ಬಾಂಗ್ಲಾ ವಿಮೋಚನೆಯ ಯುದ್ಧಕ್ಕೂ ಮುನ್ನ ಪಾಕಿಸ್ತಾನದ ವಿರುದ್ಧ ಎರಡು ಯುದ್ಧಗಳು ನಡೆದುಹೋಗಿದ್ದವು. 1948ರಲ್ಲಿ ಮತ್ತು 1965ರಲ್ಲಿ ನಡೆದ ಎರಡೂ ಯುದ್ಧಗಳಲ್ಲಿ ಪಾಕಿಸ್ತಾನ ಸೋಲೊಪ್ಪಿಕೊಂಡಿತ್ತು. ಈ ಎರಡೂ ಯುದ್ಧಗಳು ನಡೆದಿದ್ದು ಕಾಶ್ಮೀರಕ್ಕಾಗಿ. ಆದರೆ ಮೊಟ್ಟಮೊದಲ ಬಾರಿ ಕಾಶ್ಮೀರ ಸಮಸ್ಯೆಯನ್ನು ಹೊರತಾದ ವಿಷಯಕ್ಕೆ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಸಂದರ್ಭ ಎದುರಾಗಿತ್ತು. ಪ್ರಧಾನಿ ಇಂದಿರಾಗಾಂಧಿ ಇದನ್ನು ನಾಜೂಕಾಗಿಯೇ ನಿಭಾಯಿಸಬೇಕಾಗಿತ್ತು. ಇನ್ನೊಂದು ದೇಶದ ಆಂತರಿಕ ವಿಷಯದಲ್ಲಿ ಭಾರತ ಯಾಕೆ ಮೂಗು ತೂರಿಸಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯ ಕೇಳುವ ಎಲ್ಲ ಸಾಧ್ಯತೆಗಳು ಇದ್ದವು.
ಆದರೆ ಇಂದಿರಾಗಾಂಧಿ ಮುಂದೆ ಹೆಚ್ಚಿನ ಆಯ್ಕೆಗಳೇನೂ ಇರಲಿಲ್ಲ. ಪಾಕಿಸ್ತಾನಕ್ಕೊಂದು ಪಾಠ ಕಲಿಸಲೇಬೇಕಾಗಿತ್ತು. ಯಾಕೆಂದರೆ ಪಾಕಿಸ್ತಾನ ಪಡೆಗಳಿಂದ ದೌರ್ಜನ್ಯಕ್ಕೆ ಒಳಗಾಗಿ ಭಾರತದ ಪಶ್ಚಿಮ ಗಡಿಯ ಹಲವು ರಾಜ್ಯಗಳಿಗೆ ಬಾಂಗ್ಲಾದೇಶೀಯರು ತಂಡೋಪತಂಡವಾಗಿ ವಲಸೆ ಬಂದುಬಿಟ್ಟಿದ್ದರು. ಹೀಗೆ ವಲಸೆ ಬಂದವರ ಸಂಖ್ಯೆ ಹೆಚ್ಚುಕಡಿಮೆ ಒಂದು ಕೋಟಿ! ಒಂದು ಕೋಟಿ ನಿರಾಶ್ರಿತರಿಗೆ ಟೆಂಟುಗಳು, ದಿನನಿತ್ಯದ ಆಹಾರ, ಔಷಧೋಪಚಾರ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಾದರೂ ಹೇಗೆ? ಒಂದು ಕೋಟಿ ಜನರನ್ನು ತಿಂಗಳುಗಟ್ಟಲೆ ಸಾಕಲು ಆಗುವ ಖರ್ಚಿಗಿಂತ, ಪಾಕಿಸ್ತಾನದ ಮೇಲೆ ಯುದ್ಧಹೂಡಿ ನಿರಾಶ್ರಿತರನ್ನು ಮತ್ತೆ ಬಾಂಗ್ಲಾದೇಶಕ್ಕೆ ಸುರಕ್ಷಿತವಾಗಿ ಕಳುಹಿಸುವುದೇ ಕಡಿಮೆ ಖರ್ಚಿನ ಬಾಬತ್ತು ಎಂಬುದನ್ನು ಇಂದಿರಾಗಾಂಧಿ ಅರ್ಥ ಮಾಡಿಕೊಂಡಿದ್ದರು.
ಇದನ್ನೂ ಮೀರಿ ಭಾರತದ ಮಧ್ಯಪ್ರವೇಶಕ್ಕೆ ಇದ್ದ ಮುಖ್ಯ ಕಾರಣ, ಬಾಂಗ್ಲಾದಲ್ಲಿ ಉರ್ದುಯೇತರ ಭಾಷೆ ಮಾತನಾಡುವ ಹಿಂದೂ, ಮುಸ್ಲಿಂ ಮತ್ತಿತರ ಸಮುದಾಯಗಳ ಜನರ ಮೇಲೆ ನಡೆಯುತ್ತಿದ್ದ ಪೈಶಾಚಿಕ ದಾಳಿ. ಅದರಲ್ಲೂ ಮಹಿಳೆಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರಗಳಂತೂ ಕಂಡುಕೇಳರಿಯದಂಥವು. ಅವುಗಳನ್ನು ಯಾರೂ ಕೂಡ ಸೈರಿಸಿಕೊಳ್ಳಲು ಸಾಧ್ಯವಿರಲಿಲ್ಲ. ಇಂದಿರಾಗಾಂಧಿ ಮೇಲಿಂದ ಮೇಲೆ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಮಾನವೀಯ ನರಮೇಧ, ಸರಣಿ ಅತ್ಯಾಚಾರಗಳನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಂದರು.
1971ರ ನಾಗರಿಕ ದಂಗೆಯ ಸಂದರ್ಭದಲ್ಲಿ ಪಾಕಿಸ್ತಾನಿ ಪಡೆಗಳು ಮತ್ತು ಅವುಗಳನ್ನು ಬೆಂಬಲಿಸುತ್ತಿದ್ದ ಸ್ವತಂತ್ರ ಉಗ್ರಗಾಮಿ ಪಡೆಗಳು ನಡೆಸಿದ ಅತ್ಯಾಚಾರಗಳ ಸಂಖ್ಯೆ ಇಪ್ಪತ್ತು ಎರಡರಿಂದ ನಾಲ್ಕು ಲಕ್ಷ ಇರಬಹುದು ಎಂಬ ಅಂದಾಜಿದೆ. ಇದು ಅಚಾನಕ್ಕಾಗಿ ನಡೆದುಹೋದ ದುರಂತಗಳಲ್ಲ. ಎಲ್ಲವನ್ನೂ ವ್ಯವಸ್ಥಿತವಾಗಿಯೇ ನಡೆಸಿದ ಮಾರಣಹೋಮಗಳು. ಪಾಕಿಸ್ತಾನದಲ್ಲಿ ಈ ಸಂಬಂಧ ಫತ್ವಾ ಒಂದನ್ನು ಹೊರಡಿಸಲಾಗಿತ್ತು. ನಾಗರಿಕ ದಂಗೆಗಳನ್ನು ಹತ್ತಿಕ್ಕುವ ಸಂದರ್ಭದಲ್ಲಿ ಸೆರೆಯಾಗುವ ಮಹಿಳೆಯರು ಸೈನ್ಯದ ಆಸ್ತಿ (ವಾರ್ ಬೂಟಿ) ಎಂದು ಘೋಷಿಸಲಾಗಿತ್ತು. ಮೂಲಭೂತವಾದಿ ಮುಸ್ಲಿಂ ಧಾರ್ಮಿಕ ನಾಯಕರುಗಳು ಬಹಿರಂಗವಾಗಿಯೇ ಬಂಗಾಳಿ ಮುಸ್ಲಿಮ್ ಹೆಣ್ಣುಮಕ್ಕಳ ಸರಣಿ ಅತ್ಯಾಚಾರಗಳನ್ನು ಸಮರ್ಥಿಸಿಕೊಂಡರು.
ಕೆಲವು ಮೂಲಭೂತವಾದಿ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸಹ ಈ ದಾರುಣ ಅತ್ಯಾಚಾರಗಳಲ್ಲಿ ಪಾಲ್ಗೊಂಡರು. ಹಿಂದೂ ಅಲ್ಪಸಂಖ್ಯಾತರು ಮತ್ತು ಬಂಗಾಳಿ ಮುಸ್ಲಿಂ ಬಹುಸಂಖ್ಯಾತರನ್ನು ಏಕಕಾಲಕ್ಕೆ ಬೆದರಿಸಿ ಅಂಕೆಯಲ್ಲಿ ಇಟ್ಟುಕೊಳ್ಳುವ ತಂತ್ರವಾಗಿ ಈ ಅತ್ಯಾಚಾರ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಪರಿಣಾಮ ಬಲು ಕ್ರೂರವಾಗಿತ್ತು. ಎಳೆಯ ಬಾಲಕಿಯರಿಂದ ಹಿಡಿದು ವೃದ್ಧ ಹೆಂಗಸರವರೆಗೆ ಯಾರನ್ನೂ ಈ ದುಷ್ಟರು ಬಿಡಲಿಲ್ಲ. ಸಾವಿರಾರು ಹೆಣ್ಣುಮಕ್ಕಳು ತಮಗೆ ಬೇಡದ, ಭೀಕರ ದುರ್ನೆನಪಿನ ಗರ್ಭ ಧರಿಸಿದರು. ಯಾರಿಗೂ ಬೇಡದ ಮಕ್ಕಳು ಹುಟ್ಟಿದವು, ಲಕ್ಷಗಟ್ಟಲೆ ಅಬಾರ್ಷನ್ಗಳು, ಶಿಶುಹತ್ಯೆಗಳು, ತಮ್ಮ ಮೇಲಿನ ಭೀಕರ ದೌರ್ಜನ್ಯ ಸಹಿಸಿಕೊಳ್ಳಲಾಗದೆ ನಡೆದ ಆತ್ಮಹತ್ಯೆಗಳು ಸರಣಿಯೋಪಾದಿಯಲ್ಲಿ ನಡೆದವು. ಜಗತ್ತಿನಲ್ಲಿ ಘಟಿಸಿದ ಭಯಾನಕ ಅತ್ಯಾಚಾರ ಸರಣಿಯಲ್ಲಿ ಇದು ಒಂದಾಗಿತ್ತು.
ಭಾರತವು ಬಾಂಗ್ಲಾ ಸಮಸ್ಯೆಯಲ್ಲಿ ಮಧ್ಯ ಪ್ರವೇಶಿಸಿದ್ದು, ಮುಕ್ತಿವಾಹಿನಿಗೆ ಬೆಂಬಲ ನೀಡಿದ್ದು ಅಲ್ಲಿ ನಡೆಯುತ್ತಿದ್ದ ಭೀಕರ ನರಮೇಧಗಳ ಕಾರಣಕ್ಕೆ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿತು. ಆದರೆ ವಿಶ್ವಸಂಸ್ಥೆ ಇದನ್ನು ಒಪ್ಪಲಿಲ್ಲ. ಕೊನೆಗೆ ಬಾಂಗ್ಲಾ ಬಿಕ್ಕಟ್ಟು ಭಾರತದ ಆಂತರಿಕ ಭದ್ರತೆಗೆ ಧಕ್ಕೆ ತಂದಿತ್ತು ಎಂದು ಇಂದಿರಾಗಾಂಧಿ ಹೇಳಬೇಕಾಯಿತು. ಆದರೆ ಯುದ್ಧ ಮತ್ತು ಯುದ್ಧೋತ್ತರ ದಿನಗಳಲ್ಲಿ ಬಂಗಾಳಿಗಳ ಮೇಲೆ ನಡೆದ ಪೈಶಾಚಿಕ ಕೃತ್ಯಗಳು ಒಂದೊಂದಾಗಿ ಬಹಿರಂಗಗೊಂಡವು. ಭಾರತ ಮಾನವೀಯತೆ ದೃಷ್ಟಿಯಿಂದ ಮಧ್ಯಪ್ರವೇಶಿಸಿದ್ದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಯಿತು.
ಯಾವ ಕಾರಣಕ್ಕಾಗಿ ಯುದ್ಧ, ಅಂತರ್ಯುದ್ಧಗಳು ನಡೆದರೂ ಅವುಗಳ ಸ್ವರೂಪ ಒಂದೇ ರೂಪದಲ್ಲಿ ಇರುತ್ತದೆ. ಕಣ್ಣಿಗೆ ಕಣ್ಣು, ತಲೆಗೆ ತಲೆ… ಹೀಗೆ. ಬಾಂಗ್ಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಂಗಾಳಿ ರಾಷ್ಟ್ರೀಯವಾದಿಗಳು ಸಹ ಬಿಹಾರಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರಗಳನ್ನು ನಡೆಸಿದರು ಎಂಬ ಮಾತುಗಳು ಕೇಳಿಬಂದವು. ಅಷ್ಟೇಕೆ, ಚಿಂತಕ ಯಾಸ್ಮಿನ್ ಸೈಕಿಯಾ ಭಾರತ ಸೈನಿಕರೂ ಸಹ ಈ ಅತ್ಯಾಚಾರಗಳಲ್ಲಿ ಪಾಲ್ಗೊಂಡರು ಎಂಬ ಮಾತುಗಳನ್ನು ಹೇಳಿದರು. ಬಿಹಾರಿ ಮುಸ್ಲಿಮರು ಪಶ್ಚಿಮ ಪಾಕಿಸ್ತಾನಿಗಳ ಪರವಾಗಿ ಇದ್ದಿದ್ದರಿಂದ ಅವರನ್ನು ಗುರಿ ಮಾಡಲಾಯಿತು.
ಸುಸಾನ್ ಬ್ರೌನ್ ಮಿಲರ್ ಎಂಬ ಅಮೆರಿಕದ ಪತ್ರಕರ್ತೆ ಪ್ರಕಾರ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಸಂಖ್ಯೆ ನಾಲ್ಕು ಲಕ್ಷಕ್ಕೂ ಹೆಚ್ಚು. ಆದರೆ ಇದನ್ನು ಪಾಕಿಸ್ತಾನ ನಿರಾಕರಿಸುತ್ತ ಬಂದಿತಲ್ಲದೆ ಇಂಥ ಘಟನೆಗಳು ನಡೆದೇ ಇಲ್ಲ ಎಂದು ಹೇಳಿಕೊಂಡಿತು. ಫೊಟೋ ಜರ್ನಲಿಸ್ಟ್ ಒಬ್ಬರು ಖಾದಿಗ ಎಂಬ ಹದಿಮೂರು ವಯಸ್ಸಿನ ಹೆಣ್ಣುಮಗಳೊಬ್ಬಳನ್ನು ಢಾಕಾದಲ್ಲಿ ಮಾತನಾಡಿಸಿದರು. ಖಾದಿಗ ತನ್ನ ಶಾಲೆಯಿಂದ ನಾಲ್ವರು ಗೆಳತಿಯರೊಂದಿಗೆ ನಡೆದುಕೊಂಡು ಬರುವಾಗ ಪಾಕಿಸ್ತಾನ ಪಡೆಯೊಂದು ಕಿಡ್ನಾಪ್ ಮಾಡಿತು. ಐವರನ್ನೂ ಮಹಮದ್ಪುರದ ಮಿಲಿಟರಿ ಕ್ಯಾಂಪ್ ಒಂದರಲ್ಲಿ ಕೂಡಿಟ್ಟು ನಿರಂತರ ಅತ್ಯಾಚಾರ ನಡೆಸಲಾಯಿತು. ಯುದ್ಧ ಮುಗಿಯುವವರೆಗೆ ಈ ಐವರು ಸುಮಾರು ಆರುತಿಂಗಳ ಕಾಲ ಸೈನಿಕರ ಕಾಮತೃಷೆಗೆ ಆಹಾರವಾಗಿದ್ದರು.
ಮಾಲ್ಕಂ ಡಬ್ಲ್ಯು ಬ್ರೌನ್ ಎಂಬ ಪತ್ರಕರ್ತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪಾಕಿಸ್ತಾನದಲ್ಲಿ ನಡೆದ ಘೋರ ದುಷ್ಕೃತ್ಯಗಳ ಬಗ್ಗೆ ವರದಿ ಮಾಡುತ್ತ ಘಟನೆಯೊಂದನ್ನು ವಿವರಿಸಿದ್ದರು. ಅವರ ಪ್ರಕಾರ ಸುಮಾರು 583 ಬಂಗಾಳಿ ಹೆಣ್ಣುಮಕ್ಕಳನ್ನು ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಹೊತ್ತೊಯ್ದು ಸೇನೆಯ ಕ್ಯಾಂಪ್ ಒಂದರಲ್ಲಿ ಇಡಲಾಗಿತ್ತು. ಹತ್ತಾರು ಬಾರಿ ಈ ಹೆಣ್ಣುಮಕ್ಕಳು ಗರ್ಭಿಣಿಯರಾದರು, ಎಷ್ಟು ಬಾರಿ ಅಭಾರ್ಷನ್ ಆದರೂ ಮತ್ತೆ ಮತ್ತೆ ಗರ್ಭಿಣಿಯರನ್ನಾಗಿ ಮಾಡಲಾಯಿತು.
ಈ ಭೀಕರತೆಗಳೆಲ್ಲ ನಡೆದಾಗ ಜನರಲ್ ನರಹಂತಕ ಟಿಕ್ಕಾ ಖಾನ್ ಪೂರ್ವ ಪಾಕಿಸ್ತಾನದ ಪಾಕ್ ಪಡೆಯ ನೇತೃತ್ವ ವಹಿಸಿದ್ದ. ನಂತರ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಯಿತು. ನಂತರ ಸೇನಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಜನರಲ್ ನಿಯಾಜಿ ಏಪ್ರಿಲ್ ೧೫ರಂದು ಪಾಕಿಸ್ತಾನ ಸರ್ಕಾರಕ್ಕೆ ರಹಸ್ಯ ದೂರೊಮದನ್ನು ಸಲ್ಲಿಸಿದ್ದ. ನಿಯಾಜಿ ಹೀಗೇ ಹೇಳಿದ್ದನು: ‘ನಾನು ಇಲ್ಲಿಗೆ ಬಂದಾಗಿನಿಂದ ಗಮನಿಸುತ್ತಿದ್ದೇನೆ. ಗಲಭೆಪೀಡಿತ ಪ್ರದೇಶಗಳಲ್ಲಿ ನಮ್ಮ ಪಡೆಗಳು ಲೂಟಿ, ಕಾರಣವಿಲ್ಲದ ಹತ್ಯೆಗಳನ್ನು ನಡೆಸುತ್ತಿವೆ. ಬಂಗಾಳಿಗಳು ಮಾತ್ರವಲ್ಲ ಪಶ್ಚಿಮ ಪಾಕಿಸ್ತಾನಿ ಹೆಣ್ಣುಮಕ್ಕಳನ್ನೂ ಸಹ ಅತ್ಯಾಚಾರ ಮಾಡಲಾಗುತ್ತಿದೆ.’ (ಇದೇ ಜನರಲ್ ನಿಯಾಜಿ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಭಾರತ ಸೈನ್ಯಕ್ಕೆ ತನ್ನ ಪಡೆಗಳೊಂದಿಗೆ ಶರಣಾಗುತ್ತಾನೆ.)
‘ದಿ ಜೀನೋಸೈಡ್ ಇನ್ ಜೂನ್ 1971’ ಎಂಬ ಲೇಖನದಲ್ಲಿ ಬಾಂಗ್ಲಾ ಬಿಕ್ಕಟ್ಟಿನಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಮತ್ತೊಂದು ಮುಖವನ್ನು ತೆರೆದಿಡುತ್ತಾರೆ. ‘ಮೊದಲು ಭೀಕರ ನರಮೇಧಗಳು ಬಂಗಾಳಿಗಳ ಮೇಲಿನ ದ್ವೇಷದಿಂದ ನಡೆದವು. ಇದಕ್ಕೆ ಪ್ರತಿಯಾಗಿ ಬಂಗಾಳಿ ಪಡೆಗಳು (ಮುಕ್ತಿವಾಹಿನಿ) ಬಂಗಾಳಿಗಳಲ್ಲದವರ ಮೇಲೆ ದೌರ್ಜನ್ಯಗಳನ್ನು ಎಸಗುತ್ತ ಬಂದವು. ಮಾ.25ರ ಒಂದೇ ರಾತ್ರಿ ನಡೆದ ದಾಳಿಯಲ್ಲಿ ಸಾವಿರಾರು ನತದೃಷ್ಟ ಮುಸ್ಲಿಂ ಕುಟುಂಬಗಳು, ಅದರಲ್ಲೂ ವಿಶೇಷವಾಗಿ ಭಾರತ-ಪಾಕಿಸ್ತಾನ ವಿಭಜನೆಯ ನಂತರ ಪಾಕಿಸ್ತಾನಕ್ಕೆ ನಿಷ್ಠೆ ತೋರಿ ವಲಸೆ ಬಂದಿದ್ದ ಬಿಹಾರಿ ಮುಸ್ಲಿಮರು ದಾರುಣವಾಗಿ ದೌರ್ಜನ್ಯಕ್ಕೊಳಗಾದರು. ಸಾವಿರಾರು ಮಂದಿಯನ್ನು ಕೊಲ್ಲಲಾಯಿತು, ಮಹಿಳೆಯರನ್ನು ಅತ್ಯಾಚಾರಗೈಯಲಾಯಿತು, ಅವರ ಮೊಲೆಗಳನ್ನು ಚೂಪಾದ ಚೂರಿಗಳಿಂದ ಕೊಯ್ಯಲಾಯಿತು. ಮಕ್ಕಳೂ ಸಹ ಈ ಭಯಾನಕ ದಾಳಿಗಳಿಂದ ಬಚಾವಾಗಲಿಲ್ಲ. ತಮ್ಮ ಪೋಷಕರೊಂದಿಗೆ ಸತ್ತವರೇ ನಿಜವಾದ ಅದೃಷ್ಟವಂತರು. ಬದುಕುಳಿದವರ ಬದುಕು ಭೀಕರವಾಯಿತು’.
ನೀಲಿಮಾ ಇಬ್ರಾಹಿಂ ಎಂಬಾಕೆ ‘ಅಮಿ ಬಿರಂಗೊನಾ ಬೊಲ್ಚಿ’ ಎಂಬ ಕೃತಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಬದುಕುಳಿದವರ ದಾರುಣ ಕಥನಗಳನ್ನು ನಿರೂಪಿಸಿದರು. ‘ಅಮಿ ಬಿರಂಗೊನಾ ಬೊಲ್ಚಿ’ ಎಂದರೆ ನಾನು, ನಾಯಕಿ ಮಾತನಾಡುತ್ತಿದ್ದೇನೆ ಎಂದರ್ಥ. ಬಾಂಗ್ಲಾ ವಿಮೋಚನೆಯ ನಂತರ ಶೇಕ್ ಮಜಿಬುರ್ ರೆಹಮಾನ್ ರೇಪ್ ಸಂತ್ರಸ್ಥ ಮಹಿಳೆಯರನ್ನು ‘ಬಿರಗೊಂನಾ’ ಎಂದೇ ಕರೆದರು. ಯುದ್ಧೋತ್ತರ ಬಾಂಗ್ಲಾದಲ್ಲಿ ಸಂತ್ರಸ್ಥೆಯ ಸಾಮಾಜಿಕ ಗೌರವ ಕಾಪಾಡಲೆಂದು ಅವರು ಈ ಪದ ಬಳಕೆ ಮಾಡಿದ್ದರು.
ಅಮೆರಿಕ ಮೂಲದ ಮಹಿಳಾ ಮಾಧ್ಯಮ ಕೇಂದ್ರವೊಂದರ ವರದಿ ಪ್ರಕಾರ, ಪಶ್ಚಿಮ ಪಾಕಿಸ್ತಾನದ ಸೇನಾ ಕ್ಯಾಂಪುಗಳಲ್ಲಿ ಎಂಟರಿಂದ ಎಪ್ಪತ್ತೈದು ವರ್ಷ ವಯಸ್ಸಿನ ಬಂಗಾಳಿ ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಲಾಗುತ್ತಿತ್ತು. ಒಮ್ಮೊಮ್ಮೆ ಇದು ಅತ್ಯಾಚಾರದ ನಂತರ ಸಾಮೂಹಿಕ ನರಮೇಧವಾಗಿ ಮುಂದುವರೆಯುತ್ತಿತ್ತು.
ವಿಶ್ವಸಂಸ್ಥೆ ಮತ್ತು ಇತರ ಎನ್ಜಿಓಗಳು ಬಾಂಗ್ಲಾದೇಶಕ್ಕೆ ಆಸ್ಟ್ರೇಲಿಯದ ವೈದ್ಯ ಜೆಫರಿ ಡೇವಿಸ್ ನೇತೃತ್ವದ ತಂಡವೊಂದನ್ನು ಕಳುಹಿಸಿತ್ತು. ಜೆಫರಿ ಪ್ರಕಾರ ರೇಪ್ ವಿಕ್ಟಿಮ್ಗಳ ಸಂಖ್ಯೆ ಎರಡು ಲಕ್ಷದಿಂದ ನಾಲ್ಕು ಲಕ್ಷ ಎಂಬುದೂ ಸಹ ಸುಳ್ಳು. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರಗಳು ನಡೆದಿವೆ. ಮಿಲಿಟರಿ ಪಡೆ ಯಾವುದೇ ಪಟ್ಟಣಕ್ಕೆ ಹೋದರೂ ಆಸ್ಪತ್ರೆ, ಶಾಲೆಗಳ ಮೇಲೆ ಶೆಲ್ ದಾಳಿ ನಡೆಸುತ್ತಿತ್ತು, ಇಡೀ ಊರು ಭಯಭೀತಗೊಳ್ಳುತ್ತಿತ್ತು. ನಂತರ ಸೇನಾಪಡೆ ಮಹಿಳೆಯರನ್ನು ಪುರುಷರನ್ನು ಪ್ರತ್ಯೇಕಗೊಳಿಸುತ್ತಿದ್ದರು. ಅತ್ಯಾಚಾರಗಳ ಮೇಲೆ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಮಹಿಳೆಯರಲ್ಲಿ ಅನೇಕರು ಸೇನಾಕ್ಯಾಂಪ್ಗಳಲ್ಲೇ ಅಸುನೀಗಿದರು.
ದಿನೇಶ್ ಕುಮಾರ್ ದಿನೂ
ಬಾಂಗ್ಲಾದೇಶ ವಿಮೋಚನೆಯ ಭಾರತ–ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 2 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ–ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 1 ಓದಲು ಕ್ಲಿಕ್ ಮಾಡಿ
Disclaimer: The views expressed in the articles are those of the authors and do not necessarily represent or reflect the views of TruthIndia