ಭಾರತೀಯ ವಾಯುಪಡೆಯ ಮಿಗ್-21 ಯುದ್ಧವಿಮಾನದ ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಸೇನೆಯ ವಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನೆನ್ನೆ (ಬುಧವಾರ) ಪಾಕಿಸ್ತಾನದ ಸೇನಾ ಮೂಲಗಳು ಅಭಿನಂದನ್ ಅವರಿಗೆ ಸಂಬಂಧಿಸಿದ ಮೂರು ವಿಡಿಯೋ ತುಣುಕುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದವು.
ಮೊದಲು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಅಭಿನಂದನ್ ಅವರಿಂದ ಪ್ರಾಥಮಿಕ ಮಾಹಿತಿ ಪಡೆಯುತ್ತಿರುವ ದೃಶ್ಯವಿತ್ತು. ಎರಡನೆಯ ವಿಡಿಯೋದಲ್ಲಿ ಅಭಿನಂದನ್ ಅವರು ಮಿಗ್ ವಿಮಾನದಿಂದ ಕೆಳಗುರುಳಿದ ಸ್ಥಳದಿಂದ ಪಾಕಿಸ್ತಾನದ ಸೈನಿಕರು ಕರೆತರುತ್ತಿರುವ ದೃಶ್ಯವಿತ್ತು. ಈ ದೃಶ್ಯದಲ್ಲಿ ಸ್ಥಳೀಯ ಪಾಕಿಸ್ತಾನಿ ಉದ್ರಿಕ್ತ ಅನಾಗರಿಕರು ಅಭಿನಂದನ್ ಅವರ ಮೇಲೆ ಹಿಂಸೆ ನಡೆಸುವ, ಅವರಿಂದ ಅಭಿನಂದನ್ ಅವರನ್ನು ಪಾಕಿಸ್ತಾನದ ಸೇನಾ ಪಡೆಯ ಕ್ಯಾಪ್ಟನ್ ರಕ್ಷಿಸಿಕೊಂಡು, ಕಾರಿನಲ್ಲಿ ಕೂರಿಸಿ ಕರೆದುಕೊಂಡು ಹೋಗುವ ದೃಶ್ಯಗಳಿದ್ದವು. ಈ ಸಂದರ್ಭದಲ್ಲಿ ಅಭಿನಂದನ್ ಅವರ ಹಣೆಯಿಂದ ರಕ್ತ ಸೋರುವ ದೃಶ್ಯಗಳು ಸೆರೆಯಾಗಿದ್ದವು. ವೈರಲ್ ಆದ ಈ ದೃಶ್ಯಾವಳಿಗಳು ಅತ್ಯಂತ ನೋವು ತರಿಸುವಂತಿದ್ದವು.
ಮೂರನೆಯ ವಿಡಿಯೋದಲ್ಲಿ ಕೋಪೋದ್ರಿಕ್ತ ಜನಜಂಗುಳಿಯಿಂದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನದ ಸೇನೆಯವರು ರಕ್ಷಿಸಿ ಕರೆದುಕೊಂಡು ಹೋದ ನಂತರದಲ್ಲಿ ಕಚೇರಿಯೊಂದರಲ್ಲಿ ಅಭಿನಂದನ್ ಸಮಾಧಾನದಿಂದ ಚಹ ಹೀರುತ್ತಾ ಮಿಲಿಟರಿ ಮೇಜರ್ ಒಬ್ಬರ ಪ್ರಶ್ನೆಗಳಿಗೆ ಉತ್ತರಿಸುವ ದೃಶ್ಯಾವಳಿಯಿತ್ತು. ಈ ವೀಡಿಯೋದಲ್ಲಿ ತನ್ನನ್ನು ಕೋಪೋದ್ರಿಕ್ತ ಜನಜಂಗುಳಿಯಿಂದ ರಕ್ಷಿಸಿದ ಕ್ಯಾಪ್ಟನ್ ಮತ್ತು ನಂತರದಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಂಡ ಪಾಕಿಸ್ತಾನದ ಸೇನಾಧಿಕಾರಿಗಳ ಬಗ್ಗೆ ಅಭಿನಂದನ್ ಮೆಚ್ಚುಗೆ ಸೂಚಿಸುವ ಮಾತುಗಳನ್ನಾಡಿದ್ದರು.
ಈ ವಿಡಿಯೋವನ್ನು ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ ಟ್ವೀಟ್ ಮಾಡಿ, ‘ಭಾರತದ ಸೇನೆ ಒಬ್ಬ ಪೈಲಟ್ ನನ್ನು ಮಾತ್ರ ತನ್ನ ವಶದಲ್ಲಿ ಇರಿಸಿಕೊಂಡಿದೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮಿಲಿಟರಿ ಎಥಿಕ್ಸ್ ಪ್ರಕಾರ ನಡೆಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದರು.
ಈ ಮೂರೂ ವಿಡಿಯೋಗಳು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ವ್ಯಾಪಕವಾಗಿ ಹರಿದಾಡಿದ ನಂತರದಲ್ಲಿ ಭಾರತೀಯರು ತೀವ್ರವಾಗಿ ನೊಂದುಕೊಂಡಿದ್ದಾರೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ವಾಪಾಸು ಕರೆಸಿ ಎಂಬ ಅಭಿಯಾನವೂ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ.
ಅಭಿನಂದನ್ ವಾಪಾಸು ಬರುವ ಸಾಧ್ಯತೆ ಹೇಗೆ?
ವಿಂಗ್ ಕಮಾಂಡರ್ ಅಭಿನಂದನ್ ಈಗ ಪಾಕಿಸ್ತಾನದಲ್ಲಿರುವ ಭಾರತೀಯ ಯುದ್ಧಖೈದಿ. ಮೊದಲನೆಯದಾಗಿ ಎರಡು ದೇಶಗಳ ನಡುವೆ ನಡೆಯುವ ಸಶಸ್ತ್ರ ಸಂಘರ್ಷದ ಅವಧಿಯಲ್ಲಿ ಎದುರು ದೇಶದ ಸೈನಿಕ ಅಥವಾ ವ್ಯಕ್ತಿಯನ್ನು ಬಂಧಿಸುವ ದೇಶವು ಕೆಲವು ಅಂತರರಾಷ್ಟ್ರೀಯ ನಡಾವಳಿಗಳಿಗೆ ಬದ್ಧವಾಗಿರಬೇಕು. ಈ ನಡಾವಳಿಗಳನ್ನು ‘ಜಿನೆವಾ ಒಪ್ಪಂದ’ದ ಮೂಲಕ ಗುರುತಿಸಲಾಗುತ್ತದೆ.
ಜಿನೇವಾ ಒಪ್ಪಂದದ ಪ್ರಕಾರ ಸಶಸ್ತ್ರ ಸಂಘರ್ಷದ ವೇಳೆ ಬಂಧನಕ್ಕೊಳಗಾದ ವ್ಯಕ್ತಿಗಳನ್ನು:
-
ಹಿಂಸಿಸುವಂತಿಲ್ಲ ಅಥವಾ ಕೆಟ್ಟದಾಗಿ ನಡೆಸಿಕೊಳ್ಳುವಂತಿಲ್ಲ
-
ಅವರಿಂದ ಅವರ ಹೆಸರು, ಅವರ ಶ್ರೇಣಿ, ಜನ್ಮ ದಿನಾಂಕ ಮತ್ತು ಸೇವಾ ಸಂಖ್ಯೆ ಇಷ್ಟನ್ನು ಮಾತ್ರ ಪಡೆದುಕೊಳ್ಳಬಹುದು.
-
ಅವರಿಗೆ ಉತ್ತಮ ರೀತಿಯ ವಸತಿ ವ್ಯವಸ್ಥೆ ಮತ್ತು ಆಹಾರ ವ್ಯವಸ್ಥೆ ಕಲ್ಪಿಸಬೇಕು.
-
ಅವರನ್ನು ಯಾವುದೇ ಕಾರಣದಿಂದ ತಾರತಮ್ಯಕ್ಕೆ ಒಳಪಡಿಸುವಂತಿಲ್ಲ.
-
ಅವರಿಗೆ ತಮ್ಮ ಕುಟುಂಬದ ಸದಸ್ಯರನ್ನು ಸಂಪರ್ಕಿಸುವ ಹಕ್ಕಿರುತ್ತದೆ ಹಾಗೂ ಕುಟುಂಬದಿಂದ ಅಗತ್ಯ ಸಾಮಗ್ರಿಗಳನ್ನು ತರಿಸಿಕೊಳ್ಳಲು ಅವಕಾಶವಿರುತ್ತದೆ.
-
ರೆಡ್ ಕ್ರಾಸ್ ಸಂಸ್ಥೆಯು ಈ ಯುದ್ಧಖೈದಿಗಳನ್ನು ಭೇಟಿ ಮಾಡಿ ಅವರ ಪರಿಸ್ಥಿತಿಯನ್ನು ಅವಲೋಕಿಸುವ ಹಕ್ಕು ಪಡೆದಿರುತ್ತದೆ.
ಪಾಕಿಸ್ತಾನದದಲ್ಲಿ ಬಂಧಿಯಾಗಿರುವ ಅಭಿನಂದನ್ ವಿಷಯದಲ್ಲಿ ಪಾಕಿಸ್ತಾನವು ಜಿನೇವಾ ಒಪ್ಪಂದದ ಪ್ರಕಾರ ನಡೆಸಿಕೊಳ್ಳಲಾಗಿದೆಯೇ ಎಂಬ ವಿಷಯದಲ್ಲಿ ವಾದ ವಿವಾದಗಳು ನಡೆದಿವೆ. ಅವರನ್ನು ಬಂಧಿಸಿದ ಸ್ಥಳದಲ್ಲಿ ಉದ್ರಿಕ್ತ ಜನರಿಂದಾಗಿ ಅಭಿನಂದನ್ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾಗಿರುವುದು ನೆನ್ನೆ ಕಂಡುಬಂದಿದೆ. ಆದರೆ ನೆನ್ನೆ ಬಿಡುಗಡೆಯಾದ ಕೊನೆಯ ವಿಡಿಯೋವನ್ನು ನಂಬುವುದಾದರೆ, ಅಲ್ಲಿಂದ ಅವರನ್ನು ರಕ್ಷಿಸಿಕೊಂಡು ಸೇನಾಧಿಕಾರಿಗಳು ಕರೆತಂದ ನಂತರದಲ್ಲಿ ಅವರನ್ನು ಉತ್ತಮವಾಗಿ ನಡೆಸಿಕೊಳ್ಳಲಾಗಿದೆ, ಜಿನೆವಾ ಒಪ್ಪಂದದಂತೆ ನಡೆಸಿಕೊಳ್ಳಲಾಗಿದೆ.
ಮುಂದೇನು?
ಈಗ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಕರೆತರುವ ವಿಚಾರ ಮುನ್ನೆಲೆಗೆ ಬಂದಿದೆ. ಈ ವಿಷಯದಲ್ಲಿ ಉಭಯ ದೇಶಗಳ ರಾಜಕೀಯ ಪ್ರತಿನಿಧಿಗಳು ಮುತ್ಸದ್ಧಿತನ ತೋರಬೇಕಿದೆ.
ಈ ಹಿಂದೆ 1999ರಲ್ಲಿ ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿಯೂ ಇಂತಹುದೇ ಘಟನೆ ನಡೆದಿತ್ತು. ಮೇ 27, 1999ರಂದು, 26ರ ಹರೆಯದ ಪೈಲಟ್ ನಚಿಕೇತ ಪಾಕಿಸ್ತಾನಿ ಸೇನೆಯ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಅವರು ಚಾಲನೆ ಮಾಡುತ್ತಿದ್ದ ಮಿಗ್ -27 ಯುದ್ಧವಿಮಾನದ ಇಂಜಿನ್ನು ಇದ್ದಕ್ಕಿದ್ದಂತೆ ಕೈ ಕೊಟ್ಟು, ಶತ್ರುಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರನ್ನು ಪಾಕಿಸ್ತಾನಿ ಸೈನಿಕರ ಗುಂಡಿನಿಂದ ರಕ್ಷಿಸಿದ್ದು ಪಾಕಿಸ್ತಾನದ ಒಬ್ಬ ಹಿರಿಯ ಸೇನಾಧಿಕಾರಿಯೇ ಆಗಿದ್ದರು. ಆದರೆ ಮುಂದಿನ ಕೆಲವು ದಿನಗಳಲ್ಲಿ ಅವರನ್ನು ವಿಚಾರಣೆ ನಡೆಸಿದ ಕೆಳಹಂತದ ಅಧಿಕಾರಿಗಳು ಮಾನಸಿಕ, ದೈಹಿಕ ಹಿಂಸೆ ನೀಡಿದ್ದರು ಎಂದು ನಚಿಕೇತ್ ನಂತರದಲ್ಲಿ ತಿಳಿಸಿದ್ದರು.
ನಚಿಕೇತ್ ಅವರ ವಿಚಾರಣೆ ಮತ್ತು ಬಿಡುಗಡೆ
1999ರಲ್ಲಿ ಪಾಕಿಸ್ತಾನ ಬಂಧಿಸಿದ್ದ ನಚಿಕೇತ್ ಅವರನ್ನು ಪಾಕಿಸ್ತಾನದ ವಾಯುಪಡೆಯ ಅಂದಿನ ನಿರ್ದೇಶಕ, ಗ್ರೂಪ್ ಕ್ಯಾಪ್ಟನ್ ಕೈಸರ್ ತೂಫಾಯಿಲ್ ಎಂಬುವವರು ವಿಚಾರಣೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಇದಕ್ಕೆ ಸಮಾನಾಂತರವಾಗಿ ಭಾರತದ ವಿದೇಶಾಂಗ ಸಚಿವರಾಗಿದ್ದ ಜಸ್ವಂತ್ ಸಿಂಗ್ ಮತ್ತು ಪಾಕಿಸ್ತಾನದ ವಿದೇಶಾಂಗ್ ಸಚಿವರಾಗಿದ್ದ ಸರ್ತಾಜ್ ಅಜೀಝ್ ಅವರ ನಡುವೆ ಬಿಟ್ಟೂಬಿಡದ ಮಾತುಕತೆಗಳು ನಡೆಸಿದ್ದವು. ಅಂತೂ ಕೊನೆಗೆ ಎಂಟು ದಿನಗಳ ತರುವಾಯ ಜೂನ್ 03, 1999ರಂದು ನಚಿಕೇತ್ ಅವರನ್ನು ಪಾಕಿಸ್ತಾನದ ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಂಸ್ಥೆಗೆ ಅಲ್ಲಿನ ಸೇನೆ ಹಸ್ತಾಂತರಗೊಳಿಸಿತ್ತು. ರೆಡ್ ಕ್ರಾಸ್ ಸಂಸ್ಥೆಯು ವಾಘಾ-ಅತ್ತಾರಿ ಗಡಿಯ ಮೂಲಕ ಭಾರತದೊಳಕ್ಕೆ ತಂದು ಬಿಟ್ಟಿತ್ತು.
ಅಂದು ಭಾರತೀಯ ವಾಯುಪಡೆಯ ಪೈಲಟ್ ನಚಿಕೇತ್ ಅವರನ್ನು ಭಾರತ ಹಿಂದಕ್ಕೆ ಪಡೆಯುವಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವರ ಪ್ರಯತ್ನ ಮೆಚ್ಚುಗೆಗೆ ಒಳಗಾಗಿತ್ತು. ಆದರೆ ಇದೇ ಸಂದರ್ಭದಲ್ಲಿ ನಚಿಕೇತ್ ಅವರ ಬಿಡುಗಡೆಗೆ ಸಾಕಷ್ಟು ಶ್ರಮಿಸಿದ್ದ ಅಂದಿನ ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಪರ್ವೇಜ್ ಮೆಹದಿ ಖುರೇಶಿ ಅವರ ಪ್ರಯತ್ನ ಇರದಿರುತ್ತಿದ್ದರೆ ಅದು ಸಾಧ್ಯವಾಗುತ್ತಿದ್ದುದು ಅನುಮಾನ.
1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಇದೇ ಪರ್ವೇಜ್ ಮೆಹದಿ ಖುರೇಶಿ ಅವರು ಭಾರತದ ಯುದ್ಧ ಖೈದಿಯಾಗಿದ್ದು ಅವರನ್ನು ಅಂದಿನ ಭಾರತೀಯ ಸೇನೆಯೆ ಲೆಫ್ಟಿನೆಂಟ್ ಜನರಲ್ ಎಚ್.ಎಸ್.ಪನಾಗ್ ಅವರು ರಕ್ಷಿಸಿದ್ದರು. ಇವರು ಸಿಖ್ ರೆಜಿಮೆಂಟಿನ ನಾಲ್ಕನೆಯ ಬೆಟಾಲಿಯನ್ ಅಧಿಕಾರಿಯಾಗಿದ್ದರು.
ಮತ್ತೆ ಅಭಿನಂದನ್ ವಿಷಯಕ್ಕೆ ಬರುವುದಾದರೆ, ಈಗಾಗಲೇ ಭಾರತವು ತನ್ನ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಲು ಅಗ್ರಹಪಡಿಸಿದೆ. ಆದರೆ ಇದಕ್ಕೆ ಪಾಕಿಸ್ತಾನ ಒಪ್ಪಿಕೊಂಡುಬಿಡುವ ಸಾಧ್ಯತೆ ಇದೆಯೇ? ಈ ಬಗ್ಗೆ ಅನುಮಾನವಿಟ್ಟುಕೊಂಡೇ ಹಿಂದೆ 1999ರಲ್ಲಿ ನಡೆಸಿದಂತೆ, ಕೂಡಲೇ ಎರಡೂ ದೇಶಗಳ ವಿದೇಶಾಂಗ ಸಚಿವರು ತ್ವರಿತಗತಿಯಲ್ಲಿ ಮಾತುಕತೆ ಆರಂಭಿಸಬೇಕಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಒತ್ತಡ ಸಾಧ್ಯವಾಗಬೇಕಿದೆ. ಇದೇ ಸಂದರ್ಭದಲ್ಲಿ ಅಭಿನಂದನ್ ಅವರ ಬಿಡುಗಡೆ ಆಗುವುದರ ಒಳಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕಿದೆ. ಈ ವಿಷಯದಲ್ಲಿ ಎರಡೂ ದೇಶಗಳ ಸರ್ಕಾರಗಳು ಮತ್ತು ಸೇನೆಗಳು ಹೆಚ್ಚು ಹೊಣೆಗಾರಿಕೆ ಹೊಂದಿವೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ವಿಧಿಬದ್ಧವಾಗಿ ಭಾರತಕ್ಕೆ ಮರಳಿಸುವ ವಿಷಯದಲ್ಲಿ ಪಾಕಿಸ್ತಾನವೇನಾದರೂ ತಪ್ಪೆಸಗಿದರೆ ಅದರ ಪರಿಣಾಮಗಳು ಭೀಕರವಾಗಿ ಪರಿಗಣಿಸಲಿವೆ ಎಂಬ ಎಚ್ಚರಿಕೆಯನ್ನೂ ಭಾರತ ನೀಡಬೇಕಿದೆ. ಎರಡೂ ದೇಶಗಳು ಈ ಸೂಕ್ಷ್ಮ ಸಂದರ್ಭದಲ್ಲಿ ಅತ್ಯಂತ ಶಾಂತಿ, ಸಂಯಮದಿಂದ ವರ್ತಿಸುತ್ತಲೇ ಮುಂದೆ ಹೆಜ್ಜೆ ಇಡುವ ಅನಿವಾರ್ಯತೆ ಬಂದೊದಗಿದೆ.
ಈ ಸಂದರ್ಭದಲ್ಲಿ ಉಭಯ ದೇಶಗಳು ಯುದ್ಧವನ್ನು ಒಂದು ಆಯ್ಕೆ ಮಾಡಿಕೊಳ್ಳುವ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ. ಯುದ್ಧವೊಂದು ಸಂಭವಿಸಿದರೆ ಎರಡೂ ದೇಶಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಆಳವಾಗಿ ಆಲೋಚಿಸಬೇಕಿದೆ. ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ತಗ್ಗಲು ಕಾರಣ ಭಾರತ ಜಾರಿಗೊಳಿಸಿದ ತಂತ್ರವಾಗಿತ್ತು. ಕಾಶ್ಮೀರಿಗಳನ್ನು ಕ್ರಮೇಣ ಮನವೊಲಿಸುತ್ತಾ, ಪಾಕಿಸ್ತಾನವನ್ನು ಅಂತರರಾಷ್ಟ್ರೀಯವಾಗಿ ಏಕಾಂಗಿಗೊಳಿಸುತ್ತಾ ಹೋಗಬೇಕೆನ್ನುವ ತಂತ್ರಗಾರಿಕೆ ಸಾಕಷ್ಟು ಫಲ ನೀಡಿತ್ತು. ಈಗಲೂ ಅದೇ ಪ್ರಯತ್ನದ ಮೂಲಕ ಪಾಕಿಸ್ತಾನವನ್ನು ಎದುರಿಸದೇ ಇದ್ದರೆ ಭಾರತವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂಬ ಪ್ರಜ್ಞೆ ಅಗತ್ಯ.
ಈ ನಿಟ್ಟಿನಲ್ಲಿ ಮುಂದುವರೆಯುವುದಾದರೆ, ಭಾರತ-ಪಾಕಿಸ್ತಾನಗಳ ಪ್ರತಿನಿಧಿಗಳು ಎದುರುಬದುರು ಕುಳಿತು ಮಾತುಕತೆ ನಡೆಸಬೇಕು.