ಪುಲ್ವಾಮಾ ದಾಳಿಯಲ್ಲಿ ಭಾರತದ 42 ಯೋಧರನ್ನು ಹತ್ಯೆಗೈದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆಯು ಇಂದು ಮುಂಜಾವಿನಲ್ಲಿ ಪಾಕಿಸ್ತಾನದದ ಗಡಿಯ ಅಂಚಿನಲ್ಲಿರುವ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಬಾಂಬಿಂಗ್ ನಡೆಸಿತು. ಇದರ ಬೆನ್ನಲ್ಲೇ ಹಲವಾರು ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ವಿಡಿಯೋಗಳು, ದಾಳಿಗೆ ಸಂಬಂಧಪಡದ ಫೋಟೋಗಳು ಪ್ರಸಾರವಾಗಿ ವೈರಲ್ ಆಗಿವೆ.
ಇಂದು ನಡೆದ ದಾಳಿಯನ್ನು ಬಳಸಿಕೊಂಡು ತಮ್ಮ ಚಾನಲ್ಗಳ ಟಿಆರ್ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ದಾಳಿಯ ಕುರಿತು ಆಧಾರ ರಹಿತ ಸಂಗತಿಗಳನ್ನು, ದಾಳಿಗೆ ಸಂಬಂಧವೇ ಪಡೆದ ವಿಡಿಯೋಗಳನ್ನು ಪ್ರಸಾರ ಮಾಡುವಲ್ಲಿ ರಾಷ್ಟ್ರೀಯ ಸುದ್ದಿ ಚಾನಲ್ಗಳಿಗೆ ಸ್ಥಳೀಯ ಸುದ್ದಿ ಚಾನಲ್ಗಳೂ ಪೈಪೋಟಿ ನೀಡಿವೆ.
ಬೆಳಿಗೆ ವಾಯುಪಡೆಯ ದಾಳಿಯ ಸುದ್ದಿ ಹೊರಕ್ಕೆ ಬರುತ್ತಿದ್ದಂತೆಯೇ ಸುದ್ದಿ ಚಾನಲ್ಗಳು ಹಲವಾರು ವಿಡಿಯೋಗಳನ್ನು ಇಂದು ನಡೆದ ದಾಳಿಯ ವಿಡಿಯೋಗಳು ಎಂಬಂತೆ ತೋರಿಸಿದ್ದಾರೆ. ಇದರಲ್ಲಿ 2015ರಲ್ಲಿ ಯೂಟ್ಯೂಬ್ನಲ್ಲಿ ಹಾಕಲಾಗಿದ್ದ ವಿಡಿಯೋ ಗೇಮ್ ಸಹ ಒಂದಾಗಿದೆ. ಇದು ತಾಲಿಬಾನ್ ಉಗ್ರರನ್ನು ಗುರಿ ಮಾಡಿ ಹೊಡೆಯುವ ವಿಡಿಯೋ ಗೇಮ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಇಂದು ವೈರಲ್ ಆಗಿದೆ.
ಯೂಟ್ಯೂಬ್ ನಲ್ಲಿರುವ ಈ ವಿಡಿಯೋಗೇಮ್ನ ಪೂರ್ಣ ವಿಡಿಯೋ ಇಲ್ಲಿದೆ
ಇದರೊಂದಿಗೆ ‘ಟೀಮೋದಿ’ ಕಟ್ಟಿಕೊಂಡು ಮೋದಿಯ ಪರವಾಗಿ ರಾಜ್ಯದಾದ್ಯಂತ ಭಾವನಾತ್ಮಕ ಭಾಷಣಗಳಲ್ಲಿ ತೊಡಗಿರುವ ಚಕ್ರವರ್ತಿ ಸೂಲಿಬೆಲೆ ಬೆಳಿಗ್ಗೆ ಟ್ವೀಟ್ ಮೂಲಕ ಹಂಚಿದ್ದ ವಿಡಿಯೋ ಸಹ ಹಳೆಯ ವಿಡಿಯೋ ಆಗಿದ್ದು ಇವರು ತಮ್ಮ ಟ್ವಿಟರ್ ಅನುಯಾಯಿಗಳಿಗೆ ತಪ್ಪು ಮಾಹಿತಿ ನೀಡಿ ದಿಕ್ಕುತಪ್ಪಿಸಿರುವುದನ್ನು ನೋಡಬಹುದು.
Supreme Court banned Pataki on Deepawali but Indian army celebratedit in a majestic way. #Surgicalstrike2 pic.twitter.com/zEaR5Op6dS
— Chakravarty Sulibele (@astitvam) February 26, 2019
ಈ ವಿಡಿಯೋ ಹಂಚಿ ಸೂಲಿಬೆಲೆ ‘Supreme Court banned Pataki on Deepawali but Indian army celebratedit in a majestic way” ಎಂದು ಟ್ವೀಟ್ ಮಾಡಿದ್ದರು.
2017ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ವಿಡಿಯೋ ಯೂಟ್ಯೂಬ್ನಲ್ಲಿ ‘Flares at night Paf F-16 ಎಂಬ ಹೆಸರಿನಲ್ಲಿ ಅಪ್ಲೋಡ್ ಆಗಿರುವುದನ್ನು ಕಾಣಬಹುದು.
ತಮಾಷೆ ಎಂದರೆ ಇಂದು ಇದೇ ವಿಡಿಯೋ ಪಾಕಿಸ್ತಾನದಲ್ಲಿಯೂ ವೈರಲ್ ಆಗಿದೆ. ಪಾಕಿಸ್ತಾನದ ದುರಭಿಮಾನಿಗಳು ಇದೇ ವಿಡಿಯೋವನ್ನು ಹಂಚಿಕೊಂಡು ‘ಭಾರತದ ದಾಳಿಗೆ ಪ್ರತಿದಾಳಿ ನಡೆಸಿ ಪಾಕಿಸ್ತಾನ ಸಮರ್ಥವಾಗಿ ಎದುರಿಸಿರುವ ವಿಡಿಯೋ’ ಎಂದು ಹೇಳಿಕೊಂಡು ಇದನ್ನು ವೈರಲ್ ಮಾಡಿದ್ದಾರೆ. ಇದರ ಒಂದು ಉದಾಹರಣೆ ಇಲ್ಲಿದೆ.
The fighter aircraft of Pakistan Air Force at midnight demonstrated tactical preparedness by releasing flares in Cholistan say the channels of military enthusiasts. pic.twitter.com/rUjgm7jqSw
— Ibrahim Qazi (@miqazi) February 25, 2019
ಇಂದು ಭಾರತೀಯ ವಾಯುಪಡೆಯ ದಾಳಿಯಲ್ಲಿ ನೂರಾರು ಮಂದಿ ಉಗ್ರರು ಸತ್ತಿರಬಹುದು ಎಂದು ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿಯವರೂ ಹೇಳಿದ್ದಾರೆ. ಆದರೆ ಈ ಕುರಿತು ಯಾರೂ ಇದುವರೆಗೆ ಸೂಕ್ತ ಆಧಾರಗಳನ್ನು ನೀಡಿಲ್ಲ. ಆದರೂ ಸತ್ತಿರುವ ಉಗ್ರರ ಸಂಖ್ಯೆ 300-400 ಎಂದು ಬಹುತೇಕ ಮಾಧ್ಯಮಗಳು ಹೇಳುತ್ತಲೇ ಇವೆ. ಭಾರತದ ಯೋಧರ ಹತ್ಯೆ ನಡೆಸಿರುವ ಜೈಶ್-ಎ-ಮೊಹಮದ್ ಉಗ್ರರಿಗೆ ತಕ್ಕ ಶಾಸ್ತಿಯಾಗಬೇಕೆಂದು ಪ್ರತಿಯೊಬ್ಬ ಭಾರತೀಯನೂ ಬಯಸುತ್ತಾನೆ. ಆದರೆ ಭಾರತದ ಸೇನೆಯು ಒಂದು ದಾಳಿ ನಡೆಸಿದಾಗ ಶತ್ರು ಪಡೆಯಲ್ಲಿ ಆಗಿರುವ ನಷ್ಟವನ್ನು ಜನತೆಗೆ ಹೇಳುವಾಗ ಮಾಧ್ಯಮಗಳು ವಸ್ತುನಿಷ್ಟತೆ ಪ್ರದರ್ಶಿಸಬೇಕಾಗುತ್ತದೆ. ಜನಸಾಮಾನ್ಯರು ಪತ್ರಕರ್ತರಿಂದ ಬಯಸುವುದು ವಸ್ತುನಿಷ್ಠತೆಯನ್ನೇ ಹೊರತು ಟಿ ಆರ್ ಪಿ ಗಾಗಿ ಹೇಳುವ ಅತಿರಂಜಿತ ಸುದ್ದಿಗಳನ್ನಲ್ಲ. ದುರದೃಷ್ಟವಶಾತ್ ಬಹುತೇಕ್ ಮಾಧ್ಯಮಗಳು ಅಂಟಿಕೊಂಡಿರುವುದು ಇದೇ ಟಿಆರ್ಪಿ ಪತ್ರಿಕೋದ್ಯಮಕ್ಕೆ.
ಇನ್ನು ವಾಟ್ಸಾಪ್, ಫೇಸ್ಬುಕ್ಗಳಲ್ಲಿ ಸಹ ಈ ಕುರಿತು ಇಂದಿನ ದಾಳಿಗೆ ಸಂಬಂಧವೇ ಪಡದ ಫೋಟೋಗಳು ಹರಿದಾಡಿವೆ. ಇಲ್ಲಿ ನೂರಾರು ಉಗ್ರರು ಹತರಾದ ಒಂದು ಫೋಟೋ ವೈರಲ್ ಆಗಿದ್ದು ಇದನ್ನು TruthIndiaKannada ರಿವರ್ಸ್ ಸರ್ಚ್ ನಡೆಸಿದಾಗ 2015ರಲ್ಲಿ ಈ ಫೋಟೋ ಅಂತರ್ಜಾಲದಲ್ಲಿ ಇರುವುದು ತಿಳಿದು ಬರುತ್ತದೆ.
ಯಾವುದೇ ಸಂಗತಿಯ ಸತ್ಯಾಸತ್ಯತೆಯನ್ನು ತಿಳಿಯುವ ಆಸಕ್ತಿಗಿಂತಲೂ ಗುಂಪುಗುಳಿತನದಲ್ಲಿ ಹಿಂದೆ ಮುಂದೆ ನೋಡದೇ ಬೇರೆಯವರು ಹೇಳಿದ್ದಕ್ಕೆ ತಲೆದೂಗುವ, ಬೇರೆಯವರು ಕಳಿಸಿದ್ದನ್ನು ಕಣ್ಮುಚ್ಚಿಕೊಂಡು ಇತರರಿಗೆ ಕಳಿಸುವ ಈ ಸಾಮಾಜಿಕ ಮಾದ್ಯಮ ಯುಗದಲ್ಲಿ ಸತ್ಯ, ವಸ್ತುನಿಷ್ಟತೆ ಯಾರಿಗೆ ಬೇಕು?