ಪ್ರಧಾನಿ ನರೇಂದ್ರ ಮೋದಿಯವರು ಕುಂಭಮೇಳದಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರ ಪಾದಗಳನ್ನು ತೊಳೆದರು. ಶಾಲು ಹೊದೆಸಿದರು. ಅದರ ವಿಡಿಯೋವನ್ನು ಮೋದಿಯವರ ಅಭಿಮಾನಿಗಳು, ಭಕ್ತರು ಹುಚ್ಚೆದ್ದು ಹಂಚಿಕೊಂಡರು. ದೇಶದ ಪ್ರಧಾನಿಯೊಬ್ಬ ಐವರು ಪಾದ ತೊಳೆದದ್ದೇ ಇಡೀ ದೇಶದ ಪೌರಕಾರ್ಮಿಕರ ಉದ್ಧಾರವೇ ಆಗಿ ಹೋಯಿತು ಎಂದು ಬೀಗಿದರು.
ಆದರೆ ಇದೇ ಪೌರಕಾರ್ಮಿಕರ ಏಳಿಗೆಗಾಗಿ, ಮಲ ಹೊರುವ ಪೌರಕಾರ್ಮಿಕರ ಬದುಕಿನ ಪಾಲಿನ ಅನಿಷ್ಟ ನಿವಾರಣೆಗಾಗಿ ತಮ್ಮ ಬದುಕನ್ನೇ ಮುಡಿಪಿಟ್ಟು 1986ರಿಂದಲೂ ಸತತವಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕ ಮೂಲದ ಚಿಂತಕ, ಸಾಮಾಜಿಕ ಕಾರ್ಯಕರ್ತ ಬೆಜವಾಡಾ ವಿಲ್ಸನ್ , ಮೋದಿಯವರ “ಪಾದ ತೊಳೆಯುವ” ನಾಟಕ ಕಂಡು ಕಂಡು ಕಿಡಿ ಕಾರಿದ್ದಾರೆ.
ಸ್ವತಃ ಪೌರ ಕಾರ್ಮಿಕ ಕುಟುಂಬದಿಂದಲೇ ಬಂದು ಇಂದು ದೇಶದಾದ್ಯಂತ ಬಲಿಷ್ಟ ಸಪಾಯಿ ಕರ್ಮಚಾರಿ ಆಂದೋಲನವನ್ನು ಸಂಘಟಿಸಿರುವ ಬೆಜವಾಡ ವಿಲ್ಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ, “ಮಿಸ್ಟರ್ ಮೋದಿಯವರೇ, ತೊಳೆದುಕೊಳ್ಳಬೇಕಿರುವುದು ನಿಮ್ಮ ತಲೆಯನ್ನೇ ಹೊರತು ನಮ್ಮ ಪಾದಗಳನ್ನಲ್ಲ” ಎಂದು ಹೇಳಿರುವ ಬೆಜವಾಡ ವಿಲ್ಸನ್ ಮೋದಿಯವರ ಮೇಲೆ ಗಂಭೀರ ಆರೋಪ ನಡೆಸಿದ್ದಾರೆ. ಮೋದಿ ನಡೆಸಿರುವ ಕೃತ್ಯ ಅತ್ಯುನ್ನತ ರೂಪದ ಅಪಮಾನ ಎಂದು ಟೀಕಿಸಿರುವ ಅವರು, ದೇಶದಲ್ಲಿ ಇನ್ನೂ 1.6 ಲಕ್ಷ ಹೆಣ್ಣು ಮಕ್ಕಳು ಮನುಷ್ಯರ ಹೇಲನ್ನು ಎತ್ತುವ ಬಲವಂತದ ಕೆಲಸದಲ್ಲಿ ತೊಡಗಿರುವಾಗ ಈ ಕುರಿತು ನರೇಂದ್ರ ಮೋದಿ ಕಳೆದ 5 ವರ್ಷಗಳಲ್ಲಿ ಒಂದೇ ಒಂದು ಮಾತನ್ನೂ ಆಡಿಲ್ಲ. ಎಂತಹ ನಾಚಿಕೆಗೇಡು! ಎಂದು ಹೇಳಿದ್ದಾರೆ.
Clean your mind not our feet, Mr. PM! Highest form of humiliation. 1.6 lac women still forced to clean shit, not a single word in five years. What a shame! #StopKillingUs https://t.co/Hs898ZJlT5
— Bezwada Wilson (@BezwadaWilson) February 24, 2019
‘ಪ್ರತಿ ಐದು ದಿನಗಳಿಗೊಬ್ಬ ಪೌರ ಕಾರ್ಮಿಕ ಮಲಹೊರುವ ಕೆಲಸದಲ್ಲಿ ಸಾವನ್ನಪ್ಪುತ್ತಾನೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ, ಆದರೆ ವಾಸ್ತವ ಇನ್ನೂ ಕರಾಳವಾಗಿದೆ’ ಎಂದೂ ಬೆಜವಾಡ ವಿಲ್ಸನ್ ತಿಳಿಸಿದ್ದಾರೆ.
ದೇಶದಲ್ಲಿ ಮಲ ಹೊರುವ ಪದ್ಧತಿ 1993ರಲ್ಲೇ ನಿಷೇಧಗೊಂಡಿದ್ದರೂ ಸರ್ಕಾರಗಳ ಹೊಣೆಗೇಡಿತನದಿಂದಾಗಿ ಪೌರಕಾರ್ಮಿಕರನ್ನು ಈ ಕೆಲಸದಲ್ಲಿ ತೊಡಗಿಸುವ ಕೆಲಸವನ್ನು ಎಲ್ಲಾ ಊರಿನ ಪುರಸಭೆ, ನಗರಸಭೆಗಳು, ರೈಲ್ವೆ ಇಲಾಖೆಗಳು ನಡೆಸುತ್ತಲೇ ಬಂದಿವೆ. ಇದರ ಕುರಿತು ಜನಾಂದೋಲನ ಕಟ್ಟುತ್ತಲೇ ನೀತಿ ನಿರೂಪಣೆಯಲ್ಲಿಯೂ ಬದಲಾವಣೆ ತರಲು ಶ್ರಮಿಸುತ್ತಿರುವವರು ಬಿಜವಾಡಾ ವಿಲ್ಸನ್. ಇವರ ಈ ಅವರತ ಕೆಲಸದಿಂದಾಗಿ 2016ರಲ್ಲಿ ಪ್ರತಿಷ್ಠಿತ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಯೂ ಲಭಿಸಿದೆ.
2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು 2019ರ ಈ ಕ್ಷಣದ ವರೆಗೂ ಸಹ ಪೌರ ಕಾರ್ಮಿಕರ ಬದುಕನ್ನು ನರಕಸದೃಶ ಮಾಡುತ್ತಿರುವ ಇಂತಹ ಒಂದು ಅನಿಷ್ಠ ಪದ್ಧತಿಯ ಕುರಿತು ಉಸಿರೆತ್ತದೇ ಈಗ ಚುನಾವಣೆ ಹತ್ತಿರವಾದೊಡನೆ ಪೌರ ಕಾರ್ಮಿಕರ ಪಾದಗಳನ್ನು ತೊಳೆಯುವ ಡ್ರಾಮಾ ಮಾಡುತ್ತಿರುವುದು ಸಹಜವಾಗಿ ಬೆಜವಾಡಾ ಅವರಲ್ಲಿ ಆಕ್ರೋಶ ತರಿಸಿದೆ.
ಇದು ಬೆಜವಾಡಾ ಅವರೊಬ್ಬರ ಆಕ್ರೋಶವಲ್ಲ. ದೇಶದಾದ್ಯಂತ ತಾವು ಮಲಹೊರುವ ಅನಿವಾರ್ಯತೆಗೆ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವ ಲಕ್ಷಾಂತರ ಜನರ ಆಕ್ರೋಶವೂ ಹೌದು.