26 ಫೆಬ್ರುವರಿ 2019ರ ಮುಂಜಾನೆ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವ ಪ್ರಾಂತ್ಯದ ಬಾಲಾಕೋಟ್ ಬಳಿ ಭಾರತೀಯ ವಾಯುಪಡೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯಾಗಿರುವ ಜೈಶ್-ಇ-ಮೊಹಮದ್ (ಜೆಇಎಮ್) ನ ಅತಿ ದೊಡ್ಡ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಇದನ್ನು ಫುಲ್ವಾಮಾ ಹತ್ಯಾಕಾಂಡಕ್ಕೆ ಪ್ರತಿದಾಳಿ ಎಂದೇ ಹೇಳಲಾಗುತ್ತಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆಯವರ ಪ್ರಕಾರ ಈ ವಾಯುದಾಳಿಯು ಶಿಬಿರದೊಳಗಿದ್ದ ನೂರಾರು ಉಗ್ರಗಾಮಿಗಳನ್ನು ಮತ್ತವರ ತರಬೇತುದಾರರನ್ನು ಬಲಿ ತೆಗೆದುಕೊಂಡಿದೆ. ಈ ವರೆಗೂ ದಾಳಿಯಲ್ಲಿ ಹತರಾದವರ ನಿಖರ ಮಾಹಿತಿಗಳು ಅಧಿಕೃತವಾಗಿ ಲಭ್ಯವಾಗಿಲ್ಲ.
ದಾಳಿಯನ್ನು ಸ್ಥಳೀಯ ನಿವಾಸಿಗಳು ಮತ್ತು ಗ್ರಾಮಸ್ಥರು ಅನುಭವಿಸಿದ್ದು, ಕಂಡಿದ್ದು ಹೇಗೆ ಎಂಬುದರ ಬಗ್ಗೆ ಕೆಲವು ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು ಮಾಡಿರುವ ವರದಿಯನ್ನಾಧರಿಸಿ ಈ ಲೇಖನ.
ರಾಯ್ಟರ್ಸ್ ಮತ್ತು ಬಿಬಿಸಿ ಸುದ್ದಿ ಸಂಸ್ಥೆಗಳು ಈ ವಾಯುದಾಳಿ ನಡೆದ ಕೆಲ ಹೊತ್ತಿನಲ್ಲೇ ಸ್ಥಳೀಯರನ್ನು ಮಾತನಾಡಿಸಿ ವರದಿ ದಾಖಲಿಸಿದ್ದವು. ಮೊಹಮದ್ ಆದಿಲ್ ಎಂಬ ಪ್ರತ್ಯಕ್ಷದರ್ಶಿ ಬಿಬಿಸಿ ಯ ಜೊತೆ ಹಂಚಿಕೊಳ್ಳುವಂತೆ, “ನನ್ನ ಮನೆಯ ಸಮೀಪವೇ ಇದ್ದ ಮನೆಗಳು ದಾಳಿಯ ಹೊಡೆತಕ್ಕೆ ಸಿಕ್ಕಿದವು. ಕನಿಷ್ಟ ಒಬ್ಬ ವ್ಯಕ್ತಿಗಾದರೂ ಪೆಟ್ಟಾಯಿತು. ನಾವು ಮೊದಲು ಅದನ್ನು ಭೂಕಂಪನವೆಂದೇ ತಿಳಿದೆವು. ಅದು ಬಹಳ ಭಯಾನಕವಾಗಿತ್ತು. ವಿಪರೀತ ಸದ್ದು ಕೇಳಿಸಿದ 5-10 ನಿಮಿಷಗಳ ನಂತರ ಒಂದು ಸ್ಫೋಟವಾಯಿತು. ರಾತ್ರಿಯಿಡೀ ನಾವು ನಿದ್ರಿಸಲಿಲ್ಲ. ಒಂದೇ ಬಾರಿ 5 ಸ್ಫೋಟಗಳಾದವು.” “ಯಾರೋ ಬಂದೂಕಿನಿಂದ ಗುಂಡು ಹಾರಿಸಿದಂತೆ ಅನಿಸಿತು. ಮೂರು ಬಾರಿ ಸದ್ದು ಕೇಳಿಸಿತು. ಆನಂತರ ನಿಶ್ಯಬ್ದ ಆವರಿಸಿತು” ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ವಾಜಿದ್ ಶಾ ಬಿಬಿಸಿಯ ಜೊತೆ ಮಾತನಾಡಿರುವುದಾಗಿ ವರದಿಯಾಗಿದೆ.
ಹೆಸರು ಹೇಳಲಿಚ್ಛಿಸದ ಸ್ಥಳೀಯ ನಿವಾಸಿಯೊಬ್ಬರು ತಿಳಿಸುವಂತೆ, “ನಾನು ಈ ಪ್ರದೇಶದವನೇ ಆಗಿದ್ದೇನೆ. ಅಲ್ಲಿ ಖಂಡಿತವಾಗಿಯೂ ತರಬೇತಿ ಶಿಬಿರವೊಂದು ನಡೆಯುತ್ತಿದೆ. ಜೈಶ್ ನವರೇ ಅದನ್ನು ನಡೆಸುತ್ತಿರುವುದು ಎಂಬುದೂ ನನಗೆ ಗೊತ್ತಿದೆ. ಈ ಪ್ರದೇಶದಲ್ಲಿ ಉಗ್ರಗಾಮಿಗಳು ಹಲವು ವರ್ಷಗಳಿಂದಲೂ ಸಕ್ರಿಯವಾಗಿದ್ದಾರೆ. ಈ ಶಿಬಿರವನ್ನು ಅನೇಕ ವರ್ಷಗಳ ಹಿಂದೆ ಮದರಸಾ ಆಗಿ ಪರಿವರ್ತಿಸಲಾಗಿದೆ. ಆದರೆ ಅದರ ಸಮೀಪಕ್ಕೆ ಯಾರೊಬ್ಬರನ್ನೂ ಸುಳಿಯಲು ಬಿಡುವುದಿಲ್ಲ. ಯಾವುದೇ ಕ್ಷಣದಲ್ಲೂ ಸಾಕಷ್ಟು ವಿದ್ಯಾರ್ಥಿಗಳು ಈ ಮದರಸಾದಲ್ಲಿರುತ್ತಾರೆ.”
ಭಾರತದ ವಾಯುಪಡೆಗಳಿಂದ ದಾಳಿ ನಡೆದ ಜಾಬಾ ಗುಡ್ಡದ ಬಳಿ ವಾಸವಾಗಿರುವ ಸುಮಾರು 25 ವರ್ಷದ ಗ್ರಾಮಸ್ಥ ಮೊಹಮದ್ ಅಜ್ಮಲ್ ನ ಪ್ರಕಾರ, “ಬೆಳಗಿನ ಜಾವಾ 3 ಕ್ಕೂ ಮೊದಲೇ ಒಂದರ ಮೇಲೊಂದರಂತೆ ನಾಲ್ಕು ಬಾರಿ ಜೋರಾದ ಸದ್ದು ಕೇಳಿಸಿತು. ನಮಗೆ ಆಗ ಏನಾಗಿದೆ ಎಂದು ತಿಳಿಯಲಿಲ್ಲ. ಅದು ದಾಳಿ ಎಂದು ಬೆಳಿಗ್ಗೆಯೇ ನಮಗೆ ಗೊತ್ತಾಗಿದ್ದು. ಮರಗಳು ಉರುಳುವುದು ಕಾಣಿಸಿತು. ಒಂದು ಮನೆಗೆ ಹಾನಿಯಾಗಿತ್ತು ಮತ್ತು ಬಾಂಬುಗಳು ಬಿದ್ದ ಜಾಗದಲ್ಲಿ 4 ಕುಳಿಗಳನ್ನು ಕಂಡೆವು”
ಪಾಕಿಸ್ತಾನದ ಬೃಹತ್ ಪ್ರಾಂತ್ಯಗಳ ಪೈಕಿ ಒಂದಾದ ಖೈಬರ್ ಪಖ್ತುನ್ಖ್ವ ದ ಗುಡ್ಡಗಾಡು ಪ್ರದೇಶದ ಅಡವಿಯೊಳಗೆ ಭಾರತದ ಗಡಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಬಾಲಾಕೋಟ್ ಪಟ್ಟಣವು 2005ರಲ್ಲಿ ಭಾರೀ ಪ್ರಮಾಣದ ಭೂಕಂಪದಿಂದ ತತ್ತರಿಸಿ ಹೋಗಿತ್ತು. 46 ಹರೆಯದ ಕೃಷಿಕ ಫಿದಾ ಹುಸ್ಸೇನ್ ಶಾ, ತಾನು ಮತ್ತು ಇತರ ಗ್ರಾಮಸ್ಥರು, ಭಾರತದ ಆಯುಧಗಳಿಂದಾಗಿ ಸೀಳುಬಿಟ್ಟಿದ್ದ ಬೆಟ್ಟದ ಮೇಲಿನ ಪೈನ್ ಮರಗಳನ್ನು ಮಾತ್ರ ಕಂಡಿದ್ದಾಗಿ ಹೇಳಿದ್ದಾನೆ. ಅಲ್ಲದೇ ಬಾಂಬೊಂದು ಕಿಟಕಿಯನ್ನು ಸೀಳಿ ತನ್ನ ಮನೆಯೊಳಗೆ ಮಲಗಿದ್ದ ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯಲ್ಲೂ ಪ್ರಾಣಹಾನಿ ಸಂಭವಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂಬುದು ಬಾಲಾಕೋಟ್ ಸ್ಥಳೀಯರ ಹೇಳಿಕೆ.
ಗ್ರಾಮಸ್ಥರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳುವುದನ್ನೆಲ್ಲಾ ವಿಶ್ಲೇಷಣೆಗೆ ಒಳಪಡಿಸಿದರೆ ಭಾರತ ನಡೆಸಿದ ವೈಮಾನಿಕ ದಾಳಿ ತನ್ನ ಗುರಿಯನ್ನು ತಲುಪುವಲ್ಲಿ ವಿಫಲವಾಗಿದ್ದು, ಬಾಂಬುಗಳು ಮದರಸಾದಿಂದ ಸುಮಾರು ಒಂದು ಕಿ.ಮೀ. ಹಿಂದೆಯೇ ಸ್ಫೋಟಗೊಂಡಿವೆ ಎಂಬುದಾಗಿ ರಾಯ್ಟರ್ಸ್ ವರದಿ ಮಾಡಿದೆ. ದಾಳಿ ನಡೆದು ನೂರಾರು ಉಗ್ರರ ಮತ್ತು ಅವರ ತರಬೇತುದಾರರ ಬಲಿ ಪಡೆಯಲಾಗಿದೆ ಎಂದು ಭಾರತ ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡುತ್ತಿದ್ದಾಗ್ಯೂ, ಬಲಿಯಾಗಿದ್ದಾರೆ ಎನ್ನಲಾದ ಉಗ್ರರ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲದಿರುವುದು ಮತ್ತು ಸ್ಥಳೀಯ ಗ್ರಾಮಸ್ಥರ, ಪ್ರತ್ಯಕ್ಷದರ್ಶಿಗಳ ಖಚಿತ ಹೇಳಿಕೆಗಳು ಹಲವು ಅನುಮಾನಗಳಿಗೆ ದಾರಿ ಮಾಡಿಕೊಡಲು ಕಾರಣವಾಗಿವೆ. ಭಾರತ ಸರ್ಕಾರ ಬಾಲಾಕೋಟ್ ವಾಯುದಾಳಿಯ ಕುರಿತು ಅಧಿಕೃತ ಸಮಗ್ರವಾದ ವಿವರಣೆ ಬಿಡುಗಡೆ ಮಾಡಿ ಈ ಎಲ್ಲಾ ಸಂಶಯಗಳಿಗೆ ತೆರೆ ಎಳೆಯಬೇಕಿದೆ, ಭಾರತೀಯ ಯೋಧರ ನಿಃಸ್ವಾರ್ಥ ಸೇವೆಯನ್ನು ಗೌರವಿಸಬೇಕಿದೆ.