ಪಲ್ವಾಮಾ ದಾಳಿಯಲ್ಲಿ ಮಡಿದ 40 ಮಂದಿ ಯೋಧರ ಬಲಿದಾನದ ಬಳಿಕ, ಭಾರತೀಯ ವಾಯುಪಡೆ ಪಾಕಿಸ್ತಾನ ಮೂಲದ ಉಗ್ರ ಪಡೆಗಳಿಗೆ ಭರ್ಜರಿ ಪ್ರತ್ಯುತ್ತರವನ್ನೇ ನೀಡಿದ್ದು, ಮಂಗಳವಾರ ಬೆಳಗಿನ ಜಾವ ಪಾಕಿಸ್ತಾನದ ಒಳ ನುಗ್ಗಿದ ವಾಯುಪಡೆ, ಬಾಲಕೋಟ್ ನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ.
ಪಾಕಿಸ್ತಾನದ ಸೇನಾ ವಕ್ತಾರರೇ ಭಾರತೀಯ ವಾಯುಪಡೆಯ ಈ ತಿರುಗೇಟನ್ನು ಮೊದಲು ಬಹಿರಂಗಗೊಳಿಸಿದ್ದು, ಪಾಕ್ ಗಡಿಯೊಳಗೆ ನುಗ್ಗಲು ಯತ್ನಿಸಿದ ಭಾರತೀಯ ವಾಯುಪಡೆಯನ್ನು ಹಿಮ್ಮೆಟ್ಟಿಸಿರುವುದಾಗಿ ಹೇಳಿದ್ದ ಅವರು, ಬಾಂಬ್ ಸಿಡಿಯುವ ಮುನ್ನವೇ ದಾಳಿಯನ್ನು ತಡೆದಿರುವುದಾಗಿ ಹೇಳಿದ್ದರು. ಆದರೆ, ಪಾಕ್ ಸೇನಾ ವಕ್ತಾರರ ಟ್ವೀಟ್ ಬೆನ್ನಲ್ಲೇ ಭಾರತೀಯ ಸೇನಾಪಡೆಯ ಮೂಲಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಗಡಿಯೊಳಗೆ ನುಗ್ಗಿ ಬಾಲಾಕೋಟ್ ನಲ್ಲಿ ಜೈಷ್ ಎ ಮೊಹಮ್ಮದ್ ಸೇರಿದಂತೆ ಹಲವು ಭಯೋತ್ಪಾದನಾ ಸಂಘಟನೆಗಳ ಉಗ್ರರ ನೆಲೆಯ ಮೇಲೆ ಬಾಂಬ್ ದಾಳಿ ಮಾಡಿ, ಸಂಪೂರ್ಣ ನಾಶ ಮಾಡಿರುವುದಾಗಿ ಹೇಳಿದ್ದವು.
ಅದಾದ ಬಳಿಕ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಕೇಶವ್ ಗೋಖಲೆ ಪತ್ರಿಕಾಗೋಷ್ಠಿಯಲ್ಲಿ, ದಾಳಿಯ ಕುರಿತ ಭಾರತ ಸರ್ಕಾರದ ಅಧಿಕೃತ ಮಾಹಿತಿಯನ್ನು ನೀಡಿದರು. ಜೈಷ್ ಎ ಮೊಹಮ್ಮದ್ ಸ್ಥಾಪಕ ಮೌಲಾನಾ ಮಸೂದ್ ಅಜರನ ಬಂಟರಾದ ಮೌಲಾನಾ ಯೂಸೂಫ್ ಅಜರ್, ಉಸ್ತಾದ್ ಘೋರಿ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಉಗ್ರರನ್ನು ಈ ಸೇನಾಯೇತರ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದರು. ಆ ಮೂಲಕ ಇದೊಂದು ಮಿಲಿಟರಿ ಕಾರ್ಯಾಚರಣೆ ಅಲ್ಲ; ಬದಲಾಗಿ ಉಗ್ರರ ವಿರುದ್ಧದ ಒಂದು ವಿಶೇಷ ಕಾರ್ಯಾಚರಣೆ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ, ಉಗ್ರರ ವಿರುದ್ಧದ ಭಾರತದ ನಿರಂತರ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ವಾಯುಪಡೆಯನ್ನು ಬಳಸಿಕೊಂಡಿದ್ದು(2016ರ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಭೂಸೇನೆಯೇ), ತನ್ನ ನೆಲದಲ್ಲಿ ನಿರಂತರ ರಕ್ತಪಾತಕ್ಕೆ ಕಾರಣವಾಗಿರುವ ಪಾಕಿಸ್ತಾನ ಮೂಲದ ಉಗ್ರ ಪಡೆಗಳಿಗೆ ಭಾರತದ ಅತ್ಯಂತ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅಲ್ಲದೆ, ಉಗ್ರಗಾಮಿ ಸಂಘಟನೆಗಳಿಗೆ ತರಬೇತಿ, ಹಣಕಾಸು ಮತ್ತು ಸರಕುಸಾಗಣೆಯ ನೆರವು ನೀಡುವ ಮೂಲಕ ಅವುಗಳನ್ನು ಪೋಷಿಸುತ್ತಿರುವ ಪಾಕಿಸ್ತಾನ ಸರ್ಕಾರಕ್ಕೂ ಈ ದಾಳಿ ಬೆಚ್ಚಿಬೀಳುವಂತೆ ಮಾಡಿದೆ. ಹಾಗೇ ಉಗ್ರಗಾಮಿಗಳ ವಿರುದ್ಧದ ಭವಿಷ್ಯದ ಭಾರತದ ಕಾರ್ಯಾಚರಣೆಗಳು ಯಾವ ಸ್ವರೂಪದ್ದಾಗಿರಲಿವೆ ಎಂಬ ಬಗ್ಗೆಯೂ ಈ ದಾಳಿ ಮುನ್ಸೂಚನೆ ನೀಡಿದೆ.
ಸಹಜವಾಗೇ ಪಾಕಿಸ್ತಾನದಲ್ಲಿ ಈ ದಾಳಿ ದೊಡ್ಡಮಟ್ಟದ ಆತಂಕವನ್ನು ಸೃಷ್ಟಿಸಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಪುಟ ಸಹೋದ್ಯೋಗಿಗಳು ಮತ್ತು ಪ್ರತಿಪಕ್ಷ ನಾಯಕರ ತುರ್ತು ಸಭೆ ಕರೆದು ಚರ್ಚಿಸಿದರು. ಆದರೆ, ನಂತರ ಅಲ್ಲಿನ ಸಂಸತ್ ಕಲಾಪದ ವೇಳೆ ಪ್ರಧಾನಿ ವಿರುದ್ಧ ಪ್ರತಿಪಕ್ಷಗಳು ‘ಶೇಮ್ ಶೇಮ್’ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಪಾಕಿಸ್ತಾನದ ವಿದೇಶಾಂಗ ಸಚಿವ ಮಹಮ್ಮದ್ ಖುರೇಷಿ, “ಭಾರತದ ದಾಳಿ ಪಾಕಿಸ್ತಾನವನ್ನು ಕೆಣಕಿದೆ. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಪಾಕ್ ಶಕ್ತವಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
ಈ ನಡುವೆ, ‘ಸರ್ಜಿಕಲ್ ಸ್ಟ್ರೈಕ್ 2.0’ ಎಂದು ಈ ವಾಯುದಾಳಿಯನ್ನು ಕರೆಯುವ ಮೂಲಕ ಬಿಜೆಪಿ ಮತ್ತು ಪ್ರಧಾನಿ ಮೋದಿ ಅಭಿಮಾನಿಗಳು ಇಡೀ ಸೇನಾ ಕಾರ್ಯಾಚರಣೆಯನ್ನು ಚುನಾವಣಾ ವಿಷಯವಾಗಿಸಲು ಮುನ್ನುಡಿ ಬರೆದಿದ್ದಾರೆ. ಅದೇ ಹಾದಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ, “ಇವತ್ತಿನ ದಾಳಿ ಹೊಸ ಭಾರತದ ಇಚ್ಛಾಶಕ್ತಿ ಮತ್ತು ದಿಟ್ಟತನಕ್ಕೆ ನಿದರ್ಶನ. ನಮ್ಮ ನವಭಾರತ ಯಾವುದೇ ಬಗೆಯ ಉಗ್ರವಾದವನ್ನು ಸಹಿಸುವುದಿಲ್ಲ ಮತ್ತು ಅಂತಹ ಉಗ್ರವಾದಕ್ಕೆ ಕುಮ್ಮಕ್ಕು ನೀಡುವವರನ್ನು ಬಗ್ಗುಬಡಿಯದೇ ಇರದು. ಭಾರತದ ಜನತೆ ನವಭಾರತದ ಮೋದಿಯವರ ದಿಟ್ಟ ನಾಯಕತ್ವದಲ್ಲಿ ಅಪಾರ ನಂಬಿಕೆ ಇಟ್ಟಿದೆ” ಎಂದಿದ್ದಾರೆ.
ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ರಾಜಸ್ತಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕೂಡ, “ದಾಳಿಯನ್ನು ಪ್ರಸ್ತಾಪಿಸದಿದ್ದರೂ, ದೇಶ ಇನ್ನು ಉಗ್ರರ ಉಪಟಳವನ್ನು ಸಹಿಸಿಕೊಂಡು ಕೈಕಟ್ಟಿಕೂರುವುದಿಲ್ಲ. ತಕ್ಕ ಪ್ರತ್ಯುತ್ತರ ಕೊಡುತ್ತೇವೆ” ಎನ್ನುತ್ತಲೇ ಚುನಾವಣಾ ಭಾಷಣವನ್ನು ಆರಂಭಿಸಿದರು. “ಭಾರತ ಬಲಿಷ್ಠ ಕೈಗಳಲ್ಲಿ ಸುರಕ್ಷಿತವಾಗಿದೆ” ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ಕೈಯಲ್ಲಿ ಭಾರತ ಸುರಕ್ಷಿತವಾಗಿದೆ ಎಂದೂ ಹೇಳಿದರು.
ಆದರೆ, ಪ್ರತಿಪಕ್ಷ ನಾಯಕರು ಬಹುತೇಕ ಎಲ್ಲರೂ ಈ ದಾಳಿಯನ್ನು ಸ್ವಾಗತಿಸಿದ್ದು, ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ವಾಯುಪಡೆ ಮತ್ತು ಸೇನೆಯ ದಿಟ್ಟ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಎಸ್ಪಿ ನಾಯಕಿ ಮಾಯಾವತಿ ಸೇರಿದಂತೆ ಹಲವು ನಾಯಕರು, ಕೇಂದ್ರ ಸರ್ಕಾರವನ್ನಾಗಲೀ, ಪ್ರಧಾನಿ ಮೋದಿಯವರನ್ನಾಗಲೀ ಉಲ್ಲೇಖಿಸದೆಯೂ ವಾಯುಪಡೆ ಮತ್ತು ಸೇನೆಯ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶದ ಸುರಕ್ಷತೆ ಮತ್ತು ಸಮಗ್ರತೆ ಕಾಯುವ ನಿಟ್ಟಿನಲ್ಲಿ ಸೇನೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ತಮ್ಮ ಬೆಂಬಲವಿದೆ ಎಂದೂ ಆ ನಾಯಕರು ಹೇಳಿದ್ದಾರೆ.
ಒಟ್ಟಾರೆ, ಈ ನಿರೀಕ್ಷಿತ ದಾಳಿ ಉಗ್ರರ ವಿರುದ್ಧದ ಭಾರತದ ಕಾರ್ಯಾಚರಣೆಯಲ್ಲಿ ‘ನವಭಾರತ’ವನ್ನು ಕಾಣಿಸುತ್ತಿರುವ ಹೊತ್ತಿಗೇ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಇದೇ ದಾಳಿಯನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳುವ ಸೂಚನೆ ನೀಡುವ ಮೂಲಕ ತಮ್ಮ ಪಾಲಿನ ‘ನವಭಾರತ’ದ ಹೆಬ್ಬಾಗಿಲು ತೆರೆಯುವ ಪ್ರಯತ್ನವನ್ನು ಈಗಾಗಲೇ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಚುನಾವಣಾ ಕಣದಲ್ಲಿ ಸರ್ಜಿಕಲ್ ಸ್ಟ್ರೈಕ್ 2.0 ಆಗಿ ಸದ್ದು ಮಾಡುವುದಂತೂ ಸದ್ಯಕ್ಕೆ ನಿಶ್ಚಿತ.