ಪುಲ್ವಾಮಾ ಉಗ್ರ ದಾಳಿ ನಡೆದು ದೇಶದ 42 ವೀರ ಯೋಧರು ಹುತಾತ್ಮರಾಧ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ಕಾರ್ಯಾರಣೆ ನಡೆಸಿ ಪಾಕಿಸ್ತಾನದ ಗಡಿಯಲ್ಲಿರುವ ಉಗ್ರರ ತರಬೇತಿ ನೆಲೆಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿತ್ತು. ಬುಧವಾರ ಬೆಳಿಗ್ಗೆ ಪಾಕಿಸ್ತಾನದ ಒಂದು ಎಫ್ -16 ಯುದ್ಧ ವಿಮಾನವನ್ನು ಭಾರತವು ಹೊಡೆದುರುಳಿಸಿದ್ದರೆ, ಭಾರತವು ಒಂದು ಮಿಗ್-21 ಯುದ್ಧ ವಿಮಾನವನ್ನು ಕಳೆದುಕೊಂಡಿದೆ. ಭಾರತದ ಒಬ್ಬ ಪೈಲಟ್ ಪಾಕಿಸ್ತಾನದ ವಶದಲ್ಲಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವಂತೆಯೇ ದೇಶದ ರಾಜಕೀಯ ರಂಗದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ.
ನವದೆಹಲಿ: ಭಾರತದ ಮತ್ತು ಪಾಕಿಸ್ತಾನದ ದಾಳಿ – ಪ್ರತಿದಾಳಿಗಳು ಹಾಗೂ ವೈಮಾನಿಕ ಗಡಿ ನಿಯಂತ್ರಣ ರೇಖೆ ದಾಟಿದ್ದ ಪಾಕಿಸ್ತಾನದ ನಡೆಯ ಬಗ್ಗೆ ಅವಲೋಕಿಸಿ, ಚರ್ಚಿಸಲು ದೇಶದ 21 ಪ್ರತಿಪಕ್ಷಗಳು ಬುಧವಾರ ಒಟ್ಟಾಗಿ ಸಭೆ ನಡೆಸಿದವು.
ಸಂಸತ್ ನ ಗ್ರಂಥಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ, ಬಿಜೆಪಿಯ ರಾಜಕೀಯ ನಡೆಯನ್ನು ಪ್ರತಿಪಕ್ಷಗಳು ಟೀಕಿಸಿದೆ. ಪುಲ್ವಾಮ ದಾಳಿಯಲ್ಲಿ ಮೃತಪಟ್ಟ ಯೋಧರ ಹೆಸರಿನಲ್ಲಿ ಕೇಸರಿ(ಬಿಜೆಪಿ) ಪಕ್ಷ ಪಡೆದುಕೊಳ್ಳುತ್ತಿರುವ ರಾಜಕೀಯ ಲಾಭವನ್ನು ಎಲ್ಲಾ ಪ್ರತಿಪಕ್ಷಗಳು ಒಟ್ಟಾಗಿ ಖಂಡಿಸಿದೆ.
ಜೈಷ್-ಇ-ಮೊಹಮ್ಮದ್ ಸಂಘಟನೆ ಭಾರತೀಯ ಸಿಪಿಆರ್ ಎಫ್ ಯೋಧರ ಮೇಲೆ ಪುಲ್ವಾಮದಲ್ಲಿ ನಡೆಸಿದ ಆತ್ಮಾಹುತಿ ದಾಳಿಯನ್ನು ಪ್ರತಿಪಕ್ಷಗಳು ಖಂಡಿಸಿದ್ದು, ಇದೇ ವೇಳೆ ಭಾರತದ ಸಶಸ್ತ್ರ ಪಡೆಗಳಿಗೆ ತಮ್ಮ ಬೆಂಬಲವನ್ನು ಸಾರಿವೆ.
ಫೆಬ್ರವರಿ 26ರಂದು ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯನ್ನು ಕೊಂಡಾಡಿದ ಪ್ರತಿಪಕ್ಷಗಳು, ಯೋಧರ ಕೆಚ್ಚೆದೆಯ ಧೈರ್ಯ ಹಾಗೂ ಸಾಹಸವನ್ನು ಪ್ರಶಂಶಿಸಿದೆ.
ಆದರೆ ಇಷ್ಟೆಲ್ಲಾ ಸಾಹಸ, ಧೈರ್ಯ, ಪರಾಕ್ರಮ ತೋರಿದ ಹಾಗೂ ಹುತಾತ್ಮರಾದ ಯೋಧರ ಹೆಸರಲ್ಲಿ ಕೇಂದ್ರದ ಆಡಳಿತ ಪಕ್ಷ ನಡೆಸುತ್ತಿರುವ ನೀಚ ರಾಜಕೀಯದ ವಿರುದ್ಧ ಎಲ್ಲಾ ಪಕ್ಷಗಳೂ ಕಿಡಿಕಾರಿದೆ. ಅಲ್ಲದೇ, ರಾಷ್ಟ್ರೀಯ ಭದ್ರತಾ ಮುಖ್ಯಸ್ಥರು ಇಂತಹ ಸಂಕುಚಿತ ಮನಸ್ಸಿನ ರಾಜಕೀಯಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ನಮ್ಮ ಪ್ರಜಾಪ್ರಭುತ್ವದಲ್ಲಿರುವಂತೆ ಸರ್ವ ಪಕ್ಷಗಳನ್ನು ಕರೆದು ಸಭೆ ನಡೆಸಿಲ್ಲದಿರುವುದು ವಿಷಾದನೀಯ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.
ನಮ್ಮ ಸೇನೆಯ ಕಾರ್ಯಾಚರಣೆ ಬಗ್ಗೆ ಹಾಗೂ ಯುದ್ಧ ವಿಮಾನ ನಾಶಗೊಂಡ ಬಗ್ಗೆ ಮಾಧ್ಯಮಗಳ ಮುಂದೆ ಬುಧವಾರ ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿತ್ತು. ಆದರೆ ಪ್ರಧಾನಿಗಳು ಇಂತಹ ವಿಷಯಗಳನ್ನು ಬಹಿರಂಗಪಡಿಸದೇ, ಎಲ್ಲಾ ರೀತಿಯ ಕ್ರಮವಹಿಸಿ ದೇಶದ ಸಾರ್ವಭೌಮತ್ವ, ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ತರದಂತೆ ಗೌಪ್ಯವಾಗಿಡಬೇಕಿತ್ತು ಎಂದು ಪ್ರತಿಪಕ್ಷಗಳು ಅಭಿಪ್ರಾಯಪಟ್ಟವು.
ಪುಲ್ವಾಮ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಪ್ರತಿಪಕ್ಷಗಳು ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಸದ್ಯದ ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ಬುಧವಾರ ಪಾಕಿಸ್ತಾನ ನಡೆಸಿದ ದಾಳಿಯನ್ನು ಖಂಡಿಸಿ ಇದು ಪಾಕಿಸ್ತಾನದ ದುಸ್ಸಾಹಸ ಎಂದು ಟೀಕಿಸಿದರು.
ಇಂದು ನಾಪತ್ತೆಯಾದ ವಾಯುಪಡೆಯ ಪೈಲಟ್ನ ಸುರಕ್ಷತೆ ಬಗ್ಗೆ ಇದೇ ವೇಳೆ ಪ್ರತಿಪಕ್ಷಗಳು ಬೇಸರ ವ್ಯಕ್ತಪಡಿಸಿದರು.
“ಯೋಧರ ಸಾವನ್ನು ಬಿಜೆಪಿ ತಮ್ಮ ಮತ ಗಳಿಕೆಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಭಯೋತ್ಪಾದನಾ ನಿಗ್ರಹದ ಅಗತ್ಯ ಕ್ರಮಕ್ಕೆ ದೇಶದ ಎಲ್ಲಾ ಪ್ರತಿಪಕ್ಷಗಳು ಆಡಳಿತ ಪಕ್ಷಕ್ಕೆ ಬೆಂಬಲ ನೀಡುತ್ತೇವೆ,” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದರು.
ಪುಲ್ವಾಮ ದಾಳಿಯ ನಂತರ ಪ್ರಧಾನಿ ಮೋದಿ ಹಾಗೂ ಅಮಿತ್ ಶಾರ ಭಾಷಣಗಳನ್ನು ಉಲ್ಲೇಖಿಸಿದ ಮಮತಾ, “ಮೋದಿ ಹಾಗೂ ಶಾ ಪ್ರತಿದಿನ ಹೇಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರೆ, ದೇಶದಲ್ಲಿ ಅವರೊಬ್ಬರೇ ದೇಶಭಕ್ತರು ನಾವೆಲ್ಲಾ ಏನು ಅಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ,” ಎಂದು ಕಿಡಿಕಾರಿದರು.
ಕಳೆದ ಐದು ವರ್ಷದಲ್ಲಿ ಬಿಜೆಪಿ ಸರ್ಕಾರ ಪಾಕಿಸ್ತಾವನ್ನು ತಡೆಯಲು ಯಾವ ಕ್ರಮ ಕೈಗೊಂಡಿದೆ?, ಪಾಕಿಸ್ತಾನ ಈ ರೀತಿ ವಿಧ್ವಂಸಕ ಕೃತ್ಯ ಎಸಗಲು ಹೇಗೆ ಅವಕಾಶ ಕೊಟ್ಟಿದ್ದೀರಾ? ಪಾಕಿಸ್ತಾನಕ್ಕೆ ಇಷ್ಟೊಂದು ಬೆಂಬಲ ಎಲ್ಲಿಂದ ಸಿಗುತ್ತಿದೆ?, ಸಂಸತ್ ಕಲಾಪ ಅಂತ್ಯಗೊಂಡ ಬೆನ್ನಲ್ಲೇ, ಲೋಕಸಭಾ ಚುನಾವಣೆ ಸಮೀಪದಲ್ಲಿರುವಾಗಲೇ ಏಕೆ ಇಂತಹ ಘಟನೆ ನಡೆಯಿತು? ಇದಕ್ಕೆ ಪ್ರಧಾನಿ ಮೋದಿ ಉತ್ತರಿಸಲಿ ಎಂದು ಮಮತಾ ಬ್ಯಾಬರ್ಜಿ ಪ್ರಶ್ನೆಗಳ ಸುರುಮಳೆಗೈದರು.
ಪ್ರತಿಪಕ್ಷಗಳ ಈ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಎ. ಕೆ ಆ್ಯಂಟನಿ, ಗುಲಾಂ ನಬಿ ಆಜಾದ್ ಮತ್ತು ಅಹಮದ್ ಪಟೇಲ್, ಅಲ್ಲದೇ ಇತರ ಪಕ್ಷಗಳ ಶರದ್ ಪವಾರ್ (ಎನ್ ಸಿಪಿ), ಚಂದ್ರಬಾಬು ನಾಯ್ಡು (ಟಿಡಿಪಿ), ಮಮತಾ ಬ್ಯಾನರ್ಜಿ (ಟಿಎಂಸಿ), ಶರದ್ ಯಾದವ್ (ಎಲ್ ಜೆಡಿ), ಟಿ. ಶಿವಾ (ಡಿಎಂಕೆ), ಸೀತಾರಾಂ ಯಚೂರಿ (ಸಿಪಿಐ-ಎಂ), ಸತೀಶ್ ಚಂದ್ರ ಮಿಶ್ರಾ(ಬಿಎಸ್ಪಿ), ಮಾನೋಜ್ ಝಾ(ಆರ್ ಜೆಡಿ), ಸಂಜಯ್ ಸಿಂಗ್ (ಎಎಪಿ), ಸುಧಾಕರ್ ರೆಡ್ಡಿ (ಸಿಪಿಐ), ಧನೀಶ್ ಅಲಿ (ಜೆಡಿ-ಎಸ್), ಶಿಬು ಸೊರೇನ್ (ಜೆಎಂಎಂ), ಉಪೇಂದ್ರ ಕುಶ್ವಾ(ಆರ್ ಎಲ್ ಎಸ್ ಪಿ), ಅಶೋಕ್ ಕುಮಾರ್ ಸಿಂಗ್ (ಜೆವಿಎಂ), ಜಿತನ್ ರಾಮ್ ಮಾಂಜಿ(ಎಚ್ಎಎಮ್), ಕೋದಂಡರಾಮ (ಟಿಜೆಎಸ್), ಕೆ.ಜಿ ಕಿನ್ಯೆ(ಎನ್ ಪಿಎಫ್), ಕೆ. ಜೋಸೆ ಮನಿ (ಕೆಸಿ-ಎಂ), ಪಿ.ಕೆ ಕುನ್ಹಾಲಿಕುಟ್ಟಿ (ಐಯುಎಂಎಲ್) ಮತ್ತು ರಾಜು ಶೆಟ್ಟಿ (ಸ್ವಾಮಿಮಾನಿ ಪಕ್ಷ) ದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.