ಆಗ್ರಾ: ಮಹಾತ್ಮ ಗಾಂಧೀಜಿಯವರು ಮೃತಪಟ್ಟ ದಿನವಾದ ಜನವರಿ 30ರಂದು ರಾಷ್ಷ್ರಪಿತ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಗುಂಡು ಹಾರಿಸಿದ ದುಷ್ಕರ್ಮಿಗಳನ್ನು ಸನ್ಮಾನ ಮಾಡುವ ಮೂಲಕ ಹಿಂದೂ ಮಹಾಸಭಾ ಸಂಘಟನೆಯು ದೇಶವೇ ತಲೆತಗ್ಗಿಸುವ ದುಷ್ಕೃತ್ಯವನ್ನು ಸಮರ್ಥಿಸಿಕೊಂಡಿದೆ.
ಮಹಾತ್ಮ ಗಾಂಧಿ ಮೃತಪಟ್ಟ ದಿನ ಅವರ ಭಾವಚಿತ್ರಕ್ಕೆ ಗುಂಡು ಹಾರಿಸುವವರಿಗೆ ಸನ್ಮಾನ ಮಾಡಲಾಗುವುದೆಂದು ಘೋಷಿಸಿದ್ದ ಹಿಂದೂ ಮಹಾಸಭಾ, ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹಾಗೂ ಅವರ ಪತಿ ಮತ್ತು ಮಹಾಸಭಾದ ವಕ್ತಾರ ಅಶೋಕ್ ಪಾಂಡೆ ಸೇರಿದಂತೆ ಒಟ್ಟು 30 ಮಂದಿಗೆ ಸನ್ಮಾನ ಮಾಡುವ ಮೂಲಕ ಹೊಸ ವಿಕೃತಿಗೆ ನಾಂದಿ ಹಾಡಿದೆ.
ಮಹಾತ್ಮಾ ಗಾಂಧಿಯವರ ಭಾವಚಿತ್ರ ನಿಲ್ಲಿಸಿ ಅದಕ್ಕೆ ರಿವಾಲ್ವರ್ ಪೆಲೆಟ್ಗಳನ್ನು ಹೊಡೆದಿದ್ದ ಪೂಜಾ ಶಕುನ್ ಪಾಂಡೆ ಕೃತ್ಯವು ದೇಶದಾದ್ಯಂತ ಖಂಡನೆಗೆ ಒಳಗಾಗಿತ್ತಲ್ಲದೇ, ಈ ಸಂಬಂಧ 30 ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಎಲ್ಲಾ ಆರೋಪಿಗಳು ಜಾಮೀನು ಪಡೆದು ಬಂಧನ ಮುಕ್ತರಾಗಿದ್ದಾರೆ.
“ಅಲೀಗಢ ಪೊಲೀಸರು ಬಂಧಿಸಿದ್ದ ಎಲ್ಲಾ ಕಾರ್ಯಕರ್ತರು ಮತ್ತು ಹೋರಾಟಗಾರರಿಗೆ ನಾವು ಗೌರವಿಸಿದ್ದೇವೆ. ಜತೆಗೆ ಎಲ್ಲಾ ಬಂಧಿತರಿಗೆ ಫೆಬ್ರವರಿ 14ರಂದು ಜಾಮೀನು ನೀಡಿ ನಮಗೆ ಬೆಂಬಲಿಸಿದ ವಕೀಲರು, ಬೆಂಬಲಿಗರು ಹಾಗೂ ಕಾರ್ಯಕ್ರಮಕ್ಕೆ ಹಾಜರಾದ ಮಠಾಧೀಶರಿಗೆ ಗೌರವ ಸಮರ್ಪಿಸಿದ್ದೇವೆ,” ಎಂದು ಅಶೋಕ್ ಪಾಂಡೆ ತಿಳಿಸಿದ್ದಾರೆ.
ನಮ್ಮ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ಪೊಲೀಸರು ವಿಡಿಯೋ ಮಾಡಿ ದಾಖಲಿಸಿಕೊಂಡಿದ್ದಾರೆ. ನಾವೇನು ಪೊಲೀಸರಿಗೆ ಬೆದರುವುದಿಲ್ಲ ಎಂದು ಅಶೋಕ್ ಇದೇ ವೇಳೆ ತಿಳಿಸಿದ್ದಾರೆ.
ಹಿಂದೂ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ಮಹಾತ್ಮ ಗಾಂಧಿ ಹೇಗೆ ಮೃತಪಟ್ಟರು ಎಂಬುದನ್ನು ಮರುಪ್ರದರ್ಶಿಸಿದ್ದಾರಷ್ಟೇ. ಆದರೆ ಇದನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಕೌಶಿಕ್ ಸ್ಪಷ್ಟನೆ ನೀಡಿದ್ದಾರೆ.
ಈ ಸನ್ಮಾನ ಕಾರ್ಯಕ್ರಮದಲ್ಲಿ ಪೂಜಾ ಶಕುಮ್ ಪಾಂಡೆ ತಾವು ಜನವರಿ 30ರಂದು ಮಹಾತ್ಮಾ ಗಾಂಧಿಯವರನ್ನು ಅಪಮಾನಿಸಿದ್ದ ದುಷ್ಕೃತ್ಯವನ್ನು ಮತ್ತೆ ಸಮರ್ಥಿಸಿಕೊಂಡಿರುವುದೇ ಅಲ್ಲದೇ “ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೂಡ್ಸೆ ಬಗ್ಗೆ ಶಾಲಾ ಹಂತದಲ್ಲೇ ಪಠ್ಯದಲ್ಲಿ ಅಳವಡಿಸಬೇಕು” ಎಂದೂ ಪ್ರತಿಪಾದಿಸಿದ್ದಾರೆ.
ಅಲೀಗಢ ಪೊಲೀಸರು ಕಾರ್ಯಕ್ರಮದಲ್ಲಿ ಹಾಜರಿದ್ದು ಪೂರ್ಣ ಕಾರ್ಯಕ್ರಮವನ್ನು ದಾಖಲಿಸಿದ್ದಾರೆ.
“ಜೈಲಿನಿಂದ ಬಿಡುಗಡೆಯಾದ ಎಲ್ಲರೂ ಸೇರಿದ್ದು, ಭೋಜನ ಕೂಟ ಏರ್ಪಡಿಸಿದ್ದಾರೆ. ಇದರಲ್ಲಿ ಆಕ್ಷೇಪಾರ್ಹ ಸಂಗತಿ ಏನೂ ಇಲ್ಲವಾದ್ದರಿಂದ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ,” ಎಂದು ಗಾಂಧಿ ಪಾರ್ಕ್ ಪೊಲೀಸ್ ಠಾಣೆಯ ಮೇಲ್ವಿಚಾರಕ ಧೀರೇಂದ್ರ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.