ಭಾರತೀಯ ಸೇನೆಯ ವಾಯುಪಡೆಯಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಿರುವ ಮಾಜಿ ಯೋಧ; ಮೇಲಾಗಿ ಸತ್ಯವನ್ನು ನೇರವಾಗಿ ಹೇಳುವ ಛಾತಿ ಇರುವ ಲೇಖಕ, ಅಂಕಣಕಾರ. ತಮ್ಮನ್ನು ತಾವು ಅವರು ಸರ್ಕಾರ ವಿರೋಧಿ ಉದಾರವಾದಿ, ಕಟ್ಟುಕತೆ ವಿರೋಧಿ, ನಾಸ್ತಿಕ, ಲೇಖಕ, ಅಂಕಣಕಾರ, ಬಹುಜ್ಞ, ಪರ್ವತಾರೋಹಿ ಎಂದೆಲ್ಲಾ ಬಣ್ಣಿಸಿಕೊಳ್ಳುವ ರಾಜೀವ್ ತ್ಯಾಗಿ ಕಳೆದ ಕೆಲವು ದಿನಗಳಿಂದೀಚೆಗೆ ದೇಶದಲ್ಲಿ ಯುದ್ದೋನ್ಮಾದ ಹೆಚ್ಚತೊಡಗಿರುವಂತೆ ಈ ಬಗ್ಗೆ ಅತ್ಯಂತ ಆತಂಕ ವ್ಯಕ್ತ ಪಡಿಸುತ್ತಲೇ ಈ ಲೇಖನ ಬರೆದಿದ್ದಾರೆ. ಇತ್ತೀಚೆಗೆ ಭಾರತೀಯ ವಾಯುಪಡೆ ಪಾಕಿಸ್ತಾನ ಗಡಿ ದಾಟಿ ಬಾಲಾಕೋಟ್ನಲ್ಲಿ ನಡೆಸಿದ ದಾಳಿಯ ಕುರಿತು ಮೂಲಭೂತ ಪ್ರಶ್ನೆಗಳನ್ನು ಈ ಲೇಖನದಲ್ಲಿ ಎತ್ತಿದ್ದಾರೆ. ದ ಸಿಟಿಜನ್ ವೆಬ್ ಆವೃತ್ತಿಯಲ್ಲಿ ಪ್ರಕಟವಾದ ಈ ಲೇಖನವು ಸಧ್ಯದ ಸ್ಥಿತಿಯಲ್ಲಿ ಹಲವು ಕಟುವಾಸ್ತವಗಳನ್ನು, ಕಹಿ ಸತ್ಯಗಳನ್ನು ಕಹಿ ಸತ್ಯಗಳನ್ನು ಹೇಳುವ ಈ ಲೇಖನವನ್ನು ಟ್ರೂಥ್ ಇಂಡಿಯಾ ಕನ್ನಡಕ್ಕಾಗಿ ಅನುವಾದಿಸಿಕೊಟ್ಟಿದ್ದಾರೆ ಜ್ಯೋತಿ ಎ.
ಫೆಬ್ರವರಿ 26ರಂದು ಬೆಳಿಗ್ಗೆ 5 ಗಂಟೆಗೆ ಗುರುಗ್ರಾಮ್ ನಲ್ಲಿ ನನಗೆ ನಿದ್ರೆಯಿಂದ ಎಚ್ಚರವಾದ ಕೂಡಲೇ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವ ಪ್ರದೇಶದ ಬಾಲಾಕೋಟ್ ನಲ್ಲಿ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯ ಬಗ್ಗೆ ಮಾಹಿತಿ ತಿಳಿಯಿತು. ಹತ್ತಿರದ ಭಾರತೀಯ ವಾಯುಪಡೆಯ ನೆಲೆಯಾಗಿರುವ ಶ್ರೀನಗರದ ಆಗ್ನೇಯಕ್ಕಿರುವ ಅವಂತಿಪುರದಿಂದ ಸುಮಾರು 200 ಕಿಮೀ. ವಾಯವ್ಯ ದಿಕ್ಕಿನಲ್ಲಿ ಈ ಪ್ರದೇಶವಿದೆ. ಸೂರ್ಯ ಮೂಡುವ ಮುನ್ನ 3.30ಕ್ಕೆ ಪೂರ್ವಯೋಜಿತವಾಗಿ ನಿಶ್ಚಿತ ಪ್ರದೇಶವೊಂದರ ಮೇಲೆ 1000 ಕೆಜಿ ಬಾಂಬ್ ಗಳನ್ನೊಗೆದು ದಾಳಿ ಮಾಡಲಾಗಿತ್ತೆಂಬ ವಿಷಯ ಕೆಲವು ಫೋನ್ ಕರೆಗಳು ಬಂದ ನಂತರ ನನಗೆ ತಿಳಿದು ಬಂತು. ಆ ಕ್ಷಣದಿಂದಲೂ ನಾನು ಮುಂದೇನಾಗುತ್ತದೆಂದು ಕಾಯುತ್ತಾ ಕೂತ್ತಿದ್ದೇನೆ. ನಿಜಕ್ಕೂ ಪಾಕಿಸ್ತಾನವೆಂಬ ದೇಶವನ್ನು ಇಲ್ಲವಾಗಿಸಿಬಿಟ್ಟಿದೇವೇನೋ ಎಂಬ ಭಾವೋದ್ರೇಕದ ಉನ್ಮಾದದ ಸಂಭ್ರಮ ಸಡಗರಗಳಿಗೆ ಇಡೀ ದೇಶ ಧುಮುಕಿರುವುದನ್ನು ನೋಡುತ್ತಲೂ ಇದ್ದೇನೆ.
ಇಂತಹ ಭಾವೋದ್ವೇಗಗಳು ಬಹುಶಃ ಈ ಹೊತ್ತಿಗೆ ಕೊನೆ ಕಂಡಿರಬಹುದೆಂದು ನನ್ನ ಭಾವನೆ. ಉನ್ನತ್ತ ಸ್ಥಿತಿಯಲ್ಲಿರುವವರು ತಣ್ಣಗಾಗಲಿಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಆದರೆ 16 ಗಂಟೆಗಳ ಅರ್ಥರಹಿತವಾದ ಸಂಭ್ರಮಾಚರಣೆಯ ನಂತರ ತಣ್ಣನೆಯ, ಸೌಮ್ಯವಾದ ತರ್ಕದ ಹಿನ್ನೆಲೆಯಲ್ಲಿ ಈ ದಾಳಿಯನ್ನು ವಿಶ್ಲೇಷಣೆಗೆ ಒಳಪಡಿಸಬೇಕಿದೆ.
ಹೆರಾಲ್ಡ್ ಗೋವಾ ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಒಂದು ಲೇಖನದಲ್ಲಿ, “ಉಗ್ರರ ಶಿಬಿರ”ಗಳ ಮೇಲಿನ ದಾಳಿಗಳು ವೈರಿಯಿಂದ ಯಾವುದೇ ಯುದ್ಧತಾಂತ್ರಿಕ ಫಲ ನೀಡುವುದಿಲ್ಲವಾದ ಕಾರಣ ಅವು ನಿಷ್ಪ್ರಯೋಜಕ ಎಂಬುದರ ಕುರಿತು ಬರೆದಿದ್ದೆ. ಆದರೆ ಹಿಂದಿನ ಹಲವು ಘಟನೆಗಳಂತೆ, ಇಲ್ಲಿಯೂ ಭಾರತ ಸರ್ಕಾರವು ತನ್ನ ಪರವಾಗಿ ಕಾರ್ಯನಿರ್ವಹಿಸಲು ಸೇನಾಪಡೆಗಳಿಗೆ ನಿರ್ದೇಶಿಸಿದೆ ಮತ್ತು ಸೇನಾಪಡೆಗಳೂ ಸಹ ನರೇಂದ್ರ ಮೋದಿಯವರ ವೈಯಕ್ತಿಕ ವೈಭವೀಕರಣಕ್ಕಾಗಿ ಮತ್ತೊಮ್ಮೆ ಅದನ್ನು ಬಳಸಿಕೊಳ್ಳಲು ನೆರವಾಗುವಂತೆಯೇ ಕೆಲಸ ಮಾಡಿವೆ.
ಯುದ್ಧತಂತ್ರದಲ್ಲಿ ನಮಗೆ ಸಮಸಾಟಿಯಲ್ಲದ ಎದುರಾಳಿಯ ತೀರಾ ಅಲ್ಪ ಕಿಮ್ಮತ್ತಿನ ಯುದ್ಧತಾಂತ್ರಿಕ ಗುರಿಗಳ ಮೇಲೆ ದಾಳಿ ಮಾಡಲು ಮತ್ತೊಮ್ಮೆ ನಮ್ಮ ಅಧಿಕೃತ ಸೇನಾಪಡೆಗಳನ್ನು ನಾವು ಬಳಸಿಕೊಂಡಿದ್ದೇವೆ. ಈಗ ಎಲ್ಲವೂ ಮುಗಿದ ಬಳಿಕ ಯೋಚಿಸಿ ನೋಡಿದಾಗ, ಸರ್ಕಾರ ಸೇನಾಪಡೆಗಳನ್ನು ವಿವೇಚನಾರಹಿತವಾಗಿ ಕೇವಲ ಪ್ರಚಾರದ ಉದ್ದೇಶಕ್ಕಾಗಿ ಬಳಸಿಕೊಂಡಿದೆ ಎಂಬುದು ತಿಳಿಯುತ್ತದೆ. ಕೊಟ್ಟಿದ್ದನ್ನು ಹಿಂದಕ್ಕೆ ಮರುಕಳಿಸುವ ಹಠಮಾರಿ ಎದುರಾಳಿಯೊಬ್ಬನಿಗೆ ಸೇನಾ ಸಂದೇಶವನ್ನು ರವಾನಿಸುವ ಒಂದು ಯಕಶ್ಚಿತ್ ಆದಂತಹ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ್ದು ಬಿಟ್ಟು ಇದರಿಂದ ಯಾವುದೇ ಕಾರ್ಯತಾಂತ್ರಿಕ ಅಥವಾ ಯುದ್ಧತಾಂತ್ರಿಕ ಉದ್ದೇಶವನ್ನೂ ಈಡೇರಿಸಲಾಗಿಲ್ಲ.
ನಮ್ಮ ಸರ್ಕಾರ ವಾಯುಪಡೆಗೆ ಏನು ಮಾಡಬೇಕೆಂದು ಆದೇಶಿಸಿತ್ತು ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ನಿರ್ದಿಷ್ಟ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ನಾಶಪಡಿಸುವ ಯುದ್ಧವಿಮಾನಗಳು ಬಳಸುವ ತಂತ್ರಜ್ಞಾನ ಹೇಗಿರುತ್ತದೆ ಮತ್ತು ಅದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಹೇಗೆ ಆರಿಸಲಾಗುತ್ತದೆ ಎಂದು ತಿಳಿಯುವುದು ಅತ್ಯಗತ್ಯ. ಒಂದು ನಿರ್ದಿಷ್ಟವಾದ ಆಯುಧಗಳ ಹೊರೆಯನ್ನು ಹೊರಬೇಕಾದರೆ, ಉದ್ದೇಶಿತ ಗುರಿಯ ಲಕ್ಷಣವನ್ನು ತಿಳಿಯುವುದು ಅವಶ್ಯ – ಅದು ಟ್ರಕ್ಕು, ಜೀಪುಗಳಂತಹ ಸುಲಭದ ಗುರಿಯಾಗಿದೆಯೇ ಎಂಬ ಅರಿವು ಬೇಕು. ಅಂತಹ ಸಂದರ್ಭದಲ್ಲಿ ಮುಮ್ಮುಖವಾದ 30 ಎಂಎಂ ರೈಫಲ್ ಅಥವಾ ರಾಕೆಟ್ ಗಳನ್ನು ಬಳಸಬಹುದು, ಆದರೆ ಇಲ್ಲಿ ರಾಕೆಟ್ ಗಳೂ ವಿಪರೀತ ಎನಿಸಬಹುದು. ಸಲೀಸಾದ ಗುರಿಗಳನ್ನು ಸಂಪೂರ್ಣವಾಗಿ ನಾಶಪಡಿಸಲು 30 ಎಂ.ಎಂ. ಎಪಿಐ (ರಕ್ಷಾಕವಚಗಳನ್ನೂ ಭೇದಿಸುವ ಸಾಧನಗಳು) ಫಿರಂಗಿ ಸುತ್ತುಗಳೇ ಸಾಕು. ಉದ್ದೇಶಿತ ಗುರಿಯಲ್ಲಿ ಶಸ್ತ್ರಾಗಾರ ಇದೆ ಎಂದು ತಿಳಿದುಬಂದರೆ ಪ್ರತಿ ಬ್ಯಾರೇಜಿನಲ್ಲಿ 8, 16 ಅಥವಾ 32 ರಾಕೆಟ್ ಗಳಂತೆ 58 ಎಂಎಂ. ಎಪಿಐ ರಾಕೆಟ್ ಗಳು ಆಯ್ಕೆಯ ಆಯುಧಗಳಾಗುತ್ತವೆ. ಇದು ಎಂತಹ ಶಸ್ತ್ರಾಗಾರ ಎಂಬುದರ ಮೇಲೆ ನಿಂತಿರುತ್ತದೆ. ಉದ್ದೇಶಿತ ಗುರಿಯು ಸುಲಭವಾದ ವಾಹನಗಳಂತೆ ಅಥವಾ ಕಟ್ಟಡಗಳಂತೆ ನೇರ ಗುರಿಯಾಗಿರದೆ ಒಂದು ಪ್ರದೇಶವೇ ಆಗಿದ್ದರೆ, ಮತ್ತು ಸೇನಾಪಡೆಗಳು ಅಥವಾ ಕಟ್ಟಡಗಳು ವಿಶಾಲವಾದ ಪ್ರದೇಶದಲ್ಲಿ ಚಾಚಿಕೊಂಡಿದ್ದರೆ, ಆಗ ಬಾಂಬ್ ಗಳೇ ಅತ್ಯಂತ ಸೂಕ್ತ.
ಇಷ್ಟಲ್ಲದೆ ಗೈಡೆಡ್ ಆಯುಧಗಳನ್ನೂ ಆಯ್ದುಕೊಳ್ಳಬಹುದು. ಇವುಗಳನ್ನು ಪ್ರತಿಫಲಿತ ನಿಯಂತ್ರಿತ ಲೇಸರ್ ನಿಂದ ನಿಯಂತ್ರಿಸಲಾಗುವುದು ಇಲ್ಲವೇ ಇಮೇಜ್ ಪ್ರೊಸೆಸಿಂಗ್ ಅಥವಾ ರೇಡಿಯೊ ನಿಯಂತ್ರಣ ವ್ಯವಸ್ಥೆಯ ಮೂಲಕ ನಿರ್ವಹಿಸಬಹುದು.
ಯಾವ ಬಗೆಯ ಶಸ್ತ್ರಾಸ್ತ್ರ ಬಳಸಬೇಕೆಂಬುದನ್ನು ಸ್ವತ್ತಿನ ಬೆಲೆಗೆ ಎದುರಾಗಿ ಉದ್ದೇಶಿತ ಗುರಿಯೂ ಕೂಡ ನಿರ್ದೇಶಿಸುತ್ತದೆ. ಉದಾಹರಣೆಗೆ, ಒಂದು ತಗಡಿನ ಡೇರೆಯನ್ನು ಟಿವಿ-ನಿಯಂತ್ರಿತ ಆಯುಧಗಳಿಂದ ದಾಳಿ ಮಾಡಿ ನಿಭಾಯಿಸಲು ಆಗದು. ಆದರೆ, ಅದೇ ತಗಡಿನ ಡೇರೆಯು ಆಯಕಟ್ಟಿನ ಅಥವಾ ವ್ಯೂಹಾತ್ಮಕ ಗುರಿ ಹೊಂದಿದೆ ಎಂದು ತಿಳಿದು ಬರದಿದ್ದರೆ ಅಥವಾ ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಲು ಸಾಕಷ್ಟು ಪ್ರಮುಖ ಕಾರಣಗಳಿವೆ ಎಂದು ಖಾತರಿಯಾಗದಿದ್ದರೆ ಅಲ್ಲಿನ ದಾಳಿಗೆ ನಾವು ಯುದ್ಧವಿಮಾನ ಬಳಸುವುದು ಯೋಗ್ಯವಲ್ಲ. ಇಲ್ಲಿ ಬೆಲೆ ಎಂದರೆ ಕೇವಲ ಸ್ವಾಧೀನಪಡಿಸಿಕೊಳ್ಳುವ ವೆಚ್ಚವಲ್ಲ. ಅದನ್ನು ಬದಲಿಸಲು ತಗಲುವ ವೆಚ್ಚ ಮತ್ತು ನಿರ್ದಿಷ್ಟ ಕಾರ್ಯಗಳಿಗಾಗಿ ಅಗತ್ಯವೆನಿಸಿದಾಗ ಅಂತಹ ಯುದ್ಧಸಾಮಗ್ರಿಗಳನ್ನು ಸಂಗ್ರಹಿಸಲು ತಗಲುವ ವೆಚ್ಚ, ಇವೆಲ್ಲವುಗಳನ್ನೂ ಸೇರಿಸಿಕೊಂಡೇ ಇಲ್ಲಿ ಬೆಲೆ ಎಂದು ಕರೆದಿರುವುದು.
ಇನ್ನು ಒಂದು ಭೂಪ್ರದೇಶದ ಮೇಲಿನ ಉದ್ದೇಶಿತ ಗುರಿಯೊಂದಕ್ಕೆ ಯುದ್ಧಸರಂಜಾಮುಗಳನ್ನು ತಲುಪಿಸುವ ಯಾವುದೇ ಪೈಲಟ್ (ವಿಮಾನ ಚಾಲಕ) ಹೊಂದಿರಬೇಕಾದ ಗುಣಲಕ್ಷಣಗಳನ್ನು ನೋಡೋಣ.
- ಪೈಲಟ್ ಉದ್ದೇಶಿತ ಗುರಿಯ ಕಣ್ಣೋಟ ಪಡೆಯಬೇಕು; ಶಸ್ತ್ರಾಸ್ತ್ರಗಳನ್ನು ಸಾಗಿಸುವಂತಿದ್ದರೆ, ಅವುಗಳನ್ನು ಆಯ್ದುಕೊಂಡು ಆನಂತರ ಅವನು ಉದ್ದೇಶಿತ ಪ್ರದೇಶಕ್ಕೆ ತಲುಪಿಸುತ್ತಾನೆ.
- ಉದ್ದೇಶಿತ ಪ್ರದೇಶವನ್ನು ಸಾಮಾನ್ಯ ದೃಷ್ಟಿಯ ಮೂಲಕ ಗ್ರಹಿಸಲು ಆಗದಿದ್ದ ಪಕ್ಷದಲ್ಲಿ, ಉದಾಹರಣೆಗೆ, ಕಗ್ಗತ್ತಲಲ್ಲಿ, ಸ್ಪಷ್ಟವಾಗಿ ಗೋಚರಿಸದಿದ್ದಲ್ಲಿ, ಅಥವಾ ಇನ್ನಾವುದೇ ಕಾರಣದಿಂದ ಆಗಿರಬಹುದು, ಆಗ ಆ ಪ್ರದೇಶವನ್ನು ನಿಯಂತ್ರಿತ ಲೇಸರ್ ದೀಪದೊಂದಿಗೆ ಬೆಳಗಿಸಬಹುದು. ಇದನ್ನು ಓರ್ವ ಸ್ಕೌಟ್ ಅಥವಾ ಇನ್ನಿತರ ಸ್ನೇಹಮಯಿ ಮಾನವ ಸ್ವತ್ತುಗಳ ಮೂಲಕ ಪ್ರಯೋಗಿಸತಕ್ಕದ್ದು. ವಿಮಾನದಲ್ಲಿ ಅಳವಡಿಸಲಾಗಿರುವ ಆಯುಧ ತಲುಪಿಸುವ ವ್ಯವಸ್ಥೆಯು ತನ್ನಿಂದ ತಾನೇ ನಿರ್ದೇಶಿತ ಆಯುಧವನ್ನು ಲೇಸರ್ ಪ್ರಕಾಶಿತ ಗುರಿಯತ್ತ ನಿರ್ದೇಶಿಸುತ್ತದೆ. ಆದರೆ ಮಂದ ಬೆಳಕಿದ್ದರೆ ಇದೂ ಕೂಡ ಕಷ್ಟ. ಇಬ್ಬನಿಯು ಲೇಸರ್ ಕಿರಣಗಳನ್ನು ಪಸರಿಸುವ ಸಾಮರ್ಥ್ಯ ಹೊಂದಿರುವುದರಿಂದ ಅದು ಈ ಆಯುಧ ವ್ಯವಸ್ಥೆಯನ್ನು ಹದಗೆಡಿಸಲು ಸಾಧ್ಯವಿದೆ.
- ಉದ್ದೇಶಿತ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದ ಹಾನಿ ಉಂಟುಮಾಡಬೇಕೆಂಬ ಆಶಯದೊಂದಿಗೆ ಶಸ್ತ್ರಾಸ್ತ್ರಗಳ ಹೊರೆಯನ್ನು ಪೂರ್ವನಿರ್ಧಾರಿತ ಕಕ್ಷೆ(ಗಳ) ಮೇಲೆ ಒಗೆಯಲಾಗುವುದು.
ಮೊನ್ನೆ ಬಾಲಕೋಟ್ನಲ್ಲಿ ನಡೆಸಿದ ದಾಳಿ ಎಷ್ಟು ಸಮರ್ಥನೀಯ?
ಮಿರಾಜ್-2000 ಬಳಸಿ ಬಾಲಾಕೋಟ್ ಮೇಲೆ ನಡೆಸಿದ ದಾಳಿಯಲ್ಲಿ 1000 ಕೆಜಿ. ಬಾಂಬ್ ಗಳನ್ನು ಪೂರ್ವನಿರ್ಧಾರಿತ ಕಕ್ಷೆಗಳಲ್ಲಿ ಎಸೆಯಲಾಗಿತ್ತೆಂಬುದು ನಿಜ. ನಾವು ಒಂದು ನೇರ ಗುರಿ ಹೊಂದಿರಲಿಲ್ಲ ಎಂಬುದೂ ಸಹ ಸ್ಪಷ್ಟವೇ. ಪೂರ್ವನಿರ್ಧಾರಿತ ಕಕ್ಷೆಗೆ ಸೇರಿದ ಸಾಮಾನ್ಯ ಪ್ರದೇಶದೊಳಗೆ ಪ್ರದೇಶ ಯುದ್ಧಸರಂಜಾಮುಗಳನ್ನು ಒಗೆಯಬೇಕೆಂದು ಬಯಸಿದ್ದೆವು. ನಾವು ಹಠಮಾರಿ ಎದುರಾಳಿಯೊಬ್ಬನಿಗೆ ಸೇನಾ ಎಚ್ಚರಿಕೆ ನೀಡಬೇಕೆಂದು ಮಾತ್ರ ಅಂದುಕೊಂಡಿದ್ದರೆ, ಇದು ಅತ್ಯಂತ ಸಮಂಜಸವಾದ ತೀರ್ಮಾನವಾಗಿದೆ. ಆದರೆ ಹತ್ಯೆಗೀಡಾದವರ ಸಂಖ್ಯೆಯನ್ನಾಗಲೀ ಅಥವಾ ಉಗ್ರರ ಶಿಬಿರವೊಂದು ನಾಶವಾಗಿರುವ ಬಗ್ಗೆಯಾಗಲೀ ಟಿವಿ ಚಾನೆಲ್ ಗಳಿಗೆ ಮಾಹಿತಿ ಸಿಕ್ಕಿದ್ದೆಲ್ಲಿಂದ? ಬೆಳಿಗ್ಗೆ 3.30 ರ ದಾಳಿಯ ನಂತರ ಭಾರತೀಯ ವಾಯುಪಡೆ ಕೂಡ ಈ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿರಲಿಕ್ಕಿಲ್ಲ. ಆದ್ದರಿಂದ ಭಾರತ ಸರ್ಕಾರದ ದಲ್ಲಾಳಿಗಳು ಈ ಸುಳ್ಳು ಮಾಹಿತಿಯನ್ನು ಟಿವಿ ವಾಹಿನಿಗಳಿಗೆ ಮತ್ತು ಪತ್ರಿಕಾ ಮಾಧ್ಯಮಗಳಿಗೆ ಒದಗಿಸುತ್ತಿದ್ದಾರೆ ಎಂಬುದು ಸ್ಪಷ್ಟ.
ಜೈಶ್-ಇ-ಮೊಹಮದ್ ಗೆ ಸೇರಿದ ಆಯಕಟ್ಟಿನ ಸ್ವತ್ತುಗಳೆಲ್ಲಾ ಬಹಾವಲ್ಪುರ್ ನಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದರ ಅಲ್ಪಮೌಲ್ಯದ ಯುದ್ಧತಾಂತ್ರಿಕ ನೆಲೆಗಳನ್ನಷ್ಟೇ ನಾವು ಬಾಲಾಕೋಟ್ ನಲ್ಲಿ ಕಾಣಬಹುದು. ಆದರೆ ಪಾಕಿಸ್ತಾನದ ಸೇನಾಪಡೆಗಳು ಬಾಲಾಕೋಟ್ ನೆಲೆಯ ಪಹರೆ ನಡೆಸುವುದಿಲ್ಲ ಎಂಬ ಮಾಹಿತಿಯೂ ನಮಗೆ ಗೊತ್ತಿದೆ. ಬಾಲಾಕೋಟ್ ಗೆ ತೀರಾ ಸಮೀಪ ಎನಿಸುವಂತೆ ದಕ್ಷಿಣ ಬಾಲಾಕೋಟ್ ನಿಂದ ಸುಮಾರು 25 ಕಿಮೀ. ದೂರದಲ್ಲಿರುವ ಮುಜಾಫರಾಬಾದ್ ನಾಗರಿಕ ವಿಮಾನ ನಿಲ್ದಾಣವು ಅಬೋಟಾಬಾದ್ ಸೇನಾ ನೆಲೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
ನನಗನ್ನಿಸುವಂತೆ ಪಾಕಿಸ್ತಾನದ ಸೇನಾಪಡೆಗಳ ಅತಿ ಹತ್ತಿರದ ವೈಮಾನಿಕ ತಂಗುದಾಣವು ಬಾಲಾಕೋಟ್ ನಿಂದ ಸುಮಾರು 100 ಕಿಮೀ. ದಕ್ಷಿಣಕ್ಕಿರುವ ಇಸ್ಲಾಮಾಬಾದ್ ನಲ್ಲಿರಬಹುದು. ಅಲ್ಲಿನ ಪೈಲಟ್ ಗೆ ತುರ್ತು ಆದೇಶ ಹೊರಡಿಸಿದ ಕ್ಷಣದಿಂದ ದಾಳಿ ನಡೆದ ಸ್ಥಳವನ್ನು ತಲುಪಲು ಎಫ್-16 ವಿಮಾನವೊಂದಕ್ಕೆ 10-11 ನಿಮಿಷಗಳು ಬೇಕಾಗಬಹುದು, ಆ ಹೊತ್ತಿಗಾಗಲೇ ಎಲ್ಲವೂ ಮುಗಿದುಹೋಗಿರುತ್ತದೆ. ಈ ದಾಳಿಗೆ ಆದೇಶಿಸಿದ್ದು ಪ್ರಚಾರಕ್ಕಾಗಿಯೇ ಎಂದು ನಮಗೆ ತೋರುತ್ತಿದೆ. ಏಕೆಂದರೆ ಹತ್ತಿರದಲ್ಲೇ ಪಾಕಿಸ್ತಾನಿ ಸೇನಾಪಡೆಗಳ ಮೂರು ನೆಲೆಗಳನ್ನು ಹೊಂದಿರುವ ಬಹಾವಲ್ಪುರ್ ಮೇಲೆ ನಾವು ದಾಳಿಗೈದು ಒಂದೋ ಎರಡೋ ಮಿರಾಜ್ 2000 ಯುದ್ಧವಿಮಾನಗಳನ್ನು ಕಳೆದುಕೊಂಡಿದ್ದರೆ ಅದು ತೀರಾ ಮುಜುಗರ ಉಂಟುಮಾಡುತ್ತಿತ್ತು.
ಫೆಬ್ರುವರಿ 14ರಿಂದಲೂ ಭಾರತದ ಟಿವಿ ಚಾನೆಲ್ ಗಳು ನೆತ್ತರು ಹರಿಸಲು, ಪ್ರತೀಕಾರ ತೀರಿಸಲು ಹಪಹಪಿಸುತ್ತಿವೆ. ಈ ಏರಿದ ತಾಪಮಾನದಲ್ಲಿ ಪಾಕಿಸ್ತಾನಿ ಸೇನಾಪಡೆಗಳು ಯಾವುದೇ ಕ್ಷಣದಲ್ಲೂ ವಾಯು ಪಹರೆಯನ್ನು ಹೆಚ್ಚಿಸಲು ಅಥವಾ ಅಡೆತಡೆಗಳನ್ನು ಎದುರಿಸಲು ಸನ್ನದ್ಧವಾಗಿರುತ್ತವೆ. ಏನೇ ಆಗಲಿ, ಫುಲ್ವಾಮಾಗೆ ಪ್ರತಿಕ್ರಿಯೆ ನೀಡಿರುವ ಕುರಿತು ನಾವು ಪ್ರಚಾರ ಪಡೆಯಬೇಕಿತ್ತಷ್ಟೇ, ಯುದ್ಧದ ಪರಿಣಾಮಗಳ ಬಗ್ಗೆಯಾಗಲೀ ಸ್ವತ್ತುಗಳನ್ನು ಕಳೆದುಕೊಳ್ಳುವ ಮುಜುಗರದ ಕುರಿತಾಗಲೀ ನಾವು ಯೋಚಿಸಲಿಲ್ಲ.
ಬೇರೆ ಯಾವುದೇ ಚರ್ಚೆಗಿಂತ ಮಿಗಿಲಾಗಿ ನಾವು ಕೇಳಬೇಕಿರುವುದು, ಮತ್ತೊಮ್ಮೆ ಭಾರತ ಸರ್ಕಾರ ಸೇನಾ ಕಾರ್ಯಾಚರಣೆಯನ್ನು ಪ್ರಚಾರಕ್ಕಾಗಿ ಏಕೆ ಬಳಸಿಕೊಂಡಿತು ಎಂದು. ಈಗ ಅದರ ಪರಿಣಾಮಗಳನ್ನು ನೋಡಿ – ಪಾಕಿಸ್ತಾನದೊಳಗಿನ ನೆಲೆಯೊಂದರ ಮೇಲೆ ಶಸ್ತ್ರಾಸ್ತ್ರಗಳನ್ನು ಒಗೆಯಲು ಅಂತರರಾಷ್ಟ್ರೀಯ ಗಡಿರೇಖೆಯನ್ನು ಉಲ್ಲಂಘಿಸಿದ್ದೇವೆ. ಅಲ್ಲದೇ ಅದನ್ನು ಗೌಪ್ಯವಾಗಿಡುವ ಬದಲು ಈ ಕಾರ್ಯಾಚರಣೆಗೆ ಅದೆಷ್ಟೊಂದು ಪ್ರಚಾರ ನೀಡಿದ್ದೇವೆಂದರೆ, ಸರ್ಕಾರದ ಎಲ್ಲಾ ಚೇಲಬಾಲಗಳೂ ಈ ವಿಚಾರದ ಬಗ್ಗೆ ಏನಾದರೊಂದು ಮಾತನಾಡಿರುವುದರಿಂದ, ನಮ್ಮ ತೋರಿಕೆಯ ನಿರಾಕರಣೆಯನ್ನು ಕಳೆದುಕೊಂಡುಬಿಟ್ಟಿದ್ದೇವೆ. ಪಾಕಿಸ್ತಾನವು ಈಗ ವಿಶ್ವ ಸಂಸ್ಥೆಗೆ ಹೋಗಿ ಭಾರತವು ಯಾವುದೇ ಪ್ರಚೋದನೆಯಿಲ್ಲದೆ ದಾಳಿ ಮಾಡಿದೆ ಎಂದು ಹೇಳುತ್ತದೆ. ನಾವಾದರೂ ಈ ದಾಳಿಯನ್ನು ನಿರಾಕರಿಸಲು ಸಾಧ್ಯವೇ ಇಲ್ಲ! ನಮ್ಮ ಮುಠ್ಠಾಳತನ! ನಾವೀಗ ರಕ್ಷಣೆ ಮಾಡಿಕೊಳ್ಳುವ ಬದಲಿಗೆ ದಾಳಿಕೋರರಾಗಿಬಿಟ್ಟಿದ್ದೇವೆ. ಇದಕ್ಕೆ ವಿರುದ್ಧವಾಗಿ ಪಾಕಿಸ್ತಾನವು ತೋರಿಕೆಯ ನಿರಾಕರಣೆಯನ್ನು ಕಳೆದುಕೊಳ್ಳದೆ ನಮ್ಮ ವಿರುದ್ಧ ಫುಲ್ವಾಮಾದಲ್ಲಿ ಅಸಮಾನ ಸ್ವತ್ತುಗಳನ್ನು ಬಳಸಿಕೊಂಡಿತು.
ಹಿಂದೆಲ್ಲಾ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಾಂಪ್ರದಾಯಿಕವಾಗಿ ರಷ್ಯ ತನ್ನ ವೀಟೊ ಅಧಿಕಾರವನ್ನು ನಮ್ಮ ಪರವಾಗಿ ಅನೇಕ ಬಾರಿ ಚಲಾಯಿಸಿತ್ತು. ಆದರೆ ಈಗ ಅದು ನಮ್ಮ ಪರವಾಗಿಲ್ಲ. ಚೀನೀ ವೀಟೊವನ್ನು ಕೂಡ ನಮ್ಮ ವಿರುದ್ಧ ಆಹ್ವಾನಿಸಿಕೊಂಡಿದ್ದೇವೆ, ಇನ್ನು ಅಮೆರಿಕ ವೀಟೊವನ್ನು ನಮ್ಮ ಕಡೆ ಗಳಿಸಲು ಸಾಧ್ಯವೇ ಇಲ್ಲ. ಅಮೆರಿಕದ ಭೌಗೋಳಿಕ ರಾಜಕೀಯ ಹಿತಾಸಕ್ತಿಯು ಇನ್ನೂ ಪಾಕಿಸ್ತಾನದಲ್ಲಿ ಇದೆಯೇ ಹೊರತು ಭಾರತದಲ್ಲಲ್ಲ. ಏಕೆಂದರೆ ಅಫ್-ಪಾಕ್ ಎಂಬುದು ಈ ಪ್ರದೇಶದ ಪಶ್ಚಿಮಕ್ಕಿರುವ ಅಣು-ಸಾಮರ್ಥ್ಯವುಳ್ಳ ಶಿಯಾ ಮತಸ್ಥ ಇರಾನ್ ಮತ್ತು ಅಮೆರಿಕದ ಭೌಗೋಳಿಕ ರಾಜಕೀಯ ಹಿತಾಸಕ್ತಿಯಾದ ಸೌದಿ ಅರೇಬಿಯಾಗೆ ಆತ್ಮೀಯ ಮಿತ್ರನಾಗಿರುವ ಪಾಕಿಸ್ತಾನದ ನಡುವೆ ಅಮೆರಿಕ ಮಾಡಿಕೊಂಡಿರುವ ಭೌಗೋಳಿಕ ರಾಜಕೀಯ ಒಡಂಬಡಿಕೆಯೇ ಆಗಿದೆ.
ಆದ್ದರಿಂದ ಈಗ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಭಾರತದ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದೇ ಆದರೆ, ಯಾವ ವೀಟೊ ಶಕ್ತಿಯ ಕಡೆಗೆ ನಾವು ತಿರುಗಿ ನೋಡುವುದು? ಅಂತಹ ಕ್ರಮ ಜರುಗಿಸದಂತೆ ತಡೆಯಲು ನಮ್ಮ ಪರವಾಗಿ ನಿಮ್ಮ ವೀಟೊ ಅಧಿಕಾರ ಚಲಾಯಿಸಿ ಎಂದು ಯಾರನ್ನು ಕೇಳಿಕೊಳ್ಳುವುದು?
ನಮ್ಮ ಜನರಿಗೆ ಏನಾಗಿದೆ ಎಂದು ನನಗೆ ತಿಳಿಯದಾಗಿದೆ. ನಾವು ಅತ್ಯಂತ ಮುಠ್ಠಾಳ ರಾಷ್ಟ್ರವಾಗಿದ್ದೇವೆ, ತೀರಾ ಉನ್ಮಾದಗ್ರಸ್ಥ ರಾಷ್ಟ್ರವೂ ಆಗಿಬಿಟ್ಟಿದ್ದೇವೆ. ನಾವು ಹೆಚ್ಚೂಕಡಿಮೆ ಕಾರ್ಟೂನ್ ಚಿತ್ರದ ವ್ಯಂಗ್ಯಚಿತ್ರಗಳಿಗೆ ಹೋಲುತ್ತೇವೆ. ಅಲ್ಲದೆ ನಮ್ಮಂತೆಯೇ ಇರುವ ರಾಜಕಾರಣಿಗಳಿಗೇ ನಮ್ಮ ಮತವನ್ನೂ ಚಲಾಯಿಸುತ್ತೇವೆ ಕೂಡ.
ನಮ್ಮ ರಾಜಕೀಯ ಪಕ್ಷಗಳಿಗೆ ದೇಶಕ್ಕಿಂತ ತಮ್ಮ ಪಕ್ಷ ಬೆಳೆಸೋದು ಮುಖ್ಯ ವಾಗಿದೆ.ಜನರೂ ಅಷ್ಟೇ