ಮುಖ್ಯಾಂಶಗಳು
-
ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಯತ್ನಿಸಿದ ಪಾಕಿಸ್ತಾನದ ಒಂದು ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ
ಹೊಡೆದು ಉರುಳಿಸಿದೆ
-
ಪಾಕಿಸ್ತಾನದ ವಾಯುಪಡೆಗಳೊಂದಿಗಿನ ಸೆಣಸಾಟದಲ್ಲಿ ಭಾರತ ಒಂದು MIG ಯುದ್ಧ ವಿಮಾನವನ್ನು ಕಳೆದುಕೊಂಡಿದೆ
-
ಭಾರತೀಯ ವಾಯುಪಡೆಯ ಒಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ. ವಾಯುಪಡೆ ದೃಢೀಕರಣ.
ಪುಲ್ವಾಮಾ ಉಗ್ರ ದಾಳಿಗೆ ಪ್ರತಿಯಾಗಿ ಫೆ 26ರ ಮುಂಜಾನೆ ಭಾರತೀಯ ವಾಯುಪಡೆಯು ಪಾಕಿಸ್ತಾನದ ಗಡಿಭಾಗದ ಬಾಲಕೋಟ್ನಲ್ಲಿರುವ ಜೈಶ್ – ಎ – ಮೊಹಮದ್ ಉಗ್ರರ ತರಬೇತಿ ನೆಲೆಯನ್ನು ಗುರಿಯಾಗಿಸಿ ಬಾಂಬ್ ದಾಳಿಸಿತ್ತು. ವಾಯುಪಡೆಯ ಮಿರಾಜ್ 2000 ಯುದ್ಧವಿಮಾನಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದವು ಎಂದು ಸೇನಾ ಮೂಲಗಳು ತಿಳಿಸಿದ್ದವು. ಇದು ಸೇನಾ ದಾಳಿಯಲ್ಲ, ಉಗ್ರರನ್ನು ಗುರಿಯಾಗಿಸಿದ ಪ್ರತಿದಾಳಿ ಎಂದು ಭಾರತವು ಸ್ಪಷ್ಟೀಕರಣ ನೀಡಿತ್ತು. ಇದರ ನಂತರ ಪಾಕಿಸ್ತಾನ ಸರ್ಕಾರ ಮತ್ತು ಸೇನೆಗಳು ತಾವು ಸಹ ಇದಕ್ಕೆ ಪ್ರತಿಕ್ರಿಯಿಸುವುದಾಗಿ ಘೋಷಿಸಿತ್ತು. ಇದರ ತರುವಾಯ ಇಂದು ಬೆಳಗಿನಿಂದಲೂ ಪಾಕಿಸ್ತಾನ ಮತ್ತು ಭಾರತ ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚತೊಡಗಿದೆ.
ಇಂದು ಮುಂಜಾನೆ ಭಾರತದ ಜಮ್ಮು ಕಾಶ್ಮೀರದಲ್ಲಿ ಭಾರತದ ಯುದ್ಧ ವಿಮಾನವೊಂದು ಪತನಗೊಂಡಿದ್ದು, ಇದು ಸಂಭವಿಸಿರುವುದು ವಿಮಾನ ಅಪಘಾತದಿಂದ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಭಾರತದ ವಾಯುಪಡೆ ಬಾರತ ಗಡಿಯೊಳಕ್ಕೆ ಪ್ರವೇಶಿಸಲು ಯತ್ನಿಸಿದ ಪಾಕಿಸ್ತಾನದ ಒಂದು ಯುದ್ಧ ವಿಮಾನವನ್ನು ಹೊಡೆದು ಉರುಳಿಸಿದೆ ಎಂದು ತಿಳಿಸಿದೆ. ಪಾಕಿಸ್ತಾನವು ತಾನೂ ಎರಡು ಭಾರತರ ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಿರುವುದಾಗಿ ಹೇಳಿತ್ತು. ಆದರೆ ಪಾಕಿಸ್ತಾನದ ವಾಯುಪಡೆಗಳೊಂದಿಗಿನ ಸೆಣಸಾಟದಲ್ಲಿ ಭಾರತ ಒಂದು ಮಿಗ್ ವಿಮಾನವನ್ನು ಕಳೆದುಕೊಂಡಿದೆ ಎಂದು ವಿದೇಶಾಂಗ ವ್ಯವಹಾರ ಇಲಾಖೆ ದೃಢಪಡಿಸಿದೆ.
ಪಾಕಿಸ್ತಾನಿ ವಾಯುಪಡೆಯು ತಾನು ಹೊಡೆದುರುಳಿಸಿರುವ ಯುದ್ಧ ವಿಮಾನಗಳಲ್ಲಿ ಇಬ್ಬರು ಭಾರತೀಯ ಪೈಲಟ್ಗಳು ಮೃತಪಟ್ಟಿದ್ದು ಒಬ್ಬ ಪೈಲಟ್ನನ್ನು ಬಂಧಿಸಿರುವುದಾಗಿ ತಿಳಿಸಿದೆ. ಈ ಕುರಿತು ಇಂದು ಬೆಳಿಗ್ಗೆ ಪಾಕಿಸ್ತಾನದ ಸೇನಾ ವಕ್ತಾರ ಅಸೀಫ್ ಗಫೂರ್ ಟ್ವೀಟ್ ಮಾಡಿದ್ದರು. ಇದಾದ ತರುವಾಯ ಭಾರತದ ಪೈಲಟ್ ಒಬ್ಬನನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಒಂದನ್ನು ಪಾಕಿಸ್ತಾನದ ವಾಯುಸೇನೆಗೆ ಸಂಬಂಧಿಸಿದ ಫೇಸ್ಬುಕ್ ಪುಟವೊಂದರಲ್ಲಿ ಹಾಕಲಾಗಿದೆ. ಇದೇ ವಿಡಿಯೋವನ್ನು ಹಲವಾರು ಪಾಕಿಸ್ತಾನಿಯರು ಯೂಟ್ಯೂಬ್ಗಳಲ್ಲಿಯೂ ಹಾಕಿರುವುದನ್ನು ಕಾಣಬಹುದಾಗಿದೆ.
ವಿಡಿಯೋದಲ್ಲಿ ಏನಿದೆ?
ಪಾಕಿಸ್ತಾನದ ವಾಯುಪಡೆಯ ಪಿಎಎಫ್ ಶೇರ್ದಿಲ್ಸ್ ವಿಂಗ್ ನ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿರುವ ಈ ವಿಡಿಯೋದಲ್ಲಿ ತನ್ನ ಹೆಸರು ವಿಂಗ್ ಕಮಾಂಡರ್ ಅಭಿನಂದನ್ ಎಂದು ಹೇಳಿಕೊಂಡ ವ್ಯಕ್ತಿಯನ್ನು ಸೇನಾಧಿಕಾರಿಗಳು ವಿಚಾರಣೆ ನಡೆಸುತ್ತಿರುವುದು ದಾಖಲಾಗಿದೆ.
‘ನನ್ನ ಹೆಸರು ವಿಂಗ್ ಕಮಾಂಡರ್ ಅಭಿನಂದನ್, ಸರ್ವೀಸ್ ನಂಬರ್ 27981, ನಾನು ಭಾರತೀಯ ವಾಯುಪಡೆಯ ಪೈಲಟ್ ‘ಎಂದು ತಿಳಿಸುವ ವ್ಯಕ್ತಿಯನ್ನು ಹೆಚ್ಚಿನ ಮಾಹಿತಿ ಕೇಳಲಾಗಿ, ‘ಕ್ಷಮಿಸಿ ಸರ್, ನಾನು ಇಷ್ಟನ್ನು ಮಾತ್ರ ಹೇಳಬಹುದಾಗಿದೆ” ಎಂದು ತಿಳಿಸುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ವ್ಯಕ್ತಿ ಹೇಳುವ ಸೇವಾ ಸಂಖ್ಯೆಯನ್ನು ಭಾರತ್ ರಕ್ಷಾ ಜಾಲತಾಣದಲ್ಲಿ ಹುಡುಕಿದಾಗ ಕೆಳಕಂಡ ಮಾಹಿತಿ ಲಭ್ಯವಾಗಿದೆ.
ನಮ್ಮ ಒಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ: ಭಾರತದ ಹೇಳಿಕೆ
ವಿಂಗ್ ಕಮಾಂಡರ್ ಅಭಿನಂದನ್ ಎಂಬುವವರನ್ನು ತಾವು ಬಂಧಿಸಿದ್ದೇವೆ ಎನ್ನುವ ಪಾಕಿಸ್ತಾನದ ಹೇಳಿಕೆಯ ಕುರಿತು ತೀವ್ರ ಗೊಂದಲಗಳು ಏರ್ಪಟ್ಟಿರುವಂತೆಯೇ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಮತ್ತು ವಾಯುಪಡೆ ನಡೆಸಿದ ಜಂಟಿ ಸುದ್ದಿಗೋಷ್ಠಿಯ ಹೇಳಿಕೆ ಹೊರಬಂದಿದೆ. ಭಾರತೀಯ ವಾಯುಪಡೆಯ ಒಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
. ಆದರೆ ಆ ಪೈಲಟ್ ಪಾಕಿಸ್ತಾನವು ವೀಡಿಯೋದಲ್ಲಿ ತೋರಿಸಿರುವ ವ್ಯಕ್ತಿಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
#WATCH Raveesh Kumar, MEA: One Pakistan Air Force fighter aircraft was shot down by Indian Air Force. In this engagement, we have lost one MiG 21. Pilot is missing in action. Pakistan claims he is in their custody. We are ascertaining the facts. pic.twitter.com/Bm0nVChuzF
— ANI (@ANI) February 27, 2019
ಈ ನಡುವೆ ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳಲ್ಲಿ ‘ಪಾಕಿಸ್ತಾನ ಹೊಡೆದುರುಳಿಸಿದ ಭಾರತ ಯುದ್ಧ ವಿಮಾನ’ ಎಂಬ ಕಮೆಂಟಿನೊಂದಿಗೆ ಫೇಕ್ ಫೋಟೋಗಳು, ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿವೆ. 2016ರಲ್ಲಿ ಅಪಘಾತದಲ್ಲಿ ನೆಲಕ್ಕೆ ಬಿದ್ದಿದ್ದ ವಿಮಾನಗಳ ಚಿತ್ರಗಳನ್ನು ಪಾಕಿಸ್ತಾನ ಹೊಡೆದುರುಳಿಸಿದ ವಿಮಾನ ಎಂದು ಹಂಚಲಾಗುತ್ತಿದೆ. ಪಾಕಿಸ್ತಾನದ ಯುದ್ಧೋನ್ಮಾದಿಗಳು ಇಂತಹ ಫೇಕ್ ಫೊಟೋ, ವಿಡಿಯೋ ವೈರಲ್ ಮಾಡುವುದರಲ್ಲಿ ವಿಕೃತ ಖುಷಿ ಪಡೆಯುತ್ತಿದ್ದಾರೆ.