ದ ಪಕ್ಷದ ತಳಮಟ್ಟದ ಕಾರ್ಯಕರ್ತರೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಭಿಯಾನ ಆರಂಭಿಸಿದ್ದು, ಹಾಲಿ ಸಂಸದರಿಗೆ ಟಿಕೆಟ್ ನೀಡಬಾರದು ಎಂಬ ವಿರೋಧದ ಕೂಗು ಮೊಳಗಿಸಿದ್ದಾರೆ.
ಕಳೆದ ಒಂದು ವಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧದ ಈ ಆನ್ ಲೈನ್ ಅಭಿಯಾನ, ರಾಜ್ಯ ಬಿಜೆಪಿಯ ‘ಫೈರ್’ ಬ್ರಾಂಡ್ ನಾಯಕಿ ಸಂಸದೆಯಾಗಿ ಕ್ಷೇತ್ರದಲ್ಲಿ ಹೇಗೆ ಕಾರ್ಯನಿರ್ವಹಿಸಿದ್ದಾರೆ? ಎಷ್ಟರಮಟ್ಟಿಗೆ ಜನರ ವಿಶ್ವಾಸ ಗಳಿಸಿದ್ದಾರೆ? ಅವರ ‘ಬೆಂಕಿ ಹಚ್ಚುವ’ ರಾಜಕಾರಣ, ಶವ ರಾಜಕಾರಣ, ಮತಾಂಧತೆಯ ರಾಜಕಾರಣಗಳು ಕ್ಷೇತ್ರದ ಜನರನ್ನು ಎಷ್ಟರಮಟ್ಟಿಗೆ ನೆಮ್ಮದಿಯಲ್ಲಿಟ್ಟಿವೆ ಎಂಬುದನ್ನು ಬಯಲುಮಾಡಿದೆ. ಅದರಲ್ಲೂ ಸ್ವತಃ ಬಿಜೆಪಿಯ ಕಾರ್ಯಕರ್ತರೇ ಈ ಅಭಿಯಾನವನ್ನು ಆರಂಭಿಸಿದ್ದು, “ಐದು ವರ್ಷಕ್ಕೊಮ್ಮೆ ಫ್ಲೈಯಿಂಗ್ ವಿಸಿಟ್ ಕೊಡುವ ಸಂಸದರು ನಮಗೆ ಬೇಕಿಲ್ಲ. ನಮ್ಮ ಕಷ್ಟಸುಖ ಕೇಳುವವರು ಬೇಕು. ನಮಗೆ ಮೋದಿ ಪ್ರಧಾನಿಯಾಗಬೇಕು. ಆದರೆ, ಮೋದಿ ಹೆಸರಲ್ಲಿ ಹಾಲಿ ಸಂಸದರು ಆಯ್ಕೆಯಾಗುವುದು ಬೇಡ” ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
“2014ರಲ್ಲಿ ಮೋದಿ ಅಲೆಯ ಮೇಲೆ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿ ಹೋದ ಬಳಿಕ ಶೋಭಾ ಅವರು ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದೇ ವಿರಳ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೂ ಇಲ್ಲ. ಬೆಂಗಳೂರು- ದೆಹಲಿಯಲ್ಲಿ ಕೂತು ರಾಜಕಾರಣ ಮಾಡುವ ಸಂಸದರಿಂದ ನಮಗೆ ಯಾವ ಪ್ರಯೋಜನವೂ ಆಗಿಲ್ಲ. ಹಾಗಾಗಿ ನಾವು ಈ ಬಾರಿ ಅವರಿಗೆ ಟಿಕೆಟ್ ನೀಡಬಾರದು ಎಂದು ಪಕ್ಷದ ಹೈಕಮಾಂಡ್ ಗಮನ ಸೆಳೆದಿದ್ದೇವೆ” ಎಂಬುದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಬ್ಬರ ವಾದ.
ಇದೇ ಅಂಶಗಳನ್ನು ಮುಂದಿಟ್ಟು ‘ಗೋ ಬ್ಯಾಕ್ ಶೋಭಕ್ಕ’ ಅಭಿಯಾನದ ಪ್ರಚಾರ ಫಲಕಗಳನ್ನು ಟ್ಯಾಗ್ ಮಾಡಿ ಟ್ವಿಟರ್ ಮೂಲಕ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ವಿಷಯ ತಲುಪಿಸಲಾಗಿದೆ. ‘ಮೋದಿ ಮತ್ತೊಮ್ಮೆ’, ‘ಶೋಭಾ ಬೇಡ ಇನ್ನೊಮ್ಮೆ’, ‘ಶೋಭಾ ಹಠಾವೋ, ಉಡುಪಿ ಬಚಾವೋ’ ಘೋಷಣೆಗಳನ್ನೂ ಪಕ್ಷದ ಹೈಕಮಾಂಡಿಗೆ ಟ್ಯಾಗ್ ಮಾಡಲಾಗಿದೆ.
ಅದೇ ಹೊತ್ತಿಗೆ ಮಾಜಿ ಸಂಸದ ಹಾಗೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶೋಭಾ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದ ಮತ್ತು ಆ ಬಳಿಕ ಬಿಜೆಪಿ ಸೇರಿದ್ದ ಜಯಪ್ರಕಾಶ್ ಹೆಗ್ಡೆ ಪರವಾಗಿಯೂ ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರದ ಅಭಿಯಾನ ಆರಂಭವಾಗಿದ್ದು, ‘ಈ ಬಾರಿ ಹೆಗ್ಡೆ ಅವರಿಗೆ ಟಿಕೆಟ್ ನೀಡಬೇಕು, ಸ್ಥಳೀಯರಿಗೆ ಟಿಕೆಟ್ ನೀಡಿದರೆ ಮಾತ್ರ ಬಿಜೆಪಿ ಗೆಲ್ಲಲಿದೆ. ಇಲ್ಲವಾದಲ್ಲಿ ಸೋಲು ಕಟ್ಟಿಟ್ಟಬುತ್ತಿ’ ಎಂಬ ಹೇಳಿಕೆಗಳೂ ಹರಿದಾಡುತ್ತಿವೆ.
ಈ ನಡುವೆ, ಗೋ ಬ್ಯಾಕ್ ಶೋಭಕ್ಕ ಅಭಿಯಾನದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಸದೆ ಶೋಭಾ ಕರಂದ್ಲಾಜೆ, “ಇದು ಟಿಕೆಟ್ ಆಸೆಗಾಗಿ ನನ್ನ ವಿರುದ್ಧ ವ್ಯಕ್ತಿಯೊಬ್ಬರು ಕೆಲವು ಹುಡುಗರನ್ನು ಎತ್ತಿಕಟ್ಟಿ ನಡೆಸುತ್ತಿರುವ ಹುನ್ನಾರ. ನನಗೆ ಹಣಬಲ, ಜಾತಿಬಲ ಇಲ್ಲ ಎಂದು ನನ್ನ ವಿರುದ್ಧ ಈ ರೀತಿ ಪಿತೂರಿ ಮಾಡುತ್ತಿದ್ದಾರೆ” ಎಂದಿರುವುದಾಗಿ ವರದಿಯಾಗಿದೆ. ಆ ಮೂಲಕ ಅವರು ಪರೋಕ್ಷವಾಗಿ ಜಯಪ್ರಕಾಶ್ ಹೆಗ್ಡೆ ಅವರತ್ತ ಬೊಟ್ಟುಮಾಡಿದ್ದಾರೆ. ಅದೇ ಹೊತ್ತಿಗೆ, ಕಳೆದ ವಾರವಷ್ಟೇ, ಜಯಪ್ರಕಾಶ್ ಹೆಗ್ಡೆ ಅವರು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ತಾವೂ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ, ಟಿಕೆಟಿಗಾಗಿ ಬಿಜೆಪಿ ತೊರೆಯುವ ಪ್ರಶ್ನೆ ಇಲ್ಲ” ಎಂದಿದ್ದರು. ಇದೀಗ ಶೋಭಾ ಮತ್ತು ಹೆಗ್ಡೆ ನಡುವಿನ ಟಿಕೆಟ್ ಸಮರದ ರಣರಂಗವಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬದಲಾಗಿದ್ದು, ಡಿಜಿಟಲ್ ವಾರ್ ಕಾವೇರಿದೆ.
ಹಾಗೆ ನೋಡಿದರೆ, ಶೋಭಾ ವಿಷಯದಲ್ಲಿ ಮಾತ್ರವಲ್ಲದೆ, ಕಳೆದ ಐದು ವರ್ಷಗಳಿಂದ ರಾಜ್ಯ ಬಿಜೆಪಿಯಲ್ಲಿ ತಮ್ಮ ಕೋಮುವಾದಿ ಹೇಳಿಕೆಗಳು, ಬೆಂಕಿ ಹಚ್ಚುವ ಎಚ್ಚರಿಕೆ, ಶವ ರಾಜಕಾರಣಗಳ ಮೂಲಕವೇ ಸುದ್ದಿಯಲ್ಲಿದ್ದ ಹಲವರು ಸಂಸದರ ವಿರುದ್ಧವೂ ಅವರವರ ಕ್ಷೇತ್ರಗಳಲ್ಲಿ ಸ್ವತಃ ಬಿಜೆಪಿ ಕಾರ್ಯಕರ್ತರಿಂದಲೇ ಇಂತಹ ಆಕ್ರೋಶದ ಮಾತುಗಳು ಕೇಳಿಬರತೊಡಗಿವೆ. ಮೈಸೂರು ಸಂಸದ ಪ್ರತಾಪ ಸಿಂಹ, ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲು, ಉತ್ತರಕನ್ನಡ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸೇರಿದಂತೆ ‘ಫೈರ್’ಬ್ರಾಂಡ್ ಮೂಲಕವೇ ರಾಜಕಾರಣದಲ್ಲಿ ಉಳಿಯಬಯಸಿದ್ದ ಹಲವರಿಗೆ ಇದೀಗ, ಚುನಾವಣೆ ಹೊಸ್ತಿಲಲ್ಲಿ ಸ್ವಪಕ್ಷೀಯರೇ ತಿರುಗಿಬಿದ್ದಿದ್ದಾರೆ.
ಕಳೆದ ವಾರ ಆಗಮಿಸಿದ್ದ ಅಮಿತ್ ಶಾ ಅವರೆದುರು ಕೂಡ ಈ ಸಂಸದರ ವಿರುದ್ಧ ದೂರುಗಳು ಹೋಗಿವೆ. ಐದು ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯನ್ನು ನಿರ್ಲಕ್ಷಿಸಿ, ಜನರ ವಿಶ್ವಾಸ ಕಳೆದುಕೊಂಡಿರುವ ಹಾಲಿ ಸಂಸದರಿಗೆ ಟಿಕೆಟ್ ನೀಡಬಾರದು. ಹೊಸಬರಿಗೆ ಟಿಕೆಟ್ ನೀಡಿದ್ದಲ್ಲಿ ಮಾತ್ರ ಚುನಾವಣೆ ಮಾಡುವುದಾಗಿ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ದೂರು ನೀಡಿದ್ದಾರೆ.
ಕೋಮುವಾದಿ ರಾಜಕಾರಣ ಮಾಡುತ್ತಾ ಬೆಂಕಿ ಹಚ್ಚುವ ವೀರಾವೇಶದ ಹೇಳಿಕೆ ನೀಡುತ್ತಾ ಐದು ವರ್ಷ ಕಳೆದ ಸಂಸದರು, ಇದೀಗ ಹಾಗೇ ಮಾಡುತ್ತಾ ತುಂಬಾ ದಿನ ಜನರ ಕಣ್ಣಿಗೆ ಮಣ್ಣೆರಚಲಾಗದು, ಅದರಲ್ಲೂ ಪಕ್ಷದ ಕಾರ್ಯಕರ್ತರನ್ನೇ ಯಾಮಾರಿಸಲಾಗದು ಎಂಬ ವಾಸ್ತವಕ್ಕೆ ಎದುರಾಗಿದ್ದಾರೆ. ಇದೀಗ ಬಿಜೆಪಿ ಹೈಕಮಾಂಡ್ ಕಾರ್ಯಕರ್ತರ ಭಾವನೆಗೆ ಬೆಲೆ ನೀಡುವುದೇ? ಅಥವಾ ‘ಫೈರ್’ಬ್ರಾಂಡಿಗೆ ಮನ್ನಣೆ ನೀಡುವುದನ್ನು ಕಾದುನೋಡಬೇಕಿದೆ.