ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನದ ಬಹುದೊಡ್ಡ ಉಗ್ರಗಾಮಿಗಳ ತರಬೇತಿ ಕೇಂದ್ರವನ್ನು ಭಾರತೀಯ ವಾಯುಪಡೆ ಸಂಪೂರ್ಣ ನಾಶಪಡಿಸಿದೆ ಮತ್ತು ಪ್ರಮುಖವಾಗಿ ಜೈಷ್ ಎ ಮೊಹಮ್ಮದ್ ನಾಯಕ ಮೌಲಾನಾ ಮಸೂದ್ ಅಜರ್ ಸೋದರ ಸೇರಿದಂತೆ ಇಬ್ಬರು ಆತನ ಬಲಗೈಬಂಟರು ಸೇರಿದಂತೆ 200ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.
ಅದೇ ಹೊತ್ತಿಗೆ, ಈ ದಾಳಿಯ ಬಗ್ಗೆ ಪಾಕಿಸ್ತಾನ ಆರಂಭದಿಂದ ಈವರೆಗೆ ನೀಡಿರುವ ಪ್ರತಿಕ್ರಿಯೆಗಳು ದಾಳಿ ಎಷ್ಟರಮಟ್ಟಿಗೆ ಆ ದೇಶವನ್ನು ಬೆಚ್ಚಿಬೀಳಿಸಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ದಾಳಿಯ ಕುರಿತ ಮೊದಲ ಮಾಹಿತಿಯನ್ನು ಬಹಿರಂಗಪಡಿಸಿದ್ದ ಪಾಕಿಸ್ತಾನ ಸೇನಾ ವಕ್ತಾರರು, ತನ್ನ ಗಡಿಯೊಳಗೆ ಪಾಕ್ ಯುದ್ಧ ವಿಮಾನಗಳು ನುಗ್ಗಿದ್ದವು. ಆದರೆ, ಅವರನ್ನು ಅಷ್ಟೇ ವೇಗವಾಗಿ ಹಿಂದಕ್ಕೆ ಅಟ್ಟಲಾಯಿತು. ನಮ್ಮಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರು ಅವಸರವಾಗಿ ಸಿಡಿಸಿದ ಬಾಂಬುಗಳು ಗಡಿಯಂಚಿನ ಕಾಡಿನಲ್ಲಿ ಬಿದ್ದಿವೆ ಎಂದು ಟ್ವೀಟ್ ಮಾಡಿದ್ದರು.
ಆ ಬಳಿಕ, ಪಾಕ್ ಪ್ರಧಾನಿ ಸೇನೆ ಮತ್ತು ಪ್ರಮುಖ ಸಚಿವರ ತುರ್ತು ಸಭೆ ಕರೆದಿದ್ದರು. ಸಭೆಯ ನಂತರ ವಿದೇಶಾಂಗ ಸಚಿವರು, “ಭಾರತ ಅಂತಾರಾಷ್ಟ್ರೀಯ ಗಡಿ ಉಲ್ಲಂಘಿಸಿದೆ. ಭಾರತದ ಈ ದುಸ್ಸಾಹಸಕ್ಕೆ ತಕ್ಕ ತಿರುಗೇಟು ನೀಡಲಿದ್ದೇವೆ” ಎಂದು ಹೇಳಿದರು. ಈ ನಡುವೆ, ಪಾಕಿಸ್ತಾನದ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಶೇಮ್ ಶೇಮ್ ಘೋಷಣೆ ಕೂಗಿದ ಬಗ್ಗೆಯೂ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಯಿತು.
ಪಾಕ್ ಮಾಧ್ಯಮಗಳು, ಭಾರತದ ವಾಯುಪಡೆ ದೇಶದ ಗಡಿಯೊಳಗೆ ಬಂದು, ಬಾಂಬ್ ದಾಳಿ ನಡೆಸಿದೆ. ಶಕ್ತಿಶಾಲಿ ಬಾಂಬ್ ಹಾಕಿದ್ದರಿಂದ ಭಾರೀ ಹಾನಿ ಸಂಭವಿಸಿದೆ ಎಂದು ವರದಿ ಮಾಡಿದವು. ಆದರೆ, ಭಾರತ, ಉಗ್ರರ ನೆಲೆಯಲ್ಲಿ ಭಾರತದೊಳಕ್ಕೆ ನುಸುಳಿ ಪಲ್ವಾಮಾ ಮಾದರಿಯಲ್ಲಿ ಮತ್ತಷ್ಟು ದಾಳಿ ನಡೆಸಲು ಸಜ್ಜಾಗಿರುವ ಆತ್ಮಾಹುತಿ ಬಾಂಬರುಗಳು ನೂರಾರು ಸಂಖ್ಯೆಯಲ್ಲಿ ಸೇರಿರುವ ನಿಖರ ಗುಪ್ತಚರ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದು, ನಿಖರ ಗುರಿ ಕೇಂದ್ರಿತ ದಾಳಿಯಾಗಿರುವುದರಿಂದ ಯಾವುದೇ ನಾಗರಿಕ ಸಾವುನೋವು ಸಂಭವಿಸಿಲ್ಲ, ಆಸ್ತಿಪಾಸ್ತಿ ನಷ್ಟವಾಗಿಲ್ಲ ಎಂದು ಹೇಳಿಕೆ ನೀಡಿತು.
ಆ ಬಳಿಕ, ಪಾಕ್ ವರಸೆ ಬದಲಾಯಿತು. “ಭಾರತ ದಾಳಿ ನಡೆಸಿದ್ದು ಉಗ್ರರನ್ನು ಗುರಿಯಾಗಿಸಿಕೊಂಡಲ್ಲ, ಅದು ಗಂಭೀರ ಅತಿಕ್ರಮ ನಡೆಸಿದೆ. ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು. ಆದರೆ, ಪ್ರತೀಕಾರದ ಸಮಯ ಮತ್ತು ಸಂದರ್ಭವನ್ನು ನಾವೇ ನಿರ್ಧಸುತ್ತೇವೆ” ಎಂದು ಪಾಕ್ ಗೃಹ ಸಚಿವರು ಹೇಳಿಕೆ ನೀಡಿದರು. ಆ ನಡುವೆ, ಅಲ್ಲಿನ ವಿದೇಶಾಂಗ ಸಚಿವರು ಮತ್ತೊಂದು ಹೇಳಿಕೆ ನೀಡಿ, ಪಾಕಿಸ್ತಾನ ಜವಾಬ್ದಾರಿಯುತ ದೇಶ. ದಾಳಿ ವಿಷಯದಲ್ಲಿ ಏನು ಮಾಡಬೇಕು ಎಂಬುದನ್ನು ವಿವೇಚನೆ ಮಾಡಿ ಮುಂದಿನ ಹೆಜ್ಜೆ ಇಡಲಿದೆ ಎಂದರು.
ಅದಾದ ಹಲವು ಗಂಟೆಗಳ ಬಳಿಕ, ಮಧ್ಯಾಹ್ನದ ನಂತರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದಾಳಿ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಅಲ್ಲದೆ, ಇಸ್ಲಾಮಿಕ್ ಒಕ್ಕೂಟದಲ್ಲೂ ಈ ಬಗ್ಗೆ ಪ್ರಸ್ತಾಪಿಸಲು ಸಭೆ ನಿಧರಿಸಿತು ಎಂದು ಮಾಧ್ಯಮಗಳು ವರದಿ ಮಾಡಿದವು.
ಈ ನಡುವೆ, ದಾಳಿಯ ಕುರಿತ ಪಾಕಿಸ್ತಾನದ ಆಪ್ತ ಚೀನಾದ ಅಧಿಕೃತ ಪ್ರತಿಕ್ರಿಯೆ ಹೊರಬಿತ್ತು. “ಪಾಕ್ ಮತ್ತು ಭಾರತ ದಕ್ಷಿಣ ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳು. ಅವು ತಮ್ಮ ನಡುವಿನ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಭಾರತ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿದೆ. ಅಂತಹ ಕ್ರಿಯೆ ಜಾಗತಿಕ ವಿದ್ಯಮಾನ. ಅಂತಹ ಪ್ರಯತ್ನಗಳಿಗೆ ಎಲ್ಲರೂ ಬೆಂಬಲ ನೀಡಲೇಬೇಕು” ಎಂಬ ಚೀನಾ ಹೇಳಿಕೆ ಹೊರಬೀಳುತ್ತಲೇ ಪಾಕಿಸ್ತಾನದ ವರಸೆಯೇ ಬದಲಾಯಿತು.
“ಭಾರತದ ಹೇಳಿದಂತೆ ಯಾವುದೇ ಉಗ್ರ ನೆಲೆ ಮೇಲೆ ದಾಳಿ ನಡೆದಿಲ್ಲ. ಯಾವ ಹಾನಿಯೂ ಆಗಿಲ್ಲ. ಅದರ ಭಾರೀ ದಾಳಿಯ ಹೇಳಿಕೆಯೇ ಸುಳ್ಳು. ನಾವು ಅಂತಾರಾಷ್ಟ್ರೀಯ ಮಾಧ್ಯಮವನ್ನು ದಾಳಿ ಸ್ಥಳಕ್ಕೆ ಕರೆದೊಯ್ಯುತ್ತೇವೆ. ವಾಸ್ತವಾಂಶ ಜಗತ್ತಿಗೆ ತಿಳಿಯಲಿ” ಎಂದು ಪಾಕ್ ವಿದೇಶಾಂಗ ಸಚಿವರು ಹೇಳಿದರು. ಅದರ ಬೆನ್ನಲ್ಲೇ, ಪ್ರಧಾನಿ ಇಮ್ರಾನ್ ಖಾನ್, ದೇಶದ ಸೇನೆ ಮತ್ತು ಜನತೆ ಯಾವುದೇ ಪ್ರತಿಕೂಲ ಸಂದರ್ಭವನ್ನು ಎದುರಿಸಲು ಸಜ್ಜಾಗಿರಬೇಕು ಎಂದು ಕರೆ ನೀಡಿದರು!
ಹಾಗೇ, “ದಾಳಿಯ ಬಳಿಕ ಗಡಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಹಾಗಾಗಿ ಪಾಕಿಸ್ತಾನ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳುವಂತೆ ಮಾಡುವುದಿಲ್ಲ. ತಾಳ್ಮೆಯಿಂದ ವರ್ತಿಸಲಿದೆ” ಎಂಬ ಹೇಳಿಕೆಯೂ ಪಾಕಿಸ್ತಾನದಿಂದ ಹೊರಬಿತ್ತು. ಪತ್ರಿಕಾಗೋಷ್ಠಿಯಲ್ಲಿ ಪಾಕ್ ಪತ್ರಕರ್ತರು, ಭಾರತೀಯ ವಿಮಾನಗಳನ್ನು ಯಾಕೆ ಹೊಡೆದುರುಳಿಸಲಿಲ್ಲ ಎಂದು ಪ್ರಶ್ನಿಸಿದಾಗ, ವಿದೇಶಾಂಗ ಸಚಿವ ಖುರೇಷಿ ಸಿಡಿಮಿಡಿಗೊಂಡರು. ಅಲ್ಲದೆ, ಪಾಕಿಸ್ತಾನ, “ಈ ದಾಳಿ ವಿಷಯದಲ್ಲಿ ಎಲ್ಲಾ ಮಾರ್ಗಗಳನ್ನೂ ಮುಕ್ತವಾಗಿರಿಸಿಕೊಂಡಿದ್ದು, ರಾಜತಾಂತ್ರಿಕ, ರಾಜಕೀಯ ಮತ್ತು ಮಿಲಿಟರಿ ಆಯ್ಕೆಗಳನ್ನು ಹೊಂದಿದೆ” ಎಂದು ಹೇಳಿದರು.
ಒಟ್ಟಾರೆ ದಾಳಿ ನಡೆದ ಕ್ಷಣದಿಂದ ಸಂಜೆಯವರೆಗೆ ಇಡೀ ದಿನ ಪಾಕಿಸ್ತಾನ ಪ್ರತಿಕ್ರಿಯಿಸಿದ ರೀತಿಯೇ ಆ ದೇಶ ದಾಳಿಯಿಂದ ಎಷ್ಟು ಗಲಿಬಿಲಿಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ, ಚೀನಾದಂತಹ ಅದರ ನೆಚ್ಚಿನ ರಾಷ್ಟ್ರವೇ ಈ ವಿಷಯದಲ್ಲಿ ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸದೆ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಬಳಿಕವಂತೂ ಪಾಕ್ ಸಂಪೂರ್ಣ ತನ್ನ ವೈಖರಿಯನ್ನೇ ಬದಲಾಯಿಸಿಕೊಂಡುಬಿಟ್ಟಿತು. ಇಂತಹ ಅದರ ಹಿಂಜರಿಕೆ ಮತ್ತು ಭಯದ ಪ್ರತಿಕ್ರಿಯೆಗಳು ಅದರ ಆಶ್ರಯದಲ್ಲಿರುವ ಜೈಷ್ ಎ ಮೊಹಮ್ಮದ್ ನಂತಹ ಉಗ್ರ ಪಡೆಗಳ ಸದ್ದಡಗಿಸಲು ಶಕ್ತವಾದರೆ ನಿಜವಾಗಿಯೂ ನಮ್ಮ ಯೋಧರ ದಾಳಿಗಳಿಗೆ ತಕ್ಕ ಪ್ರತಿಫಲ ಸಿಗಬಹುದು.