ಪಾಕಿಸ್ತಾನ ಪ್ರೇರಿತ ಉಗ್ರರು ಫೆ. 14ರಂದು ಪುಲ್ವಾಮಾದಲ್ಲಿ ನಡೆಸಿದ ಬಾಂಬ್ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆ ಫೆ. 26ರಂದು ನಡೆಸಿದ ಭಯೋತ್ಪಾದನಾ ವಿರೋಧಿ ವಾಯು ದಾಳಿಗಳು ಎರಡೂ ದೇಶಗಳ ಮಧ್ಯೆ ಉದ್ವಿಗ್ನತೆ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪೆಯೋ ತುರ್ತು ಹೇಳಿಕೆ ನೀಡಿದ್ದಾರೆ.
ಭಾರತವು ನಡೆಸಿರುವ ಪ್ರತಿದಾಳಿಯ ಸಂಬಂಧ ಭಾರತದ ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಷಿ ಜತೆ ಪಾಂಪೆಯೋ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ. ಅಮೆರಿಕದೊಂದಿಗಿನ ಭದ್ರತಾ ಒಪ್ಪಂದಕ್ಕೆ ಭಾರತ ಪ್ರಾಧಾನ್ಯತೆ ನೀಡಬೇಕಿರುವ ಕುರಿತು , ಶಾಂತಿ ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಕಾಪಾಡಬೇಕಾದ ಗುರಿಯನ್ನು ಹೊಂದಿರುವ ಕುರಿತು ಮಾತಾಡಿರುವುದಾಗಿ ಅವರು ತಿಳಿಸಿದ್ದಾರೆ.
ಅದೇ ರೀತಿಯಲ್ಲಿ ಪಾಕಿಸ್ತಾನವು ಯಾವುದೇ ಸೇನಾ ದಾಳಿ ನಡೆಸಕೂಡದು ಎಂದು ತಾಕೀತು ಮಾಡಿರುವ ಅಮೆರಿಕ, ಈಗ ನಡೆದಿರುವ ದಾಳಿಯಿಂದಾಗಿ ಉಲ್ಭಣಿಸಿರುವ ಸದ್ಯದ ಆತಂಕಕಾರಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಹೇಳಿರುವುದಾಗಿ ಪಾಫೆಯೋ ತಿಳಿಸಿದ್ದಾರೆ. ‘ಸೇನಾ ಕಾರ್ಯಾಚರಣೆಗಳನ್ನು ತಡೆಯಿರಿ ಮತ್ತು ನಿಮ್ಮದೇ ಭೂಮಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿರುವ ಭಯೋತ್ಪಾದನಾ ತಂಡಗಳ ವಿರುದ್ಧ ಶೀಘ್ರವೇ ಗಂಭೀರ ಕ್ರಮಕೈಗೊಳ್ಳಿ’ ಎಂದೂ ತಾಕೀತು ಮಾಡಿರುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಎರಡೂ ದೇಶಗಳೂ ಸಂಯಮದಿಂದಿರಲು ಅಮೆರಿಕ ಬಯಸುತ್ತದೆ ಮತ್ತೆ ಇನ್ನೆಂದೂ ಇಂಥಹ ದಾಳಿಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಎರಡೂ ದೇಶಗಳ ವಿದೇಶಾಂಗ ಸಚಿವರು ಮುಖಾಮುಖಿ ಚರ್ಚಿಸಿ ತಮ್ಮ ದೇಶಗಳ ಸೇನಾ ಕಾರ್ಯಾಚರಣೆಗಳನ್ನು ತಡೆಯಲು ಒಪ್ಪಂದ ಮಾಡಿಕೊಂಡರೆ ಒಳಿತು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪೆಯೋ ಸಲಹೆ ನೀಡಿದ್ದಾರೆ.